ಬೆಂಗಳೂರು, ಮೇ ೫- ಬೆಂಗಳೂರು ನಗರದ ಕೊಳಚೆ ನೀರನ್ನು ಶುದ್ಧೀಕರಿಸಿ ಮರು ಬಳಕೆ ಮಾಡುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಮುಂದಿನ 3 ರಿಂದ 5 ವರ್ಷಗಳಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಬೆಂಗಳೂರು ನಗರಾಭಿವೃದ್ದಿ ಸಚಿವ ಕೆ.ಜೆ. ಜಾರ್ಜ್ ಹೇಳಿದರು.
ಮುಂದಿನ ದಿನಗಳಲ್ಲಿ ಕೊಳಚೆ ನೀರಿಗೆ ಬೇಡಿಕೆ ಹೆಚ್ಚಾಗಲಿದೆ. ನಗರದ ಎಲ್ಲ ಕೊಳಚೆ ನೀರನ್ನು ಸಂಸ್ಕರಿಸಲು ಕೊಳಚೆ ನೀರು ಸಂಸ್ಕರಣಾ ಘಟಕಗಳನ್ನು ಹಾಕುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದರು.
ಬೆಳಂದೂರು ಕೆರೆ ಪುನರ್‌ಜೀವನಕ್ಕೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಪರಿಹಾರ ಕ್ರಮಗಳ ಬಗ್ಗೆ ಕರೆಯಲಾಗಿದ್ದ ತಜ್ಞರು ಹಾಗೂ ತಂತ್ರಜ್ಞರು, ಪರಿಸರವಾದಿಗಳ ಸಭೆಯಲ್ಲಿ ಮಾತನಾಡಿದ ಅವರು, ವಿದೇಶಗಳಲ್ಲಿ ಕೊಳಚೆ ನೀರನ್ನು ಸಂಸ್ಕರಿಸಿ ಕುಡಿಯುತ್ತಿದ್ದಾರೆ. ನಮ್ಮ ಜನ ಸಂಸ್ಕರಿಸಿದ ಕೊಳಚೆ ನೀರನ್ನು ಭಾವನಾತ್ಮಕ ಕಾರಣದಿಂದ ಒಪ್ಪುವುದಿಲ್ಲ. ಹಾಗಾಗಿ ಈ ಸಂಸ್ಕರಿಸಿದ ಕೊಳಚೆ ನೀರನ್ನು ಬೇರೆ ಬೇರೆ ಉದ್ದೇಶಗಳಿಗೆ ಬಳಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.
ಈಗಾಗಲೇ ನಗರದ ಕಬ್ಬನ್‌ಪಾರ್ಕ್‌ಗೆ ಸಂಸ್ಕರಿಸಿದ ಕೊಳಚೆ ನೀರನ್ನೆ ಬಳಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಂಸ್ಕರಿಸಿದ ಕೊಳಚೆ ನೀರನ್ನು ಕೆರೆಗಳಿಗೆ ತುಂಬಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು. ಬೆಂಗಳೂರು ಜಲಮಂಡಳಿ ಮುಂದಿನ 3 ರಿಂದ 5 ವರ್ಷದಲ್ಲಿ ನಗರದ ಶೇ. 80 ರಿಂದ 85 ರಷ್ಟು ಕೊಳಚೆ ನೀರನ್ನು ಸಂಸ್ಕರಿಸಲು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲಿದೆ ಎಂದು ಅವರು ಹೇಳಿದರು.
