ಅನಿರುದ್ಧ್ ಅಭಿನಯದ “ರಾಜಾ ಸಿಂಹ’ ಚಿತ್ರದಲ್ಲಿ ಭಾರತಿ ವಿಷ್ಣುವರ್ಧನ್ ಅಭಿನಯಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಈಗ ಆ ಚಿತ್ರಕ್ಕೆ ಇನ್ನೊಂದು ದೊಡ್ಡ ಕಲಾವಿದರ ಅಡಿಷನ್ ಆಗಿದೆ. ಈ ಬಾರಿ ಚಿತ್ರಕ್ಕೆ ಎಂಟ್ರಿ ಕೊಟ್ಟಿರುವುದು ಯಾರು ಗೊತ್ತಾ? “ರೆಬೆಲ್ ಸ್ಟಾರ್’ ಅಂಬರೀಶ್. ಹೌದು, ಅಂಬರೀಶ್ ಚಿತ್ರದಲ್ಲಿ ಅಮರ್ನಾಥ್ ಎಂಬ ಸಚಿವರ ಪಾತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಮೈಸೂರಿನಲ್ಲಿ ಚಿತ್ರದ ಚಿತ್ರೀಕರಣ ಸಹ ನಡೆದಿದೆ.
ಟಿ ನರಸೀಪುರ ರಸ್ತೆಯಲ್ಲಿ ಬರುವ ದುದ್ದಗೆರೆ ಗ್ರಾಮದಲ್ಲಿ “ರಾಜಾ ಸಿಂಹ’ ಚಿತ್ರದ ಚಿತ್ರೀಕರಣ ಇತ್ತೀಚೆಗೆ ನಡೆಯಿತು. ಚಿತ್ರೀಕರಣದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ತಳಿರು-ತೋರಣ ಕಟ್ಟಿ, ಮಂತ್ರಿ ಅಮರನಾಥ್ (ಅಂಬರೀಶ್) ಅವರ ಆಳೆತ್ತರದ ಫ್ಲೆಕ್ಸ್ಗಳನ್ನು ಹಾಕಲಾಗಿತ್ತು. ಇನ್ನು ಗ್ರಾಮದ ಸಿದ್ದರಾಮಶ್ವೇರ ದೇವಾಲಯದ ಮುಂಭಾಗ ಸ್ಥಾಪಿಸಲಾಗಿದ್ದ ನಟ ವಿಷ್ಣುವರ್ಧನ್ ಅವರ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಬರುವ ಮಂತ್ರಿ ಅಮರನಾಥ್ ಅವರನ್ನು ಸ್ವಾಗತಿಸುವ, ಪ್ರತಿಮೆ ಅನಾವರಣ ಕಾರ್ಯಕ್ರಮಗಳನ್ನು ಚಿತ್ರೀಕರಿಸಿಕೊಳ್ಳಲಾಯಿತು. ಜತೆಗೆ ಪ್ರತಿಮೆ ಮುಂಭಾಗ ಸಿಂಹಾದ್ರಿ ಗ್ರಾಮ ಎಂಬ ನಾಮಫಲಕವನ್ನೂ ಹಾಕಲಾಗಿತ್ತು. ನಾಯಕ ನಟ ಅನಿರುದ್ಧ, ನಾಯಕನ ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಹಿರಿಯ ನಟಿ ಭಾರತೀ ವಿಷ್ಣುವರ್ಧನ್, ಶರತ್ ಲೋಹಿತಾಶ್ವ ಮೊದಲಾದವರ ಅಭಿನಯದ ದೃಶ್ಯಾವಳಿಗಳನ್ನು ಚಿತ್ರೀಕರಿಸಿಕೊಳ್ಳಲಾಯಿತು.
