ಮನೋರಂಜನೆ

ಸಂಯಮದ ನಟನೆಯಿಂದ ಸಹ್ಯವಾಗುವ ಸರಳ ಕತೆ “ಗೋಲಿಸೋಡಾ”

Pinterest LinkedIn Tumblr

goli-sodaಚಿಕ್ಕವರಿಗೆ ಭಯ ಇರುತ್ತೆ; ದೊಡ್ಡವರಿಗೆ ಜವಾಬ್ದಾರಿ ಇರುತ್ತೆ; ಚಿಗುರು ಮೀಸೆ ಹುಡುಗರಿಗೆ? ಭಯವೂ ಇಲ್ಲ, ಜವಾಬ್ದಾರಿಯೂ ಇಲ್ಲ. ಅವರಿಗೆ ಛಲ ಇರುತ್ತೆ, ಉತ್ಸಾಹ ಇರುತ್ತೆ. ಎಲ್ಲಕ್ಕಿಂತ ಹೆಚ್ಚಾಗಿ ಏನ್‌ ಬೇಕಾದರೂ ಆಗಲಿ, ಫೇಸ್‌ ಮಾಡೋಣ ಎನ್ನುವ ಹುಂಬತನ ವಿಪರೀತ ಇರುತ್ತದೆ. ಅಂತಹ ಹುಂಬ ಹುಡುಗರ ಕಥೆಯೇ ಈ “ಗೋಲಿಸೋಡಾ’. ಮಾರ್ಕೆಟ್‌ನಲ್ಲಿ ಕೂಲಿ ಕೆಲಸ ಮಾಡಿ ಬದುಕು ಸಾಗಿಸುವ ನಾಲ್ವರು ಅನಾಥ ಹುಡುಗರನ್ನು ಕೆಣಕಿದರೆ ಏನಾಗಬಹುದು? ಅದೇ ಈ ಚಿತ್ರದ ಕಥೆ ಎಂದು ಸುಲಭವಾಗಿ ಹೇಳಿಬಿಡಬಹುದು. ಆದರೆ, “ಗೋಲಿಸೋಡಾ’ ಗಮನ ಸೆಳೆಯುವುದು ಈ ಒನ್‌ಲೈನ್‌ನಿಂದಲ್ಲ, ಚಿತ್ರಕಥೆಯಿಂದ ಎಂದರೆ ತಪ್ಪಿಲ್ಲ. ಏಕೆಂದರೆ, ಬಹಳ ಸರಳವಾಗಿ ಕಾಣುವ ಒನ್‌ಲೈನ್‌ನಲ್ಲಿ ಸಿಕ್ಕಾಪಟ್ಟೆ ಟ್ವಿಸ್ಟ್‌ಗಳು ಇವೆ. ಹಾಗಾಗಿ “ಗೋಲಿಸೋಡಾ’ ಬೇರೆ ಶೈಲಿಯ ಸಿನಿಮಾ ಎಂದರೆ ತಪ್ಪಿಲ್ಲ.

ನಾಲ್ವರು ಚಿಲ್ಲರೆ ಹುಡುಗರು ಮತ್ತು ಮಾರ್ಕೆಟ್ಟನ್ನು ತನ್ನ ಮುಷ್ಠಿಯಲ್ಲಿಟ್ಟುಕೊಂಡಿರುವ ಗೌಡನ ನಡೆಯುವ ಕಥೆಯೇ “ಗೋಲಿಸೋಡಾ’. ಆ ಗೌಡನ ಸುಪರ್ದಿಯಲ್ಲಿರುವ ಹೋಟೆಲ್‌ನಲ್ಲಿ ಈ ನಾಲ್ವರು ಮತ್ತು ಆಕೆಯ ಮೆಂಟರ್‌ ಎನಿಸಿಕೊಂಡಿರುವ ಪುಟ್ಟಕ್ಕ ಒಂದು ಹೋಟೆಲ್‌ ತೆರೆಯುತ್ತಾರೆ. ಆರಂಭದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ. ಕ್ರಮೇಣ, ಗೌಡನ ಹುಡುಗರಿಗೆ ಈ ಹುಡುಗರು ಬಡಿಯುತ್ತಾರೆ. ಇದರಿಂದ ಕರೆಳಿದ ಗೌಡ ಅವರ ವಿರುದ್ಧ ತಿರುಗಿ ಬೀಳುತ್ತಾನೆ. ನಾಲ್ವರನ್ನು ನಾಲ್ಕು ದಿಕ್ಕಿಗೆ ಓಡಿಸುತ್ತಾನೆ. ಅವರೆಲ್ಲಾ ಮತ್ತೆ ಸಿಟಿ ಮಾರ್ಕೆಟ್ಟಿಗೆ ವಾಪಸ್ಸು ಬರುತ್ತಾರೆ. ಆ ಗೌಡನ ವಿರುದ್ಧ ತಿರುಗಿಬೀಳುತ್ತಾರೆ. ಈ ಹುಡುಗರಿಗೆ ಹೋಟೆಲ್‌ ಬಿಟ್ಟರೆ ಕಳೆದುಕೊಳ್ಳುವುದಕ್ಕೆ ಏನೇನೂ ಇಲ್ಲ. ಬರೀ ಪ್ರಾಣ ಮಾತ್ರ. ಆದರೆ, ಗೌಡನಿಗೆ ಕಳೆದುಕೊಳ್ಳವುದಕ್ಕೆ ಮಾನ, ಮರ್ಯಾದೆ, ಗೌರವ, ಅಂತಸ್ತು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಮಾರ್ಕೆಟ್‌ನಲ್ಲಿ ಕಟ್ಟಿಕೊಂಡಿರುವ ತನ್ನ ಸಾಮ್ರಾಜ್ಯ ಎಲ್ಲವೂ ಇದೆ. ಈ ಎರಡು ಕಡೆಗಳಲ್ಲಿ ಯಾರು, ಏನನ್ನು ಕಳೆದುಕೊಳ್ಳುತ್ತಾರೆ ಎನ್ನುವುದೇ ಮುಖ್ಯ ಮತ್ತು ಅದನ್ನು ಚಿತ್ರಮಂದಿರದಲ್ಲೇ ನೋಡಬೇಕು.

