ಮನೋರಂಜನೆ

ಎಲ್ಲರೂ ಒಮ್ಮೆ ಮನನಮಾಡಿಕೊಳ್ಳಬೇಕಾದ ನಟ ಶ್ರೀಮುರಳಿಯ ಮಾತುಗಳು

Pinterest LinkedIn Tumblr

ಸುಶೀಲಾ ಡೋಣೂರ
srimuಜೀವನಕ್ಕಿಂತ ದೊಡ್ಡ ಗುರು ಬೇರಾರೂ ಇಲ್ಲ ಕಣ್ರೀ. ನೇರಾನೇರ ಎದುರು ಬಂದು ಗುದ್ದಿ ಹೋಗುತ್ತವಲ್ಲ, ಬದುಕಿನ ಆ ಕಟು ಸತ್ಯಗಳು… ನಾವೇನು ಎನ್ನುವುದು ನಮಗೆ ತಿಳಿಯುವುದೇ ಆಗ. ನಮ್ಮ ಜೀವನದಲ್ಲಿ ಯಾರು ಮುಖ್ಯರು, ಯಾರು ಅಮುಖ್ಯರು, ಯಾರದ್ದು ಬಣ್ಣದ ಮುಖ, ಯಾರದ್ದು ನೈಜ ಸಂಬಂಧ ಎನ್ನುವುದನ್ನೆಲ್ಲ ಎಳೆ ಎಳೆಯಾಗಿ ನಮ್ಮ ಕಣ್ಣ ಮುಂದೆ ಹರವಿ ಹೋಗುವ ಆ ವಾಸ್ತವಕ್ಕೆ ನನ್ನದೊಂದು ಸಲಾಂ.

ಹೌದು, ನನ್ನ ಚಿತ್ರಗಳು ಸೋತವು, ಆ ಹೊಣೆಯನ್ನು ನಾನು ಪ್ರೇಕ್ಷಕರ ಮೇಲಂತೂ ಹಾಕುವುದಿಲ್ಲ. ನನ್ನ ಬೇಜವಾಬ್ದಾರಿಯಿಂದ ನನಗೆ ಸಿಕ್ಕ ಏಟದು. ನಾನು ಎಡವಿದೆ, ಏಟೂ ತಿಂದೆ, ತಿರುಗಿ ಎದ್ದುನಿಂತೆ.

ಒಂದು ಚಿತ್ರದ ಕಥೆಯನ್ನು ತೆಗೆದುಕೊಂಡು ನಮ್ಮ ಬಳಿ ಬರುತ್ತಾರೆ ಎಂದರೆ ಅದೇ ಅಂತಿಮವಲ್ಲ. ಅದನ್ನು ನಾವು ಒಪ್ಪಿಕೊಳ್ಳಬೇಕೇ ಬೇಡವೇ ಎನ್ನುವ ಸ್ವಾತಂತ್ರ್ಯ ಪ್ರತಿಯೊಬ್ಬ ನಟನಿಗೂ ಇರುತ್ತದೆ. ಆ ಆಯ್ಕೆಯಲ್ಲಿಯೇ ನಮ್ಮ ಯಶಸ್ಸು ಅಡಗಿರುತ್ತದೆ. ಅಲ್ಲಿ ನಾವೇ ಸೋತು, ಆ ಸೋಲನ್ನು ಇನ್ನೊಬ್ಬರ ಮೇಲೆ ಹಾಕುವುದು ತರವಲ್ಲ.

ಸೋತು, ಮತ್ತೆ ಎದ್ದು ನಿಂತೆ: ಚಿಕ್ಕ ವಯಸ್ಸಿನಲ್ಲಿಯೇ ಚಿತ್ರ ಜಗತ್ತಿಗೆ ಎಂಟ್ರಿ ಸಿಕ್ಕಿತು. ಆರಂಭದ ಯಶಸ್ವಿ ಚಿತ್ರಗಳು, ಪ್ರಶಸ್ತಿಗಳು ಒಂದು ರೀತಿಯ ಭಂಡ ಧೈರ್ಯವನ್ನು ತುಂಬಿದವು. ನಾನು ಮಾಡಿದ್ದೆಲ್ಲ ಸರಿ ಎನ್ನುವ ಭಾವನೆ ಬಂದು ಬಿಟ್ಟಿತು. ಯಾವಾಗ ಒಂದು, ಎರಡು, ಮೂರು. ಹೀಗೆ ಕೈಹಿಡಿದ ಚಿತ್ರಗಳು ಪ್ರೇಕ್ಷಕರ ಮನ ಮುಟ್ಟುವಲ್ಲಿ ವಿಫಲವಾದವೊ, ಆ ಕ್ಷಣ ಗಕ್ಕನೇ ನಿಂತು ಹಿಂತಿರುಗಿ ನೋಡಿದೆ, ಭಯವಾಯಿತು. ಅದಾಗಲೇ ಹತ್ತಾರು ಚಿತ್ರಗಳನ್ನು ಜನ ತಿರಸ್ಕರಿಸಿದ್ದರು.

