ಮನೋರಂಜನೆ

ಕನ್ನಡ ಸಂಸ್ಕೃತಿಯೂ ‘ಕತ್ತರಿ ಸಂಸ್ಕೃತಿ’ಯೂ…

Pinterest LinkedIn Tumblr

crec18Girija_0ಅಮಿತ್ ಎಂ.ಎಸ್‌.
‘ಕಿರಗೂರಿನ ಗಯ್ಯಾಳಿಗಳು’ ಸಿನಿಮಾ ಸಹೃದಯ ಪ್ರೇಕ್ಷಕರನ್ನು ರಂಜಿಸುವ ಜೊತೆಗೆ ಸೆನ್ಸಾರ್‌ ಮಂಡಳಿಯ ಕಾರ್ಯವೈಖರಿ ಕುರಿತು ಚರ್ಚೆ ಹುಟ್ಟುಹಾಕಿದೆ. ಚಿತ್ರತಂಡದ ಜೊತೆಗೆ ಚಿತ್ರರಸಿಕರು ಕೂಡ ಈ ಚರ್ಚೆಯ ಭಾಗವಾಗಿರುವುದು ವಿಶೇಷ.
ಸೆನ್ಸಾರ್‌ ಮಂಡಳಿಯ ಅಧಿಕಾರ ವ್ಯಾಪ್ತಿ ಸಿನಿಮಾಗಳಿಗೆ ಪ್ರಮಾಣಪತ್ರ ನೀಡುವುದಕ್ಕೆ ಸೀಮಿತವೇ ಅಥವಾ ದೃಶ್ಯ ಹಾಗೂ ಸಂಭಾಷಣೆಗಳಿಗೆ ಕತ್ತರಿ ಹಾಕುವುದನ್ನೂ ಒಳಗೊಂಡಿದೆಯೇ? ಹಾಗೆ ಕತ್ತರಿ ಹಾಕಿಸುವುದಾದರೆ ಅದರ ಮಾನದಂಡಗಳೇನು? ‘ಕಿರಗೂರಿನ ಗಯ್ಯಾಳಿಗಳು’ ಚಿತ್ರದ ಹಿನ್ನೆಲೆಯಲ್ಲಿ ಮತ್ತೆ ಕೇಳಿಸುತ್ತಿರುವ ಪ್ರಶ್ನೆಗಳಿವು.
ಸೆನ್ಸಾರ್‌ ಮಂಡಳಿ ಎನ್ನುವುದು ನಿಜ ಅರ್ಥದಲ್ಲಿ ‘ಚಲನಚಿತ್ರ ಪ್ರಮಾಣೀಕರಣ ಸಮಿತಿ’. ಸಿನಿಮಾಗಳಿಗೆ ಪ್ರಮಾಣಪತ್ರ ನೀಡುವುದಷ್ಟೇ ಅದರ ಕೆಲಸ. ಸಿನಿಮಾ ಎಂಬ ಸೃಜನಶೀಲ ಕಲೆಯ ಮೇಲೆ ಅಧಿಕಾರ ಚಲಾಯಿಸುವ ಹಕ್ಕು ಅದಕ್ಕಿಲ್ಲ ಎಂಬ ವಾದ ಆಗ ಕೇಳಿಬರುತ್ತಲೇ ಇರುತ್ತದೆ. ಕನ್ನಡದಲ್ಲಿ ಸೆನ್ಸಾರ್‌ ಮಂಡಳಿ ವಿವಾದದ ಮೂಲವಾಗುತ್ತಿರುವುದು ಇದು ಮೊದಲೇನೂ ಅಲ್ಲ. ಅನೇಕ ನಿರ್ಮಾಪಕರು ಪ್ರಾದೇಶಿಕ ಸೆನ್ಸಾರ್‌ ಮಂಡಳಿಯ ತೀರ್ಮಾನವನ್ನು ಒಪ್ಪಿಕೊಳ್ಳದೆ, ಪರಿಷ್ಕರಣಾ ಸಮಿತಿಯ ಎದುರು ಹೋಗಿ ಗೆದ್ದುಬಂದಿರುವುದಿದೆ.
