ಜಬಲ್ಪುರ, ಮಧ್ಯಪ್ರದೇಶ: ವಾಟ್ಸಾಪ್‌ನಲ್ಲಿ ಸೋನಿಯಾ ಗಾಂಧಿ ಪಾತ್ರೆ ತೊಳೆಯುವ ಆಕ್ಷೇಪಾರ್ಹ ಫೋಟೋ ಕಾಣಿಸಿಕೊಂಡ ಕಾರಣ ಭುಗಿಲೆದ್ದ ಗುಂಪು ಘರ್ಷಣೆಗೆ 33 ವರ್ಷ ಪ್ರಾಯದ ಓರ್ವ ವ್ಯಕ್ತಿ ಬಲಿಯಾಗಿ ಇತರ ಐದು ಮಂದಿ ಗಂಭೀರ ರೀತಿಯಲ್ಲಿ ಸೇರಿದಂತೆ ಆರು ಮಂದಿ ಗಾಯಗೊಂಡ ಘಟನೆ ಇಂದಿಲ್ಲಿ ನಡೆದಿದೆ.
ಗುಂಪು ಘರ್ಷಣೆಯಲ್ಲಿ ತೀವ್ರವಾಗಿ ಗಾಯಗೊಂಡ ಉಮೇಶ್ ವರ್ಮಾ ಎಂಬವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಕೊನೆಯುಸಿರೆಳೆದರೆಂದು ನಗರ ಪ್ರದೇಶ ಪೊಲೀಸ್ ಸುಪರಿಂಟೆಂಡೆಂಟ್ ಇಂದ್ರಜಿತ್ ಬಲ್ಸಾವರ್ ತಿಳಿಸಿದ್ದಾರೆ.
ವಾಟ್ಸಾಪ್‌ನಲ್ಲಿ ಸೋನಿಯಾ ಪಾತ್ರೆ ತೊಳೆಯುವ ಫೋಟೋ ಕಾಣಿಸಿಕೊಂಡ ಪ್ರಯುಕ್ತ ಭುಗಿಲೆದ್ದ ವಿವಾದದಲ್ಲಿ ಕಾಂಗ್ರೆಸ್ ಕಾರ್ಪೊರೇಟರ್ ಜತಿನ್ ರಾಜ್ ಅವರ ಗುಂಪು ದೂರು ಕೊಡಲು ವಿಜಯ ನಗರ ಪೊಲೀಸ್ ಠಾಣೆಗೆ ಹೋಗಿತ್ತು. ಆಗ ಅದೇ ವೇಳೆ ಎದುರಾಳಿ ಗುಂಪು ಕೂಡ ದೂರು ನೀಡಲು ಅಲ್ಲಿಗೆ ಬಂದಿತ್ತು.
ಆ ಸಂದರ್ಭದಲ್ಲಿ ಉಭಯ ಗುಂಪುಗಳಲ್ಲಿದ್ದವರು ಠಾಣೆಯೊಳಗೇ ಪರಸ್ಪರ ಹೊಡೆದಾಡಿಕೊಂಡು ಚೂರಿ ಮುಂತಾದ ಮಾರಕಾಯುಧಗಳನ್ನು ಬಳಸಿದರು.
ಆಗ ಠಾಣೆಯಲ್ಲಿದ್ದ ಕಡಿಮೆ ಸಂಖ್ಯೆಯ ಪೊಲೀಸರು ಸಮೀಪದ ಇತರ ಠಾಣೆಗಳಿಗೆ ಸುದ್ದಿ ತಲುಪಿಸಿ ಅಲ್ಲಿಂದ ಹೆಚ್ಚುವರಿ ಪೊಲೀಸರನ್ನು ತಮ್ಮ ಠಾಣೆಗೆ ಕರೆಸಿಕೊಂಡು ಹಿಂಸೆಗೆ ತಿರುಗಿದ್ದ ಗುಂಪುಗಳನ್ನು ನಿಯಂತ್ರಣಕ್ಕೆ ತಂದರು. ಆದರೆ ತಮ್ಮ ಠಾಣೆಯೊಳಗೆ ಯಾವುದೇ ಗುಂಪು ಕಾಳಗ ನಡೆದಿಲ್ಲ ಎಂದು ವಿಜಯ ನಗರ ಠಾಣಾಧಿಕಾರಿ ಹೇಳಿದ್ದಾರೆ.
