ಮನೋರಂಜನೆ

ಮಲ್ಟಿಹೀರೋಯಿನ್‌ ಜಮಾನಾ ಶುರು

Pinterest LinkedIn Tumblr

jamanaಕನ್ನಡದಲ್ಲಿ ಮಲ್ಟಿಸ್ಟಾರ್ ಸಿನಿಮಾ ಟ್ರೆಂಡ್‌ ಶುರುವಾಗಿರೋದು ಎಲ್ಲರಿಗೂ ಗೊತ್ತು. ಮೂರು, ನಾಲ್ಕು ಹೀರೋಗಳೆಲ್ಲಾ ಒಂದೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಹೊಸ ಬೆಳವಣಿಗೆಯೇ ಸರಿ. ಅಂತೆಯೇ, ನಾಯಕಿ ಪ್ರಧಾನ ಚಿತ್ರಗಳು ಈಗ ಕನ್ನಡದಲ್ಲಿ ಮೆಲ್ಲನೆ ಸೆಟ್ಟೇರುತ್ತಿವೆ ಎಂಬುದು ಈ ಹೊತ್ತಿನ ವಿಶೇಷ. ಸದ್ಯಕ್ಕೆ ಕನ್ನಡದ ಯುವ ನಟಿಮಣಿಗಳೆಲ್ಲಾ ಸೇರಿ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳುವುದರ ಜತೆ ಹೊಸದೊಂದು ಭಾಷ್ಯ ಬರೆಯೋಕೆ ಸಜ್ಜಾಗಿದ್ದಾರೆ. ಹೌದು, “ಕಿರಗೂರಿನ ಗಯ್ನಾಳಿಗಳು’ ಚಿತ್ರದಲ್ಲಿ ಐವರು ನಾಯಕಿಯರು ಕಾಣಿಸಿಕೊಂಡಿದ್ದರು. ಯೋಗರಾಜ್‌ ಭಟ್ಟರು ತಮ್ಮ ನಿರ್ದೇಶನದ “ನನ್ನ ಹೆಸರೇ ಅನುರಾಗಿ’ ಚಿತ್ರದಲ್ಲಿ ಪ್ರಜ್ಞಾ, ನಿಖೀತಾ ನಾರಾಯಣ್‌ ಹಾಗು ವೈಶಾಲಿ ದೀಪಕ್‌ರನ್ನು ಕ್ಯಾಮೆರಾ ಮುಂದೆ ನಿಲ್ಲಿಸಿದ್ದಾರೆ. ಇನ್ನು, ಇಮ್ರಾನ್‌ ಸರ್ದಾರಿಯಾ ನಿರ್ದೇಶಿಸುತ್ತಿರುವ “ಉಪ್ಪು ಹುಳಿ ಖಾರ’ ಚಿತ್ರದಲ್ಲಿ ಅನುಶ್ರೀ, ಜಯಶ್ರೀ ಹಾಗು ಗೋವಾದ ಬೆಡಗಿ ಮಾಶಾ ಕಾಣಿಸಿಕೊಳ್ಳುತ್ತಿದ್ದಾರೆ. “ಗುಲಾಬಿ ಸ್ಟ್ರೀಟ್‌’ ಚಿತ್ರದಲ್ಲೂ ಮೂವರು ನಾಯಕಿಯರಿದ್ದಾರೆ. ಈಗ ಪ್ರದೀಪ್‌ ವರ್ಮ ನಿರ್ದೇಶಿಸುತ್ತಿರುವ “ಉರ್ವಿ’ ಚಿತ್ರದಲ್ಲೂ ಶ್ವೇತಾ ಪಂಡಿತ್‌, ಶ್ರುತಿ ಹರಿಹರನ್‌ ಹಾಗು ಶ್ರದ್ಧಾ ಶ್ರೀನಾಥ್‌ ನಟಿಸುತ್ತಿದ್ದಾರೆ. ಅಲ್ಲಿಗೆ ನಾಯಕಿ ಪ್ರಧಾನ ಚಿತ್ರಗಳು ಕನ್ನಡದಲ್ಲೂ ಹೆಚ್ಚುತ್ತಿವೆ
ಎಂಬುದಕ್ಕೆ ಈ ಚಿತ್ರಗಳೇ ಕಣ್ಣೆದುರಿಗಿನ ಸಾಕ್ಷಿಯಾಗಿವೆ.

