ಮನೋರಂಜನೆ

ನಾಯಕರೇ ಗಾಯಕರಾಗುವ ಟ್ರೆಂಡು: ಚಿತ್ರರಂಗಕ್ಕೆ ಹಾಡುಗಾರರು ಬೇಕಾಗಿಲ್ಲ!

Pinterest LinkedIn Tumblr

puಚಕ್ರವ್ಯೂಹ ಚಿತ್ರಕ್ಕಾಗಿ ಜ್ಯೂನಿಯರ್‌ ಎನ್‌ಟಿಆರ್‌ ಹಾಡೊಂದನ್ನು ಹಾಡಲಿದ್ದಾರೆ ಎಂಬುದು ಇತ್ತೀಚೆಗೆ ರಾಷ್ಟ್ರಮಟ್ಟದ ಸುದ್ದಿಯಾಯಿತು. ದನಕಾಯೋನು ಚಿತ್ರಕ್ಕೆ ಶರಣ್‌ ಹಾಡಿದ್ದಾರೆ ಎಂಬುದು ಒಳ್ಳೆಯ ಪ್ರಚಾರ ಪಡೆಯಿತು. ಝೂಮ್‌ ಚಿತ್ರಕ್ಕೆ ಶ್ರೀಮುರಳಿ, ಪುನೀತ್‌, ರಾಧಿಕಾ ಪಂಡಿತ್‌ ಹಾಡಿದ ಸುದ್ದಿಯೂ ಬಂತು ಜನಮೆಚ್ಚುಗೆ ಗಳಿಸಿತು. ಕೆಲವು ತಿಂಗಳ ಹಿಂದೆ ಪರ್ಪಂಚ ಚಿತ್ರಕ್ಕೆ ಹಾಡಿ, ಹುಟ್ಟಿದ ಊರನು ಬಿಟ್ಟು ಬಂದ ಮೇಲೆ ಎಂಬ ಹಾಡು ಜನಪ್ರಿಯವಾಗುವಂತೆ ಮಾಡಿದರು.

ಸಂಪತ್ತಿಗೆ ಸವಾಲ್‌ ಚಿತ್ರದ ಯಾರೇ ಕೂಗಾಡಲಿ ಊರೇ ಹೋರಾಡಲಿ ಹಾಡನ್ನು ಹಾಡುವ ಮೂಲಕ, ತಮ್ಮೆಲ್ಲ ಚಿತ್ರಗಳ ಹಾಡನ್ನು ತಾವೇ ಹಾಡಲು ಆರಂಭಿಸಿದವರು ರಾಜ್‌ಕುಮಾರ್‌. ನಾಯಕನೇ ಗಾಯಕನೂ ಆಗುವ ಪರಿಪಾಠ ರಾಜ್‌ಕುಮಾರ್‌ ಅವರಿಂದಲೇ ಆರಂಭವಾಯಿತೆಂದು ಹೇಳಬೇಕು. ಆದರೆ, ರಂಗಭೂಮಿಯ ಹಿನ್ನೆಲೆಯಿಂದ ಬಂದ ಅವರಿಗೆ ಕಂದಪದ್ಯಗಳನ್ನು ನಾಟಕಗಳಲ್ಲಿ ಹಾಡಿದ ಅಭ್ಯಾಸವಿತ್ತು. ಒಳ್ಳೆಯ ಶಾರೀರ ಮತ್ತು ಕಂಠಶುದ್ಧಿಯಿತ್ತು. ಸಂಗೀತಜ್ಞಾನವೂ ಶ್ರುತಿಜ್ಞಾನವೂ ಇತ್ತು. ಹೀಗಾಗಿ ರಾಜ್‌ಕುಮಾರ್‌ ತಮ್ಮ ಜೀವನಚೈತ್ರದ ನಾದಮಯ ಹಾಡಿಗಾಗಿ ರಾಷ್ಟಪ್ರಶಸ್ತಿಯನ್ನೂ ಪಡೆದುಕೊಂಡರು.

