ಮನೋರಂಜನೆ

ನಟಿ, ರಾಜಕಾರಣಿ ಭಾವನಾ ರಾಮಣ್ಣ

Pinterest LinkedIn Tumblr

crec20Bhavanacutಸಂದರ್ಶನ: ಅಮಿತ್ ಎಂ.ಎಸ್.
ನಟಿ, ರಾಜಕಾರಣಿಯಾಗಿ ಗುರ್ತಿಸಿಕೊಂಡಿರುವ ಭಾವನಾ ರಾಮಣ್ಣ ‘ನಿರುತ್ತರ’ ಚಿತ್ರದ ಮೂಲಕ ಸಿನಿಮಾ ನಿರ್ಮಾಣದಲ್ಲೂ ತೊಡಗಿಕೊಂಡಿದ್ದಾರೆ. ನಟಿ–ನಿರ್ಮಾಪಕಿಯಾಗಿ ತಾವು ನಡೆಸಿದ ಹುಡುಕಾಟದ ಕುರಿತು ‘ಚಂದನವನ’ದೊಂದಿಗೆ ಹಂಚಿಕೊಂಡ ಮಾತುಗಳ ಆಯ್ದ ಭಾಗ ಇಲ್ಲಿದೆ.
*ನೀವು ಹಾಗೂ ನಿಮ್ಮ ಸಹೋದರ ಅರವಿಂದ್ ಅವರು ‘ಹೋಮ್‌ ಟೌನ್‌ ಪ್ರೊಡಕ್ಷನ್‌’ ನಿರ್ಮಾಣ ಸಂಸ್ಥೆ ಪ್ರಾರಂಭಿಸಿ ತುಂಬಾ ಸಮಯವಾಯಿತು. ಸಿನಿಮಾ ನಿರ್ಮಾಣ ತಡವಾಗಿದ್ದು ಏಕೆ?
ಕಿರಿಯ ವಯಸ್ಸಿನ, ಅದರಲ್ಲಿಯೂ ಅಕ್ಕ–ತಮ್ಮ ಸೇರಿ ಈ ರೀತಿಯ ನಿರ್ಮಾಣ ಸಂಸ್ಥೆ ಮಾಡಿರುವ ನಿದರ್ಶನ ಇನ್ನೊಂದು ಇದ್ದಂತಿಲ್ಲ. ಅದಕ್ಕೀಗ ಏಳು ವರ್ಷ. ನಮಗೆ ಸಿನಿಮಾ ನಿರ್ಮಾಣಕ್ಕೆ ಅಗತ್ಯವಾದ ಅನುಭವ ಇರಲಿಲ್ಲ. ನಾವು ಜನರನ್ನು ತಲುಪಬೇಕಿದ್ದು ಕಲಾತ್ಮಕ ಮತ್ತು ಶಾಸ್ತ್ರೀಯ ಪ್ರಕಾರಗಳ ಮೂಲಕ. ನಮ್ಮಲ್ಲಿ ಶಾಸ್ತ್ರೀಯ ಪ್ರಕಾರ ಎಂದಾಗ ಯುವಜನತೆ ಸ್ವಲ್ಪ ಮೂಗು ಮುರಿಯುತ್ತಾರೆ.
ಅದಕ್ಕೆ ಸ್ವಲ್ಪ ಆಧುನಿಕ ಸ್ಪರ್ಶ ನೀಡಿದರೆ ಜನರನ್ನು ಸೆಳೆಯಲು ಸಾಧ್ಯ ಎಂದೆನಿಸಿತು. ಹೊಸ ಪ್ರಯೋಗಶೀಲ ಕಾರ್ಯಕ್ರಮಗಳನ್ನು ಆಯೋಜಿಸಿದೆವು. ಸೆಟ್‌, ಬೆಳಕು, ಸಂಗೀತ ಎಲ್ಲವುಗಳ ವಿನ್ಯಾಸವನ್ನೂ ನಾವೇ ಮಾಡತೊಡಗಿದೆವು. ನಮ್ಮ ಕಾರ್ಯಕ್ರಮಗಳಿಗೆ ಜನಮನ್ನಣೆ ದೊರಕಿದೆ. ನಾನು ಸೃಜನಶೀಲ ವಿಭಾಗವನ್ನು ನೋಡಿಕೊಂಡರೆ, ತಮ್ಮ ತಾಂತ್ರಿಕ ಮತ್ತು ವ್ಯಾವಹಾರಿಕ ಕೆಲಸಗಳನ್ನು ನೋಡಿಕೊಳ್ಳುತ್ತಾನೆ.
