– ಆನಂದತೀರ್ಥ ಪ್ಯಾಟಿ
‘ಭುಜಂಗ’
ನಿರ್ಮಾಪಕ: ವರುಣಾ ಮಹೇಶ್
ನಿರ್ದೇಶಕ: ಜೀವಾ
ತಾರಾಗಣ: ಪ್ರಜ್ವಲ್ ದೇವರಾಜ್, ಮೇಘನಾ ರಾಜ್, ಸಾಧು ಕೋಕಿಲಾ
ಅವನು ಬರೀ ಭುಜಂಗನಲ್ಲ; ಕಳ್ ಭುಜಂಗ! ಕಳ್ಳತನವೇ ಅವನ ವೃತ್ತಿ. ಪೊಲೀಸರ ಕೈಗೆ ಸಿಕ್ಕ ಇತಿಹಾಸವೇ ಅವನಿಗಿಲ್ಲ. ಅದಕ್ಕೆ ಇನ್‌ಸ್ಪೆಕ್ಟರ್ ನಾಣಯ್ಯನ ಸಪೋರ್ಟು ಬೇರೆ. ಇಷ್ಟಿದ್ದ ಮೇಲೆ ಆತನ ಕರಾಮತ್ತು ಏನೆಲ್ಲ ಇದ್ದೀತು ಎಂದು ಭಾವಿಸಿಕೊಂಡರೆ ಅದೆಲ್ಲ ತಪ್ಪು ತಪ್ಪು. ‘ಭುಜಂಗ’ದಲ್ಲಿ ಪ್ರಧಾನವಾಗಿ ಕಳ್ಳನ ಕೈಚಳಕ ಕಾಣಿಸುವುದಿಲ್ಲ; ಪ್ರಿಯತಮೆಗಾಗಿ ಬದಲಾಗುವಾಗ ಆ ಪರಿವರ್ತನೆ ಪ್ರೇಕ್ಷಕನ ಮನದಲ್ಲಿ ಅಚ್ಚಾಗುವುದಿಲ್ಲ. ಎರಡು ತಾಸುಗಳ ಕಾಲ ಸಿಗುವುದು ಒಂದಷ್ಟು ಮನರಂಜನೆ; ಮತ್ತೊಂದಷ್ಟು ಹೊಡೆದಾಟ.
ನೂರರ ಜತೆ ಮತ್ತೊಂದು ಎಂಬ ಕಥೆ ‘ಭುಜಂಗ’ನದು. ಕಳವು ಮಾಡಿ ಹೊಟ್ಟೆ ತುಂಬಿಸಿಕೊಳ್ಳುವ ಭುಜಂಗ (ಪ್ರಜ್ವಲ್) ಸಿರಿವಂತ ಕುಟುಂಬದ ರಚನಾ (ಮೇಘನಾ ರಾಜ್) ಪ್ರೀತಿಯ ಬಲೆಯಲ್ಲಿ ಬೀಳುವ ಹಾಗೂ ಆಕೆಯ ಮನೆಯವರ ವಿರೋಧಕ್ಕೆ ಅಳುಕದೇ ಹೋರಾಡುವ ಕಥೆಯಿದು. ಹೆಚ್ಚೇನೂ ಸತ್ವವಿಲ್ಲದ ಕಥೆಯನ್ನು ಸಿನಿಮಾಕ್ಕೆ ಅಳವಡಿಸುವಾಗ ನಿರೂಪಣೆಯನ್ನಾದರೂ ಮನಸೆಳೆಯುವಂತೆ ಮಾಡಬೇಕಿತ್ತು. ಇದೆಲ್ಲ ಇಲ್ಲದೇ ಹೋಗಿದ್ದರಿಂದ ಸಿನಿಮಾ ‘ರುಚಿ’ ಅನಿಸುವುದಿಲ್ಲ.
ಬೀಗ ಮುರಿದು ಅಥವಾ ಛಾವಣಿಯಿಂದ ಜಾರಿ ಮನೆಯೊಳಗೆ ಬಂದು ಇರುವುದೆಲ್ಲವನ್ನೂ ಹೊತ್ತೊಯ್ಯುವ ಕಳ್ಳನೇ ಭುಜಂಗ. ಹೀಗೆ ಒಮ್ಮೆ ಕಳ್ಳತನ ಮಾಡಲು ಮನೆಯೊಳಗೆ ಹೊಕ್ಕಾಗ ಚೆಲುವೆ ರಚನಾ ಕಾಣಿಸುತ್ತಾಳೆ. ಕಷ್ಟಪಟ್ಟು ಏನೇನೋ ಕಸರತ್ತು ಮಾಡಿ, ಆಕೆಯ ಪ್ರೀತಿಯನ್ನೂ ಗಳಿಸುತ್ತಾನೆ.