ನಿರ್ದೇಶಕ ರವಿರಾಮ್ ಅವರು ಹೇಳುವಂತೆ, ಇದೊಂದು ಪಕ್ಕಾ ಕಮರ್ಷಿಯಲ್ ಸಿನಿಮಾ ಅಂತೆ. ಈ ಚಿತ್ರದಲ್ಲಿ ಅನಿರುದ್ಧ್ ಮಾಸ್ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಈಗಾಗಲೇ ಬೆಂಗಳೂರಲ್ಲಿ ಒಂದು ಹಂತದ ಚಿತ್ರೀಕರಣ ಮುಗಿದಿದ್ದು, ಮೈಸೂರಿನಲ್ಲಿ ಎರಡನೆಯ ಹಂತದ ಚಿತ್ರೀಕರಣ ನಡೆಯುತ್ತಿದೆ. ಇನ್ನು ಅಂಬರೀಶ್ ಅವರು ಈ ಚಿತ್ರದಲ್ಲಿ ಸ್ನೇಹಪೂರ್ವಕವಾಗಿ ನಟಿಸಿದ್ದಾರಂತೆ. ವಿಷ್ಣುವರ್ಧನ್ ಅವರ ಹುಟ್ಟುಹಬ್ಬದಂದು ಸಿನಿಮಾ ಬಿಡುಗಡೆ ಮಾಡುವ ಯೋಚನೆ ಚಿತ್ರತಂಡಕ್ಕಿತ್ತು. ಚಿತ್ರ ಸ್ವಲ್ಪ ತಡವಾಗಿದ್ದರಿಂದ, ಚಿತ್ರದ ಬಿಡುಗಡೆ ದೀಪಾವಳಿ ಸೀಸನ್ಗೆ ಹೋಗಿದೆಯಂತೆ. “ರಾಜಾ ಸಿಂಹ’ ಚಿತ್ರವನ್ನು ಡಿ. ಬಸಪ್ಪ ಎನ್ನುವವರು ನಿರ್ಮಿಸುತ್ತಿದ್ದಾರೆ. ಇದು ಅವರ ಮೊದಲನೆಯ ಚಿತ್ರ.
“ಈ ಸಿನಿಮಾದಲ್ಲಿ ಮನರಂಜನೆ ಜತೆಗೆ ಸಮಾಜಕ್ಕೆ ಒಳ್ಳೆಯ ಸಂದೇಶವಿದೆ. ಹಳ್ಳಿಯಲ್ಲಿ ಜಾತೀ, ಧಮ್ ಅಡ್ಡಬಾರದೆ ಮನುಷ್ಯರೆಲ್ಲ ಒಂದು ಎಂಬ ಭಾವನೆಯನ್ನು ಈ ಸಿನಿಮಾ ಮೂಡಿಸುತ್ತದೆ. ಪಟ್ಟಣದಿಂದ ಹಳ್ಳಿಗೆ ಬರುವ ಯುವಕನೊಬ್ಬ ಹಳ್ಳಿಯವರನ್ನು ಯಾವ ರೀತಿ ಒಂದುಗೂಡಿಸುತ್ತಾನೆ ಎಂಬುದೇ ಕತೆಯ ಸಾರಾಂಶ. ಇದುವರೆಗೆ ನೋಡದ ಸಾಹಸಗಳು ಈ ಸಿನಿಮಾದಲ್ಲಿವೆ’ ಎನ್ನುತ್ತಾರೆ ಅನಿರುದ್ಧ್.
ಇದು ಡಾ. ವಿಷ್ಣುವರ್ಧನ್ ಅವರ ಜೀವನದ ಕಥೆ ಎನ್ನುತ್ತಾರೆ ಹಿರಿಯ ನಟಿ ಭಾರತಿ ವಿಷ್ಣುವರ್ಧನ್. “ವಿಷ್ಣು ಜೀವನದ ಕತೆ ಇದು. ನೋಡುತ್ತಾ ಇದ್ದರೆ ಅವರಿಲ್ಲ ಎಂದು ಅನಿಸುವುದೇ ಇಲ್ಲ. ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದೇವೆ. ಫಲಾಫಲ ಕೊಡುವುದು ಆ ಭಗವಂತ’ ಎನ್ನುತ್ತಾರೆ ಅವರು.
-ಉದಯವಾಣಿ
Comments are closed.