ಪ್ರದೀಪ್‌ ವರ್ಮ ನಿರ್ದೇಶನದ “ಉರ್ವಿ’ ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿಸಿ, ದ್ವಿತೀಯ ಹಂತದ
ಚಿತ್ರೀಕರಣದಲ್ಲಿದೆ. ಸಿನಿಮಾ ಕುರಿತು ಹೇಳಿಕೊಳ್ಳುವ ಪ್ರದೀಪ್‌ ವರ್ಮ, “ಇದೊಂದು ನಾಯಕಿಯರ ಪ್ರಧಾನ ಚಿತ್ರ. ಶ್ರುತಿ ಹರಿಹರನ್‌, ಶ್ವೇತಾ ಪಂಡಿತ್‌ ಹಾಗು ಶ್ರದ್ಧಾ ಶ್ರೀನಾಥ್‌ ಜತೆಯಲ್ಲಿ ಪ್ರಭು ಹಾಗು ಮಧುಕರ್‌ ಎಂಬ ಇಬ್ಬರು
ಹೀರೋಗಳೂ ಇದ್ದಾರೆ. ಭವಾನಿ ಪ್ರಕಾಶ್‌ ಚಿತ್ರದಲ್ಲಿ ನೆಗೆಟಿವ್‌ ರೋಲ್‌ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಅಚ್ಯುತ
ಮೇಜರ್‌ ವಿಲನ್‌ ಆಗಿ ಕಾಣಿಸಿಕೊಂಡಿದ್ದಾರೆ. ಎಂದು ವಿವರ ಕೊಡುತ್ತಾರೆ ಪ್ರದೀಪ್‌ ವರ್ಮ.

“ಉರ್ವಿ’ ಅನ್ನೋದು ಶ್ಲೋಕದಲ್ಲಿ ಬರುವ ಪದ. “ಉರ್ವಿ’ ಅಂದರೆ ತಾಳ್ಮೆಗಳ ದೇವಿ, ಕಾಳಿಕಾ ಮಾತೆ ಹಾಗು
ಪರಿಸ್ಥಿತಿಗಳ ಅನುಗುಣವಾಗಿ ವರ್ತಿಸುವ ಭೂತಾಯಿ ಎಂದರ್ಥ. ಹಾಗಾಗಿ ಇಲ್ಲಿ ಮೂರು ಪಾತ್ರಗಳಿಗೆ ಸರಿಹೊಂದುವ ಕಥೆ ಸಿದ್ಧಪಡಿಸಿ ಚಿತ್ರೀಕರಿಸಲಾಗುತ್ತಿದೆ. ಮೂವರು ನಟಿಯರು ಚಿತ್ರದ ಮುಖ್ಯ ಆಕರ್ಷಣೆ.

ಒಬ್ಬರು ತಾಳ್ಮೆಯಲ್ಲಿದ್ದರೆ, ಇನ್ನೊಬ್ಬರು ಕಾಳಿಕಾ ಮಾತೆಯಂತಿರುತ್ತಾರೆ, ಮತ್ತೂಬ್ಬರು ಪರಿಸ್ಥಿತಿಗಳಿಗೆ ಅನುಗುಣವಾಗಿ ವರ್ತಿಸುತ್ತಾರೆ. ಆದರೆ, ಯಾರ್ಯಾರು ಯಾವ ಪಾತ್ರ ನಿರ್ವಹಿಸುತ್ತಾರೆ ಎಂಬುದನ್ನು ಚಿತ್ರದಲ್ಲೇ ನೋಡಬೇಕು ಎನ್ನುವ ನಿರ್ದೇಶಕರು, ಇದು ಏರಿಯರ್‌ ಡ್ರೀಮ್ಸ್‌ ಪ್ರೊಡಕ್ಷನ್ಸ್‌ನಲ್ಲಿ ತಯಾರಾಗುತ್ತಿದ್ದು, ಬಿ.ರವಿಪ್ರಕಾಶ್‌ ಭಟ್‌ ಚಿತ್ರವನ್ನು ನಿರ್ಮಿಸುತ್ತಿದ್ದಾರೆ ಎನ್ನುತ್ತಾರೆ ಪ್ರದೀಪ್‌ ವರ್ಮ.

ಆನಂದ್‌ ಸುಂದರೇಶ ಕ್ಯಾಮೆರಾ ಹಿಡಿದಿದ್ದಾರೆ. ಈ ಹಿಂದೆ ಆನಂದ್‌ ಸುಂದರೇಶ “ಹರಿವು’ ಚಿತ್ರಕ್ಕೆ ಹಾಗು “ಚಕೋರಿ’ಗೂ ಕ್ಯಾಮೆರಾ ಹಿಡಿದಿದ್ದರು. ಈ ಪೈಕಿ “ಹರಿವು’ ರಾಷ್ಟ್ರಪ್ರಶಸ್ತಿ ಪಡೆದರೆ, “ಚಕೋರಿ’ ಕೂಡ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಪಡೆದಿತ್ತು. ಮನೋಜ್‌ ಜಾರ್ಜ್‌ ಸಂಗೀತ ನೀಡುತ್ತಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಸತ್ಯಪ್ರಕಾಶ್‌ ಸಂಭಾಷಣೆ ಬರೆದಿದ್ದಾರೆ.
-ಉದಯವಾಣಿ

Write A Comment