ಮನೋರಂಜನೆ

ಚಿತ್ರ ಅಕಿರ: ಮಂದ ಬೆಳಕಿನಲ್ಲಿ ದೀರ್ಘ ಪಯಣ

Pinterest LinkedIn Tumblr

yyyyyyyyyyyಆನಂದತೀರ್ಥ ಪ್ಯಾಟಿ
ಚಿತ್ರ: ಅಕಿರ
ತಾರಾಗಣ: ಅನೀಶ್ ತೇಜೇಶ್ವರ್, ಅದಿತಿ ರಾವ್, ಕೃಷಿ ತಾಪಂಡ, ಪ್ರಿಯಾಂಕ
ನಿರ್ದೇಶನ: ನವೀನ್ ರೆಡ್ಡಿ ಜಿ.
ನಿರ್ಮಾಪಕರು: ಎಸ್.ಎಸ್.ರೆಡ್ಡಿ, ಚೇತನ್, ಶ್ರೀಕಾಂತ ಪ್ರಸನ್ನ

ಕನಸುಗಳ ರೆಕ್ಕೆಯೊಂದಿಗೆ ಹಾರಾಡುವ ಹರೆಯದ ಹುಡುಗನಿಗೆ ಅಪ್ಪನ ಜವಾಬ್ದಾರಿ ಮಾತುಗಳು ರುಚಿಸುತ್ತವೆಯೇ? ತನ್ನ ಹಿತವಚನವನ್ನು ನಿರ್ಲಕ್ಷ್ಯ ಮಾಡಿದಾಗ ಮಗನನ್ನು ಮನೆಯಿಂದ ಹೊರಹಾಕುವ ತಂದೆ, ಆತನಿಗೊಂದು ಪಾಠ ಕಲಿಸಲು ನಿರ್ಧರಿಸುತ್ತಾನೆ.
ಒಂದೆಡೆ ನೆಲೆ ಇಲ್ಲದೇ ಅಂಡಲೆಯುವ ಅಖಿಲ್, ಮತ್ತೊಂದೆಡೆ ತನ್ನ ಪ್ರೇಮ ವೈಫಲ್ಯಗಳನ್ನು ಮರೆಯಲು ಯತ್ನಿಸುತ್ತಾನೆ. ಕೊನೆಗೆ, ‘ಎಲ್ಲ ಬಗೆಯ ಕಷ್ಟಗಳನ್ನು ಸಹಿಸಿಕೊಂಡು ಯಶಸ್ಸಿನತ್ತ ನಡೆಯುವವನೇ ಅಕಿರ’ ಎಂಬ ಅಮ್ಮನ ಮಾತನ್ನು ನಿಜವಾಗಿಸುತ್ತಾನೆ. ಅಂದಹಾಗೆ, ಅಕಿರ ಅಂದರೆ ಜಪಾನಿ ಭಾಷೆಯಲ್ಲಿ ‘ಕತ್ತಲಿನಿಂದ ಬೆಳಕಿನೆಡೆಗೆ ಸಾಗುವವನು’ ಎಂಬರ್ಥವೂ ಇದೆ.
ಪ್ರೇಮ ಹಾಗೂ ಯಶಸ್ಸು ಪಡೆಯಲು ಪಡಬೇಕಾದ ಕಷ್ಟವನ್ನು ಒಂದೇ ನೆಲೆಯಲ್ಲಿ ತೋರಿಸಲು ಮುಂದಾದ ನಿರ್ದೇಶಕ ನವೀನ್ ರೆಡ್ಡಿ ಪ್ರಯತ್ನ ತಕ್ಕಮಟ್ಟಿಗೆ ಸಫಲವಾಗಿದೆ. ಆದರೆ ಸಿನಿಮಾವನ್ನು ಸಂಪೂರ್ಣ ಮನರಂಜನೆಯ ಚೌಕಟ್ಟಿನಲ್ಲಿ ಜೋಡಿಸಲು ಅವರು ಆಯ್ದುಕೊಂಡ ಸುದೀರ್ಘ ದಾರಿ ಪ್ರೇಕ್ಷಕರಿಗೆ ದಣಿವನ್ನುಂಟು ಮಾಡುತ್ತದೆ.
