ಮನೋರಂಜನೆ

ಹಾಸ್ಯ ವರ್ಷಧಾರೆ: 5 ಪ್ರಸಂಗ, 3 ಥರ ಹಾಸ್ಯ, ಐವರು ಹಾಸ್ಯಗಾರರು

Pinterest LinkedIn Tumblr

hasyaಮಳೆಗಾಲ ಶುರುಲಾಗುತ್ತಿದೆ, ಹಾಗಾಗಿಯೇ ಮೇಳಗಳ ತಿರುಗಾಟ ತಾತ್ಕಾಲಿಕವಾಗಿ ನಿಂತಿದೆ. ಹಾಗಾಗಿ ಯಕ್ಷಗಾನ ಕಲಾವಿದರೆಲ್ಲಾ ಬೆಂಗಳೂರಲ್ಲಿ ಬೀಡು ಬಿಡುತ್ತಿದ್ದಾರೆ. ಈ ಸಲ ಮಳೆಗಾಲಕ್ಕೆ ಯಕ್ಷಾಭಿಮಾನಿಗಳಿಗೆ ವೈವಿಧ್ಯಮಯ ಯಕ್ಷಗಾನ ಪ್ರಸಂಗಗಳು ಸಿಗಲಿವೆ. ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಪ್ರಸಂಗಗಳಿಗೂ ಬರವಿಲ್ಲ. ಹಾಸ್ಯ, ಶೃಂಗಾರ, ರೌದ್ರ, ವೀರ ರಸಗಳನ್ನು ಸವಿಯುವುದಕ್ಕೆ ಈ ಮಳೆಗಾಲಕ್ಕಿಂತ ಒಳ್ಳೆಯ ಸಂದರ್ಭ ಬೆಂಗಳೂರಿಗರಿಗೆ ಬೇರೊಂದಿರಲಿಕ್ಕಿಲ್ಲ. ಈ ಸಲ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಒಂದು ಅದ್ಭುತ ಹಾಸ್ಯ ಯಕ್ಷ ರಾತ್ರಿಯನ್ನು ಏರ್ಪಡಿಸಲಾಗಿದೆ.

ಯಾವ್ಯಾವ ಪ್ರಸಂಗಗಳು?
ಒಟ್ಟು ಐದು ಪ್ರಸಂಗಗಳನ್ನು ಒಂದು ರಾತ್ರಿಯಲ್ಲಿ ನೋಡಬಹುದು. ಈ ಪ್ರಸಂಗಗಳನ್ನು ಕ್ರಮವಾಗಿ ಹಾಲ್ಯ-ಲಾಸ್ಯ, ಹಾಸ್ಯ- ಶೃಂಗಾರ, ಹಾಸ್ಯ ಶೌರ್ಯ, ಹಾಸ್ಯ ಭಕ್ತಿ ಮತ್ತು ಹಾಸ್ಯ ಕಾರುಣ್ಯ ಎಂದು ವಿಂಗಡಿಸಲಾಗಿದೆ. ಈ ವಸ್ತುವಿನ ಆಧಾರದಲ್ಲಿ “ಕಾಶಿಮಾಣಿ’, “ಚಂದ್ರಾವಳಿ’, “ಕಾರ್ತವೀರ್ಯ’, “ಕಾಳಿದಾಸ’ ಮತ್ತು “ರುದ್ರಕೋಪ’ ಪ್ರಸಂಗಗಳು ನಡೆಯಲಿವೆ. ಐದೂ ಪ್ರಸಂಗಗಳಲ್ಲಿ ಬೇರೆಬೇರೆ ಸ್ವಭಾವದ ಹಾಸ್ಯಗಳನ್ನು ಆಯ್ದುಕೊಳ್ಳಲಾಗಿದೆ.

ಏನು ಆಕರ್ಷಣೆ?

ಕನ್ನಡ ಯಕ್ಷರಂಗದ ಹಾಸ್ಯ ದಿಗ್ಗಜರನ್ನು ಒಂದೇ ವೇದಿಕೆಯ ಮೇಲೆ ನೋಡಿ ನಕ್ಕು ನಲಿಯುವ ಅವಕಾಶವನ್ನು ಈ ವೇದಿಕೆ ಒದಗಿಸಿಕೊಡಲಿದೆ. ಯಕ್ಷ ಹಾಸ್ಯ ಕಲಾವಿದರಾದ ಹಳ್ಳಾಡಿ ಜಯರಾಂ ಶೆಟ್ಟಿ, ರಮೇಶ್‌ ಭಂಡಾರಿ ಮೂರೂರು, ಸೀತಾರಾಮ್‌ ಕುಮಾರ್‌ ಕಟೀಲು, ಶ್ರೀಧರ ಭಟ್‌ ಕಾಸರಗೋಡು ಪ್ರಮುಖ ಹಾಸ್ಯ ಪಾತ್ರವನ್ನು ನಿರ್ವಹಿಸಿ, ರಾತ್ರಿಯೆಲ್ಲಾ ನಗೆಗಡಲಲ್ಲಿ ತೇಲಿಸಲಿದ್ದಾರೆ. ಜೊತೆಗೆ ಒಬ್ಬ ಸರ್‌ ಪ್ರೈಸ್‌ ಅತಿಥಿ ಕೂಡ ಆ ದಿನ ಪ್ರತ್ಯಕ್ಷರಾಗುತ್ತಾರಂತೆ.

ಇವರ ಜೊತೆಗೆ ಬಳ್ಕೂರು ಕೃಷ್ಣಯಾಜಿ, ಜಲವಳ್ಳಿ ವಿಧ್ಯಾಧರ ರಾವ್‌, ಸುಬ್ರಹ್ಮಣ್ಯ ಚಿಟ್ಟಾಣಿ, ಉಪ್ಪುಂದ ನಾಗೇಂದ್ರ ರಾವ್‌, ಕಾರ್ತಿಕ್‌ ಚಿಟ್ಟಾಣಿ ಮೊದಲಾದವರು ಗಂಭೀರ ಪಾತ್ರವರ್ಗಗಳಲ್ಲಿ ಆಕರ್ಷಣೆ ಆಗಲಿದ್ದಾರೆ. ಮುಖ್ಯ ಸ್ತ್ರೀವೇಷದಲ್ಲಿ ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ ಅವರು ಕಾಣಿಸಿಕೊಳ್ಳಲಿದ್ದಾರೆ. ವಿದ್ವಾನ್‌ ಗಣಪತಿ ಭಟ್‌, ಸುರೇಶ್‌ ಶೆಟ್ಟಿ ಭಾಗವತಿಕೆಯಲ್ಲಿ ಮನರಂಜಿಸಲಿದ್ದಾರೆ.

ಎಲ್ಲಿ?: ರವೀಂದ್ರ ಕಲಾಕ್ಷೇತ್ರ, ಜೆಸಿ ರಸ್ತೆ, ಟೌನ್‌ಹಾಲ್‌ ಪಕ್ಕ
ಯಾವಾಗ?: ಜೂನ್‌ 1, ಬುಧವಾರ, ರಾತ್ರಿ 10ಕ್ಕೆ
ಪ್ರವೇಶ ದರ: 300, 200 ರೂ.
ಸಂಪರ್ಕ: 9591754722
-ಉದಯವಾಣಿ

Comments are closed.