ಮನೋರಂಜನೆ

ಮಾಸ್ತಿಗುಡಿ ದುರಂತಕ್ಕೆ ಶಿವರಾಜ್ ಕುಮಾರ್ ಹೇಳಿದ್ದೇನು…?

Pinterest LinkedIn Tumblr

shivaಬೆಂಗಳೂರು(ನ. 07): ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಮಾಸ್ತಿಗುಡಿ ಚಿತ್ರದ ಶೂಟಿಂಗ್ ವೇಳೆ ನಟರಾದ ರಾಘವ್ ಉದಯ್ ಮತ್ತು ಅನಿಲ್ ಹೆಲಿಕಾಪ್ಟರ್’ನಿಂದ ಜಿಗಿದು ಸಾವನ್ನಪ್ಪಿದ ಘಟನೆ ಬಗ್ಗೆ ಚಿತ್ರರಂಗದ ಗಣ್ಯರು ತೀವ್ರವಾಗಿ ವಿಷಾದಿಸಿದ್ದಾರೆ. ನಟ ಶಿವರಾಜಕುಮಾರ್, ಶ್ರೀಮುರಳಿ ಮತ್ತು ರಮೇಶ್ ಅರವಿಂದ್ ಅವರು ಸುವರ್ಣನ್ಯೂಸ್ ಜೊತೆ ಮಾತನಾಡಿ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.
ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ ಶಿವಣ್ಣ, ಲೈಫ್ ಜಾಕೆಟ್ ಹಾಕದೇ ಇವರಿಬ್ಬರು ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ಅವಶ್ಯಕತೆ ಏನಿತ್ತು ಎಂದು ದುಃಖ ತೋಡಿಕೊಂಡಿದ್ದಾರೆ. ಈ ಪ್ರಕರಣವನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದ ಹ್ಯಾಟ್ರಿಕ್ ಹೀರೋ, ತಾನು ಹಿರಿಯ ನಟ ಅಂಬರೀಶ್ ಅವರೊಂದಿಗೆ ಮಾತನಾಡಿ ಈ ವಿಚಾರವನ್ನು ಚರ್ಚಿಸುವುದಾಗಿ ತಿಳಿಸಿದ್ದಾರೆ. ಆದರೆ, ಈ ಘಟನೆಗೆ ಯಾವುದೇ ವ್ಯಕ್ತಿಯನ್ನೂ ಹೊಣೆ ಮಾಡಲು ಶಿವರಾಜ್’ಕುಮಾರ್ ನಿರಾಕರಿಸಿದ್ದಾರೆ.
ಇದೇ ವೇಳೆ, ನಟ ಶ್ರೀಮುರಳಿ ಕೂಡ ಘಟನೆಗೆ ಯಾರನ್ನೂ ಹೊಣೆ ಮಾಡಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ. ಇವರು ಸಂದರ್ಭಕ್ಕೆ ಬಲಿಯಾದರು… ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಿತ್ತು ಎಂದು ಶ್ರೀಮುರಳಿ ತಿಳಿಸಿದ್ದಾರೆ.
ಮತ್ತೊಬ್ಬ ಹಿರಿಯ ನಟ ರಮೇಶ್ ಅರವಿಂದ್ ಮಾತನಾಡಿ, ಇದನ್ನು ಕೇರ್’ಲೆಸ್’ನಿಂದ ಆದ ಘಟನೆ ಎಂದು ಟೀಕಿಸಿದ್ದಾರೆ. ಇದಕ್ಕಿಂತ ದೊಡ್ಡ ಸ್ಟಂಟ್’ಗಳನ್ನು ಮಾಡಲಾಗಿದೆ. ಆದರೆ ಯಾವತ್ತೂ ಇಂಥ ಘಟನೆ ನಡೆದಿರಲಿಲ್ಲ. ಸ್ಟಂಟ್’ಗಳನ್ನು ಮಾಡುವಾಗ ಸಕಲ ರೀತಿಯಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುತ್ತದೆ. ಆದರೆ, ಇಲ್ಲಿ ಯಾಕೆ ಇಂಥ ಕ್ರಮ ತೆಗೆದುಕೊಳ್ಳಲಿಲ್ಲ. ಇದು ಅಪ್ಪಟ ಬೇಜವಾಬ್ದಾರಿತನ. ತಂತ್ರಜ್ಞಾನದ ಅರಿವಿನ ಕೊರತೆ ಇರುವುದು ಸ್ಪಷ್ಟವಾಗಿದೆ ಎಂದು ರಮೇಶ್ ಅರವಿಂದ್ ಹೇಳಿದ್ದಾರೆ.
ಸಾವಲ್ಲ, ಕೊಲೆಯೇ?
ಹೆಲಿಕಾಪ್ಟರ್’ನಿಂದ ನೀರಿಗೆ ಜಂಪ್ ಮಾಡುವಾಗ ಲೈಫ್ ಜಾಕೆಟ್ ಧರಿಸುವುದು ತೀರಾ ಸಾಮಾನ್ಯ ಜ್ಞಾನದ ಸಂಗತಿ. ಆದರೆ, ಈ ಶೂಟಿಂಗ್ ವೇಳೆ ಇಂತಹ ಯಾವುದೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳದೇ ಇರುವುದು ನಿಜಕ್ಕೂ ಖಂಡನೀಯ. ಇದು ಸಾವಲ್ಲ ಕೊಲೆ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಶಿವರಾಜಕುಮಾರ್ ಮತ್ತು ಶ್ರೀಮುರಳಿ, ಮುನ್ನೆಚ್ಚರಿಕೆ ವಹಿಸಿ ಶೂಟಿಂಗ್ ನಡೆಸಬೇಕಿತ್ತು ಎಂಬುದನ್ನ ಒಪ್ಪಿಕೊಂಡಿದ್ದಾರೆ. ಆದರೆ, ಈ ಸಾವನ್ನು ಕೊಲೆ ಎಂದು ಬಣ್ಣಿಸಲು ಅವರಿಬ್ಬರೂ ನಿರಾಕರಿಸಿದ್ದಾರೆ.

Comments are closed.