ಅವರ ಸಮಕಾಲೀನರಲ್ಲಿ ಮಿಕ್ಕವರು ಯಾರೂ ತಮ್ಮ ಚಿತ್ರಗಳಿಗೆ ತಾವೇ ಹಾಡುವುದಕ್ಕೆ ಹೋಗಲಿಲ್ಲ. ವಿಷ್ಣುವರ್ಧನ್‌ ನಾಲ್ಕೈದು ಚಿತ್ರಗಳಲ್ಲಿ ಹಾಡಿದ್ದನ್ನು ಬಿಟ್ಟರೆ ಮಿಕ್ಕಂತೆ ಅವರು ಎಸ್‌ ಪಿ ಬಾಲಸುಬ್ರಹ್ಮಣ್ಯಂ ಅವರೇ ಹಾಡಲಿ ಎಂದು ಹೇಳುತ್ತಿದ್ದರು. ಹಾಗೆ ನೋಡಿದರೆ ಚಿತ್ರರಂಗದಲ್ಲಿ ಗಾಯನ ಪರಂಪರೆಯೇ ಇತ್ತು. ಕನ್ನಡದಲ್ಲಿ ಘಂಟಸಾಲ, ಎಸ್‌ಪಿ ಬಾಲಸುಬ್ರಹ್ಮಣ್ಯಂ, ಪಿಬಿ ಶ್ರೀನಿವಾಸ್‌, ಸಿ ಅಶ್ವತ್ಥ್, ರಮೇಶಚಂದ್ರ, ಜೇಸುದಾಸ್‌- ಹೀಗೆ ಸಂಗೀತವನ್ನು ಬಲ್ಲ ಪ್ರಸಿದ್ಧ ಗಾಯಕರೇ ನಾಯಕ ನಟರಿಗೆ ಧ್ವನಿ ನೀಡುತ್ತಿದ್ದರು. ಹಿಂದಿಯಲ್ಲಿ ಕಿಶೋರ್‌ ಕುಮಾರ್‌, ಮಹಮ್ಮದ್‌ ರಫಿ, ಲತಾ ಮಂಗೇಶ್ಕರ್‌, ಆಶಾ ಬೋಸ್ಲೆ -ಹೀಗೆ ತಮ್ಮ ಸ್ವರಸಿರಿಯಿಂದಲೇ ಪ್ರಸಿದ್ಧರಾದವರು ಸಿಗುತ್ತಾರೆ. ಹೀಗೆ ಪ್ರತಿ ಭಾಷೆಯಲ್ಲೂ ಹಿನ್ನೆಲೆ ಗಾಯಕರ ಒಂದು ದೊಡ್ಡ ಪರಂಪರೆಯೇ ನಮಗೆ ಸಿಗುತ್ತದೆ.

ಆದರೆ, ಈ ಪರಂಪರೆಯ ಕೊಂಡಿ ಇತ್ತೀಚೆಗೆ ಕಳಚಿಕೊಂಡಂತಾಗಿದೆ. ಅನೇಕ ಚಿತ್ರಗಳಿಗೆ ನಾಯಕರೇ ಒಂದೋ ಎರಡೋ ಹಾಡುಗಳನ್ನು ಹಾಡಲು ಆರಂಭಿಸಿದ್ದಾರೆ. ಮತ್ತು ಆ ಹಾಡುಗಳಿಗೆ ಮಾತ್ಪ ಪ್ರಚಾರ ಸಿಗುತ್ತಾ ಇದೆ. ಪ್ರಚಾರ ಸಿಗಲಿ ಎಂದೇ ನಾಯಕ ನಟರಿಂದ ಹಾಡಿಸುವ ಹೊಸ ಚಾಳಿಯೊಂದು ಶುರುವಾದ ಮೇಲೆ ವೃತ್ತಿಪರ ಗಾಯಕರು ನಿವೃತ್ತಿವೇದನೆ ಅನುಭವಿಸುತ್ತಿದ್ದಾರೆ ಎಂದೇ ಹೇಳಬಹುದು. ಸಂಗೀತಾಭ್ಯಾಸ ಮಾಡಿದ, ಶ್ರೀಕಂಠದ ರಾಜೇಶ್‌ ಕೃಷ್ಣನ್‌, ಹೇಮಂತ್‌- ಮುಂತಾದವರ ಅವಕಾಶಗಳು ಕೂಡ ಕಡಿಮೆಯಾಗುತ್ತಿವೆ.