ಸುಧಾಕರ್ ಘಾಂಡೆ ಎಂಬ ಸಲಹೆಗಾರರು ಜತೆಗಿದ್ದಾರೆ. ಈ ಏಳು ವರ್ಷದಲ್ಲಿ ನಮಗೆ ನಮ್ಮ ಜವಾಬ್ದಾರಿಗಳ ಅರಿವಾಗಿದೆ. ನಮ್ಮ ನ್ಯೂನತೆ–ಸಾಮರ್ಥ್ಯ ಎರಡನ್ನೂ ಅರಿತುಕೊಂಡಿದ್ದೇವೆ. ಸಿನಿಮಾ ನಿರ್ಮಾಣ ಸಾಮರ್ಥ್ಯವಿದೆ ಎಂಬ ಆತ್ಮವಿಶ್ವಾಸ ಮೂಡಿದ ಮೇಲೆಯೇ ‘ನಿರುತ್ತರ’ಕ್ಕೆ ಕೈಹಾಕಿದ್ದು.
*‘ನಿರುತ್ತರ’ದಲ್ಲಿ ನಟಿ–ನಿರ್ಮಾಪಕಿಯಾಗಿ ಎರಡು ಹೊಣೆ ಹೇಗೆ ನಿಭಾಯಿಸಿದಿರಿ?
ಆರಂಭದ ಕೆಲವು ದಿನ ಕಷ್ಟವಾಯಿತು. ಕ್ಯಾರವಾನ್‌ನಲ್ಲಿ ಏಸಿ ಇಲ್ಲ ಎಂದರೆ, ಕುಡಿಯುವ ನೀರು ಬೇಕೆಂದಾಗ, ಲೊಕೇಷನ್ ಸಮಸ್ಯೆ ಎದುರಾದಾಗ, ಸಣ್ಣಪುಟ್ಟದ್ದಕ್ಕೂ ನಾನು ಉತ್ತರದಾಯಿ ಆಗಿರುತ್ತಿದ್ದೆ. ಅದೆಲ್ಲವನ್ನೂ ನಿರ್ವಹಿಸಬೇಕಿತ್ತು. ಕ್ರಮೇಣ ಅದನ್ನು ನಿಭಾಯಿಸುವುದನ್ನು ತಿಳಿದುಕೊಂಡೆ. ಆದರೆ ಎಲ್ಲವನ್ನೂ ನಿರ್ಮಾಪಕಿಯಾಗಿಯೇ ನೋಡಲು ಪ್ರಾರಂಭಿಸಿದ್ದರಿಂದ ನಟಿಸಲು ಕಷ್ಟವಾಗುತ್ತಿತ್ತು.
ಕ್ರಮೇಣ ಎಲ್ಲದಕ್ಕೂ ಹೊಂದಿಕೊಂಡೆ. ಹಿರಿಯ ಛಾಯಾಗ್ರಾಹಕ ರಾಮಚಂದ್ರ ಸರ್‌ ಅವರನ್ನು ಹೊರತುಪಡಿಸಿ ಉಳಿದೆಲ್ಲರೂ ಕಿರಿಯರೇ ಆಗಿದ್ದರಿಂದ ನಮ್ಮ ನಡುವೆ ಸಂವಹನ ಕಷ್ಟವಾಗಲಿಲ್ಲ.
*ಅಪೂರ್ವ ಕಾಸರವಳ್ಳಿ ಅವರಿಗೆ ಇದು ಮೊದಲ ಸಿನಿಮಾ. ಅವರು ನಿಮ್ಮ ಆಯ್ಕೆ ಆಗಿದ್ದು ಹೇಗೆ?