ಇದೆಲ್ಲ ಓಡಾಟವೇ ಬೇಡ ಎಂದು ಸೆನ್ಸಾರ್‌ ನಿರ್ಣಯವನ್ನು ಒಪ್ಪಿದವರೂ ಇದ್ದಾರೆ. ಆದರೆ, ಸೆನ್ಸಾರ್‌ ಮಂಡಳಿ ನೀಡುವ ‘ಕಟ್’ಗಳನ್ನು ಪ್ರಶ್ನಿಸಿ ಪರಿಷ್ಕರಣಾ ಸಮಿತಿ ಮುಂದೆ ಹೋಗಲು ಸಮಯ ಮತ್ತು ಹಣ ವಿನಿಯೋಗಿಸಲು ಸಿದ್ಧರಿರಬೇಕು. ಅದರಿಂದ ಉಂಟಾಗುವ ನಷ್ಟ ಎದುರಿಸಲು ಸಿದ್ಧರಿಲ್ಲದ ನಿರ್ಮಾಪಕರು ಮಂಡಳಿ ನೀಡಿದ ಸೂಚನೆಗಳನ್ನು ಒಪ್ಪಿಕೊಂಡು ದೃಶ್ಯಗಳಿಗೆ ಕತ್ತರಿ ಹಾಕಿ ತೆರೆಗೆ ತರುವಾಗ ಹೈರಾಣಾಗಿರುತ್ತಾರೆ.
ಸೆನ್ಸಾರ್‌ ಮಂಡಳಿಯ ಏಕಪಕ್ಷೀಯ ತೀರ್ಮಾನದ ವಿರುದ್ಧದ ಕೂಗು ನಿರ್ಮಾಪಕ, ನಿರ್ದೇಶಕರಿಗೆ ಸೀಮಿತ. ಅದರಾಚೆಗೆ ಪ್ರೇಕ್ಷಕ ವರ್ಗಕ್ಕೆ ಅದು ತಟ್ಟುವುದೇ ಇಲ್ಲ. ಆದರೆ, ‘ಕಿರಗೂರಿನ ಗಯ್ಯಾಳಿಗಳು’ ಸಂದರ್ಭದಲ್ಲಿ ಕೆಲವು ಪ್ರೇಕ್ಷಕರು ಕೂಡ ಸೆನ್ಸಾರ್‌ ನಿರ್ಧಾರದ ವಿರುದ್ಧ ದನಿಯೆತ್ತಿರುವುದು ವಿಶೇಷ.
‘ಗಾಳಿಬೀಜ’ದ ವಿವಾದ
ಕಲಾವಿದ ಬಾಬು ಈಶ್ವರಪ್ರಸಾದ್‌ ನಿರ್ದೇಶನದ ‘ಗಾಳಿಬೀಜ’ ಚಿತ್ರವನ್ನು ಸಿನಿಮಾವೇ ಅಲ್ಲ ಎಂದು ಸೆನ್ಸಾರ್‌ ಮಂಡಳಿ ಹೇಳಿದ್ದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ‘ಯಾವುದು ಸಿನಿಮಾ, ಯಾವುದು ಸಿನಿಮಾ ಅಲ್ಲ ಎಂದು ಹೇಳುವುದು ಸೆನ್ಸಾರ್‌ ಕೆಲಸ ಅಲ್ಲ’ ಎಂದು ಗಿರೀಶ ಕಾಸರವಳ್ಳಿ ಅವರಂಥ ಹಿರಿಯರು ದನಿಯೆತ್ತಿದ್ದರು.
ಈಗ ಸೆನ್ಸಾರ್‌ ಮಂಡಳಿಯ ಕಾರ್ಯವೈಖರಿಯ ವಿರುದ್ಧ ಸಾಂಸ್ಕೃತಿಕ ವಲಯ ದನಿ ಎತ್ತಿದೆ. ಸಾಮಾನ್ಯ ಪ್ರೇಕ್ಷಕರೂ ಸೆನ್ಸಾರ್‌ ಮಂಡಳಿಯ ಕ್ರಮವನ್ನು ಪ್ರಶ್ನಿಸುತ್ತಿದ್ದಾರೆ. ಸಿನಿಮಾ ನೋಡಿಬಂದವರು ‘ಫೇಸ್‌ಬುಕ್‌’, ‘ಟ್ವಿಟರ್‌’ಗಳಲ್ಲಿ ಮುಖ್ಯವಾಗಿ ದೂಷಿಸುತ್ತಿರುವುದು ಸೆನ್ಸಾರ್‌ ಮಂಡಳಿಯನ್ನು. ಇದಕ್ಕೆ ಕಾರಣ ಸುಮನ್‌ ಕಿತ್ತೂರು ನಿರ್ದೇಶನದ ‘ಕಿರಗೂರಿನ ಗಯ್ಯಾಳಿಗಳು’ ಚಿತ್ರದ ಸಂಭಾಷಣೆ ಮತ್ತು ದೃಶ್ಯಗಳ ಮೇಲೆ ಸೆನ್ಸಾರ್ ಮಂಡಳಿ ನಡೆಸಿರುವ ಪ್ರಹಾರ.