“ಕೋಟಿಗೊಬ್ಬ 2’ಗೆ ಸುದೀಪ್‌-ನಿತ್ಯ ಗಾಯನ

ಸುದೀಪ್‌ಗೆ ಹಾಡುವುದು ಹೊಸ ವಿಷಯವೇನಲ್ಲ. ಇದಕ್ಕೂ ಮುನ್ನ “ರಂಗ ಎಸ್‌ಎಸ್‌ಎಲ್‌ಸಿ’ ಚಿತ್ರಕ್ಕೆ “ಡವ್‌ ಡವ್‌ ದುನಿಯಾ ಕಣೋ …’, “ಚಂದು’ ಚಿತ್ರಕ್ಕೆ “ಸೊಂಟದ ವಿಷ್ಯ …’, “ವೀರ ಮದಕರಿ’ ಚಿತ್ರಕ್ಕೆ “ಜಿಂತಾತ ಜಿತ ಜತ’ ಮುಂತಾದ ಹಾಡುಗಳನ್ನು ಹಾಡಿದ್ದರು. ಈಗ ಸ್ವಲ್ಪ ಗ್ಯಾಪ್‌ನ ನಂತರ ಅವರು ಪುನಃ ಮತ್ತೆ ತಮ್ಮದೇ “ಕೋಟಿಗೊಬ್ಬ-2′ ಚಿತ್ರದ ಹಾಡೊಂದಕ್ಕೆ ಧ್ವನಿಯಾಗಿದ್ದಾರೆ. ಸುದೀಪ್‌ ಒಬ್ಬರೇ ಅಲ್ಲ, ನಿತ್ಯ ಮೆನನ್‌ ಸಹ ಈ ಹಾಡನ್ನು ಹಾಡಿರುವುದು ವಿಶೇಷ. ಈ ಹಾಡಿಗೆ ಸಂಗೀತ ಸಂಯೋಜಿಸಿರುವುದು ಸಂಗೀತ ನಿರ್ದೇಶಕ ಇಮಾನ್‌.

ನಾಯಕರೇ ಗಾಯಕರು
ಕನ್ನಡದಲ್ಲಿ ನಾಯಕರೇ ಗಾಯಕರಾಗಿದ್ದಾರೆ ಅನ್ನುವುದಕ್ಕೆ ದೊಡ್ಡ ಪಟ್ಟಿಯನ್ನೇ ಕೊಡಬಹುದು. ಉಪೇಂದ್ರ, ಪುನೀತ್‌, ಸುದೀಪ್‌, ಶರಣ್‌, ವಿಜಯರಾಘವೇಂದ್ರ, ಶ್ರೀಮುರಳಿ, ಗಣೇಶ್‌, ಪ್ರೇಮ್‌, ಜೋಗಿ ಪ್ರೇಮ್‌, ದುನಿಯಾ ವಿಜಿ, ಯಶ್‌, ಚಿಕ್ಕಣ್ಣ, ಶಿವರಾಜ್‌ಕುಮಾರ್‌, ದಿಗಂತ್‌- ಹೀಗೆ ಬಹುತೇಕ ನಾಯಕನಟರು ತಮ್ಮ ಚಿತ್ರಗಳಿಗೋ ಬೇರೆಯವರ ಚಿತ್ರಗಳಿಗೋ ಹಾಡಿದ್ದಾರೆ. ಅವರ ಹಾಡುಗಳು ಜನಪ್ರಿಯವೂ ಆಗಿವೆ. ಇವರ ಪೈಕಿ ಸುದೀಪ್‌, ಪುನೀತ್‌, ವಿಜಯರಾಘವೇಂದ್ರ ಮೊದಲಾದ ಕೆಲವರನ್ನು ಹೊರತುಪಡಿಸಿದರೆ ಮಿಕ್ಕವರು ಸಂಗೀತಾಭ್ಯಾಸ ಮಾಡಿದವರಲ್ಲ. ಅವರು ಅಮೆಚೂರ್‌ ಗಾಯಕರು. ಅವರ ಜನಪ್ರಿಯತೆಯೇ ಅವರ ಹಾಡಿಗೆ ಬೆಂಬಲವಾಗಿ ನಿಂತಿರುವುದನ್ನು ನಾವು ನೋಡಬಹುದು. ಈ ಪಟ್ಟಿಗೆ ನಾಯಕಿಯರು ಕೂಡ ಕ್ರಮೇಣ ಸೇರಿಕೊಂಡಿದ್ದಾರೆ. ಝೂಮ್‌ ಚಿತ್ರಕ್ಕೆ ರಾಧಿಕಾ ಪಂಡಿತ್‌ ಹಾಡಿದರು. ತರ್ಲೆ ನನ್ಮಕ್ಳು ಚಿತ್ರಕ್ಕೆ ಶುಭಾಪೂಂಜಾ ಹಾಡಿ ಸುದ್ದಿ ಮಾಡಿದರು.