ಕೊಳಚೆ ನೀರಿನಿಂದ ಮಾಲಿನ್ಯಗೊಂಡಿರುವ ಬೆಳಂದೂರು ಕೆರೆ ಸೇರಿದಂತೆ ಇತರೆ ಕೆರೆಗಳನ್ನು ಶುದ್ಧೀಕರಿಸಲು ಯೋಜನೆಯನ್ನು ಕೈಗೆತ್ತಿಕೊಂಡಿದೆ. ಯಾವ ರೀತಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂಬ ಬಗ್ಗೆ ಸಲಹೆ ಪಡೆಯಲು ಈ ಸಭೆ ಕರೆಯಲಾಗಿದೆ. ಎಲ್ಲರ ಸಲಹೆ ಪಡೆದು ಅಂತಿಮವಾಗಿ ಸರ್ಕಾರ ಒಂದು ತೀರ್ಮಾನ ಕೈಗೊಳ್ಳುತ್ತದೆ ಎಂದರು.
ಕೆರೆಗಳ ಶುದ್ಧೀಕರಣಕ್ಕೆ ಸರ್ಕಾರ ಸಿದ್ದವಿದೆ. ಅದಕ್ಕೆ ಪರಿಹಾರಗಳನ್ನು ತಜ್ಞರು, ಪರಿಸರವಾದಿಗಳು ನೀಡಬೇಕು ಎಂದರು.
ಈ ಸಭೆಯಲ್ಲಿ ದೇಶ-ವಿದೇಶಗಳ ಹಲವು ಕೆರೆ ಶುದ್ಧೀಕರಣ ಕೆಲಸ ನಡೆಸುವ ಸಂಸ್ಥೆಗಳು, ಕಂಪೆನಿಗಳ ಮುಖ್ಯಸ್ಥರು ಪಾಲ್ಗೊಂಡು ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಮಾಲಿನ್ಯಗೊಂಡಿದ್ದ ಕೆರೆ ಶುದ್ಧೀಕರಣಕ್ಕೆ ಕೈಗೊಂಡ ಕ್ರಮಗಳು, ಕೊಳಚೆ ನೀರು ಶುದ್ಧೀಕರಣದ ಬಗ್ಗೆ ತಮ್ಮದೇ ಆದ ಯೋಜನೆಗಳನ್ನು ಸಭೆಯ ಮುಂದೆ ಇಟ್ಟರು.
ಈ ಸಭೆಯಲ್ಲಿ ಮಾತನಾಡಿದ ಬಹುತೇಕ ತಜ್ಞರು ಬೆಳ್ಳಂದೂರು ಕೆರೆಯನ್ನು ಶುದ್ಧೀಕರಿಸಿ ಕೊಡಬಹುದು. ಇದಕ್ಕೆ ಸರ್ಕಾರ ಮನಸ್ಸು ಮಾಡಬೇಕು ಎಂಬ ಮಾತುಗಳನ್ನು ಹೇಳಿದರು.
ಸಭೆಯಲ್ಲಿ ಆಹಾರ ಸಚಿವ ದಿನೇಶ್‌ಗುಂಡೂರಾವ್, ಮೇಯರ್ ಮಂಜುನಾಥರೆಡ್ಡಿ, ಪರಿಸರ ವಾದಿ ಯಲ್ಲಪ್ಪರೆಡ್ಡಿ, ನಮ್ಮ ಬೆಂಗಳೂರು ಪ್ರತಿಷ್ಠಾನದ ಶ್ರೀಧರ್ ಪಬ್ಬಿಶೆಟ್ಟಿ, ಪ್ರೊ. ರಾಮಚಂದ್ರ, ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರಜೈನ್, ಬಿಡಿಎ ಆಯುಕ್ತ ಶಾನುಬೋಗ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಆರ್. ಶಂಕರ್, ಕೊಳಚೆ ನಿರ್ಮೂಲನಾ ಮಂಡಳಿ ಅಧ್ಯಕ್ಷ ಪಿ.ಆರ್. ರಮೇಶ್ ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ಕೆರೆ ಪುನರ್‌ಜೀವನದಲ್ಲಿ ತೊಡಗಿಕೊಂಡಿರುವ ಹಲವು ಸಂಸ್ಥೆಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು.
ಕರ್ನಾಟಕ