“ಗೋಲಿಸೋಡಾ’ ತಮಿಳಿನ ಅದೇ ಹೆಸರಿನ ಚಿತ್ರದ ರೀಮೇಕು. ಅದು ಅಲ್ಲಿ ಯಶಸ್ವಿಯಾದ ಚಿತ್ರ ಬೇರೆ. ಹಾಗಾಗಿ ಅದನ್ನು ಹೆಚ್ಚು ಬದಲಾವಣೆಗಳಿಲ್ಲದೆ ಕನ್ನಡಕ್ಕೆ ತರಲಾಗಿದೆ. ಈ ಚಿತ್ರದ ಹೈಲೈಟ್‌ ಎಂದರೆ ಅದು ಚಿತ್ರಕಥೆ.

ಹೀಗಾಗಬಹುದು ಎಂದುಕೊಂಡರೆ, ಹಾಗಾಗಬಾರದು ಎಂಬ ಎಚ್ಚರಿಕೆಯಿಂದ ಚಿತ್ರಕಥೆಯನ್ನು ಬರೆಯಲಾಗಿದೆ. ಆ ಎಚ್ಚರಿಕೆಯೇ ಚಿತ್ರವನ್ನು ಕಾಪಾಡಿದೆ ಎಂದರೆ ತಪ್ಪಿಲ್ಲ. ಆ ಮಟ್ಟಿಗೆ ಮೂಲ ಕಥೆ ಮತ್ತು ಚಿತ್ರಕಥೆಯನ್ನು ಬರೆದಿರುವ ವಿಜಯ್‌ ಮಿಲ್ಟನ್‌ ಅವರನ್ನು ಮೊದಲು ಮೆಚ್ಚಬೇಕು. ಹಾಗಂತ ಅವರಿಗೆ 100 ಪರ್ಸೆಂಟ್‌ ಅಂಕ ಕೊಡುವುದಕ್ಕೆ ಸಾಧ್ಯವಿಲ್ಲ. ದ್ವಿತೀಯಾರ್ಧದಲ್ಲಿ ಅವರು ತೋರಿರುವ ಚಾಕಚಕ್ಯತೆ ಮತ್ತು ಕೊಟ್ಟಿರುವ ಟ್ವಿಸ್ಟುಗಳನ್ನು ಮೊದಲಾರ್ಧವೂ ಕೊಟ್ಟಿದ್ದರೆ ಚಿತ್ರ ಇನ್ನೂ ಚೆನ್ನಾಗಿರುತಿತ್ತು. ಆದರೆ, ಹುಡುಗರ ಆಸೆ, ಕನಸು, ಲವ್ವು … ಇದರ ಸುತ್ತವೇ ಸುತ್ತುವುದರಿಂದ ಚಿತ್ರ ವಿಪರೀತ ನಿಧಾನವೆನಿಸುತ್ತದೆ. ಯಾವಾಗ ಹುಡುಗರ ಮತ್ತು ಗೌಡನ ನಡುವೆ ಟಗ್‌ ಆಫ್ ವಾರ್‌ ಶುರುವಾಗುತ್ತದೋ ಅಲ್ಲಿಂದ ಚಿತ್ರವೂ ಟೇಕಾಫ್ ಆಗುತ್ತದೆ. ಹಾಗಾಗುವುದಕ್ಕೆ ನೀವು ತಾಳ್ಮೆಯಿಂದ ಕಾಯಬೇಕು. ಒಮ್ಮೆ ಟೇಕಾಫ್ ಆದ್ಮೇಲೆ ಲ್ಯಾಂಡ್‌ ಆಗೋದು, ಪ್ರಯಾಣ ಮುಗಿಯೋದು ಯಾವುದೂ ಗೊತ್ತಾಗುವುದಿಲ್ಲ.

