ಹೊಸದಿಲ್ಲಿ : ಕಳೆದ ಜುಲೈ 8ರಂದು ಭದ್ರತಾ ಪಡೆಗಳ ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿ ಇಡಿಯ ಜಮ್ಮು ಕಾಶ್ಮೀರಕ್ಕೆ ಹಿಂಸೆಯ ಕಿಚ್ಚು ಹೊತ್ತಿಸಿದ್ದ ಹಿಜ್ಬುಲ್ ಮುಜಾಹಿದೀನ್ ಉಗ್ರ 21ರ ಹರೆಯದ ಬುರ್ಹಾನ್ ವಾಹಿಯ ದುರಂತ ಕಥೆ ಒಂದು ಬಗೆಯದ್ದಾದರೆ ಇದಕ್ಕೆ ಪೂರ್ತಿಯಾಗಿ ವ್ಯತಿರಿಕ್ತ ಎಂಬಂತೆ ಇಲ್ಲಿ ಇನ್ನೋರ್ವ ವಾನಿ ಉದಯಿಸಿದ್ದು ಬಿಎಸ್‌ಎಫ್ ನಡೆಸಿರುವ ಸಹಾಯಕ ಕಮಾಂಡೆಂಟ್ ಪರೀಕ್ಷೆಯಲ್ಲಿ ಈತ ಟಾಪರ್ ಆಗುವ ಮೂಲಕ ಇಡಿಯ ಜಮ್ಮು ಕಾಶ್ಮೀರಕ್ಕೆ ಹೆಮ್ಮೆಯ ವಾನಿ ಎನಿಸಿಕೊಂಡಿದ್ದಾನೆ.
ಈತನ ಹೆಸರು ನಬೀಲ್ ಅಹ್ಮದ್ ವಾನಿ. ವಯಸ್ಸು 26. ಜಮ್ಮು ಕಾಶ್ಮೀರದ ಉಧಾಂಪುರದ ನಿವಾಸಿ !
ಬಿಎಸ್‌ಎಫ್ ನಡೆಸಿರುವ ಸಹಾಯಕ ಕಮಾಂಡೆಂಟ್ ಪರೀಕ್ಷೆಯಲ್ಲಿ ಟಾಪರ್ ಆಗುವ ಹೆಮ್ಮೆಯ ಸಾಧನೆ ಮಾಡಿರುವ ಈತನನ್ನು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಖುದ್ದು ಭೇಟಿ ಮಾಡಿ ಆತನ ಸಾಧನೆಯನ್ನು ಮುಕ್ತಕಂಠದಿಂದ ಪ್ರಶಂಸಿಸಿದರು. ಮಾತ್ರವಲ್ಲದೆ ಈತನ ಈ ಸಾಧನೆಯ ಯಶಸ್ಸು ರಾಜ್ಯದಲ್ಲಿ ಈತನ ಹಾಗೆ ಅನೇಕ ಯುವಕ – ಯುವತಿಯರಿಗೆ ಮಾದರಿಪ್ರಾಯವೂ ಸ್ಫೂರ್ತಿದಾಯಕವೂ ಆಗಿದೆ ಎಂದು ನುಡಿದು ಇನ್ನೂ ದೊಡ್ಡ ಯಶಸ್ಸು ಆತನದ್ದಾಗಲಿ ಎಂದು ಹರಿಸಿದರು.
ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡುವಾಗ ವಾನಿಯ ಜತೆಗೆ ಬಿಎಸ್‌ಎಫ್ ನ ಮಹಾ ನಿರ್ದೇಶಕ ಕೆ ಕೆ ಶರ್ಮಾ ಅವರು ಕೂಡ ಇದ್ದರು. ಶರ್ಮಾ ಅವರು ಕೂಡ ವಾನಿಗೆ ಯಶಸ್ಸು ಹಾಗೂ ಭವ್ಯ ಭವಿಷ್ಯವನ್ನು ಹಾರೈಸಿದರು.
ರಾಜನಾಥ್ ಸಿಂಗ್ ಅವರು ಈ ಹೆಮ್ಮೆಯ ವಾನಿಯನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಾಲ್, ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ರಾಜೀವ್ ಮಹರ್ಷಿ ಮತ್ತು ಇತರರನ್ನು ಪರಿಚಯಿಸಿದರು.
ಜಮ್ಮು ಕಾಶ್ಮೀರದಲ್ಲಿನ ಯುವಕರಿಗೆ ನಿರುದ್ಯೋಗವೇ ಬಹಳ ದೊಡ್ಡ ಸಮಸ್ಯೆಯಾಗಿದ್ದು ಅದನ್ನು ಉತ್ತಮ ಶಿಕ್ಷಣದ ಮೂಲಕವೇ ಪರಿಹರಿಸಬಹುದಾಗಿದೆ ಎಂದು ವಾನಿ ಈ ಸಂದರ್ಭದಲ್ಲಿ ಹೇಳಿದ.
ವಾನಿ ಪ್ರಕೃತ ಉಧಾಂಪುರದಲ್ಲಿ ಬಿಎಸ್‌ಎಫ್ ಜೂನಿಯರ್ ಇಂಜಿನಿಯರ್ ಆಗಿ ಕರ್ತವ್ಯನಿರತನಾಗಿದ್ದಾನೆ. ಭದ್ರತಾ ಪಡೆಯನ್ನು ಸೇರುವುದು ಹಾಗೂ ದೇಶಕ್ಕಾಗಿ ಸೇವೆ ಸಲ್ಲಿಸುವುದೇ ನನ್ನ ಕನಸಾಗಿದ್ದು ಅದೀಗ ನನಸಾಗಿದೆ ಎಂದು ವಾನಿ ಈ ಸಂದರ್ಭದಲ್ಲಿ ಹೆಮ್ಮೆಯಿಂದ ಹೇಳಿಕೊಂಡ.
ವಾನಿಯ ಸಾಧನೆಯ ಬಗ್ಗೆ ಆತನ ತಾಯಿ ಹನೀಫಾ ಬೇಗಂ ಅವರಿಗೆ ಅಪಾರ ಸಂತಸ, ಸಂಭ್ರಮ ಉಂಟಾಗಿದೆ.
-ಉದಯವಾಣಿ
Comments are closed.