ನೋಡ ನೋಡುತ್ತಿದ್ದಂತೆ ಅವಕಾಶಗಳು ಕಡಿಮೆಯಾಗಿತ್ತು. ಕೈಯಲ್ಲಿ ಒಂದು ಚಿತ್ರವೂ ಉಳಿದಿರಲಿಲ್ಲ. ಮುಂದೆ ಹೇಗೆ ಎನ್ನುವ ಭಯ, ಭವಿಷ್ಯದ ಚಿಂತೆಯ ಜೊತೆಗೆ ಅಮ್ಮ–ಅಪ್ಪ, ಹೆಂಡತಿ–ಮಕ್ಕಳ ಮುಖಗಳು ಕಣ್ಮುಂದೆ ಹಾದು ಹೋದವು.

ಸುಮ್ಮನೇ ಕುಳಿತು ನನ್ನನ್ನೇ ನಾನು ಮಾತನಾಡಿಸಿದೆ. ಏನಾಗಿದೆ, ಏನಾಗುತ್ತಿದೆ ಎನ್ನುವುದರ ಅರಿವಾದುದು ಆಗಲೇ. ಮುರಳಿ ಬದಲಾಗಬೇಕಿತ್ತು. ಬದಲಾಗಲು ಕಾರಣ ಬೇಕಿತ್ತು, ದೇವರು ಅದಕ್ಕೇ ಅಂತಹ ಕಠಿಣ ಸಮಯವನ್ನು ತಂದೊಡ್ಡಿದನೇನೊ.

ಜೀವನದಲ್ಲಿ ಪ್ರತಿಯೊಬ್ಬನೂ ಒಂದಲ್ಲಾ ಒಂದು ಬಾರಿ ಮುಗ್ಗರಿಸಿ ನೆಲಕ್ಕೆ ಅಪ್ಪಳಿಸುತ್ತಾನೆ. ಹಾಗೆ ಕೆಳಕ್ಕೆ ಬಿದ್ದವನು ಎಷ್ಟು ಬೇಗ, ರಭಸವಾಗಿ ಪುಟಿದು ಮೇಲೇಳುತ್ತಾನೆ ಎನ್ನುವುದೇ ಮುಖ್ಯ. ಬಿದ್ದ ನೆಲವನ್ನೇ ಒದ್ದು ಹಾಗೆ ಮೇಲೆದ್ದ ಮುರಳಿಯನ್ನು ಜನ ‘ಉಗ್ರಂ’ನಲ್ಲಿ ಕಂಡರಲ್ಲವೇ? ಬದಲಾದ ಮುರಳಿ ಏನು ಎನ್ನುವುದು ಗಾಂಧಿನಗರದ ಜನರಿಗೆ ಗೊತ್ತಾಗಿದ್ದೂ ಆಗಲೇ. ‘ಉಗ್ರಂ’ ನಂತರ ಮತ್ತೆ ಏನು ಮಾಡುತ್ತಿದ್ದ ಈ ಮುರಳಿ ಎನ್ನುವುದಕ್ಕೆಲ್ಲ ‘ರಥಾವರ’ವೇ ಉತ್ತರವಾಯಿತು.