ಕಾಂಗ್ರೆಸ್ ಕಾರ್ಪೊರೇಟರ್ ರಾಜ್ ಅವರು “ವಿಜಯ ನಗರ ಫ್ರೆಂಡ್ಸ್’ ಎಂಬ ಹೆಸರಿನಲ್ಲಿ ವಾಟ್ಸಾಪ್‌ನಲ್ಲಿ ಸಮೂಹವೊಂದನ್ನು ರೂಪಿಸಿಕೊಂಡಿದ್ದು ತಮ್ಮ ಪ್ರದೇಶದ ಜನರೊಂದಿಗೆ ಸಂಪರ್ಕದಲ್ಲಿದ್ದರು.
ಪ್ರಶಾಂತ್ ನಾಯಕ್ ಎಂಬವರು ಈ ವಾಟ್ಸಾಪ್ ಗ್ರೂಪ್‌ನಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪಾತ್ರೆ ತೊಳೆವ ಫೋಟೋವನ್ನು ಹಾಕಿ ಅದಕ್ಕೆ “ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಅಧ್ಯಕ್ಷೆಯನ್ನು ಈ ಸ್ಥಿತಿಗೆ ತಂದಿದ್ದಾರೆ’ ಎಂಬ ವ್ಯಂಗ್ಯದ ಮಾತನ್ನು ಬರೆದಿದ್ದರು ಎನ್ನಲಾಗಿದೆ.
ಈ ವಿವಾದದ ಸಂಬಂಧ ಪರಿಸ್ಥಿತಿ ಉದ್ರಿಕ್ತಗೊಂಡು ಉಭಯ ಸಮೂಹಗಳು ಮಧ್ಯರಾತ್ರಿಯ ಬಳಿಕ ಅಹಿಂಸಾ ಚೌಕದಲ್ಲಿ ಸೇರಿ ವಾಗ್ಯುದ್ಧದಲ್ಲಿ ತೊಡಗಿತ್ತು.
ಈ ಬಗ್ಗೆ ಸುಳಿವು ದೊರಕಿದ ಪೊಲೀಸರು ಸ್ಥಳಕ್ಕೆ ಧಾವಿಸಿ ರಾಜಿ ಮಾತುಕತೆ ನಡೆಸಲು ಎರಡೂ ಗುಂಪುಗಳವರು ಠಾಣೆಗೆ ಬರುವಂತೆ ಆದೇಶಿಸಿದರು. ಆದರೆ ಎರಡೂ ಗುಂಪುಗಳು ಠಾಣೆಗೆ ಬಂದ ಬಳಿಕವೂ ಅವರೊಳಗಿನ ವಾಗ್ಯುದ್ಧ ಮುಂದುವರಿದು ಹಿಂಸೆಗೆ ಕಾರಣವಾಯಿತು. ಇದನ್ನು ಅನುಸರಿಸಿ ಪೊಲೀಸರು ಲಘು ಲಾಠೀ ಚಾರ್ಜ್ ಮಾಡಿ ಪರಿಸ್ಥಿತಿಯನ್ನು ನಿಯಂತ್ರಿಸಿದರು ಎಂದು ಬಲ್ಸಾವರ್ ಸಿಎಸ್‌ಪಿ ಹೇಳಿದ್ದಾರೆ.
ಪೊಲೀಸರು ಈ ಹಿಂಸಾತ್ಮಕ ಪ್ರಕರಣದ ಬಗ್ಗೆ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
-ಉದಯವಾಣಿ
Comments are closed.