ಮನೋರಂಜನೆ

ಪ್ರೇಕ್ಷಕರ ಇಷ್ಟವೇ ನನ್ನ ಇಷ್ಟ: ಗಣೇಶ್‌

Pinterest LinkedIn Tumblr

joomಶನಿವಾರವಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡ ಗಣೇಶ್‌ ಖುಷಿಯಾಗಿದ್ದಾರೆ. ಅವರ ಖುಷಿಗೆ ಕಾರಣ ಕೇವಲ ಹುಟ್ಟುಹಬ್ಬವಲ್ಲ, ಬದಲಾಗಿ ಅವರ “ಜೂಮ್‌’ ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ. ಈ ಚಿತ್ರ ತನಗೊಂದು ಒಳ್ಳೆಯ ಕಂಬ್ಯಾಕ್‌ ಎಂದಿರುವ ಗಣೇಶ್‌ ಕೆಲವು ಪ್ರಶ್ನೆಗಳಿಗೆ ಇಲ್ಲಿ ಉತ್ತರವಾಗಿದ್ದಾರೆ.

ಹೇಗಿತ್ತು ಹುಟ್ಟುಹಬ್ಬ ಸಂಭ್ರಮ?
ಈ ವರ್ಷದ ಹುಟ್ಟುಹಬ್ಬ ತುಂಬಾ ಸ್ಪೆಷಲ್‌. ಮೊನ್ನೆಯಷ್ಟೇ ನನ್ನ “ಜೂಮ್‌’ ಚಿತ್ರ ಬಿಡುಗಡೆಯಾಗಿದೆ. ಎಲ್ಲಾ ಕಡೆ ಹೌಸ್‌ಫ‌ುಲ್‌ ಪ್ರದರ್ಶನ ಕಾಣುತ್ತಿದೆ. ಈ ಸಂದರ್ಭದಲ್ಲೇ ನನ್ನ ಹುಟ್ಟುಹಬ್ಬ. ಹಾಗಾಗಿ, ಡಬಲ್‌ ಖುಷಿ. ಬೇರೆ ಬೇರೆ ಕಡೆಗಳಿಂದ ಅಭಿಮಾನಿಗಳು ಬಂದಿದ್ದರು. ಅವರು ತಂದ ಪ್ರೀತಿಯ ಕಾಣಿಕೆಗಳು ಖುಷಿ ತಂದಿವೆ.

“ಜೂಮ್‌’ ಬಗ್ಗೆ ನಿಮಗೆ ಸಿಕ್ಕ ಪ್ರತಿಕ್ರಿಯೆ ಏನು?
ಪಕ್ಕಾ ಎಂಟರ್‌ಟೈನರ್‌ ಎಂದು ಎಲ್ಲಾ ಕಡೆಗಳಿಂದಲೂ ಫೋನ್‌ ಬರುತ್ತಿದೆ. ನೋಡಿದವರು ಖುಷಿಪಡುತ್ತಿದ್ದಾರೆ. ಸಾಮಾನ್ಯವಾಗಿ ಸೋಮವಾರ ನಂತರ ಕಲೆಕ್ಷನ್‌ ಪಿಕ್‌ಅಪ್‌ ಆಗುತ್ತದೆಂಬ ಮಾತಿದೆ. ಆದರೆ, “ಜೂಮ್‌’ನ ಓಪನಿಂಗ್‌ ಬ್ಯಾಂಗ್‌ ಹಾಗೇ ಮುಂದುವರೆದಿದೆ.

“ಜೂಮ್‌’ ಚಿತ್ರ ಗಣೇಶ್‌ಗೆ ದೊಡ್ಡ ಕಂಬ್ಯಾಕ್‌ ಸಿನಿಮಾ?
ಖಂಡಿತಾ. ಪ್ರತಿ ಸಿನಿಮಾಕ್ಕೂ ನನ್ನ ಸಂಪೂರ್ಣ ಶ್ರಮ ಹಾಕುತ್ತೇನೆ. ಅಂತಿಮವಾಗಿ ಪ್ರೇಕ್ಷಕನ ನಿರ್ಧಾರವೇ ಮುಖ್ಯ. “ಜೂಮ್‌’ ಬಗ್ಗೆ ಎಲ್ಲ ಕಡೆ ಪಾಸಿಟಿವ್‌ ರೆಸ್ಪಾನ್ಸ್‌ ಇದೆ. ಪಕ್ಕಾ ಎಂಟರ್‌ಟೈನರ್‌ ಆಗಿ ಜನ ಇಷ್ಟಪಡುತ್ತಿದ್ದಾರೆ.

