ಮನೋರಂಜನೆ

ಅವರನ್‌ ಬಿಟ್‌ ಇವರನ್‌ ಬಿಟ್‌ ಅವರ್ಯಾರು

Pinterest LinkedIn Tumblr

chetanಚಿತ್ರ: ಸ
ನಿರ್ದೇಶನ : ಹೇಮಂತ್‌ ಹೆಗಡೆ
ನಿರ್ಮಾಣ : ನಿರ್ಮಾಣ: ಉದಯ್‌ ಶೆಟ್ಟಿ
ತಾರಾಗಣ : ಜೆಕೆ, ವಿಜಯ್‌ ಸೂರ್ಯ, ಹೇಮಂತ್‌ ಹೆಗಡೆ, ಸಂಯುಕ್ತಾ ಬೆಳವಾಡಿ, ಅನುರಾಧಾ ಮುಖರ್ಜಿ ಮುಂತಾದವರು

ಅವನು ತನ್ನ ಹೆಂಡತಿ ಮತ್ತು ಭಾವನನ್ನು ಕೊಲ್ಲುವುದಕ್ಕೆ ಸುಪಾರಿ ಕೊಡುತ್ತಾನೆ. ಇವನು ತನ್ನ ಹೆಂಡತಿ ಮತ್ತು ಭಾವನನ್ನು ಕೊಲ್ಲುವುದಕ್ಕೆ ಸುಪಾರಿ ಕೊಡುತ್ತಾನೆ. ಅವನ ಹೆಂಡತಿ ಮತ್ತು ಇವನ ತಂಗಿಯು ತನ್ನ ಗಂಡ ಮತ್ತು ಅತ್ತಿಗೆಯನ್ನು ಕೊಲ್ಲುವುದಕ್ಕೆ ಸುಪಾರಿ ಕೊಡುತ್ತಾಳೆ. ಮೂವರೂ ಸುಪಾರಿ ಕೊಡುವುದು ಅವನೊಬ್ಬನಿಗೆ.ಅವನು 10 ಲಕ್ಷ ಸುಪಾರಿ ಕೊಡುವುದಕ್ಕೆ ಒಪ್ಪಿಕೊಂಡರೆ, ಇವನು ಆ ಮೊತ್ತವನ್ನು ಒಂದು ಕೋಟಿಗೆ ಏರಿಸುತ್ತಾನೆ. ಅವಳು ಅದನ್ನು ಎರಡು ಕೋಟಿ ಮಾಡುತ್ತಾಳೆ. ಹೀಗೆ ಒಬ್ಬನೇ ಸುಪಾರಿ ಕಿಲ್ಲರ್‌ಗೆ ಒಂದೇ ಮನೆಯಲ್ಲಿ, ಒಂದೇ ಕುಟುಂಬದ ಮೂವರನ್ನು ಕೊಲೆ ಮಾಡುವ ಸುಪಾರಿ ಕೊಟ್ಟಿರುತ್ತಾರೆ. ಯಾರನ್ನು ಹೊಡೆದರೂ ಅವನಿಗೆ ಕೈ ತುಂಬಾ ರೊಕ್ಕ. ಆದರೆ, ಹಾಗೆ ಕೊಲ್ಲೋಕೆ ಬಂದವನೇ ಕೊಲೆಯಾಗಿ ಬೀಳುತ್ತಾನೆ. ಅವನ ಬದಲು ಇನ್ನಾéರೋ ಅದೇ ಪ್ರಯತ್ನ ಮಾಡುತ್ತಾರೆ. ಆದರೆ, ಯಾರು?

