ಮನೋರಂಜನೆ

ಸಲ್ಮಾನ್ ಖಾನ್ ಗೆ: ಲುಲಿಯಾ ನಂತರ ಮತ್ತೊಬ್ಬ ವಿದೇಶಿ ಗರ್ಲ್ ಫ್ರೆಂಡ್

Pinterest LinkedIn Tumblr

amy_jacksonರೊಮೇನಿಯನ್ ಸುಂದರಿ ಲುಲಿಯಾ ವಂಟೂರ್ ಜತೆ ಸಲ್ಲುವಿನ ಪ್ರೇಮಸಂಬಂಧ ಮುರಿದು ಬಿದ್ದಿದ್ದು ನಿನ್ನೆ ಮೊನ್ನೆ. ಈಗ ಆ ಪ್ರೇಯಸಿ ಜಾಗದಲ್ಲಿ ನಟಿ ಆ್ಯಮಿ ಜಾಕ್ಸನ್ ಬಂದಿದ್ದಾರೆ! ಈಕೆ ಕೂಡ ಫಾರಿನ್ ಚೆಲುವೆ!
ಸಲ್ಮಾನ್‌ಖಾನ್‌ರ ಬ್ರಹ್ಮಚರ್ಯ ವ್ರತಕ್ಕೆ ಭಗ್ನ ಆಗುತ್ತಲೇ ಇರುತ್ತೆ. ಸಲ್ಲುವಿನ ಬಗ್ಗೆ ಇಲ್ಲಸಲ್ಲದ್ದನ್ನು ಹೇಳಿ ಪ್ರೇಯಸಿ ಲುಲಿಯಾ ವಂಟೂರ್ ದೂರ ಆಗಿದ್ದು ನಿನ್ನೆಮೊನ್ನೆ. ಹೀಗೆ ಬ್ರೇಕ್‌ಅಪ್ ಆಗಿ ಇನ್ನೂ ಮೂರು ದಿನ ಕಳೆದಿಲ್ಲ. ಈಗ ಆ ಗರ್ಲ್‌ಫ್ರೆಂಡ್ ಸ್ಥಾನಕ್ಕೆ ಹೊಸಬಳು ಬಂದಾಗಿದೆ!
ರಜನಿಕಾಂತ್ ಜೊತೆಗೆ ‘ರೊಬೋ 2.೦’ದಲ್ಲಿ ನಾಯಕಿ ಆಗಿರುವ ಆ್ಯಮಿ ಜಾಕ್ಸನ್ ಹೆಸರು ಸಲ್ಲುವಿನ ಜೊತೆ ತಳುಕು ಹಾಕಿಕೊಂಡಿದೆ. ಟ್ಯೂಬ್‌ಲೈಟ್ ಚಿತ್ರೀಕರಣದಲ್ಲಿರುವ ಸಲ್ಲುವಿನ ಜೊತೆ ನಿರಂತರ ಫೋನ್ ಸಂಪರ್ಕದಲ್ಲಿರುವ ಆ್ಯಮಿ, ತಾನು ಸಲ್ಲುವನ್ನು ಪ್ರೀತಿಸುತ್ತಿರುವುದಾಗಿ ಆಪ್ತರ ಬಳಿ ಹೇಳಿಕೊಂಡಿದ್ದಾರೆಂದು ಸುದ್ದಿ ಆಗಿದೆ. ಇದಕ್ಕೆಲ್ಲ ರೆಕ್ಕೆಪುಕ್ಕ ಬಂದಿದ್ದು, ‘ರೊಬೋ 2.೦’ ಚಿತ್ರದ ಫಸ್ಟ್‌ಲುಕ್ ಬಿಡುಗಡೆ ಸಮಾರಂಭದಲ್ಲಿ. ಸಲ್ಮಾನ್‌ಖಾನ್ ಈ ಕಾರ್ಯಕ್ರಮಕ್ಕೆ ಗೆಸ್ಟ್ ಲಿಸ್ಟ್‌ನಲ್ಲಿಯೇ ಇರಲಿಲ್ಲ. ಆದರೂ ಸಲ್ಲು ಹಾಜರಾಗಿ, ‘ನಾನೂ ರಜನಿ ಫ್ಯಾನ್’ ಎಂದು ಅಲ್ಲಿ ಪೋಸ್ ಕೊಟ್ಟಿದ್ದರು. ಆದರೆ, ಕಾರ್ಯಕ್ರಮ ಮುಗಿದ ಕೂಡಲೇ ನಡೆದ ಡಿನ್ನರ್ ಪಾರ್ಟಿಯಲ್ಲಿ ಅವರು ಹೆಚ್ಚು ಹೊತ್ತು ಕಳೆದಿದ್ದು ಆ ಚಿತ್ರದ ನಾಯಕಿಯ ಜೊತೆಗೆ! ಆ್ಯಮಿ ಜಾಕ್ಸನ್ ಜೊತೆಗೆ ನಗುನಗುತ್ತಾ ಓಡಾಡಿದ್ದು ಈಗ ಗಾಸಿಪ್‌ಗೆ ಕಾರಣವಾಗಿದೆ.
