‘ಬಿಎಂಡಬ್ಲ್ಯೂ’ ಎನ್ನುವ ಶೀರ್ಷಿಕೆ ಕೇಳಿದೊಡನೆ– ಇದೇನಿದು! ಕಾರುಗಳ ಕತೆ ಹೊಂದಿರುವ ಚಿತ್ರವೇ ಎನ್ನಿಸಬಹುದು. ಆದರೆ, ಚಿತ್ರದ ‘ಫನ್ ಅನ್‌ಲಿಮಿಟೆಡ್’ ಎಂಬ ಅಡಿಬರಹ ಬೇರೆಯದೇ ಕಥೆಯನ್ನು ಸೂಚಿಸುವಂತಿದೆ.
ಚಿತ್ರದ ಶೀರ್ಷಿಕೆಯಲ್ಲಿರುವ ಅಕ್ಷರಗಳನ್ನು ವಿಸ್ತರಿಸಿದರೆ ‘ಬೆಂಗಳೂರು ಮೆನ್ಸ್ ಅಂಡ್ ವುಮೆನ್ಸ್’ ಎಂದಾಗುತ್ತದೆ. ಜತೆಗೆ ‘ಸಿ’ ಅಕ್ಷರ ಸೇರಿಸಿದ್ದರೆ ಕಾಲೇಜು ಎಂದೂ ಆಗುತ್ತಿತ್ತು. ಆದರೆ, ಶೀರ್ಷಿಕೆ ಬೇಗನೆ ತಟ್ಟುವಂತೆ ಮತ್ತು ಕುತೂಹಲ ಹುಟ್ಟಿಸುವಂತಿರಲಿ ಎಂಬ ಕಾರಣಕ್ಕಾಗಿ ‘ಸಿ’ ಬಿಟ್ಟು, ‘ಬಿಎಂಡಬ್ಲ್ಯೂ’ ಮಾತ್ರ ಉಳಿಸಿಕೊಂಡೆವು ಎನ್ನುತ್ತದೆ ಚಿತ್ರತಂಡ.
ಎರಡು ಚಿತ್ರಗಳನ್ನು ನಿರ್ದೇಶಿಸಿದ ಅನುಭವ ಹೊಂದಿರುವ ಗಂಧರ್ವ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಹೆಸರಿನ ಮುಂದೆ ‘ರಾಯ ರಾವುತ್’ ಎನ್ನುವ ವಿಶೇಷಣ ಸೇರಿಸಿಕೊಂಡಿರುವ ಅವರು, ಮೂರನೇ ಚಿತ್ರದ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಕಾಲೇಜು ಜೀವನದ ಸುತ್ತ ಚಿತ್ರದ ಕತೆ ಹೆಣೆದುಕೊಂಡಿದೆ. ಪ್ರೀತಿ, ಹುಡುಗಾಟ, ಸ್ನೇಹ, ಹೊಡೆದಾಟ, ಪರೀಕ್ಷೆ, ಭವಿಷ್ಯ, ಕಾಮಿಡಿ, ಸೆಂಟಿಮೆಂಟ್ ಸೇರಿದಂತೆ ಹಲವು ವಿಷಯಗಳ ಮಿಶ್ರಣ ಚಿತ್ರದಲ್ಲಿದೆ. ಎಲ್ಲೂ ಬೇಸರ ತರಿಸದಂತೆ ಕಥೆಯನ್ನು ಹೆಣೆಯಲಾಗಿದೆಯಂತೆ.
‘ಸಿಂಪಲ್ಲಾಗ್ ಇನ್ನೊಂದ್ ಲವ್‌ಸ್ಟೋರಿ’ಯಲ್ಲಿ ನಟಿಸಿ ಗಮನ ಸೆಳೆದಿದ್ದ ಪ್ರವೀಣ್, ಧಾರಾವಾಹಿಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಚೇತನ್ ಕುಮಾರ್, ಮಾಡೆಲಿಂಗ್‌ನಲ್ಲಿ ಕಾಣಿಸಿಕೊಂಡಿರುವ ಆಕಾಶ್ ಸಿಂಗ್ ರಜಪೂತ್ ಹಾಗೂ ನಿರ್ದೇಶಕರ ಪುತ್ರ ಶ್ರೀರಾಮ್ ಗಂಧರ್ವ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ. ಏಕತಾ ರಾಥೋಡ್, ಪ್ರಿಯಾಂಕ ಮಲ್ನಾಡ್, ಅನುಷಾ ಹಾಗೂ ಪೂರ್ವಿ ಜೋಷಿ ನಾಯಕಿಯರಾಗಿ ಆಯ್ಕೆಯಾಗಿದ್ದಾರೆ. ಎಲ್ಲರಿಗೂ ಎರಡು ಮೂರು ಚಿತ್ರಗಳಲ್ಲಿ ನಟಿಸಿದ ಅನುಭವವಿದೆ. ಚಿಕ್ಕಣ್ಣ ಮತ್ತು ರಂಗಾಯಣ ರಘು ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಶ್ರೀರಾಮ್ ಅವರು ನಟನೆಯ ಜತೆಗೆ ಸಂಗೀತ ಸಂಯೋಜನೆಯ ಹೊಣೆ ಹೊತ್ತಿದ್ದಾರೆ. ಚಿತ್ರಕ್ಕೆ ಜಗದೀಶ್ ಪುರುಷೋತ್ತಮ್ ಮತ್ತು ಮಯೂರ್ ಹರೀಶ್ ಬಂಡವಾಳ ಹೂಡುತ್ತಿದ್ದಾರೆ. ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಮಲೆನಾಡು ಪ್ರದೇಶ ಹಾಗೂ ಗುಜರಾತ್‌ನಲ್ಲೂ ಶೂಟಿಂಗ್ ನಡೆಸಲು ಚಿತ್ರತಂಡ ನಿರ್ಧರಿಸಿದೆ.
Comments are closed.