ಮನೋರಂಜನೆ

ಡೈ(ಡ)ಯಾನ (ಸಾವಿನ ಪಯಣ) ಹೌಸ್ ಚಿತ್ರ ಒಂದು ಕಾಲ್ಪನಿಕ ಕಥೆ

Pinterest LinkedIn Tumblr

dieyanahero‘ಇದೊಂದು ಕಾಲ್ಪನಿಕ ಕಥೆ. ಡಯಾನ ಎಂಬ ಹೆಸರಿನ ಯುವತಿ ತನ್ನ ಮನೆಯಲ್ಲಿ ದುರಂತ ಅಂತ್ಯ ಕಾಣುತ್ತಾಳೆ. ವರ್ಷಗಳಾದರೂ ಆ ಮನೆಗೆ ಯಾರೂ ಸುಳಿಯುವುದಿಲ್ಲ. ಹಾಗಾಗಿ ಮನೆ ಪಾಳುಬೀಳುತ್ತದೆ. ಆ ಮನೆಗೆ ಭೇಟಿ ನೀಡುವವರ ಪಾಲಿಗೆ ಅದು ಹೇಗೆ ಸಾವಿನ ಮನೆಯಾಗುತ್ತದೆ ಎಂಬುದೇ ಚಿತ್ರದ ತಿರುಳು. ಕಥೆಯಷ್ಟೇ ಶೀರ್ಷಿಕೆಯೂ ಭಿನ್ನವಾಗಿರಲಿ ಎಂದು ಆಕೆಯ ಹೆಸರನ್ನೇ ಸ್ವಲ್ಪ ಭಿನ್ನವಾಗಿ ಡೈ(ಡ)ಯಾನ (ಸಾವಿನ ಪಯಣ) ಹೌಸ್’ ಎಂದು ಇಡಲಾಗಿದೆ’ ಎಂದು ನಿರ್ದೇಶಕ ಭರತ್ ನಂದಾ ಕಥೆಯ ಎಳೆಯನ್ನು ಹಂಚಿಕೊಂಡರು.

ಮೊದಲ ಸಲ ಸಿನಿಮಾಗೆ ಆ್ಯಕ್ಷನ್–ಕಟ್ ಹೇಳಿರುವ ಭರತ್, ಆಂಧ್ರಪ್ರದೇಶ ಮೂಲದವರು. ಓದಿದ್ದು ಎಂ.ಬಿ.ಎ ಆದರೂ ವಾಲಿದ್ದು ಮಾತ್ರ ಸಿನಿಮಾ ಕಡೆಗೆ. ಸಿನಿಮಾ ನಿರ್ದೇಶನ ಕುರಿತ ಓದು, ಆಸಕ್ತಿ ಅವರನ್ನೀಗ ಸ್ವತಂತ್ರ ನಿರ್ದೇಶಕನ ಸ್ಥಾನಕ್ಕೆ ತಂದು ನಿಲ್ಲಿಸಿದೆ.

‘ಹಾರರ್ ಎಂದರೆ ನನಗೆ ಚಿಕ್ಕಂದಿನಿಂದಲೂ ಕುತೂಹಲ. ಅದಕ್ಕಾಗಿಯೇ ನಿರ್ದೇಶನದ ಮೊದಲ ಸಿನಿಮಾಕ್ಕೆ ಹಾರರ್ ಕಥೆಯನ್ನೇ ಆರಿಸಿಕೊಂಡೆ. ಚಿತ್ರದಲ್ಲಿ ಕಥೆಯೇ ನಾಯಕ. ಒಂದೇ ದಿನದಲ್ಲಿ ನಡೆಯುವ ಈ ಕಥೆಯಲ್ಲಿ 13 ಪಾತ್ರಗಳು ಬಂದುಹೋಗುತ್ತವೆ. ಎಲ್ಲ ಪಾತ್ರಗಳಿಗೂ ಮಹತ್ವವಿದೆ’ ಎನ್ನುತ್ತಾರೆ ಭರತ್.