ಚಿತ್ರದಲ್ಲಿ ಗಮನಸೆಳೆಯುವ ಅಂಶಗಳೆಂದರೆ ಅಭಿನಯ ಮತ್ತು ಛಾಯಾಗ್ರಹಣ. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತವಾಗುತ್ತಿರುವ ಮಧುಸೂಧನ್‌, ಗೌಡನ ಪಾತ್ರವನ್ನು ಸೆಟಲ್ಡ್‌ ಆಗಿ ನಿರ್ವಹಿಸಿರುವುದು ನಿಜಕ್ಕೂ ಖುಷಿ ಆಗುತ್ತದೆ. ಎಷ್ಟೇ ಸಿಟ್ಟು, ಆಕ್ರೋಶಗಳಿದ್ದರೂ ಅದನ್ನೆಲ್ಲಾ ಬಹಳ ಸಂಯಮದಿಂದ ಅವರು ನಿರ್ವಹಿಸಿದ್ದಾರೆ. ತಾರಾ ಕೂಡಾ ಆ ಎಲ್ಲಾ ಮಕ್ಕಳ ಪೋಷಕಿಯಾಗಿ ಒಳ್ಳೆಯ ಅಭಿನಯ ನೀಡಿದ್ದಾರೆ. ಡ್ಯಾನಿ ಕುಟ್ಟಪ್ಪ ಎಷ್ಟು ಅಟ್ಟಹಾಸ ಮಾಡುತ್ತಾರೋ, ಶೋಭರಾಜ್‌ ಅಷ್ಟೇ ತಾಳ್ಮೆಯಿಂದ ಇಷ್ಟವಾಗುತ್ತಾರೆ. ಇನ್ನು ನಾಲ್ವರು ಹುಡಗರಲ್ಲಿ ಯಾರು ಹೆಚ್ಚು, ಯಾರು ಕಡಿಮೆ ಹೇಳುವುದು ಕಷ್ಟ. ಇಬ್ಬರು ಹುಡುಗಿಯರಲ್ಲಿ ಭಗವತಿ ಅಭಿನಯ ಇಷ್ಟವಾದರೆ, ಚಾಂದಿನಿ ಬ್ಯೂಟಿ ಗಮನಸೆಳೆಯುತ್ತದೆ.

ಇನ್ನು ಛಾಯಾಗ್ರಹಣ ಚಿತ್ರದ ಹೈಲೈಟ್‌. ಕೆ.ಆರ್‌. ಮಾರ್ಕೆಟ್‌ನ ಸಹಜ ಸೌಂದರ್ಯವನ್ನು ಧಾಮು ಹಿಡಿದಿಟ್ಟಿದ್ದಾರೆ. ಮೂಲ ಚಿತ್ರದಲ್ಲಿ ಗಮನಸೆಳೆದ ಒಂದು ಅಂಶವೆಂದರೆ ಅದು ಅನೂಪ್‌ ಸೀಳಿನ್‌ ಅವರ ಹಿನ್ನೆಲೆ ಸಂಗೀತ. ಇಲ್ಲಿ ಹಿನ್ನೆಲೆ ಸಂಗೀತದ ಮಾಸ್ಟರ್‌ ಸಾಧು ಕೋಕಿಲ ಇದ್ದರೂ, ಅಷ್ಟೇನೂ ಅವರ ಕೆಲಸ ಗೊತ್ತಾಗುವುದಿಲ್ಲ. ರಾಜೇಶ್‌ ರಾಮನಾಥ್‌ ಸಂಗೀತ ನಿರ್ದೇಶನದಲ್ಲಿ ಎರಡ್ಮೂರು ಹಾಡುಗಳು ಕೇಳಿ ಬರುತ್ತವೆ. ಗೋಲಿಗಳನ್ನೆಲ್ಲಾ ಎತ್ತಿಟ್ಟು ಬರೀ ಸೋಡಾ ಕೊಟ್ಟಿದ್ದರೆ, ಜೀರ್ಣ ಸುಲಭವಾಗಿ ಆಗುತಿತ್ತೇನೋ?

ಚಿತ್ರ: ಗೋಲಿಸೋಡಾ
ನಿರ್ದೇಶನ: ರಘು ಜಯ
ನಿರ್ಮಾಣ: ಕೊಲ್ಲ ಪ್ರವೀಣ್‌
ತಾರಾಗಣ: ಮಂಜು, ಪ್ರಿಯಾಂಕಾ, ಹೇಮಂತ್‌, ಮಧುಸೂಧನ್‌, ತಾರಾ ಮುಂತಾದವರು

– ಚೇತನ್‌ ನಾಡಿಗೇರ್‌

-ಉದಯವಾಣಿ

Comments are closed.