ನಿರ್ದೇಶಕರು ಹಾಡಿದರು
ನಾಯಕ ನಟರಿಗಿಂತ ತಾವೇನು ಕಡಿಮೆ ಅಂದುಕೊಂಡು, ನಿರ್ದೇಶಕರು ಕೂಡ ಹಾಡುವುದಕ್ಕೆ ಆರಂಭಿಸಿದ್ದು ಕೂಡ ಇಲ್ಲಿ ನಡೆದುಹೋಯಿತು. ಪವನ್‌ ಒಡೆಯರ್‌, ನಾಗತಿಹಳ್ಳಿ ಚಂದ್ರಶೇಖರ್‌, ಯೋಗರಾಜ ಭಟ್‌ ಮುಂತಾದವರು ತಮ್ಮ ಚಿತ್ರಗಳಿಗೆ ತಾವೇ ಹಾಡಿ, ಜನರನ್ನು ರಂಜಿಸಬಲ್ಲೆವು ಎಂದು ಭಾವಿಸಿದರು.

ಸಂಗೀತ ನಿರ್ದೇಶಕರೇ ಗಾಯಕರೂ ಆದರು
ಗಾಯಕರನ್ನು ಹುಟ್ಟುಹಾಕಬೇಕಾದ, ಗಾಯಕರಿಗೆ ಅವಕಾಶ ಕೊಡಬೇಕಾದ ಸಂಗೀತ ನಿರ್ದೇಶಕರು ತಾವೇ ಹಾಡಲು ಆರಂಭಿಸಿದ ಪವಾಡವೂ ಕನ್ನಡದಲ್ಲಿ ನಡೆದುಹೋಯಿತು. ಹರಿಕೃಷ್ಣ ತಮ್ಮ ಸಂಗೀತ ನಿರ್ದೇಶನದ ಬಹುತೇಕ ಚಿತ್ರಗಳಲ್ಲಿ ಹಾಡಿದ್ದಾರೆ. ಅರ್ಜುನ್‌ ಜನ್ಯಾ ಕೂಡ ಹಾಡುವುದನ್ನು ಆರಂಭಿಸಿದ್ದಾರೆ. ಗುರುಕಿರಣ್‌ ಇಂಗ್ಲಿಷ್‌ ಗೀತೆಗಳನ್ನು ಕಡ್ಡಾಯವಾಗಿ ಹಾಡುತ್ತಲೇ ಬಂದಿದ್ದಾರೆ. ವೀರ್‌ಸಮರ್ಥ, ವಿ ಮನೋಹರ್‌, ಅನೂಪ್‌ಸೀಳಿನ್‌ ಕೂಡ ಅನೇಕ ಹಾಡುಗಳನ್ನು ತಾವೇ ಹಾಡಿದವರು.

ಇದರಿಂದಾಗಿ ಕನ್ನಡದಲ್ಲಿ ಹೊಸ ಗಾಯಕರಿಗೆ ಅವಕಾಶ ಕಡಿಮೆಯಾಗುತ್ತಾ ಬಂದದ್ದಂತೂ ನಿಜ. ಸೋನುನಿಗಮ್‌ ಹಾಡಬೇಕು ಅಂತ ಹೇಳುವ ಕಾಲವೂ ಹೋಗಿಬಿಟ್ಟಿದೆ. ಈಗ ಕನ್ನಡದ ದನಿ ಎಂದು ಕೇಳುತ್ತಿರುವುದು ವಿಜಯಪ್ರಕಾಶ್‌ ಒಬ್ಬರದೇ. ಅವರು ವಿಷಾದದ, ಕುಡಿತದ ಗೀತೆಗಳಿಗೆ ಬ್ರಾಂಡ್‌ ಆಗಿದ್ದಾರೆ ಎನ್ನಬಹುದು. ಮಿಕ್ಕಂತೆ ಅಲ್ಲಲ್ಲಿ ರಾಜೇಶ್‌ ಕೃಷ್ಣನ್‌, ಹೇಮಂತ್‌ ಹಾಡುತ್ತಾರೆ. ಮಿಕ್ಕಂತೆ ತಮಿಳಿನ ಕಾರ್ತಿಕ್‌, ಟಿಪ್ಪು ಮುಂತಾದವರನ್ನು ಕರೆಸಲಾಗುತ್ತಿದೆ. ಗಾಯಕಿಯರ ಪೈಕಿ ಅನುರಾಧ ಭಟ್‌ ಸದ್ಯಕ್ಕೆ ಚಾಲ್ತಿಯಲ್ಲಿದ್ದಾರೆ. ಮಿಕ್ಕವರತ್ತ ಚಿತ್ರರಂಗ ಆಗೀಗ ತಿರುಗಿ ನೋಡುತ್ತದೆಯೇ ಹೊರತು, ಅವರನ್ನು ಸದ್ಬಳಕೆ ಮಾಡಿಕೊಳ್ಳುತ್ತಿಲ್ಲ.
-ಉದಯವಾಣಿ

Comments are closed.