(ನುಬಿನ್ ಪಾಲ್)

ರಾಘವ್ ರಘು ಹಾಗೂ ತೇಜಸ್ವಿನಿ ಚಿತ್ರದ ನಾಯಕ–ನಾಯಕಿ. ‘ವೈಜ್ಞಾನಿಕ ದೃಷ್ಟಿಕೋನ ಹೊಂದಿರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಚಿತ್ರ ನನಗೊಂದು ಹೊಸ ಅನುಭವ ನೀಡಿದೆ’ ಎಂದರು ರಾಘವ್. ಇದು ಅವರ ನಟನೆಯ ಮೂರನೇ ಚಿತ್ರ. ಹಿಂದೆ ‘ಗೂಳಿಹಟ್ಟಿ’ ಹಾಗೂ ‘ಟೈಟ್ಲು ಬೇಕಾ’ ಚಿತ್ರಗಳಲ್ಲಿ ಅವರು ಅಭಿನಯಿಸಿದ್ದರು.

ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಶ್ರೀಧರ್, ‘ಕುತೂಹಲಕರ ಹಾದಿಯಲ್ಲಿ ಸಾಗುವ ಸಿನಿಮಾ ನಿಜಕ್ಕೂ ಪ್ರೇಕ್ಷಕರಿಗೆ ಹಾರರ್ ಅನುಭ ನೀಡಲಿದೆ. ಮೊದಲ ಸಿನಿಮಾವಾದರೂ, ಭರತ್ ಅನುಭವಿಯಂತೆ ಕೆಲಸ ಮಾಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಅಂದುಕೊಂಡಿದ್ದ ಪಾತ್ರಕ್ಕಿಂತ ವಿಭಿನ್ನವಾದ ಪಾತ್ರವನ್ನು ನಾನಿಲ್ಲಿ ನಟಿಸಿದ್ದೇನೆ. ವ್ಯಂಗ್ಯಚಿತ್ರದ ರೂಪದಲ್ಲಿ ನಿರ್ದೇಶಕರು ನನ್ನನ್ನು ತೋರಿಸಿರುವ ಪರಿ ನಿಜಕ್ಕೂ ಸೋಜಿಗ’ ಎಂದು ನಟ ನಾರಾಯಣಸ್ವಾಮಿ ಹೇಳಿದರು. ‘ಮೊದಲ ಸಲ ಮುಖ್ಯವೆನಿಸುವ ಪಾತ್ರಕ್ಕೆ ಬಣ್ಣ ಹಚ್ಚಿದ ಸಾರ್ಥಕತೆ ಈ ಚಿತ್ರದಿಂದ ಸಿಕ್ಕಿದೆ’ ಎಂದು ನಟಿ ದಮಯಂತಿ ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸಿದರು.

ಗಿರೀಶ್ ಹಾಗೂ ರಾಜಶೇಖರ್ ಚಿತ್ರದ ನಿರ್ಮಾಪಕರು. ನುಬಿನ್ ಪಾಲ್ ಅವರ ಸಂಗೀತ, ಅರುಣ್ ಸುರೇಶ್ ಛಾಯಾಗ್ರಹಣ ಚಿತ್ರಕ್ಕಿದೆ. ಟಿ.ಎಂ. ಮೂರ್ತಿ ಚಿತ್ರಕ್ಕೆ ಸಾಹಿತ್ಯದ ಜತೆಗೆ ಸಂಭಾಷಣೆಯನ್ನು ಬರೆದಿದ್ದಾರೆ. ರಾಜ್ಯದಾದ್ಯಂತ ಸುಮಾರು 80 ಚಿತ್ರಮಂದಿರಗಳಲ್ಲಿ ಚಿತ್ರ ತೆರೆ ಕಾಣುತ್ತಿದೆ.

Comments are closed.