ಮನೋರಂಜನೆ

ಅಂದು ಹಾಟ್‌ ನಟಿಯರು,ಇಂದು ಸನ್ಯಾಸಿನಿಯರು!

Pinterest LinkedIn Tumblr

mam

ಅದೊಂದು ಕಾಲದಲ್ಲಿ ಬೆಳ್ಳಿತೆರೆಯಲ್ಲಿ ಮಿಂಚಿದರು. ಕೆಲವರು ಪಡ್ಡೆ ಹೈಕಳ ನಿದ್ದೆ ಕೆಡಿಸಿದರು. ತುಂಡುಡುಗೆ ತೊಟ್ಟ ನಟನೆಗೂ ಸೈ ಎಂದರು. ಆದರೆ ಈಗ ಹಾಗಿಲ್ಲ. ಸಾದಾಸೀದ. ದೈವ ಭಕ್ತಿ, ಶ್ರದ್ಧೆ, ಅಧ್ಯಾತ್ಮದ ಒಲವು! ಇದು ಕೆಲವು ಸೆಲೆಬ್ರೆಟಿ ನಟಿಯರ ಪರಿಸ್ಥಿತಿ. ಬಿಗ್‌ಬಾಸ್‌ ನಟಿ, ಮಾಡೆಲ್‌ ಆಗಿದ್ದ ಸೋಫಿಯಾ ಈ ಸಾಲಿಗೊಂದು ಹೊಸ ಸೇರ್ಪಡೆ. ಸೆಲೆಬ್ರೆಟಿಗಳು ಎಲ್ಲವನ್ನೂ ತ್ಯಜಿಸಿ, ಸನ್ಯಾಸಿನಿಯಾದವರು ಹಲವರಿದ್ದಾರೆ. ಅವರು ಹಿಂದೆ ಹೇಗಿದ್ದರು? ಮತ್ತೆ ಹೇಗಾದರು? ಯಾಕಾದರು? ಎಂಬುದರ ಕುರಿತ ಕುತೂಹಲಕಾರಿ ವಿಚಾರಗಳು ಇಲ್ಲಿವೆ.

ನಟಿ ಸನ್ಯಾಸಿನಿಯಾಗಿ ಮತ್ತೆ ಮದ್ವೆ ಆದಳು!

ಒಂದೊಮ್ಮೆ ಬಾಲಿವುಡ್‌ನ‌ ಬಿಚ್ಚಮ್ಮ ಸುಂದರಿ. ಆಶಿಕ್‌ ಆವಾರಾ, ಸಬೆÕ ಬಡಾ ಖೀಲಾಡಿ, ಬಾಜಿ, ಕರಣ್‌ ಅರ್ಜುನ್‌ ಚಿತ್ರಗಳಲ್ಲಿ ಹೆಸರು ಮಾಡಿದ ನಟಿ. ಅವರೇ ಮಮತಾ ಕುಲಕರ್ಣಿ. ಇಂತಹ ಸಖತ್‌ ಹಾಟ್‌ ನಟಿ ಯಾವುದೂ ಬೇಡ. ದೇವರೇ ಎಲ್ಲ ಎನ್ನ ತೊಡಗಿದರು. ಸನ್ಯಾಸಿನಿಯಾಗಿದ್ದಾರೆ ಎಂಬ ಸುದ್ದಿ 2013ರಲ್ಲಿ ಜೋರಾಗಿ ಹಬ್ಬಿತ್ತು. ಅದಾಗಿ ಇದ್ದಕ್ಕಿದ್ದಂತೆ ಮಮತಾ ಮದ್ವೆ ಗುಸುಗುಸು ಕೇಳಿಬಂತು. ಸಂದರ್ಶನವೊಂದರಲ್ಲಿ ಮಾತಾಡಿದ್ದ ಮಮತಾ ಮೊದಲು ನನ್ನ ಪ್ರೀತಿ ದೇವರತ್ತ, ಬಳಿಕ ವಿಕಿ ಗೋಸ್ವಾಮಿ ಎಂಬ ಉದ್ಯಮಿಯತ್ತ ಎಂದು ಹೇಳಿದ್ದರು. 2014ರಲ್ಲಿ ಕೀನ್ಯಾದಲ್ಲಿ ಮಮತಾ ಮತ್ತು ಗೋಸ್ವಾಮಿ ಅವರನ್ನು ಡ್ರಗ್‌ ದಂಧೆಯಲ್ಲಿ ಪೊಲೀಸರು ಬಂಧಿಸಿದ್ದರು.