ಗ್ರಾಮೀಣ ಪರಿಸರದಲ್ಲಿ ಜಗಳ, ಬೈಯ್ಗುಳಗಳು ದೈನಂದಿನ ಬದುಕಿನ ಭಾಗ. ಕೆಲವು ನೇರವಾದ, ಕೆಲವು ದ್ವಂದ್ವಾರ್ಥದ ಸಂಭಾಷಣೆಗಳು ಅತಿ ಸಹಜವೆನ್ನುವಂತೆ ಬದುಕಿನಲ್ಲಿ ಬೆರೆತಿವೆ. ಅವುಗಳನ್ನು ಅಶ್ಲೀಲ ಎಂದು ತೀರ್ಮಾನಿಸಲಾಗದು. ಅಂತೆಯೇ ಅಂತಹ ಬದುಕನ್ನು ಆಧರಿಸಿದ ಸಾಹಿತ್ಯ ಮತ್ತು ಸಿನಿಮಾ ಕೃತಿಗಳು ಮಡಿವಂತಿಕೆಗಳನ್ನು ಹೇರಿಕೊಂಡರೆ ಅದು ಅಪೂರ್ಣ ಮತ್ತು ಅರ್ಥಹೀನವಾಗುತ್ತದೆ.
‘ಕಿರಗೂರಿನ ಗಯ್ಯಾಳಿಗಳು’ ಚಿತ್ರದ ಮೂಲ ಸತ್ವವಾಗಿದ್ದ ಅಂತಹ ಸಂಭಾಷಣೆ ಮತ್ತು ದೃಶ್ಯಗಳಿಗೆ ಕತ್ತರಿ ಹಾಕಿಸುವ ಮೂಲಕ ಸೆನ್ಸಾರ್‌ ಮಂಡಳಿ, ಲೇಖಕ ಮತ್ತು ನಿರ್ದೇಶಕರ ಆಶಯಗಳನ್ನು ಹತ್ತಿಕ್ಕಿರುವುದು ಮಾತ್ರವಲ್ಲ; ಪ್ರೇಕ್ಷಕರ ಸ್ವಾತಂತ್ರ್ಯವನ್ನೂ ಕಸಿದುಕೊಂಡಿದೆ ಎನ್ನುವ ವಾದ ಸಾಮಾಜಿಕ ಜಾಲತಾಣಗಳಲ್ಲಿ ರೂಪುಗೊಂಡಿದೆ.
‘ಕಿರಗೂರಿನ ಗಯ್ಯಾಳಿಗಳು’ ಕನ್ನಡದ ಜನಪ್ರಿಯ ಲೇಖಕರಲ್ಲಿ ಒಬ್ಬರಾದ ಪೂರ್ಣಚಂದ್ರ ತೇಜಸ್ವಿ ಅವರ ಕಥೆಯನ್ನು ಆಧರಿಸಿದ ಸಿನಿಮಾ. ಸಾಹಿತ್ಯಾಧಾರಿತ ಪ್ರಯೋಗಗಳ ಕೊರತೆಯಿಂದ ಸೊರಗಿರುವ ಚಿತ್ರರಂಗಕ್ಕೆ ಚೈತನ್ಯ ನೀಡುವಂತಹ ಸಿನಿಮಾಕ್ಕೆ, ನಮ್ಮ ಗ್ರಾಮೀಣ ಬದುಕು, ಸಂಸ್ಕೃತಿ ಹಾಗೂ ಪರಂಪರೆಯ ಜ್ಞಾನವಿಲ್ಲದವರಂತೆ ಸೆನ್ಸಾರ್ ಮಂಡಳಿಯ ಸದಸ್ಯರು ಕತ್ತರಿ ಪ್ರಯೋಗ ಮಾಡಿರುವುದು ಪ್ರೇಕ್ಷಕರ ಸಿಟ್ಟಿಗೆ ಕಾರಣವಾಗಿದೆ. ತೇಜಸ್ವಿ ಅವರ ಕೃತಿಯನ್ನೇ ಸೆನ್ಸಾರ್‌ ಮಂಡಳಿ ವಿಮರ್ಶೆಗೆ ಒಳಪಡಿಸಿದೆ. ಇದು ಶ್ರೇಷ್ಠ ಸಾಹಿತಿಗೆ ಮಾಡಿರುವ ಅವಮಾನ ಎಂಬಂತಹ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದೆ.