ಹತ್ತು ವರ್ಷಗಳಿಗೊಮ್ಮೆ ಒಂದು ಅದ್ಭುತ ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರಗಳು ಬರುತ್ತವೆ ಮತ್ತು ಅದು ಟ್ರೆಂಡ್‌ ಸೆಟರ್‌ ಆಗುತ್ತವೆ ಎಂದು ನಿರ್ದೇಶಕ ಹೇಮಂತ್‌ ಹೆಗಡೆ ಹೇಳಿಕೊಂಡಿದ್ದರು. ತಮ್ಮ ಚಿತ್ರ ಸಹ ಅದೇ ದಾರಿಯಲ್ಲಿದೆ ಎಂದಿದ್ದರು. ಹೇಮಂತ್‌ ಹೇಳಿದ್ದು ಅರ್ಧ ನಿಜವಾಗಿದೆ. ಬಹುಶಃ ಇಂಥ ದ್ದೊಂದು ಕಥೆಯನ್ನು ಇನ್ನಷ್ಟು ಸರಳಗೊಳಿಸಿದ್ದರೆ ಮತ್ತು ಇನ್ನಷ್ಟು ಚೆನ್ನಾಗಿ ನಿರೂಪಿಸಿದ್ದರೆ, ಚಿತ್ರ ಟ್ರೆಂಡ್‌ಸೆಟರ್‌ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಹೇಮಂತ್‌ ಸೋಲುವುದು ಇದೇ ವಿಚಾರದಲ್ಲಿ ಎಂದರೆ ತಪ್ಪಿಲ್ಲ. ಹೇಮಂತ್‌ ಒಂದೊಳ್ಳೆಯ ಸಸ್ಪೆನ್ಸ್‌ ಕಥೆ ಮಾಡಿಟ್ಟುಕೊಂಡಿರುವುದು ಹೌದು. ಆದರೆ, ಅದು ತೆರೆಯ ಮೇಲೆ ಬರುವಷ್ಟರಲ್ಲಿ ಜಾಳುಜಾಳಾಗಿ ಹೋಗುತ್ತದೆ. ಹಾಗೆ ನೋಡಿದರೆ, ಹಿಂದಿಯ “ರೇಸ್‌’ ಲೆವೆಲ್ಲಿನ ಸಿನಿಮಾ ಇದು.

ಚಿತ್ರ ಪ್ರಾರಂಭವಾಗಿ ಹತØತ್ತು ನಿಮಿಷಕ್ಕೂ ಒಂದೊಂದು ಟ್ವಿಸ್ಟ್‌ ಇದೆ ಮತ್ತು ಇಂಟರ್‌ವೆಲ್‌ ಹೊತ್ತಿಗೆ ಚಿತ್ರವು ಪ್ರೇಕ್ಷಕರನ್ನು ಸೀಟಿನ ತುದಿ ತಂದು ಕೂರಿಸಿರುತ್ತದೆ. ಆ ಮಟ್ಟಿಗೆ ಒಂದೊಳ್ಳೆಯ ಸ್ಕ್ರೀನ್‌ಪ್ಲೇ ಮಾಡಿಟ್ಟುಕೊಂಡಿದ್ದಾರೆ ಹೇಮಂತ್‌ ಹೆಗಡೆ. ದ್ವಿತೀಯಾರ್ಧದಲ್ಲಿ ಅದನ್ನು ಅವರು ಮುಂದುವರೆಸುತ್ತಾರೆ. ಹೀಗೆ ತುತ್ತ ತುದಿಗೆ ಹೋಗುವ ಚಿತ್ರ, ಕ್ರಮೇಣ ಕುಸಿಯುತ್ತಾ ಹೋಗುತ್ತದೆ. ಪಾಳು ಬಿದ್ದ ಚರ್ಚಿನಲ್ಲಿ ಚಿತ್ರದ ಕ್ಲೈಮಾಕ್ಸ್‌ ನಡೆದು, ಪೊಲೀಸರು ಹ್ಯಾಂಡ್ಸ್‌ಅಪ್‌ ಎನ್ನುವಷ್ಟರಲ್ಲಿ ಇಷ್ಟೇನಾ ಅನಿಸುವುದಕ್ಕೆ ಶುರುವಾಗುತ್ತದೆ. ಆದರೆ, ಅಷ್ಟಕ್ಕೇ ಚಿತ್ರ ಮುಗಿಯುವುದಿಲ್ಲ. ಎಲ್ಲಾ ಮುಗಿಯಿತು ಎನ್ನುವಷ್ಟರಲ್ಲಿ, ಹೇಮಂತ್‌ ಇನ್ನೊಂದು ಟ್ವಿಸ್ಟ್‌ ಕೊಡುತ್ತಾರೆ. ಅಲ್ಲಿಯವರೆಗಿನ ಎಲ್ಲಾ ಘಟನೆಗಳ ಹಿಂದಿರುವ ಅಸಲಿ ಷಡ್ಯಂತ್ರವನ್ನು ಬಯಲು ಮಾಡುತ್ತಾ ಹೋಗುತ್ತಾರೆ. ಆಗ ಅಲ್ಲಿಯವರೆಗಿನ ಮಿಸ್ಸಿಂಗ್‌ ಲಿಂಕ್‌ಗಳಿ ಗೆಲ್ಲಾ ತಾರ್ಕಿಕ ಉತ್ತರ ಸಿಗುತ್ತಾ ಹೋಗುತ್ತದೆ. ಆದರೆ, ಅಲ್ಲಿಯ ವರೆಗೂ ಕುಳಿತುಕೊಳ್ಳುವ ತಾಳ್ಮೆ ಪ್ರೇಕ್ಷಕರಿಗಿಬೇಕು ಅಷ್ಟೇ.