ಸೆಕ್ಸ್‌ ಬಾಂಬ್‌ ಸೆಳೆದ ಅಧ್ಯಾತ್ಮ!

ಅನು ಅಗರ್‌ವಾಲ್‌! 90 ರ ದಶಕದಲ್ಲಿ ಬಾಲಿವುಡ್‌ ಸೆಕ್ಸ್‌ಬಾಂಬ್‌ ಆಗಿ ಹೆಸರು ಮಾಡಿದ್ದಾಕೆ. ಆದರೆ ಬದುಕಿನ ಏಳು ಬೀಳು ಆಕೆಯನ್ನು ಸನ್ಯಾಸದತ್ತ ಎಳೆದೊಯ್ದಿತ್ತು. 1999ರಲ್ಲಿ ಮುಂಬೈ ಸನಿಹ ಭೀಕರ ಅಪಘಾತಕ್ಕೊಳಗಾಗಿದ್ದ ಅನು ಅಗರ್‌ವಾಲ್‌ 29 ದಿನಗಳ ಕಾಲ ಕೋಮಾಕ್ಕೆ ಜಾರಿದ್ದರು. ಅಪಘಾತ ಅವರ ಚಿಂತನೆಯನ್ನು ಬದಲಾಯಿಸಿದ್ದು, ಯೋಗ ಜೀವನದ ಮುಖ್ಯ ಧ್ಯೇಯ ಎಂದು ಹೇಳಿಕೊಳ್ಳುವಂತಾಯಿತು. “ಅನುಫ‌ನ್‌ ಯೋಗ’ ಎಂಬ ಯೋಗ ಥೆರಪಿಯನ್ನು ಮುಂಬೈನಲ್ಲಿ ಆರಂಭಿಸಿದ್ದರು. ಯೋಗ ಮಾರ್ಗದರ್ಶಕರಾಗಿದ್ದರು. ತಂತ್ರಯೋಗದ ಹಲವು ವಿಚಾರಗಳನ್ನು ಅಭ್ಯಾಸ ಮಾಡಿದ್ದರು. ಸದ್ಯ ಬಿಹಾರದಲ್ಲಿ ಯೋಗ ಶಾಲೆಯೊಂದನ್ನು ನಡೆಸುತ್ತಿದ್ದಾರೆ.

“ನಿತ್ಯಾನಂದ ಮೋಯಿ’ ಆದ ನಟಿ ರಂಜಿತಾ!

ನಿತ್ಯಾನಂದ ಸ್ವಾಮಿ ಸೆಕ್ಸ್‌ ಸೀಡಿ ಹಗರಣದಲ್ಲಿ ಭಾರೀ ಸುದ್ದಿ ಮಾಡಿದ್ದ ನಟಿ ರಂಜಿತಾ ಸನ್ಯಾಸಿನಿಯಾಗಿದ್ದಾರೆ. ಒಂದೊಮ್ಮೆ ತಮಿಳು, ಮಲಯಾಳ, ಕನ್ನಡ ಚಿತ್ರರಂದಗಲ್ಲಿ ಹೆಸರು ಮಾಡಿದವರು ರಂಜಿತಾ. 1992ರಲ್ಲಿ ಚಿತ್ರರಂಗ ಪ್ರವೇಶದ ಬಳಿಕ 40ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ಕಿರುತೆರೆಯಲ್ಲೂ ಕಾಣಿಸಿಕೊಂಡಿದ್ದರು. ಬಳಿಕ ಅವರು ರಾಕೇಶ್‌ ಮೆನನ್‌ ಎಂಬುವವರನ್ನು ವಿವಾಹವಾಗಿದ್ದರು. ಬಳಿಕ ನಿತ್ಯಾನಂದ ಪ್ರಕರಣದಲ್ಲಿ ಅವರು ಹೆಸರು ಕೇಳಿಬಂದಿತ್ತು. ಅದಾಗಿ ಸನ್ಯಾಸಿನಿಯಾಗುವತ್ತ ಒಲವು ತೋರಿದ್ದರು. ನಿತ್ಯಾನಂದ ಅವರಿಂದಲೇ ದೀಕ್ಷೆ ಪಡೆದು “ನಿತ್ಯಾನಂದ ಮೋಯಿ’ಯಾಗಿದ್ದರು
ರಂಜಿತಾ

ಬೌದ್ಧ ಸನ್ಯಾಸಿನಿಯಾದ ಬಾಲಿವುಡ್‌ ನಟಿ!

