ಮನೋರಂಜನೆ

ಮುರಳಿ ಹೊಸ ಚಿತ್ರ ಮಫ್ತಿ: ಜೊತೆಗೆ ಶಿವರಾಜಕುಮಾರ್‌

Pinterest LinkedIn Tumblr

murali
ಒಂದು ಬಾಂಬ್‌ನಂತಹ ಸುದ್ದಿಯನ್ನು ಕೊಡುವುದಾಗಿ ಮುರಳಿ ಹೇಳಿದ್ದರು. ಅದರಂತೆಯೇ ಮುರಳಿ ಒಂದು ಸುದ್ದಿಯನ್ನು ಕೊಟ್ಟೇ ಬಿಟ್ಟಿದ್ದಾರೆ. ಈ ಹಿಂದೆ ನರ್ತನ್‌ ನಿರ್ದೇಶನದಲ್ಲಿ ಮತ್ತು ಜಯಣ್ಣ ಹಾಗೂ ಭೋಗೇಂದ್ರ ಅವರ ನಿರ್ಮಾಣದ ಹೊಸ ಚಿತ್ರವೊಂದರಲ್ಲಿ ಮುರಳಿ ಅಭಿನಯಿಸುವುದಾಗಿ ಸುದ್ದಿಯಾಗಿತ್ತು. ಹೊಸ ವಿಷಯವೇನೆಂದರೆ, ಆ ಚಿತ್ರಕ್ಕೆ “ಮಫ್ತಿ’ ಎಂಬ ಹೆಸರಿಡುವುದರ ಜೊತೆಗೆ, ಶಿವರಾಜಕುಮಾರ್‌ ಸಹ ಒಂದು ಪ್ರಮುಖ ಪಾತ್ರದಲ್ಲಿ ನಟಿಸುವುದು ಪಕ್ಕಾ ಆಗಿದೆ. ಮುರಳಿ ಎಕ್ಸ್‌ಪ್ಲೋಡ್‌ ಮಾಡುವುದಾಗಿ ಹೇಳಿಕೊಂಡಿದ್ದ ಬಾಂಬ್‌ನಂತಹ ಸುದ್ದಿ ಇದೇ ಎಂಬುದು ನಿಮಗೆ ಗೊತ್ತಿರಲಿ.

ಶಿವರಾಜಕುಮಾರ್‌ ಮತ್ತು ಮುರಳಿ ಸಂಬಂಧಿಕರು. ಈ ಹಿಂದೆ ಶಿವರಾಜಕುಮಾರ್‌ ಅಭಿನಯದ “ಭಜರಂಗಿ’ ಚಿತ್ರದ “ಬಾಸು ನಮ್‌ ಬಾಸು’ ಎಂಬ ಹಾಡಿನಲ್ಲಿ ಮುರಳಿ ನಾಲ್ಕು ಹೆಜ್ಜೆ ಹಾಕಿದ್ದರು. ಆ ನಂತರ ಯಾವುದೇ ಚಿತ್ರದಲ್ಲೂ ಒಟ್ಟಿಗೆ ನಟಿಸಿರಲಿಲ್ಲ. ಈಗ “ಮಫ್ತಿ’ ಚಿತ್ರದಲ್ಲಿ ಮುರಳಿ ಮತ್ತು ಶಿವರಾಜಕುಮಾರ್‌ ಒಟ್ಟಿಗೆ ನಟಿಸುವಂತಾಗಿದೆ. ಚಿತ್ರದಲ್ಲಿ ಶಿವರಾಜಕುಮಾರ್‌ ಅವರ ಪಾತ್ರವೇನು? ಇಬ್ಬರಲ್ಲಿ ಯಾರು “ಮಫ್ತಿ’ಯಲ್ಲಿರುತ್ತಾರೆ? ಎಂಬಂತಹ ಪ್ರಶ್ನೆಗಳಿಗೆ ಮುರಳಿ ಆಗಲೀ, ನರ್ತನ್‌ ಆಗಲೀ ಉತ್ತರ ಕೊಟ್ಟಿಲ್ಲ. ಮುಂದಿನ ದಿನಗಳಲ್ಲಿ ಈ ಪ್ರಶ್ನೆಗೆ ಉತ್ತರ ಸಿಗಲಿದೆ.

ಅಂದಹಾಗೆ, ಈ ಚಿತ್ರ ಜುಲೈನಲ್ಲಿ ಪ್ರಾರಂಭವಾಗಲಿದೆ ಮತ್ತು ಶಿವರಾಜಕುಮಾರ್‌ ಆಗಸ್ಟ್‌ನಿಂದ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರಂತೆ. ಇನ್ನು ಚಿತ್ರದ ನಾಯಕಿಯ ಹುಡುಕಾಟ ನಡೆದಿದೆಯಂತೆ. ಮಿಕ್ಕಂತೆ ಚಿಕ್ಕಣ್ಣ, ಸಾಧು ಕೋಕಿಲ ಮುಂತಾದವರು ನಟಿಸುತ್ತಿದ್ದಾರಂತೆ. ಇದೊಂದು ಕಮರ್ಷಿಯಲ್‌, ಆ್ಯಕ್ಷನ್‌ ಚಿತ್ರ ಎಂದು ಹೇಳಲಾಗುತ್ತಿದ್ದು, ರವಿ ಬಸೂÅರು ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. “ಸಂತೆಯಲ್ಲಿ ನಿಂತ ಕಬೀರ’ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದ ನವೀನ್‌, ಈ ಚಿತ್ರಕ್ಕೂ ಛಾಯಾಗ್ರಾಹಕರು.
-ಉದಯವಾಣಿ

Comments are closed.