ಇಂತಹ ಸಿನಿಮಾಗಳಿಗೆ ಒಂದೊಂದು ನಿಮಿಷ ಸಹ ಬಹಳ ಮುಖ್ಯ. ಹಾಗಾಗಿ ಎಷ್ಟು ಕಡಿಮೆ ಅವಧಿಯಲ್ಲಿ ಎಲ್ಲವನ್ನೂ ಸಮರ್ಪಕವಾಗಿ ಹೇಳುವುದಕ್ಕೆ ಸಾಧ್ಯವೋ ಅಷ್ಟು ಚೆನ್ನಾಗಿರುತ್ತದೆ. ಹೇಮಂತ್‌ ಎಡವಿರುವುದೇ ಇಲ್ಲಿ. ಇಲ್ಲಿ ಹಲವು ದೃಶ್ಯಗಳು ಅನಾವಶ್ಯಕವಾಗಿ ಎಳೆಯಲ್ಪಟ್ಟಿದೆ. ಅದೇ ಕಾರಣಕ್ಕೆ ಚಿತ್ರ ಸಹ ಎಳೆದಂತಾಗಿದೆ. ಚಿತ್ರವನ್ನು ಇನ್ನಷ್ಟು ಕತ್ತರಿಸುವ ಸಾಧ್ಯತೆ ಇತ್ತು. ಇನ್ನು ಅಭಿನಯ, ಗ್ರಾಫಿಕ್ಸ್‌, ಹಿನ್ನೆಲೆ ಸಂಗೀತ ಎಲ್ಲವೂ ಇನ್ನಷ್ಟು ಚೆನ್ನಾಗಿದ್ದಿದ್ದರೆ ಚಿತ್ರ ಇನ್ನೂ ಪಕ್ವವಾಗುತಿತ್ತು. ಆದರೆ, ಇವೆಲ್ಲವೂ ಮಿಸ್‌ ಹೊಡೆದಿದೆ. ಟ್ರೆಂಡ್‌ ಸೆಟರ್‌ ಆಗಬಹುದಾದ ಒಂದು ಚಿತ್ರವು ಹೀಗೆ ಮುಗಿಯುತ್ತದೆ. ಇದೆಲ್ಲಾ ಮೈನಸ್ಸುಗಳ ಮಧ್ಯೆ ಅವರನ್‌ ಬಿಟ್‌ ಇವರನ್‌ ಬಿಟ್‌ ಅವರ್ಯಾರು ಎಂಬ ಕುತೂಹಲವಿದ್ದವರು ಚಿತ್ರ ನೋಡಬಹುದು.

ಚೇತನ್‌ ನಾಡಿಗೇರ್‌

-ಉದಯವಾಣಿ

Comments are closed.