ರಥಾವರ ಮುಗಿದ ಮೇಲೆ ಮತ್ತೇನು ಮಾಡುತ್ತಿದ್ದೆ ಎನ್ನುವುದಕ್ಕೆ ಮುಂದೆ ಬರಲಿರುವ ಚಿತ್ರ ಮಾತನಾಡುತ್ತದೆ. ರಥಾವರದ ನಂತರ ಸುಮಾರು ಇನ್ನೂರು ಚಿತ್ರಗಳ ಕಥೆ ಕೇಳಿಸಿಕೊಂಡಿದ್ದೀನಿ. ಆಯ್ಕೆ ಮಾಡಿಕೊಂಡಿದ್ದು ಒಂದನ್ನೇ. ಚಿತ್ರಗಳ ಆಯ್ಕೆಯಲ್ಲಿ ನಾನೆಷ್ಟು ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದೇನೆ ಎನ್ನುವುದಕ್ಕೆ ಇದೇ ಉದಾಹರಣೆ.

ತುಂಬಾನೇ ಬದಲಾಗಿದ್ದೀನಿ ಕಣ್ರೀ, ಈ ಬದಲಾದ ಮುರಳಿ ನಿಮಗೆ ಇಷ್ಟ ಆಗ್ತಾನೆ ಅಂದ್ಕೊತಿನಿ. ಬದಲಾಗಿದ್ದೀನಿ ಅಂದ್ರೆ ನೇರವಾಗಿದ್ದೀನಿ, ದಿಟ್ಟವಾಗಿದ್ದೀನಿ. ಯಾರ ಮುಲಾಜೂ ನೋಡೋದಿಲ್ಲ. ಯಾರ ಹಂಗೂ ನನಗೆ ಬೇಡ. ನನಗಾಗಿ– ನಿಮಗಾಗಿ (ಅಭಿಮಾನಿಗಳಿಗಾಗಿ) ಚಿತ್ರ ಮಾಡ್ತೀನಿ.
ನನ್ನ ಹುಟ್ಟುಹಬ್ಬಕ್ಕೆ ನನ್ನ ಜನರಿಗೆ ನಾನು ಕೊಡುವ ಭಾಷೆ ಇದು–

ನಿಮ್ಮ ಈ ಮುರಳಿ ಇನ್ನೂ ಹೆಚ್ಚು ಜವಾಬ್ದಾರಿಯಿಂದ ಕೆಲಸ ಮಾಡ್ತಾನೆ. ‘ಬಾರೊ ನಮ್ಮ ಮುರಳಿ ಚಿತ್ರ ಬಂದಿದೆ’ ಅಂತ ಎದೆ ತಟ್ಟಿಕೊಂಡು ನೀವು ನಿಮ್ಮ ಗೆಳೆಯರನ್ನೂ ಚಿತ್ರಮಂದಿರಕ್ಕೆ ಕರೆತರಬೇಕು, ಅಂಥ ಚಿತ್ರಗಳನ್ನು ಕೊಡ್ತಾನೆ. ಪಾತ್ರಗಳ ಆಳಕ್ಕಿಳಿದು ನಿಮ್ಮ ಪ್ರೀತಿಪಾತ್ರನಾಗುತ್ತಾನೆ. ನಿಜಜೀವನದಲ್ಲೂ ನಿಮ್ಮ ಹೀರೊ ಆಗೋಕೆ ಪ್ರಯತ್ನಪಡ್ತಾನೆ.

30 ವರ್ಷದ ಒಳಗೇ ಗೆಲುವು ಕಾಣಬೇಕಿತ್ತು ಕಂಡೆ. ಅದರ ಹಿಂದೆಯೇ ಸೋಲಿನ ಮುಖ ನೋಡಬೇಕಿತ್ತು ನೋಡಿದೆ. 32ಕ್ಕೆ ಬಿದ್ದ ನೆಲವನ್ನೇ ಒದ್ದು ಮೇಲಕ್ಕೇಳಬೇಕಿತ್ತು, ಎದ್ದೆ. ಅಲ್ಲಿಂದೆದ್ದವನು ಹೀಗೇ ಬದುಕಬೇಕು ಅಂತ ನಿರ್ಧರಿಸಿ. ಹಾಗೇ ಬದುಕ್ತಾ ಇದ್ದೀನಿ. ಮುಂದಕ್ಕೂ ಹೀಗೇ ಬದುಕ್ತೀನಿ.