ಯಾವುದು ಮಾನದಂಡ?
‘ಕಿರಗೂರಿನ ಗಯ್ಯಾಳಿಗಳು’ ಚಿತ್ರದಲ್ಲಿ ಚಿಕ್ಕಮಕ್ಕಳು ಬೆತ್ತಲಾಗಿ ಓಡಿಬರುವ ಸನ್ನಿವೇಶವು ‘ನಗ್ನತೆ’ಯನ್ನು ತೋರಿಸುತ್ತದೆ ಎಂಬ ಕಾರಣ ನೀಡಿ, ಅದನ್ನು ಅಳಿಸಿಹಾಕುವಂತೆ ಮಾಡಲಾಗಿದೆ. ತುಂಡುಡುಗೆ ಧರಿಸಿದ ಹೆಣ್ಣುಮಕ್ಕಳನ್ನು ಕ್ಲೋಸ್‌ಅಪ್‌ನಿಂದ ತೋರಿಸುವ ಚಿತ್ರಗಳು ಇವರ ಕಣ್ಣಿಗೆ ಕಾಣಿಸುವುದಿಲ್ಲವೇ? ಎಂದು ಪ್ರಶ್ನಿಸುತ್ತಾರೆ ನಿರ್ದೇಶಕಿ ಸುಮನ್ ಕಿತ್ತೂರು. ಚಿತ್ರದಲ್ಲಿ ಅನೇಕ ಬೈಯ್ಗುಳದ, ದ್ವಂದ್ವಾರ್ಥದ ಪದಗಳನ್ನು ‘ಮ್ಯೂಟ್’ ಮಾಡಿಸಿದ್ದರೂ, ಅಂತಹ ಇನ್ನೂ ಅನೇಕ ಪದಗಳಿಗೆ ವಿನಾಯಿತಿ ನೀಡಲಾಗಿದೆ.
‘ಮೂರು ಕಾಸಿನ ಹೆಂಗಸರು’ ಎಂಬ ಸಾಲನ್ನು ಚಿತ್ರದಲ್ಲಿ ‘ಮ್ಯೂಟ್‌’ ಮಾಡಿಸಲಾಗಿದೆ. ಶಿವರುದ್ರಯ್ಯ ನಿರ್ದೇಶನದ ‘ಭಗವತಿ ಕಾಡು’ ಚಿತ್ರದಲ್ಲಿಯೂ ಇದೇ ಸಾಲು ಬಳಕೆಯಾಗಿತ್ತು. ಆದರೆ ಸೆನ್ಸಾರ್‌ ಮಂಡಳಿಯ ಸದಸ್ಯರಿಗೆ ಆಗ ಅದು ‘ಮ್ಯೂಟ್‌’ ಮಾಡಿಸುವ ಪದ ಎನಿಸಿರಲಿಲ್ಲ!
ಕಮರ್ಷಿಯಲ್ ಸಿನಿಮಾಗಳಲ್ಲಿ ‘ಮನರಂಜನೆಯ’ ಸಲುವಾಗಿ ಉದ್ದೇಶಪೂರ್ವಕವಾಗಿ ತುರುಕಿದ ಅಶ್ಲೀಲ ಸಂಭಾಷಣೆ ಅಥವಾ ದೃಶ್ಯಗಳಿಗೆ ವಿನಾಯಿತಿ ನೀಡುವ ಉದಾಹರಣೆಗಳು ನಮ್ಮ ಮುಂದಿರುವಾಗ, ಜಾನಪದ ಮತ್ತು ಸಾಹಿತ್ಯ ಪರಂಪರೆಯಿಂದ ಸಹಜವಾಗಿಯೇ ಜನಜೀವನದಲ್ಲಿ ಬೆರೆತ ಸಂಗತಿಗಳು ಸಿನಿಮಾ ರೂಪ ತಾಳಿದಾಗ ಅವುಗಳನ್ನು ಅಶ್ಲೀಲ ಎಂದು ತೀರ್ಮಾನಿಸುವುದು ಎಷ್ಟು ಸರಿ ಎಂಬ ಪ್ರಶ್ನೆ ಉದ್ಭವಿಸುತ್ತದೆ.
