ಮನೋರಂಜನೆ

ಸಭೆಗೂ ಮುನ್ನ ರಾಜಕೀಯ ಪಕ್ಷಗಳೇಕೆ ರಾಷ್ಟ್ರಗೀತೆ ಹಾಡುವುದಿಲ್ಲ: ನಟ ಪವನ್ ಕಲ್ಯಾಣ್

Pinterest LinkedIn Tumblr

pawan-kalyanಹೈದರಾಬಾದ್: ಬಿಜೆಪಿ ವಿರುದ್ಧ ನಟ ಹಾಗೂ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ವಾಗ್ದಾಳಿ ನಡೆಸಿದ್ದು, ದೇಶದಲ್ಲಿ ಆಡಳಿತ ನಡೆಸುತ್ತಿರುವ ರಾಜಕೀಯ ಪಕ್ಷಗಳೇಕೆ ತಮ್ಮ ಸಭೆಗೂ ಮುನ್ನ ರಾಷ್ಟ್ರಗೀತೆಯನ್ನು ಹಾಡುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.
ಚಿತ್ರಮಂದಿರಗಳಲ್ಲಿ ಸಿನಿಮಾ ಆರಂಭಕ್ಕೂ ಮುನ್ನ ರಾಷ್ಟ್ರಗೀತೆಯನ್ನು ಹಾಡಬೇಕೆಂದು ಈ ಹಿಂದೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪನ್ನು ನೀಡಿತ್ತು. ಈ ಹಿನ್ನಲೆಯಲ್ಲಿ ಬಿಜೆಪಿ ವಿರುದ್ಧ ಟ್ವಿಟರ್ ನಲ್ಲಿ ಪವನ್ ಕಲ್ಯಾಣ್ ಅವರು ವಾಗ್ದಾಳಿ ನಡೆಸಿದ್ದಾರೆ.
ಪ್ರಜಾಪ್ರಭುತ್ವ ಎಂಬುದು ಆಡಳಿತಾರೂಢ ಸರ್ಕಾರದ ಅಭಿಪ್ರಾಯದಂತೆ ವಿಭಿನ್ನವಾಗುತ್ತಿದೆ. ತನ್ನ ನೀತಿಗಳನ್ನು ವಿರೋಧಿಸುತ್ತಿರುವವರಿಗೆ ರಾಷ್ಟ್ರವಿರೋಧಿ ಎಂಬ ಹಣೆಪಟ್ಟಿಯನ್ನು ನೀಡಬಾರದು. ದೇಶದಲ್ಲಿ ರಾಷ್ಟ್ರೀಯತೆಯ ಮಂತ್ರ ಜಪಿಸುತ್ತಿರುವ ಬಿಜೆಪಿ, ಮೊದಲು ನಿಯಮವನ್ನು ಅನುಸರಿಸಬೇಕಿದೆ.
ರಾಷ್ಟ್ರೀಯತೆ ಒಂದು ಪಕ್ಷದ ಸ್ವತ್ತಲ್ಲ. ಚಿತ್ರ ಮಂದಿಗಳಲ್ಲಿ ಸಿನಿಮಾ ಆರಂಭಕ್ಕೂ ಮೊದಲು ರಾಷ್ಟ್ರಗೀತೆಯನ್ನು ಹಾಡುವುದು ಕಡ್ಡಾಯ ಮಾಡಲಾಗಿದೆ. ಆರಾಮವಾಗಿ ಕುಟುಂಬದೊಂದಿಗೆ ಹಾಗೂ ಸ್ನೇಹಿತರೊಂದಿಗೆ ಚಿತ್ರ ನೋಡಲು ಬಂದವರಿಗೆ ರಾಷ್ಟ್ರಗೀತೆ ಹಾಡಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಕೇವಲ ಸಿನಿಮಾ ರಂಗಕ್ಕೇಕೆ? ಆಡಳಿತಾರೂಢ ಪಕ್ಷಗಳೇಕೆ ತಮ್ಮ ಸಭೆಗೂ ಮುನ್ನ ರಾಷ್ಟ್ರಗೀತೆಯನ್ನು ಹಾಡಬಾರದು? ದೇಶದಲ್ಲಿರುವ ಉನ್ನತ ಕಚೇರಿಯಲ್ಲೇಕೆ ರಾಷ್ಟ್ರಗೀತೆಯನ್ನು ಹಾಡಬಾರದು…? ರಾಷ್ಟ್ರಪ್ರೇಮದ ಬಗ್ಗೆ ಬೋಧನೆ ಮಾಡುವವರು ಹಾಗೂ ಕಾನೂನನ್ನು ಹೇರುವವರು ಮೊದಲು ತಾವು ನಿಯಮವನ್ನು ಪಾಲಿಸಬೇಕು. ನಿಮ್ಮ ಕಾನೂನು ಹಾಗೂ ನಿಯಮಗಳನ್ನು ಮೊದಲು ನೀವು ಪಾಲಿಸುವ ಮೂಲಕವೇಕೆ ಜನತೆಗೆ ಉದಾಹರಣೆಯಾಗಬಾರದು? ಎಂದು ಬಿಜೆಪಿ ನಾಯಕರ ವಿರುದ್ದ ಕಿಡಿಕಾಡಿದ್ದಾರೆ.

Comments are closed.