ಇಂದೋರ್ : ಬನ್ನಿ – 28 ವರ್ಷ ಪ್ರಾಯದ ಈ ಸಾಫ್ಟ್ ವೇರ್ ಇಂಜಿನಿಯರ್ ಆದಿತ್ಯ ತಿವಾರಿ ಅವರನ್ನು ಭೇಟಿಯಾಗಿ – ಇವರಲ್ಲಿ ಏನು ವಿಶೇಷ ಎಂದು ಕೇಳುವಿರಾ ? ವಿಶೇಷ ಒಂದೆರಡಲ್ಲ ಹಲವಾರು ಇವೆ. ಅವೇನೆಂಬುದನ್ನು ತಿಳಿಯುವ ಕುತೂಹಲ ಇದೆಯೇ ? ಹಾಗಿದ್ದರೆ ಕೇಳಿ :
28ರ ಹರೆಯದ ಟೆಕ್ಕಿ ತಿವಾರಿ ಅವರಿಗೆ ಇನ್ನೂ ಮದುವೆಯಾಗಿಲ್ಲ – ಆದರೆ ಇದೀಗ ಆಗುವವರಿದ್ದಾರೆ. ಇವರ ಮದುವೆಯೂ ವಿಶೇಷ ವೆನಿಸಲಿದೆ. ಅದಕ್ಕೆ ಮೊದಲು ಇವರು ದೇಶದ ಅತ್ಯಂತ ಕಿರಿಯ ವಯಸ್ಸಿನ ದತ್ತು ಅಪ್ಪ ಎನಿಸಿಕೊಂಡದ್ದು ಹೇಗೆಂದು ತಿಳಿಯೋಣ !
ಅಂದ ಹಾಗೆ ತಿವಾರಿ ಮದುವೆಗೆ ಮೊದಲೇ ಈಗ ಒಂದೂವರೆ ವರ್ಷ ಪ್ರಾಯದ ಡೌನ್ಸ್ ಸಿಂಡ್ರೋಮ್ ನಿಂದ ಬಳಲುತ್ತಿರುವ, ಹೃದಯದಲ್ಲಿ ಒಂದು ಸಣ್ಣ ತೂತು ಇರುವ, ಬಿನ್ನಿ ಎಂಬ ಹೆಸರಿನ, ಅನಾಥ ಮಗುವೊಂದನ್ನು ದತ್ತು ತೆಗೆದುಕೊಂಡಿದ್ದಾರೆ. ಎಂದರೆ ಮದುವೆಗೆ ಮೊದಲೇ ಅನಾಥ, ವಿಶಿಷ್ಟ ವಿಕಲ ಚೇತನದ ಮಗುವಿಗೆ ಅಪ್ಪನಾಗಿದ್ದಾರೆ; ಮಾತ್ರವಲ್ಲ ದೇಶದ ಅತ್ಯಂತ ಕಿರಿಯ ಒಂಟಿ ತಂದೆ ಎನಿಸಿಕೊಂಡಿದ್ದಾರೆ.
ಕಾನೂನಿನ ಪ್ರಕಾರ ಈ ತನಕ ಇಷ್ಟು ಸಣ್ಣ ಪ್ರಾಯದ ಪುರುಷ ಹಾಗೂ ಮಹಿಳೆ ಮಗುವನ್ನು ದತ್ತು ತೆಗೆದುಕೊಳ್ಳುವ ಹಾಗಿರಲಿಲ್ಲ. ಏಕೆಂದರೆ ಹಾಗೆ ಮಾಡಲು ವ್ಯಕ್ತಿಯ ವಯಸ್ಸು ಕನಿಷ್ಠ 30 ಇರಬೇಕು; ಆದರೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸರಕಾರ ಈ ಕಾನೂನಿನ ಮಿತಿಯನ್ನು 25ಕ್ಕೆ ಇಳಿಸಿತು. ಹಾಗಾಗಿ 28ರ ಹರೆಯದ ಟೆಕ್ಕಿ ತಿವಾರಿಗೆ ಇಷ್ಟು ಸಣ್ಣ ಪ್ರಾಯದಲ್ಲೇ ಅನಾಥ, ವಿಕಲಾಂಗ ಮಗುವಿಗೆ ಅಪ್ಪನಾಗುವುದು ಸಾಧ್ಯವಾಯಿತು.
ಹೀಗೆ ತಿವಾರಿ ಮಗುವಿನಅಪ್ಪನಾದದ್ದು ಈ ವರ್ಷ ಜನವರಿಯಲ್ಲಿ – ದತ್ತಕದ ಎಲ್ಲ ಕಾನೂನು ಪ್ರಕ್ರಿಯೆಗಳನ್ನು ಕ್ರಮಪ್ರಕಾರವಾಗಿ ಮುಗಿಸಿದ ಬಳಿಕ !
ಅಂತೆಯೇ ಮದುವೆಗೆ ಮುನ್ನವೇ ಅದೃಷ್ಟಶಾಲಿ ಅನಾಥ, ವಿಕಲ ಚೇತನ ಮಗುವಿಗೆ ಅಪ್ಪನಾಗಿ ಈಗಿನ್ನು ವಿವಾಹಕ್ಕೆ ಸಜ್ಜಾಗಿರುವ ತಿವಾರಿ ಅವರ ಮದುವೆ ಸಮಾರಂಭವೂ ವಿಶಿಷ್ಟವಾಗಿಯೇ ಇರುವಂತೆ ಏರ್ಪಾಡು ಮಾಡಲಾಗಿದೆ.