ದೊಡ್ಡ ಉದ್ದಿಮೆದಾರ ರಾಜ್‌ (ಅವಿನಾಶ್) ಮಗ ಅಖಿಲ್ (ಅನೀಶ್ ತೇಜೇಶ್ವರ್), ಯಾವತ್ತೂ ಅಪ್ಪನ ಉದ್ಯಮ ವಹಿಸಿಕೊಳ್ಳುವತ್ತ ಗಮನ ಹರಿಸಿದವನೇ ಅಲ್ಲ. ಸಾಕಷ್ಟು ವಿದ್ಯಾಭ್ಯಾಸ ಮಾಡಿದ ಬಳಿಕವೂ ತನ್ನ ವ್ಯಾಪಾರ ವಹಿವಾಟು ಉಸ್ತುವಾರಿ ನೋಡಿಕೊಳ್ಳಲು ಮುಂದಾಗದ ಅಖಿಲ್‌ನನ್ನು ರಾಜ್ ಪದೇ ಪದೇ ನಿಂದಿಸುತ್ತಾನೆ. ಆದರೂ ಆತ ಕೇಳದೇ ಹೋದಾಗ ಮನೆಯಿಂದ ಹೊರಹಾಕುತ್ತಾನೆ.
ಈ ಮಧ್ಯೆ ಸಾಹಿತ್ಯ (ಅದಿತಿ) ಎಂಬಾಕೆಯ ಜತೆ ಪ್ರೀತಿ ಮೂಡಿರುತ್ತದೆ. ತನ್ನ ಅನುಮಾನಗಳಿಂದಾಗಿ ಅದಿತಿ ದೂರವಾಗುತ್ತಾಳೆ. ಕಂಗಾಲಾದ ಆತನಿಗೆ ಲಾವಣ್ಯ (ಕೃಷಿ ತಾಪಂಡ) ಆಸರೆ ನೀಡುತ್ತಾಳೆ. ಕೊನೆಗೆ ಅನಿವಾರ್ಯ ಕಾರಣಗಳಿಂದ ಆಕೆಯಿಂದಲೂ ದೂರವಾಗುತ್ತಾನೆ. ಇಬ್ಬರಿಂದಲೂ ಬೇರ್ಪಟ್ಟು ಸಂಕಟಪಡುವ ಅಖಿಲ್, ಕೊನೆಗೆ ಅಪ್ಪ ಹೇಳಿದ ಮಾರ್ಗದಲ್ಲಿ ಸಾಗುತ್ತಾನೆ; ಕಷ್ಟಪಟ್ಟು ಕೆಲಸ ಮಾಡಿ ಉದ್ಯಮದಲ್ಲಿ ಖ್ಯಾತಿ ಪಡೆಯುತ್ತಾನೆ.
ಮೇಲ್ನೋಟಕ್ಕೆ ಇದೊಂದು ತ್ರಿಕೋನ ಪ್ರೇಮಕಥೆ ಎಂಬಂತೆ ಭಾಸವಾದರೂ ಅದನ್ನು ‘ವಿಫಲಪ್ರೇಮ ಕಥೆ’ ಎಂದು ಹೇಳಿದರೆ ಸರಿಯಾದೀತೇನೋ! ಪ್ರೇಮಿಗಳು ಬೇರೆಯಾಗುವುದಕ್ಕೆ ಹೆಚ್ಚೇನೂ ಕಾರಣಗಳು ಬೇಕಿಲ್ಲ. ತಪ್ಪು ಕಲ್ಪನೆ, ಸಿಟ್ಟು, ಕೋಪದ ಜತೆಗೆ ಕ್ಷುಲ್ಲಕ ಕಾರಣಗಳು ಮೂರು ಜನರನ್ನು ಮೂರು ದಿಕ್ಕಿಗೆ ಕಳಿಸುತ್ತವೆ. ತಮ್ಮ ತಪ್ಪು ಏನೆಂಬುದು ಮನವರಿಕೆಯಾದಾಗ ಇನ್ನೇನೋ ಘಟಿಸಿಬಿಟ್ಟಿರುತ್ತದೆ. ಇದರಿಂದಾಗಿ ಮೂವರು ತಮ್ಮ ಬದುಕನ್ನು ತಮ್ಮ ಪಾಡಿಗೆ ಕಟ್ಟಿಕೊಂಡು ಮುಂದಕ್ಕೆ ಸಾಗುತ್ತಾರೆ. ಆ ಮಟ್ಟಿಗೆ ಇದು ಗಾಂಧಿನಗರದ ಸಿದ್ಧಸೂತ್ರಗಳನ್ನು ಮುರಿದುಕಟ್ಟಿರುವ ಸಿನಿಮಾ!
