ಮನೋರಂಜನೆ

ಪನೋರಮಾಗೆ ಆಯ್ಕೆಯಾದ ಕನ್ನಡದ 3 ಚಿತ್ರಗಳು; ತಾಂತ್ರಿಕ ಕಾರಣಗಳಿಂದಾಗಿ ವಂಚಿತವಾದ ‘ತಿಥಿ’

Pinterest LinkedIn Tumblr

allama

ನವದೆಹಲಿ: ಗೋವಾದಲ್ಲಿ ನವೆಂಬರ್‌ 20ರಿಂದ ಆರಂಭವಾಗಲಿರುವ ಅಂತರ ರಾಷ್ಟ್ರೀಯ ಚಲನಚಿತ್ರೋತ್ಸವದ ಭಾರತೀಯ ಪನೋರಮಾ ವಿಭಾಗಕ್ಕೆ ಪ್ರಸಕ್ತ ಸಾಲಿನಲ್ಲಿ ಕನ್ನಡದ ಮೂರು ಚಿತ್ರಗಳು ಆಯ್ಕೆಯಾಗಿವೆ. ಟಿ.ಎಸ್‌. ನಾಗಾಭರಣ ನಿರ್ದೇಶನದ ‘ಅಲ್ಲಮ’, ಅನನ್ಯ ಕಾಸರವಳ್ಳಿ ಅವರ ‘ಹರಿಕಥಾ ಪ್ರಸಂಗ’ ಹಾಗೂ ಪವನಕುಮಾರ್‌ ಅವರ ‘ಯು ಟರ್ನ್‌’ ಪನೋರಮಾಗೆ ಆಯ್ಕೆಯಾದ ಚಿತ್ರಗಳು.

ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವಗಳಿಗೆ ಆಯ್ಕೆಯಾಗಿ ಒಟ್ಟು 16ಕ್ಕೂ ಅಧಿಕ ಪ್ರಶಸ್ತಿ ಗಳಿಸಿರುವ ‘ತಿಥಿ’ ಚಿತ್ರವು ತಾಂತ್ರಿಕ ಕಾರಣಗಳಿಂದಾಗಿ ಪನೋರಮಾದಿಂದ ವಂಚಿತವಾಗಿದೆ. ಕಾಲಾವಕಾಶ ಕೊನೆಗೊಂಡ ನಂತರ ಸ್ಪರ್ಧೆಗೆ ಚಲನಚಿತ್ರವನ್ನು ನೋಂದಣಿ ಮಾಡಿಸಿರುವುದು ‘ತಿಥಿ’ ಚಿತ್ರವನ್ನು ಆಯ್ಕೆಗೆ ಪರಿಗಣಿಸದಿರುವುದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ಕನ್ನಡದ ಹಿರಿಯ ನಿರ್ದೇಶಕ ಎಸ್‌.ವಿ. ರಾಜೇಂದ್ರಸಿಂಗ್‌ ಬಾಬು ಅಧ್ಯಕ್ಷತೆಯ 13 ಜನರ ಸಮಿತಿಯು ಸ್ಪರ್ಧೆಯಲ್ಲಿದ್ದ ಒಟ್ಟು 260 ಚಿತ್ರಗಳನ್ನು 28 ದಿನಗಳ ಕಾಲ ವೀಕ್ಷಿಸಿ, 26 ಚಿತ್ರಗಳನ್ನು ಅಂತಿಮವಾಗಿ ಆಯ್ಕೆ ಮಾಡಿದೆ ಎಂದು ಸಮಿತಿಯ ಮೂಲ ಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ.

ಕಥಾವಸ್ತು, ಸಾಮಾಜಿಕ ಕಳಕಳಿ, ಮತ್ತು ಸೌಂದರ್ಯ ಪ್ರಜ್ಞೆಯ ಮೌಲ್ಯಗಳನ್ನು ಬಿಂಬಿಸುವ ಚಿತ್ರಗಳನ್ನು ಪ್ರದರ್ಶಿಸುವ ಭಾರತೀಯ ಪನೋರಮಾಗೆ ಬೆಂಗಾಲಿಯ 4, ತಮಿಳು ಮತ್ತು ಮರಾಠಿಯ ತಲಾ 3 ಚಿತ್ರಗಳೂ ಆಯ್ಕೆಯಾಗಿವೆ.

ಭಾರತೀಯ ಚಲನಚಿತ್ರಗಳ ಒಕ್ಕೂಟವು ಹಿಂದಿಯ ‘ಬಾಜಿರಾವ್‌ ಮಸ್ತಾನಿ’, ‘ಸುಲ್ತಾನ್‌’ ಮತ್ತು ‘ಏರ್‌ಲಿಫ್ಟ್‌’ ಚಿತ್ರಗಳನ್ನು ಆಯ್ಕೆ ಮಾಡಿ ಪನೋರಮಾ ವಿಭಾಗಕ್ಕೆ ಕಳುಹಿಸಿದೆ.

2008ರ ನಂತರ ಈ ಬಾರಿಯೇ ಕನ್ನಡದ ಮೂರು ಚಿತ್ರಗಳು ಪನೋರಮಾಗೆ ಆಯ್ಕೆಯಾಗಿರುವುದು ವಿಶೇಷ. ಕೆ.ಪುಟ್ಟಸ್ವಾಮಿ ಅವರು ಆಯ್ಕೆ ಸಮಿತಿಯಲ್ಲಿದ್ದ ಇನ್ನೊಬ್ಬ ಕನ್ನಡಿಗರಾಗಿದ್ದಾರೆ.

ಸರ್ಕಾರಕ್ಕೆ ಪತ್ರ: ಹಿಂದಿ ಚಲನಚಿತ್ರಗಳನ್ನು ಪನೋರಮಾಗೆ ಆಯ್ಕೆ ಮಾಡಲು ಭಾರತೀಯ ಚಲನಚಿತ್ರಗಳ ಒಕ್ಕೂಟಕ್ಕೆ ನೇರ ಅವಕಾಶ ಕಲ್ಪಿಸಿರುವುದನ್ನು ವಿರೋಧಿಸಿ ಪನೋರಮಾ ಆಯ್ಕೆ ಸಮಿತಿಯ ಅಧ್ಯಕ್ಷ ಎಸ್‌.ವಿ. ರಾಜೇಂದ್ರಸಿಂಗ್‌ ಬಾಬು ಕೇಂದ್ರ ವಾರ್ತಾ ಸಚಿವ ಎಂ.ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

Comments are closed.