ಸಿನಿಮಾ ನಿರ್ಮಾಣ ಮಾಡುತ್ತಿದ್ದೇವೆ ಎಂಬ ಸುದ್ದಿ ಹರಡಿದಾಗ, ಕೆಲವರು ಅಪೂರ್ವ ಅವರ ಕಥೆ ಕೇಳಿ ಎಂದರು. ಆದರೆ ಅವರನ್ನು ಬಿಟ್ಟು ಅನೇಕ ನಿರ್ದೇಶಕರ ಕಥೆ ಕೇಳಿದೆವು. ಕೊನೆಗೆ ಕಥೆಗಾಗಿ ವಿಕ್ರಂ ಹತ್ವಾರ್‌ ಅವರನ್ನು ಸಂಪರ್ಕಿಸಿದೆವು. ಅದನ್ನು ನಿರ್ದೇಶಿಸಲು ಯಾರು ಸೂಕ್ತ ಎಂಬ ಪ್ರಶ್ನೆ ಬಂದಾಗ ಅಪೂರ್ವ ಹೊರತಾಗಿ ಬೇರೊಂದು ಹೆಸರು ಮನಸಲ್ಲಿ ಮೂಡಲೇ ಇಲ್ಲ.
ಪ್ರತಿ ನಿರ್ದೇಶಕನಿಗೂ ತನ್ನ ಮೊದಲ ಸಿನಿಮಾ ಎಂದಾಗ ಆತನದೇ ಕನಸಿನ ಕಥೆ ಇರುತ್ತದೆ. ಆದರೆ ಅಪೂರ್ವ ಅದರಾಚೆಗೆ ಹೋದರು. ಅವರಿಗೆ ಕಥೆ ಇಷ್ಟವಾಗಿತ್ತು. ಅವರು ದೇಶ ವಿದೇಶಗಳ ಸಿನಿಮಾಗಳನ್ನು ಅಧ್ಯಯನ ಮಾಡಿದವರು. ಸಿನಿಮಾ ಭಾಷೆಯ ಆಳವಾದ ಜ್ಞಾನ ಹೊಂದಿದವರು.
*ಕಥೆಯ ಆಯ್ಕೆ ವಿಚಾರದಲ್ಲಿ ಯಾವ ನಿಯಮವಿತ್ತು?
ನಾವು ಕಥೆ ಆರಿಸಿಕೊಂಡಿದ್ದಲ್ಲ. ಸಿನಿಮಾಕ್ಕೆ ಆಗುವ ಕಥೆಯಲ್ಲಿ ಇಂತಹ ಅಂಶಗಳು ಇರಬೇಕು ಎಂಬುದನ್ನು ಕಥೆಗಾರ ವಿಕ್ರಂ ಹತ್ವಾರ್ ಅವರಿಗೆ ಹೇಳಿ ಅವರಿಂದ ಬರೆಸಿದ್ದು. ಹತ್ವಾರ್ ಅವರಿಗೆ ಗ್ರಾಮೀಣ ಮತ್ತು ನಗರದ ಬದುಕಿನ ಒಳನೋಟ ಚೆನ್ನಾಗಿದೆ. ನಾವು ಬಯಸಿದ್ದು ಅದೇ ಆಗಿತ್ತು.
*ಕಮರ್ಷಿಯಲ್‌ ಅಂಶಗಳಿಗಿಂತ ವಿಭಿನ್ನವಾಗಿರುವ ಸಿನಿಮಾಕ್ಕೆ ಹಣ ಹೂಡಲು ಹೆಚ್ಚಿನ ಧೈರ್ಯ ಬೇಕಲ್ಲವೇ?
ಜನರು ಸಿನಿಮಾವನ್ನು ಹೇಗೆ ಸ್ವೀಕರಿಸುತ್ತಾರೋ ಇಲ್ಲವೋ ಹಣ ಹಿಂದಕ್ಕೆ ಪಡೆಯುತ್ತೇವೋ ಇಲ್ಲವೋ ಗೊತ್ತಿಲ್ಲ. ನಮಗೆ ಸರಿ ಎನಿಸಿದ್ದನ್ನು ಮಾಡಬೇಕು ಎನ್ನುವ ನೀತಿಯನ್ನು ಇಲ್ಲಿಯೂ ಅನುಸರಿಸಿದ್ದೇವೆ. ಒಳ್ಳೆಯ ಸಿನಿಮಾ ಆಗಿರಬೇಕು, ಗುಣಮಟ್ಟ ಚೆನ್ನಾಗಿರಬೇಕು ಎಂದು ಮಾಡಿದ್ದೇವೆ.
