ನವದೆಹಲಿ: ಭಾರತೀಯ ಸೈನಿಕರಿಗೆ ಅವಮಾನವಾಗುವಂತ ಹೇಳಿಕೆ ನೀಡಿ ತೀವ್ರ ಟೀಕೆಗೆ ಗುರಿಯಾಗಿದ್ದ ಹಿರಿಯ ನಟ ಓಂಪುರಿ ಕ್ಷಮೆಯಾಚಿಸಿದ್ದಾರೆ.
“ನಾನು ಹೇಳಿದ ಮಾತುಗಳಿಂದ ನನಗೆ ಮುಜುಗರವಾಗಿದೆ. ನಾನು ಕ್ಷಮೆಗೆ ಅರ್ಹನಲ್ಲ, ನಾನು ಶಿಕ್ಷೆಗೆ ಯೋಗ್ಯನಾದವನು, ನಾನು ಮೊದಲು ಉರಿ ಉಗ್ರ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ಕುಟುಂಬಗಳ ಕ್ಷಮೆ ಯಾಚಿಸುತ್ತೇನೆ, ಎಲ್ಲರು ನನ್ನನ್ನು ಕ್ಷಮಿಸಿ, ನಾನು, ಇಡೀ ದೇಶ, ಸೇನೆಯಲ್ಲಿ ಕ್ಷಮೆ ಕೇಳುತ್ತೇನೆ, ಕ್ಷಮೆ ಮಾತ್ರ ಇದನ್ನು ಸರಿ ಪಡಿಸಬಲ್ಲುದು, ನಾನು ತಪ್ಪಿತಸ್ಥ, ನಾನು ಶಿಕ್ಷೆಗೆ ಮಾತ್ರ ಅರ್ಹ, ನನ್ನನ್ನು ಕ್ಷಮಿಸಬೇಡಿ”…ಎಂದು ಓಂಪುರಿ ಕ್ಷಮೆ ಯಾಚಿಸಿದ್ದಾರೆ.
ಸುದ್ದಿ ವಾಹಿನಿಯೊಂದರ ಚರ್ಚಾ ಕಾರ್ಯಕ್ರಮದಲ್ಲಿ ಪಾಕಿಸ್ತಾನದ ಕಲಾವಿದರನ್ನು ಬೆಂಬಲಿಸುವ ಭರದಲ್ಲಿ ಭಾರತೀಯ ಸೇನೆಯ ಯೋಧರಿಗೆ ಅಪಮಾನ ಮಾಡಿದ್ದಾರೆ ಎಂಬ ಆರೋಪದ ಮೇಲೆ ಬಾಲಿವುಡ್ ನಟ ಓಂಪುರಿ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.
ಪಾಕಿಸ್ತಾನದ ಕಲಾವಿದರು ಭಯೋತ್ಪಾದಕರಲ್ಲ ಎಂದು ಸಲ್ಮಾನ್ ಖಾನ್ ನೀಡಿದ್ದ ಹೇಳಿಕೆ ಬಗ್ಗೆ ಓಂಪುರಿ ಅವರಿಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ಓಂಪುರಿ ಅವರು ‘ಭಾರತ ಹಾಗೂ ಪಾಕಿಸ್ತಾನಗಳು ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ರೀತಿ ಶತಮಾನಗಳ ಕಾಲ ಯುದ್ಧ ಮಾಡಲು ನೀವು ಬಯಸುತ್ತೀರಾ?’ ಎಂದಿದ್ದರು. ಯೋಧರಿಗೆ ಸೇನೆ ಸೇರುವಂತೆ ಯಾರು ಕೇಳಿದ್ದರು? ಶಸ್ತ್ರಾಸ್ತ್ರ ಕೈಗೆತ್ತಿಕೊಳ್ಳುವಂತೆ ಹೇಳಿದ್ದು ಯಾರು? ಎಂದು ಓಂಪುರಿ ಪ್ರಶ್ನಿಸಿದ್ದರು. ಜತೆಗೆ ‘ನಾನೂ ಸೈನಿಕನ ಮಗ’ ಎಂದೂ ಹೇಳಿ ವ್ಯಾಪಕ ಟೀಕೆಗೊಳಗಾಗಿದ್ದರು.