ತಿವಾರಿಯ ಮದುವೆ ಕಾರ್ಯಕ್ರಮಕ್ಕೆ ನಗರದ 10,000ಕ್ಕೂ ಅಧಿಕ ವಸತಿಹೀನರನ್ನು, ಅನಾಥಾಲಯದ ಮಕ್ಕಳನ್ನು, 1,000ಕ್ಕೂ ಹೆಚ್ಚಿನ ಬೀದಿಯ ಹಾಗೂ ಮೃಗಾಲಯದ ಪ್ರಾಣಿಗಳನ್ನು ಕರೆಸಿಕೊಂಡು ಊಟ ಹಾಕಿಸುವ ಏರ್ಪಾಡು ಮಾಡಲಾಗಿದೆ. ಈ ಸಂದರ್ಭದಲ್ಲಿ ನೂರು ಗಿಡಗಳನ್ನು ನೆಡುವ ಯೋಜನೆ ಕೂಡ ತಿವಾರಿಗಿದೆ.
ಮದುವೆ ಸಮಾರಂಭಕ್ಕೆ ಬರುವ ಈ ಅನಾಥ, ವಸತಿ ಹೀನರಿಗೆ ತಿವಾರಿ ಅವರು ಪುಸ್ತಕಗಳನ್ನು, ಔಷಧಗಳನ್ನು ಉಡುಗೊರೆಯಾಗಿ ನೀಡಲಿದ್ದಾರೆ.
ತನ್ನ ಮದುವೆ ಬಗ್ಗೆ ತಿವಾರಿ ಹೀಗೆ ಹೇಳುತ್ತಾರೆ : ಜನರು ತಮ್ಮ ಮದುವೆಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕುಟುಂಬದವರಿಗೆ, ಬಂಧುಗಳಿಗೆ, ಹಿತೈಷಿಗಳಿಗೆ, ಊರವರಿಗೆ ಎಂದೆಲ್ಲ ಊಟ ಹಾಕಿಸುತ್ತಾರೆ. ಡಿಸ್ಕ್ ಜಾಕಿಗಳನ್ನು ಕರೆಸಿಕೊಂಡು ಮನೋರಂಜನೆ, ಡೆಕೋರೇಶನ್‌ಗೆ, ಬ್ಯಾಂಡ್, ವಾಲಗಕ್ಕೆ ಎಂದೆಲ್ಲ ನೀರಿನಂತೆ ಹಣ ಖರ್ಚು ಮಾಡುತ್ತಾರೆ. ಅವರ ಹಾಗೆ ಮಾಡಲು ನನಗೆ ಇಷ್ಟವಿಲ್ಲ. ಎಂದೂ ಯಾರಿಂದಲೂ ಆಹ್ವಾನಿಸಲ್ಪಡದ ನಿರ್ಗತಿಕರು, ಬಡವರು, ಅನಾಥ ಮಕ್ಕಳಿಗಾದರೂ ಊಟ ಹಾಕಿ ಸತ್ಕರಿಸಬೇಕು ಎಂಬುದು ನನ್ನ ಹೆಬ್ಬಯಕೆ. ನನ್ನ ಮದುವೆ ಈ ರೀತಿ ವಿಶಿಷ್ಟವಾಗಿ ನಡೆದು ನನ್ನ ಬದುಕಿನ ಅತ್ಯಂತ ಸುಖ – ಸಂತೋಷದ ಸ್ಮರಣೀಯ ದಿನವಾಗಬೇಕು ಎಂಬ ಹಾರೈಕೆ ನನ್ನದು. ಆ ಪ್ರಕಾರವೇ ನಾನು ಮದುವೆಯನ್ನು ಏರ್ಪಡಿಸಿದ್ದೇನೆ’
“ಅನಾಥ ವಿಕಲಾಂಗ ಮಗುವನ್ನು ದತ್ತು ತೆಗೆದುಕೊಂಡು ಅಪ್ಪನಾಗಿ ಬಳಿಕ ಮದುವೆಯಾಗಬೇಕೆಂದು ಬಯಸಿದ ನನಗೆ ನನ್ನ ಬಾಳ ಸಂಗಾತಿಯನ್ನು ಆರಿಸುವುದು ಕೂಡ ಅತ್ಯಂತ ಕಷ್ಟದ ಕೆಲಸವಾಗಿತ್ತು. ಆಕೆಗೂ ನಾನು ದತ್ತು ಪಡೆವ ಮಗುವಿನ ಮೇಲೆ ಪ್ರೀತಿ, ಮಮತೆ, ವಾತ್ಸಲ್ಯ ಇರಬೇಕಲ್ಲವೇ ? ಅಂತೆಯೇ ನನಗೆ ಅದೇ ಮನೋಭಾವದ ಹುಡುಗಿ ಸಿಕ್ಕಿದ್ದಾಳೆ. ನಾನು ದತ್ತು ಪಡೆದಿರುವ ಅವನೀಶ್ ನನ್ನು (ಬಿನ್ನಿ) ಆಕೆಯೂ ಪ್ರೀತಿಸುತ್ತಾಳೆ. ಅದು ನನ್ನ ಸಂತೋಷವನ್ನು ಇಮ್ಮಡಿಗೊಳಿಸಿದೆ’.
-ಉದಯವಾಣಿ
Comments are closed.