ಗಿಡದೊಂದಿಗೆ ಸೆಲ್ಫಿ ತೆಗೆಸಿಕೊಳ್ಳಿ
ನನ್ನ ಹುಟ್ಟುಹಬ್ಬಕ್ಕೆ ನನಗಾಗಿ ಹೂವು, ಬೊಕೆ, ಕೇಕ್‌ಗಳ ಹೆಸರಿನಲ್ಲಿ ದುಂದುವೆಚ್ಚ ಮಾಡಬೇಡಿ. ನೀವಿರುವ ಜಾಗದಲ್ಲಿ ನನ್ನ ಹೆಸರಿನಲ್ಲೊಂದು ಗಿಡ ನೆಡಿ. ಸಾಧ್ಯವಾದರೆ ಅದರ ಜೊತೆಗೆ ಒಂದು ಸೆಲ್ಫಿ ತೆಗೆಸಿಕೊಂಡು ಫೇಸ್‌ಬುಕ್‌ಗೆ ಹಾಕಿ. ಅದು ನನಗೆ ತಲುಪುತ್ತದೆ. ನಮ್ಮ ಮುಂದಿನ ಪೀಳಿಗೆಗೆ ಅತ್ಯುತ್ತಮ ಪರಿಸರವನ್ನು ಉಳಿಸಿ ಕೊಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಅದನ್ನು ನಾವೆಲ್ಲ ಒಟ್ಟಾಗಿ ನಿಭಾಯಿಸೋಣ. ಇದಕ್ಕಿಂತ ದೊಡ್ಡ ಗಿಫ್ಟ್‌ ನನಗೇನೂ ಬೇಡ.

ಹೊಸ ವರ್ಷ ನಿಮ್ಮೊಂದಿಗೆ
ಹೊಸ ವರ್ಷಕ್ಕೆ ಇನ್ನೇನು ಕೆಲವೇ ದಿನ ಬಾಕಿ ಉಳಿದಿದೆ. ಎಲ್ರೂ ಹೊಸ ವರ್ಷವನ್ನು ಎಲ್ಲಿ–ಹೇಗೆ ಆಚರಿಸೋದು ಅನ್ನೊ ಆಲೋಚನೆಯಲ್ಲಿರಬೇಕು. ನಾನೂ ಈ ಬಾರಿಯ ಹೊಸ ವರ್ಷವನ್ನು ವಿನೂತನವಾಗಿ ಆಚರಿಸಬೇಕು ಅಂದುಕೊಂಡಿದ್ದೀನಿ. ಇಂಗ್ಲಂಡ್‌ಗೊ–ಪ್ಯಾರಿಸ್‌ಗೊ ಹೋಗುವ ಪ್ಲಾನಂತೂ ಅಲ್ಲ. ಈ ಬಾರಿ ನಾನು ನನ್ನ ಕುಟುಂಬದವರೊಡನೆ ನನ್ನ ಮನೆಯಲ್ಲಿ ಹೊಸ ವರ್ಷವನ್ನು ಆಚರಿಸುತ್ತಿಲ್ಲ. ಬದಲಾಗಿ ನಿಮ್ಮೆಲ್ಲರ ಪ್ರೀತಿಯ ಪರಿಯನ್ನು ಕಣ್ಣಾರೆ ಕಂಡು, ಅನುಭವಿಸಲು ನಿಮ್ಮೂರಿಗೆ, ನಿಮ್ಮ ಮನೆಗೆ ಬಂದು, ನಿಮ್ಮ ಕುಟುಂಬದೊಂದಿಗೆ ಖುಷಿ ಪಡುತ್ತೇನೆ. ಈ ವರ್ಷ ನನ್ನ ಹೊಸ ವರ್ಷದ ಸಂಭ್ರಮ ಬೆಳಗಾವಿಯ ಚಿಕ್ಕೋಡಿಯಲ್ಲಿ…

*
ಅವಮಾನಗಳು, ತೆಗಳಿಕೆಗಳು, ಅಪಹಾಸ್ಯ ಎಲ್ಲವನ್ನೂ ಕಂಡಿದ್ದೇನೆ. ಎರಡೂ ಮುಖದ ಜನರನ್ನು ನೋಡಿದ್ದೇನೆ. ನನ್ನನ್ನು ಅವಮಾನಿಸಿ, ಅಪಹಾಸ್ಯ ಮಾಡಿದವರನ್ನು ಬಾಚಿ ತಬ್ಬಿಕೊಂಡಿದ್ದೇನೆ.
–ಶ್ರೀಮುರಳಿ,ನಟ

Comments are closed.