ಎಚ್ ಜಿ ದತ್ತಾತ್ರೇಯ ಉರುಫ್ ದತ್ತಣ್ಣ ಸದ್ದಿಲ್ಲದೇ ಮುಕ್ಕಾಲು ಶತಕ ಮುಗಿಸಿದ್ದಾರೆ. ಮೊನ್ನೆ ಮೊನ್ನೆ ಅವರ 75ನೇ ಹುಟ್ಟುಹಬ್ಬವೂ ನಡೆದುಹೋಗಿದೆ. ಹೀರೋಗಳ ಹುಟ್ಟುಹಬ್ಬವಾದರೆ ನಿರ್ಮಾಪಕರು ಜಾಹೀರಾತು ಕೊಟ್ಟು, ಅಭಿಮಾನಿಗಳು ಕೇಕ್ ಕತ್ತರಿಸಿ ಸಂಭ್ರಮಿಸುತ್ತಾರೆ.
ಆದರೆ ದತ್ತಣ್ಣ ಅವರ ಹುಟ್ಟುಹಬ್ಬವನ್ನು ಆಚರಿಸುವವರು ಯಾರು? ಹಾಗೇನೂ ಯೋಚಿಸಬೇಕಾಗಿಲ್ಲ. ದತ್ತಣ್ಣ ಅವರಿಗೆ ಅವರದೇ ಆದ ಅಭಿಮಾನಿ ಬಳಗವಿದೆ. ಈಗಾಗಲೇ ಆ ಬಳಗ ದತ್ತಣ್ಣ ಅವರ ಹುಟ್ಟುಹಬ್ಬವನ್ನು ಐದು ಸಲ ಆಚರಿಸಿದೆ.
ವರ್ಷಪೂರ್ತಿ ದತ್ತಣ್ಣ ಜಯಂತಿಯನ್ನು ಆಚರಿಸುವುದಕ್ಕೂ ಅವರ ಅಭಿಮಾನಿ ಬಳಗ, ಅವರ ಅಭಿನಂದನಾ ಸಮಿತಿ ತೀರ್ಮಾನಿಸಿದೆ. ದತ್ತಣ್ಣ ಅವರ ಎಪ್ಪತ್ತೈದು ವರ್ಷದ ಸಾಧನೆಗೆ ಅವರಿಗೆ ಅಭಿನಂದನೆ ಕಾರ್ಯಕ್ರಮವೂ ಇಷ್ಟರಲ್ಲೇ ನಡೆಯಲಿದೆ. ದತ್ತಣ್ಣ ಅವರ ಹುಟ್ಟುಹಬ್ಬವನ್ನು ಮೊನ್ನೆ ಸೋಮವಾರ, ಜಯಮಾಲಾ ಮತ್ತು ಎಚ್ ಎಂ ರಾಮಚಂದ್ರ ಸದಾಶಿವನಗರದಲ್ಲಿ ಆಚರಿಸಿದರು. ಚೆಂದದ ಕೇಕ್ ತಿನ್ನಿಸಿ, ದತ್ತಣ್ಣ ಅವರ ಜೊತೆ ನಾಲ್ಕೈದು ಗಂಟೆಗಳನ್ನು ಕಳೆಯುವ ಮೂಲಕ ಅಖಂಡ ಬ್ರಹ್ಮಚಾರಿ ದತ್ತಣ್ಣ ಅವರ ಕುರಿತ ಪ್ರೀತಿಯನ್ನು ಗೆಳೆಯರು ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ನಿರ್ದೇಶಕ ಶೇಷಾದ್ರಿ, ಲಿಂಗದೇವರು, ನಟ ಶಶಿಕುಮಾರ್ ಇದ್ದರು. ದತ್ತಣ್ಣ ಅವರ ಜನ್ಮ ವರ್ಷಾಹದ ಮುಂದಿನ ಆಚರಣೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.
-ಉದಯವಾಣಿ