ಕಿಲಾಡಿಯೋಂಕಾ ಕಿಲಾಡಿ, ಭೂತ್‌ ಇತ್ಯಾದಿ ಬಾಲಿವುಡ್‌ ಚಿತ್ರಗಳಲ್ಲಿ ಮಿಂಚಿದವರು ಬರ್ಖಾ ಮದನ್‌. ಮೂಲತಃ ಪಂಜಾಬ್‌ನವರಾದ ಬರ್ಖಾ ಮದನ್‌, 1994ರಲ್ಲಿ ಐಶ್ವರ್ಯಾ ರೈ ಬಚ್ಚನ್‌, ಸುಷ್ಮಿತಾ ಸೇನ್‌ ಅವರೊಂದಿಗೆ ಮಿಸ್‌ ಇಂಡಿಯಾ ಸ್ಪರ್ಧಾಳುವಾಗಿ ಭಾಗಿಯಾಗಿದ್ದವರು. 1994ರಲ್ಲಿ ಮಿಸ್‌ ಟೂರಿಸಂ ಇಂಟರ್‌ನ್ಯಾಷನಲ್‌ ಸ್ಪರ್ಧೆಯಲ್ಲಿ ರನ್ನರ್‌ ಅಪ್‌ ಆಗಿದ್ದವರು. ಅಷ್ಟೇ ಅಲ್ಲದೇ ಹಲವಾರು ಟೀವಿ ಶೋಗಳಲ್ಲಿಯೂ ಭಾಗಿಯಾದ್ದಾಕೆ. ಆದರೆ ಕ್ರಮೇಣ ಇವರ ಚಿತ್ತ ಅಧ್ಯಾತ್ಮದತ್ತ ಹೊರಳಿದೆ. ಬೌದ್ಧಗುರು ದಲೈ ಲಾಮಾ ಅವರಿಂದ ಪ್ರೇರಿತರಾಗಿ ಬೌದ್ಧಧರ್ಮದತ್ತ ಆಕರ್ಷಿತರಾಗಿದ್ದಾರೆ. ಪರಿಣಾಮ 2012ರಲ್ಲಿ ಅವರು ಸನ್ಯಾಸಿನಿ ಆಗಲು ಬಯಸಿದ್ದರು. ಅದೇ ವರ್ಷಾಂತ್ಯದಲ್ಲಿ ಅವರು ಬೌದ್ಧ ಸನ್ಯಾಸಿನಿಯಾಗಿ ದೀಕ್ಷೆಯನ್ನೂ ಪಡೆದುಕೊಂಡರು. ಹೆಸರನ್ನು ವೆನ್‌ ಜೆಟ್ಲನ್‌ ಸ್ಯಾಮ್ಟೆನ್‌ ಎಂದು ಬದಲಾಯಸಿಕೊಂಡಿದ್ದರು.

ನೇಪಾಳಿ ಮಾಡೆಲ್‌ಗೆ ವೈರಾಗ್ಯ!

ನೇಪಾಳದ ಖ್ಯಾತ ಮಾಡೆಲ್‌ ಕೊಹಿನೂರ್‌ ಸಿಂಗ್‌ ಅವರ ಕಥೆ ಬೇರೆ! ನೇಪಾಳದಲ್ಲಿ ತುಂಬ ಪ್ರಸಿದ್ಧವಾಗಿದ್ದಾಕೆ. ಹಲವಾರು ಆಲ್ಬಂಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇದ್ದಕ್ಕಿದ್ದಂತೆ ಅವರಿಗೆ ವೈರಾಗ್ಯ ಹುಟ್ಟಿಕೊಂಡಿತ್ತು. ಅದಕ್ಕೆ ಕಾರಣ ಓರ್ವ ಬೌದ್ಧ ಸನ್ಯಾಸಿ. ಮಾಡೆಲ್‌ ಆಗಿ ಸಾಕಷ್ಟು ಹೆಸರು ಮಾಡಿದ್ದಾಗಲೇ ಅವರು ಸನ್ಯಾಸಿಯಾಗಲು ಇಚ್ಛಿಸಿದ್ದರು. 2005ರಲ್ಲಿ ಬೌದ್ಧ ಸನ್ಯಾಸಿಯಾಗಿ ಅವರು ದೀಕ್ಷೆ ಪಡೆದಿದ್ದರು. ಇದೀಗ ನೇಪಾಳದ ಬೌದ್ಧ ಕೇಂದ್ರವೊಂದರಲ್ಲಿ ಅವರು ಸನ್ಯಾಸಿ ಜೀವನ ನಡೆಸುತ್ತಿದ್ದಾರೆ.
-ಉದಯವಾಣಿ

Comments are closed.