ಮೊದಲ ಬಾರಿಗೆ ಕನ್ನಡದಲ್ಲಿ ಶಬ್ದವಿನ್ಯಾಸವನ್ನು ರಸೂಲ್ ಪೂಕುಟ್ಟಿ ಅವರಿಂದ ಮಾಡಿಸಿದ್ದೇವೆ. ರಾಮಚಂದ್ರ ಸರ್‌ ದೇಶದ ಅತ್ಯುತ್ತಮ ಛಾಯಾಗ್ರಾಹಕರಲ್ಲಿ ಒಬ್ಬರು. ಇನ್ನು ನೀಲಾದ್ರಿ ಕುಮಾರ್ ಅವರ ಸಂಗೀತವೇ ಬೇಕು ಎಂಬ ಅಪೇಕ್ಷೆ ಇತ್ತು. ಈ ಅಂಶಗಳೆಲ್ಲೂ ‘ನಿರುತ್ತರ’ದ ಧನಾತ್ಮಕ ಅಂಶಗಳು.
*ಕಲಾವಿದರ ಆಯ್ಕೆಯೂ ಸವಾಲಿನದ್ದೇ ಆಗಿರಬೇಕು?
ನಮಗೆ ಪ್ರಮುಖವಾದ ನಾಲ್ಕು ಪಾತ್ರಗಳಿಗೆ ಕಲಾವಿದರು ಬೇಕಿದ್ದರು. ಕನ್ನಡದ ಉಚ್ಚಾರಣೆ ಮತ್ತು ಒಂದು ನಿರ್ದಿಷ್ಟ ವಯಸ್ಸಿನ ವ್ಯಕ್ತಿಯ ಪಾತ್ರಕ್ಕೆ ಕಿರಣ್ ಶ್ರೀನಿವಾಸ್‌ ಸೂಕ್ತ ಎನಿಸಿತು. ಮತ್ತೊಂದು ಪಾತ್ರದಲ್ಲಿ ರಾಹುಲ್‌ ಬೋಸ್‌ ನಟಿಸಿದ್ದಾರೆ, ಅವರೇ ಡಬ್ಬಿಂಗ್ ಮಾಡಿದ್ದಾರೆ. ಇನ್ನೊಂದು ಪಾತ್ರವನ್ನು ವಿಕ್ರಂ ಹತ್ವಾರ್‌ ನನ್ನನ್ನು ಮನಸಿನಲ್ಲಿ ಇಟ್ಟುಕೊಂಡೇ ಹೊಸೆದಿದ್ದರು. ಐಂದ್ರಿತಾ ರೇ ಮಾಡಿರುವ ಪಾತ್ರಕ್ಕೆ ಹೊಸಬರನ್ನು ಹುಡುಕಿದೆವು.
ಸಾಕಷ್ಟು ಆಡಿಷನ್ ಮಾಡಿದೆವು. ಆದರೆ ಯಾರೂ ಸರಿ ಎನಿಸಲಿಲ್ಲ. ಯಂಗ್‌ ಮತ್ತು ಎನರ್ಜೆಟಿಕ್ ಆಗಿರಬೇಕಿತ್ತು. ಸಾಮಾನ್ಯ ತುಂಟ ಹುಡುಗಿಯಾಗಿ ಹಾಗೂ ಅವಶ್ಯಕತೆ ಇದ್ದಾಗ ಪ್ರಬುದ್ಧತೆ ಇರುವಳಂತೆ ಕಾಣಿಸಬೇಕು. ಅದಕ್ಕೆ ಐಂದ್ರಿತಾಗಿಂತ ಉತ್ತಮ ಆಯ್ಕೆ ಇರಲಿಲ್ಲ.
*ಬಿಡುಗಡೆ ಯಾವಾಗ?