ಆಮೇಲಷ್ಟೇ ಭುಜಂಗನಿಗೆ ಗೊತ್ತಾಗುವುದು, ಆಕೆ ಶ್ರೀಮಂತ ಮನೆತನದ ಹುಡುಗಿ ಎಂಬುದು. ರಚನಾಳನ್ನು ಮದುವೆಯಾಗುವ ಹುಡುಗ ಯಾರು ಎಂಬುದು ಗೊತ್ತಾದಾಗ ಕಥೆಗೊಂದು ದೊಡ್ಡ ತಿರುವು. ರಚನಾ ಕೊನೆಗೂ ಭುಜಂಗನಿಗೆ ಒಲಿಯುತ್ತಾಳಾ ಎನ್ನುವುದು ಚಿತ್ರಕಥೆಯಲ್ಲಿನ ಸಸ್ಪೆನ್ಸ್.
ಮೇಲ್ನೋಟಕ್ಕೆ ಎರಡು ಛಾಯೆಗಳ ಪಾತ್ರ ಪ್ರಜ್ವಲ್ ಅವರದಾದರೂ ಆ ವ್ಯತ್ಯಾಸ ಗೋಚರವಾಗುವುದಿಲ್ಲ. ಅಷ್ಟಿದ್ದರೂ ಲವಲವಿಕೆಯಿಂದ ಅವರು ಅಭಿನಯಿಸಿದ್ದಾರೆ. ಹಳ್ಳಿಗಾಡಿನಲ್ಲಿ ನಡೆಯುವ ಕಥೆ ಇದಾಗಿದ್ದರಿಂದ ಹೊಡೆದಾಟಗಳೂ ದೇಸಿ ಸ್ಪರ್ಶ ಪಡೆದಿವೆ. ಅಬ್ಬರಕ್ಕಿಂತ ಮಾಧುರ್ಯಕ್ಕೆ ಒತ್ತು ಕೊಟ್ಟಿರುವ ಹಾಡುಗಳ ಮೂಲಕ ಪೂರ್ಣಚಂದ್ರ ತೇಜಸ್ವಿ ಇಷ್ಟವಾಗುತ್ತಾರೆ.
ಗುಂಡ್ಲುಪೇಟೆ ಸುರೇಶ ಕ್ಯಾಮರಾ ಕೈಚಳಕ ಚೆನ್ನಾಗಿದೆ. ನಾಯಕಿ ಮೇಘನಾ ರಾಜ್ ಅವರದು ನಾಯಕನಷ್ಟೇ ಮಹತ್ವವಿರುವ ಪಾತ್ರ. ಸಿನಿಮಾಕ್ಕೆ ಸಂಬಂಧವಿಲ್ಲದೇ ಹೋದರೂ ಹಾಸ್ಯ ಕಡ್ಡಾಯವಾಗಿ ಇರಬೇಕು ಎಂಬ ಸೂತ್ರಕ್ಕೆ ಅನುಸಾರವಾಗಿ ಸಾಧು ಕೋಕಿಲಾ– ಕುರಿ ಪ್ರತಾಪ್ ಸನ್ನಿವೇಶಗಳಿವೆ.
ಪ್ರೀತಿಗೆ ಅಂತಸ್ತು – ಸಿರಿವಂತಿಕೆ ಅಡ್ಡ ಬರಬಾರದು ಎಂಬ ಸಂದೇಶವನ್ನು ಪರೋಕ್ಷವಾಗಿ ‘ಭುಜಂಗ’ನ ಮೂಲಕ ಹೇಳಲು ನಿರ್ದೇಶಕ ಜೀವಾ ಪ್ರಯತ್ನಿಸಿದ್ದಾರೆ. ಕಳ್ಳನೊಬ್ಬ ತನ್ನ ವೃತ್ತಿ ಬಿಡುವುದು ಒಳ್ಳೆಯದೇ. ಆದರೆ ಆ ಪರಿವರ್ತನೆಯನ್ನು ಪರಿಣಾಮಕಾರಿಯಾಗಿ ನಿರೂಪಿಸಿದ್ದರೆ ಪ್ರೇಕ್ಷಕರ ಮನದಲ್ಲಿ ಈ ಸಿನಿಮಾ ಗಟ್ಟಿಯಾಗಿ ನೆಲೆ ನಿಲ್ಲುತ್ತಿತ್ತೇನೋ.
Comments are closed.