ನಿಜಕ್ಕೂ ಸುಲ್ತಾನ್‌ನನ್ನು ಆ್ಯಮಿ ಜಾಕ್ಸನ್ ಪ್ರೀತಿಸುತ್ತಿದ್ದರೆ ಸಲ್ಲುವಿನ ಪ್ರೀತಿಯಲ್ಲಿ ಒಂದು ವಿಶೇಷತೆಯನ್ನೂ ಹೆಕ್ಕಬಹುದು. ಆರಂಭದಲ್ಲಿ ಐಶ್ವರ್ಯಾ ರೈ, ಸಂಗೀತಾ ಬಿಜ್ಲಾನಿ, ಲಕ್ಷ್ಮೀ ರೈ, ಸ್ನೇಹಾ ಉಳ್ಳಾಲ್, ಡೈಸಿ ಷಾ- ಹೀಗೆ ದೇಸಿ ನಟಿಯರನ್ನೇ ಪ್ರೀತಿಸಿದ್ದ ಸಲ್ಮಾನ್‌ಖಾನ್‌ರ ಹಿಂದೆ ಈಗೀಗ ವಿದೇಶಿ ಮೂಲದ ಹುಡುಗಿಯರೇ ಕಾಣಿಸಿಕೊಳ್ತಿದ್ದಾರೆ. ಈ ಪರಂಪರೆ ಆರಂಭಗೊಂಡಿದ್ದು ಕತ್ರಿನಾ ಕೈಫ್‌ನಿಂದ. ಬಾಲಿವುಡ್‌ನಲ್ಲಿ ಮಿಂಚಿನ ವೇಗದಲ್ಲಿ ಹೆಸರು ಸಂಪಾದಿಸಿದ ಕತ್ರಿನಾ, ಹಾಂಗ್‌ಕಾಂಗ್ ಮೂಲದಾಕೆ. ಕತ್ರಿನಾಳಿಗೆ ಹೊಸ ಹೊಸ ಪ್ರಾಜೆಕ್ಟ್‌ಗಳನ್ನು ಕೊಡಿಸುತ್ತಾ, ಬಾಲಿವುಡ್‌ನ ಎತ್ತರಕ್ಕೆ ತಂದುನಿಲ್ಲಿಸಿದ ಸಲ್ಲು ಯಾಕೋ ಆಕೆಯಿಂದಲೂ ಅಂತರ ಕಾಪಾಡಿಕೊಂಡರು.
ಕತ್ರಿನಾ ಬಳಿಕ ಸಲ್ಲುವಿನ ಬಾಳಲ್ಲಿ ಬಂದ ಪ್ರೇಯಸಿ ರೊಮೇನಿಯಾ ದೇಶದ ಲುಲಿಯಾ. ಕೆಂಚು ಕೂದಲಿನ ಈ ಮಿಂಚುಳ್ಳಿ ಕೆಲ ತಿಂಗಳುಗಳಿಂದ ಮುಂಬೈಯನ್ನು ಬಿಟ್ಟು ಕದಲಿರಲಿಲ್ಲ. ಸಲ್ಲು ತಾಯಿಯೊಂದಿಗೆ ಬಾಂದ್ರಾದಲ್ಲಿ ಶಾಪಿಂಗ್ ಮಾಡಿದ್ದರು. ಸಲ್ಲು ಮನೆಯಲ್ಲಿ ಡಿನ್ನರ್ ಸವಿದು, ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಆತನ ಸಿನಿಮಾಗಳ ಶೂಟಿಂಗ್ ತಾಣಗಳಲ್ಲೂ ಲುಲಿಯಾ ಪ್ರತ್ಯಕ್ಷರಾದರು. ಆದರೆ, ಸಲ್ಮಾನ್ ಹಿಂದೆಯಿರುವ ಸೆಕ್ಯೂರಿಟಿ ಕಂಡು ಲುಲಿಯಾ ಕೊಂಚ ಬೆವರಿದರು. ‘ಎಲ್ಲರೂ ಪ್ರೀತಿಸುವ ಸ್ಟಾರ್ ಆದರೂ ಸಲ್ಲುವಿಗೊಂದು ಪ್ರೈವೇಸಿಯಿಲ್ಲ’ ಎಂಬ ಏಕೈಕ ಕಾರಣ ನೀಡಿ, ಪುನಃ ರೊಮೇನಿಯಾ ಸೇರಿದರು.
ಈಗ ಮೂರನೇ ಫಾರಿನ್ ಚೆಲುವೆ ಆ್ಯಮಿ ಜಾಕ್ಸನ್ ಬ್ರಿಟಿಷ್ ದ್ವೀಪಗಳ ‘ಐಲ್ ಆಫ್ ಮ್ಯಾನ್’ ಮೂಲದಾಕೆ. ಅಲ್ಲಿನ ಡಗ್ಲಸ್‌ನಲ್ಲಿ ಹುಟ್ಟಿದ ಆ್ಯಮಿ ತಮಿಳಿನ ‘ಮದ್ರಾಸಪಟ್ಟಿಣಂ’ ಮೂಲಕ ಭಾರತಕ್ಕೆ ಕಾಲಿಟ್ಟರು. ಈ ಹಿಂದೆ ಸಲ್ಮಾನ್‌ಖಾನ್ ನಿರ್ಮಿಸಿದ್ದ, ಸೊಹೈಲ್‌ಖಾನ್ ನಿರ್ದೇಶಿಸಿದ್ದ ‘ಫ್ರೀಕಿ ಅಲಿ’ಯಲ್ಲೂ ಆ್ಯಮಿ ನಟಿಸಿದ್ದರು. ಅಲ್ಲಿಂದಲೇ ಸಲ್ಲುವಿಗೂ ಆ್ಯಮಿಗೂ ನಂಟು ಶುರುವಾಗಿದೆ ಎಂಬ ಮಾತುಗಳೂ ಇವೆ. ಒಟ್ಟಿನಲ್ಲಿ ಸಲ್ಲುವಿಗೆ ಫಾರಿನ್ ಚೆಲುವೆಯರೇ ಹತ್ತಿರ ಆಗ್ತಿರೋದು ದೇಶಿ ಸುಂದರಿಯರ ಹೊಟ್ಟೆಕಿಚ್ಚಿಗೂ ಕಾರಣ ಆಗಿರಬಹುದೇನೋ!

Comments are closed.