ಜೂನ್ ಕೊನೆಯಲ್ಲಿ ಬಿಡುಗಡೆ ಮಾಡಬೇಕು ಎಂದುಕೊಂಡಿದ್ದೇವೆ. ನನಗೆ ಕಲೆಯ ನಿಟ್ಟಿನಿಂದ ನೋಡುವುದು ಚೆನ್ನಾಗಿ ತಿಳಿದಿದೆ. ಆದರೆ ವ್ಯಾವಹಾರಿಕ ದೃಷ್ಟಿ ಅಷ್ಟಾಗಿ ಇಲ್ಲ. ‘ತಿಥಿ’ಯಂತಹ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿರುವುದು ನಮ್ಮ ಪಾಲಿನ ಆಶಾಕಿರಣ.
*ನಿರುತ್ತರದಲ್ಲಿ ಜನರಿಗೆ ಇಷ್ಟವಾಗುವ ಅಂಶಗಳೇನಿವೆ?
ಟ್ರೇಲರ್‌ ನೋಡಿದವರು ಇತರೆ ಸಿನಿಮಾಗಳಿಗಿಂತ ವಿಭಿನ್ನ ಎಂದು ಮೆಚ್ಚಿದ್ದಾರೆ. ಕನ್ನಡ ಬಾರದವರೂ ಹಾಡುಗಳನ್ನು ಇಷ್ಟಪಟ್ಟಿದ್ದಾರೆ. ವಿಡಿಯೊವಾಗಿ ನೋಡಿದಾಗ ದೃಶ್ಯ ಆಲ್ಬಂನಂತೆ, ಆಡಿಯೊ ಮಾತ್ರ ಕೇಳಿದಾಗ ಸಿನಿಮಾದಿಂದ ಹೊರತಾದ ಪ್ರಯೋಗದಂತೆ ಅನಿಸುವುದು ಸಂಗೀತದ ಶಕ್ತಿ. ಹತ್ವಾರ್ ಅವರ ಕಥೆ ಸಾಹಿತ್ಯಿಕವಾಗಿದೆ. ಅದಕ್ಕೆ ಅಪೂರ್ವ ಫಿಲ್ಮಿ ಭಾಷೆ ನೀಡಿದ್ದಾರೆ. ಬಹಳ ಕಾಲದ ಬಳಿಕ ಕನ್ನಡ ಸಿನಿಮಾದಲ್ಲಿ ಶಾಸ್ತ್ರೀಯ ಸಂಗೀತದ ಬಳಕೆಯಾಗಿದೆ.
*ಮುಂದಿನ ಸಿನಿಮಾ?
ಮುಂದಿನ ಸಿನಿಮಾದ ಚಿತ್ರಕಥೆ ತಯಾರಾಗಿದೆ. ಈ ಮುಂಚೆಯೇ ಶುರುಮಾಡೋಣ ಎಂದುಕೊಂಡಿದ್ದೆವು. ಆದರೆ ‘ನಿರುತ್ತರ’ಕ್ಕೆ ದೊರಕುವ ಪ್ರತಿಕ್ರಿಯೆ ನೋಡೋಣ ಎಂದು ಕಾದಿದ್ದೇವೆ. ಅದರ ಆಧಾರದಲ್ಲಿ ಮುಂದೆ ಯಾವ ರೀತಿಯ ಸಿನಿಮಾ ಮಾಡಬಹುದು ಎಂಬುದನ್ನು ನಿರ್ಧರಿಸಬಹುದು. ಇದು ನಿರ್ದೇಶಕರದೇ ಕಥೆ. ಅವರ ಅನೇಕ ಬಳಿ ಕಥೆಗಳಿದ್ದವು. ಅದರಲ್ಲೇ ಒಂದರ ಕಥೆಯನ್ನು ಬೇರೆ ರೀತಿ ಪರಿವರ್ತಿಸಿದೆವು. ಇದು ಡ್ರಾಮ್‌–ಥ್ರಿಲ್ಲರ್‌ ಕಥೆ.
*ನಟಿಯಾಗಿ ಭಾವನಾ ತೆರೆ ಮೇಲೆ ಕಾಣುತ್ತಿಲ್ಲವಲ್ಲ?