ನಾರ್ವೆಯಲ್ಲಿ ಚಿತ್ರೀಕರಣ ನಡೆಸಿದ ಮೊದಲ ಕನ್ನಡದ ಸಿನಿಮಾ ಎಂದು ಪ್ರಚಾರ ಮಾಡಲಾಗಿತ್ತು; ಆದರೆ ಅಲ್ಲಿನ ರಮ್ಯ ತಾಣಗಳನ್ನು ತೋರಿಸಲು ಛಾಯಾಗ್ರಾಹಕ ಯೋಗಿ ಅವರಿಗೆ ಸಾಧ್ಯವಾಗಿಲ್ಲ. ಹಾಡುಗಳಿಗೆ ಕೊಟ್ಟಿರುವ ಸಂಗೀತದ (ಅಜನೀಶ್ ಲೋಕನಾಥ್) ಮಧ್ಯೆ ಸಾಲುಗಳು ನಾಪತ್ತೆಯಾಗಿವೆ. ಹಲವು ಭಾವನೆಗಳನ್ನು ಸಮರ್ಥವಾಗಿ ಅಭಿವ್ಯಕ್ತಿಸುವ ಅನೀಶ್, ಸಾಹಸ ದೃಶ್ಯಗಳಿಗೂ ಸೈ. ನಾಯಕಿಯರಾದ ಕೃಷಿ ತಾಪಂಡ ಹಾಗೂ ಅದಿತಿ ಅವರಿಗೆ ಸಿಕ್ಕ ಪ್ರಾಮುಖ್ಯ ಕಡಿಮೆ. ಪೋಷಕ ಪಾತ್ರಗಳಲ್ಲಿ ರಂಗಾಯಣ ರಘು, ಅವಿನಾಶ್ ಗಮನ ಸೆಳೆಯುತ್ತಾರೆ. ಕಾಮಿಡಿ ಮಾಡಲೆಂದೇ ಬುಲೆಟ್ ಪ್ರಕಾಶ್‌ಗೆ ಒಂದಷ್ಟು ಸನ್ನಿವೇಶ ಕೊಡಲಾಗಿದ್ದರೂ ಅವೆಲ್ಲ ಪೇಲವವಾಗಿವೆ.
ಉದ್ಯಮಕ್ಕೆ ಬಂದು ಹಣ–ಹೆಸರು ಗಳಿಸುವಂತೆ ಅಪ್ಪ ಮಾಡುವ ಸಲಹೆಗೆ ಅಖಿಲ್ ಉದಾಸೀನ ತೋರುತ್ತಾನೆ. ಒಂದು ವೇಳೆ ಆತ ಆ ಮಾತನ್ನು ಮೊದಲೇ ಪಾಲಿಸಿದ್ದರೆ ಸಾಹಿತ್ಯ ಹಾಗೂ ಲಾವಣ್ಯ ಜತೆಗಿನ ಎರಡು ವಿಫಲ ಪ್ರೇಮ ಪ್ರಕರಣಗಳಿಗೆ ಅವಕಾಶವೇ ಇರುತ್ತಿರಲಿಲ್ಲ! ‘ಕಷ್ಟಗಳನ್ನು ಸಹಿಸಿಕೊಂಡು ಯಶಸ್ಸಿನೆಡೆಗೆ ಸಾಗುವವನು ಅಕಿರ’ ಎಂಬ ತಾಯಿಯ ಮಾತನ್ನು ಪಾಲಿಸಲು ಹಲವು ಘಟನೆಗಳು ಮತ್ತೊಂದಷ್ಟು ತಿರುವುಗಳನ್ನು ನಿರ್ದೇಶಕರು ಕಷ್ಟಪಟ್ಟು ಹೆಣೆದಿದ್ದಾರೆ. ಅಚ್ಚುಕಟ್ಟಾದ ಕಥೆಯನ್ನು ದಡಕ್ಕೆ ಮುಟ್ಟಿಸಲು ಪ್ರಯಾಸಪಟ್ಟಿರುವ ನಿರ್ದೇಶಕರೇ ಒಂದರ್ಥದಲ್ಲಿ ‘ಅಕಿರ’ ಇದ್ದಂತೆ!

Write A Comment