ಗಣೇಶ್‌ ಕಥೆಯ ಆಯ್ಕೆ ಬದಲಾಗಿದೆಯಾ?
ಬದಲಾಗಿದೆ ಅನ್ನೋದಕ್ಕಿಂತ ಜನ ಏನು ಇಷ್ಟಪಡುತ್ತಾರೆ ಅದನ್ನು ನಾವು ಕೊಡಬೇಕು. ಯಾವುದೋ ಕಥೆ ನನಗೆ ಇಷ್ಟವಾಗುತ್ತದೆ. ಹಾಗಂತ ಅದರಲ್ಲಿ ಪ್ರೇಕ್ಷಕರಿಗೆ ಇಷ್ಟವಾಗುವ ಅಂಶಗಳಿಲ್ಲದಿದ್ದರೆ ನಾನು ಅದನ್ನು ಮಾಡಿಯೂ ಫ‌ಲವಿಲ್ಲ. ಈಗ ಎಲ್ಲರೂ ಬುದ್ಧಿವಂತರು. ಬುದ್ಧಿವಾದ ಹೇಳಲು ಸಿನಿಮಾ ಮಾಡುವ ಬದಲು ಚಿತ್ರಮಂದಿರಕ್ಕೆ ಬರುವ ಜನ ನಗಬೇಕು, ಖುಷಿಯಾಗಿ ಹೋಗಬೇಕೆಂಬುದೇ ನನ್ನ ಉದ್ದೇಶ.

ಗಣೇಶ್‌ ಲವ್‌ ಮಾಡೋ ಬದಲು ಕಾಮಿಡಿ ಮಾಡಲು ಹೊರಟಂತಿದೆ?
ಹೌದು, “ನೀವ್ಯಾಕೆ ಲವ್‌ ಕಂ ಕಾಮಿಡಿಗೆ ಪ್ರಯತ್ನಿಸಬಾರದು’ ಎಂದು ಜನ ಕೇಳುತಿದ್ದರು.”ಜೂಮ್‌’ನಲ್ಲಿ ಆ ತರಹದ ಒಂದು ಪ್ರಯತ್ನವಾಗಿದೆ ಮತ್ತು ಅದು ವರ್ಕೌಟ್ ಕೂಡಾ ಆಗಿದೆ. ಲವ್‌ ಕಂ ಕಾಮಿಡಿ ಕೊಟ್ಟಾಗ ಜನ ಇಷ್ಟಪಡುತ್ತಾರೆ. ಜನರಿಗೆ ಏನು ಇಷ್ಟವೋ ಅದನ್ನು ಮಾಡುತ್ತೇನೆ.

ಮುಂಗಾರು ಮಳೆ -2 ಯಾವಾಗ?
ಸದ್ಯ ಆಡಿಯೋ ರಿಲೀಸ್‌ಗೆ ಪ್ಲ್ರಾನ್‌ ಮಾಡುತ್ತಿದ್ದೇವೆ. ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. 2006ರಲ್ಲಿ “ಮುಂಗಾರು ಮಳೆ’. 2016ರಲ್ಲಿ “ಮುಂಗಾರು ಮಳೆ-2′. ಈ ಚಿತ್ರ ಕೂಡಾ ಜನರ ನಿರೀಕ್ಷೆಯನ್ನು ಹುಸಿಮಾಡೋದಿಲ್ಲ.

ಹೇಗಿದೆ ಲೈಫ‌ು?
ನಾನು ಯಾವತ್ತೂ ಖುಷಿಯಾಗಿರುವ ವ್ಯಕ್ತಿ. ನಾವು ಮಾಡಿದ ಕೆಲಸವನ್ನು ಜನ ಇಷ್ಟಪಟ್ಟಾಗ ಖುಷಿಯಾಗುತ್ತದೆ. ಪ್ರತಿ ಸಿನಿಮಾ ಕೂಡಾ ಕಲಾವಿದರಿಗೆ ಮುಖ್ಯ. ತುಂಬಾ ಪ್ರೀತಿಯಿಂದಲೇ ಮಾಡಿರುತ್ತೇವೆ.

ಹೊಸಬರ ಜೊತೆ ಸಿನಿಮಾ ಮಾಡಲ್ವಾ?
ಯಾಕ್‌ ಮಾಡಲ್ಲ, ಖಂಡಿತಾ ಮಾಡುತ್ತೇನೆ, ಕಥೆ ಇಷ್ಟವಾಗಿ, ಅದನ್ನು ನೀಟಾಗಿ ಮಾಡುವ ಸಾಮರ್ಥ್ಯವಿದ್ದರೆ ಖಂಡಿತಾ ಮಾಡುತ್ತೇನೆ.

ಹುಟ್ಟುಹಬ್ಬ ಸಂಭ್ರಮ
ಗಣೇಶ್‌ ಶನಿವಾರ ತಮ್ಮ ಕುಟುಂಬ ವರ್ಗ ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್‌ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡರು. ಶುಕ್ರವಾರ ರಾತ್ರಿಯಿಂದಲೇ ಗಣೇಶ್‌ ಮನೆಮುಂದೆ ಅಭಿಮಾನಿಗಳ ದಂಡು ಸೇರಿದ್ದು, ಪಟಾಕಿ ಸಿಡಿಸಿ ಜೈಕಾರ ಕೂಗಿ ಸಂಭ್ರಮಿಸಿದರು. ಗಣೇಶ್‌ಗೆ ಶುಭ ಕೋರಲು ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಸೇರಿದಂತೆ ಚಿತ್ರರಂಗದ ಸಾಕಷ್ಟು ಮಂದಿ ಗಣೇಶ್‌ ಮನೆಗೆ ಭೇಟಿ ನೀಡಿ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ.
-ಉದಯವಾಣಿ

Comments are closed.