ನಿಮ್ಮ ಮನೆಯಲೊಂದು ಬೆಕ್ಕು ಇದ್ದರೆ ಬೆಕ್ಕಿನ ಪ್ರೀತಿ ಎಂಥದ್ದು ಅಂತ ಗೊತ್ತಿರುತ್ತದೆ. ಸ್ವಲ್ಪ ಪ್ರೀತಿ ತೋರಿಸಿದರೂ ಸಾಕು ಬೆಕ್ಕು ಹತ್ತಿರ ಬರುತ್ತದೆ. ಆಟ ಆಡತೊಡಗುತ್ತದೆ. ನೀವು ಸುಮ್ಮನೆ ಕೂತಿದ್ದರೆ ನಿಮ್ಮ ತೊಡೆಯೇರಿ ಕೂತು ಮಲಗಿಬಿಡುತ್ತದೆ. ನಿದ್ದೆಯಲ್ಲಿದ್ದರೆ ಯಾವುದೋ ಮಾಯದಲ್ಲಿ ನಿಮ್ಮ ಪಕ್ಕಕ್ಕೆ ಬಂದು ಮಲಗುವುದರಲ್ಲಿ ಬೆಕ್ಕು ನಿಸ್ಸೀಮ. ಹಾಗಾಗಿಯೇ ಬಹುತೇಕರಿಗೆ ಬೆಕ್ಕು ಅಂದ್ರೆ ಪ್ರಾಣ. ವಿಪರ್ಯಾಸವೆಂದರೆ ಎಷ್ಟೇ ಇಷ್ಟವಿದ್ದರೂ ಮಹಾನಗರಕ್ಕೆ ಕಾಲಿಟ್ಟ ಮೇಲೆ ಕೆಲವನ್ನು ಮರೆತು ಬಿಡಬೇಕಾಗುತ್ತದೆ. ಬೆಕ್ಕು ಕೂಡ ಲೈಫಿಂದ ದೂರ ಹೋಗುವುದಿದೆ. ಆದರೂ ಬೆಕ್ಕುಗಳ ಜೊತೆ ಸಮಯ ಕಳೆಯಬೇಕು ಅನ್ನೋ ಆಸೆ ಇರೋರಿಗೆ ಒಂದು ಇಂಟರೆಸ್ಟಿಂಗ್ ತಾಣವಿದೆ. ಅದರ ಹೆಸರು ದಿ ಕ್ಯಾಟ್ ಸ್ಟುಡಿಯೋ.
ಏನಿದು ಕ್ಯಾಟ್ ಸ್ಟುಡಿಯೋ?
ಬೆಕ್ಕುಗಳಿಗಾಗಿಯೇ ಇರುವ ಒಂದು ಮನೆ ಈ ಕ್ಯಾಟ್ ಸ್ಟುಡಿಯೋ. ಇಲ್ಲಿ ಹತ್ತಾರು ಬೆಕ್ಕುಗಳಿರುತ್ತವೆ. ಬೆಕ್ಕುಗಳಿಗೆ ಇಷ್ಟವಾಗುವ ರೀತಿಯೇ ಈ ಬೆಕ್ಕು ಮನೆಯನ್ನು ಸಿದ್ಧಗೊಳಿಸಲಾಗಿದೆ. ಯಾರಿಗೆ ಬೆಕ್ಕು ಇಷ್ಟವಿದೆಯೋ ಅವರೆಲ್ಲಾ ಇಲ್ಲಿಗೆ ಬರಬಹುದು. ಬೆಕ್ಕುಗಳ ಜೊತೆ ಆಟಾಡಬೇಕು ಅಂತ ಆಸೆಯಾದರೆ ನೇರ ಇಲ್ಲಿಗೆ ಬಂದು ಆಟಾಡುತ್ತಾ ಕೂರಬಹುದು. ಸುಮ್ಮನೆ ಕೂತರೂ ಸಾಕು. ಬೆಕ್ಕುಗಳು ಆಟಾಡುತ್ತಾ, ಜಗಳಾಡುತ್ತಾ ಇರುವುದನ್ನು ನೋಡಿ ಖುಷಿ ಪಡಬಹುದು.
ಮರಿ ಬೆಕ್ಕು, ಹುಲಿ ಬಣ್ಣದ ಬೆಕ್ಕು, ಉದ್ದ ಮೀಸೆಯ ಬೆಕ್ಕು, ಸಣ್ಣ ಬಿಳಿ ಬೆಕ್ಕು, ಜಂಭದ ಬೆಕ್ಕು, ಮುದ್ದಿನ ಬೆಕ್ಕು, ಸೊಕ್ಕಿನ ಬೆಕ್ಕು, ಪಾಪದ ಬೆಕ್ಕು ಹೀಗೆ ಎಲ್ಲಾ ಬೆಕ್ಕುಗಳು ಇಲ್ಲಿರುತ್ತವೆ. ಸ್ವತ್ಛಂದವಾಗಿ ಓಡಾಡಿಕೊಂಡಿರುವ ಈ ಬೆಕ್ಕು ತನಗೆ ಬೇಕು ಅಂತನ್ನಿಸಿದರೆ ನೀವು ಬೆಕ್ಕನ್ನು ದತ್ತು ಪಡೆಯಬಹುದು. ದತ್ತು ಪಡೆಯಲಿಕ್ಕೆ ಮನಸ್ಸಿಲ್ಲ ಕೇವಲ ಬೆಕ್ಕಿನ ಜೊತೆ ಆಟ ಆಡಿ ಹೋದರೆ ಸಾಕು ಅಂತಂದುಕೊಳ್ಳುವವರು ಬಂದು ಆಟಾಡಿಕೊಂಡು ಹೋಗಬಹುದು.
ಫೀಸು
ಕ್ಯಾಟ್ ಸ್ಟುಡಿಯೋಗೆ ಬಂದು ಬೆಕ್ಕುಗಳ ಜೊತೆ ಸಮಯ ಕಳೆಯುವವರು ಗಂಟೆ ಇಂತಿಷ್ಟು ಶುಲ್ಕ ಕಟ್ಟಬೇಕಾಗುತ್ತದೆ.
ಒಂದು ಗಂಟೆಗೆ- ರೂ.200
15 ನಿಮಿಷ ಹೆಚ್ಚಾದರೆ- ರೂ.25 ಜಾಸ್ತಿ
30 ನಿಮಿಷ ಹೆಚ್ಚಾದರೆ- ರೂ.50 ಜಾಸ್ತಿ
ಪೂರ್ತಿ ದಿನಕ್ಕೆ- ರೂ.750
ಎಲ್ಲಿ- 485, 8ನೇ ಅಡ್ಡರಸ್ತೆ, ಜೀವನ್ ಭೀಮಾ ನಗರ ಮುಖ್ಯರಸ್ತೆ, ಎಚ್‌ಎಎಲ್ 3 ಸ್ಟೇಜ್, ಸೆಕ್ಟರ್ 11
ದೂ- 080 25213048
ವೆಬ್‌ಸೈಟ್- www.thecatstudio.in
ಫೇಸ್‌ಬುಕ್: https://www.facebook.com/furpurrindia/timeline
-ಉದಯವಾಣಿ
Comments are closed.