ನಿಜ. ಸಿನಿಮಾಗಳ ಸಂಖ್ಯೆ ಕಡಿಮೆಯಾಗಿದೆ. ಇದಕ್ಕೆ ಕೆಲವು ಕಾರಣಗಳಿವೆ. ಮೊದಲನೆಯದು ‘ಅವಾರ್ಡ್‌ ಸಿನಿಮಾ’ ಎಂಬ ಪೇಲವ ಹೇಳಿಕೆ ಇಟ್ಟುಕೊಂಡು ಬರುವವರೇ ಹೆಚ್ಚು. ಒಬ್ಬರು ಎಚ್‌ಐವಿ ಪಾಸಿಟಿವ್‌ ಪೀಡಿತರ ಬಗ್ಗೆ ಸಿನಿಮಾ ಮಾಡುತ್ತೇನೆ ಎಂದರು. ಆ ಪಾತ್ರಗಳು ಏಕೆ ಹೀಗಿವೆ ಎಂದು ಕೇಳಿದರೆ ಅವರ ಬಳಿ ಉತ್ತರವೇ ಇಲ್ಲ. ಇನ್ನೊಬ್ಬರು ಕಥೆ ಹೇಳುವ ಬದಲು ಸಂಭಾಷಣೆಯನ್ನು ಹೇಳತೊಡಗಿದ್ದರು.
ಮತ್ತೊಬ್ಬರು ಒಂದು ಸನ್ನಿವೇಶದಲ್ಲಿ ಬರಹಗಾರ್ತಿಯಾಗಿ ಬರುತ್ತೀರಿ, ಇನ್ನೊಂದರಲ್ಲಿ ನಿರ್ದೇಶಕಿಯಾಗಿ ಬರುತ್ತೀರಿ ಎಂದೆಲ್ಲಾ ಹೇಳಿದರು. ನನ್ನ ಪಾತ್ರವೇನು ಎಂದು ಕೇಳಿದೆ. ಅದು ಅವರಿಗೆ ಗೊತ್ತೇ ಇರಲಿಲ್ಲ! ಪ್ರಶಸ್ತಿ, ಸಬ್ಸಿಡಿ ಸಿಗುತ್ತವೆ ಎಂದು ಬರುವವರು ಹೆಚ್ಚುತ್ತಿದ್ದಾರೆ.
ಇನ್ನು ಕೆಲವರು ಉತ್ತಮ ಪ್ಯಾಷನ್‌ ಹೊಂದಿರುವವರೂ ಇದ್ದಾರೆ. ಒಳ್ಳೆಯ ಕಥೆಯೂ ಇರುತ್ತದೆ. ಆದರೆ ಅವರಿಗೆ ಸರಿಯಾದ ನಿರ್ಮಾಪಕರು ಸಿಗುವುದಿಲ್ಲ. ನಿರ್ಮಾಪಕರೊಂದಿಗೆ ಹೊಂದಾಣಿಕೆ ಆಗದ ಕಾರಣ ಕೆಲವು ಸಿನಿಮಾಗಳನ್ನು ಮಾಡಲಿಲ್ಲ.
ಈಗ ಬರುವ ಹೊಸ ನಿರ್ದೇಶಕರಲ್ಲಿ ಉತ್ಸಾಹವಿದೆ. ಆದರೆ ಸಿನಿಮಾ ಶಾಲೆಯ ಪಾಠ ಸಿಗುತ್ತಿಲ್ಲ. ಅವರು ಇಂಟರ್ನೆಟ್‌ನಲ್ಲಿ ಸಿನಿಮಾ ನೋಡುತ್ತಾರೆ.
ಅದ್ಭುತ ಎನಿಸುವ ಶಾಟ್‌ಗಳನ್ನು ತೆಗೆಯುತ್ತಾರೆ. ಆದರೆ ಕಥೆಯ ಬಗ್ಗೆ ಗಮನ ಹರಿಸುವುದಿಲ್ಲ. ಅವರಿಗೆ ಹಿರಿಯರ ಜತೆ ಕೆಲಸ ಮಾಡಲು ಅವಕಾಶ ಸಿಗದಿರುವುದು ಇದಕ್ಕೆ ಕಾರಣ.

Comments are closed.