‘ತೇಜಸ್ವಿ ಅವರ ಪುಸ್ತಕವನ್ನೂ ಅಲ್ಲಿಗೆ ತೆಗೆದುಕೊಂಡು ಹೋಗಿದ್ದೆ. ಇದು ವಿದ್ಯಾರ್ಥಿಗಳಿಗೆ ಪಠ್ಯವೂ ಆಗಿದೆ ಎಂದು ವಿವರಿಸಿದೆ. ಆದರೆ ಅವರು ಅದನ್ನು ಕೇಳಿಸಿಕೊಳ್ಳಲೂ ಸಿದ್ಧರಿರಲಿಲ್ಲ. ಮ್ಯೂಟ್‌ ಮತ್ತು ಕಟ್‌ಗಳೊಂದಿಗೆ ‘ಎ’ ಪ್ರಮಾಣಪತ್ರ ನೀಡಿದ್ದರು. ‘ಮ್ಯೂಟ್‌’ ಮಾಡಿಯೂ ‘ಎ’ ಪ್ರಮಾಣಪತ್ರ ನೀಡುವುದಾದರೆ ಒಪ್ಪುವುದಿಲ್ಲ ಎಂದಿದ್ದಕ್ಕೆ, ‘ಯು/ಎ’ ನೀಡಿದರು. ನಿಯಮದ ಪ್ರಕಾರ ಕೊಟ್ಟಿದ್ದೇವೆ. ಬೇಕಾದರೆ ತೆಗೆದುಕೊಂಡು ಹೋಗಿ. ಇಲ್ಲದಿದ್ದರೆ ಪರಿಷ್ಕರಣಾ ಸಮಿತಿಗೆ (ಆರ್‌ಸಿ) ಹೋಗಿ ಎಂದರು’ ಎಂದು ತಮ್ಮ ಅನುಭವ ವಿವರಿಸುತ್ತಾರೆ ಸುಮನ್‌.
‘ಸೆಕ್ಸ್‌ ಚಿತ್ರಕ್ಕೂ ‘ಎ’ ಪ್ರಮಾಣಪತ್ರ ನೀಡುತ್ತಾರೆ. ತೇಜಸ್ವಿ ಅವರಂತಹ ಲೇಖಕರ ಸಿನಿಮಾಕ್ಕೂ ‘ಎ’ ನೀಡುತ್ತಾರೆ. ಇದರ ಮಾನದಂಡವೇನು? ತೇಜಸ್ವಿ ಅವರ ಕಥೆ ಪರಿಷ್ಕರಣಾ ಸಮಿತಿಯ ಮುಂದೆ ಹೋಗುವಂಥದ್ದೇ? ಯಾವುದೇ ಚಿತ್ರದಲ್ಲಿ ಅಶ್ಲೀಲ ಪದ ಬಳಕೆ ಮಾಡಿದ್ದರೆ, ಯಾವ ಉದ್ದೇಶಕ್ಕೆ ಬಳಸಿದ್ದಾರೆ ಎಂದು ಆಲೋಚಿಸಿ ತೀರ್ಮಾನಿಸುವ ಶಕ್ತಿ ಅವರಲ್ಲಿ ಇಲ್ಲವೇ? ಹಳ್ಳಿಗಳಲ್ಲಿ ರಂಡೆ–ಮುಂಡೆ ಎಂಬ ಪದಗಳಿಂದ ಬೈದಾಡದೆ ಇನ್ನೇನು ಬಯ್ಯುತ್ತಾರೆ? ಸಿನಿಮಾ ಮಾಡಿರುವ ನಾನೂ ಒಬ್ಬ ಹಣ್ಣುಮಗಳು. ನನ್ನಲ್ಲಿ ಸೂಕ್ಷ್ಮತೆ, ಸಾಮಾಜಿಕ ಜವಾಬ್ದಾರಿಗಳು ಇರುವುದಿಲ್ಲವೇ?’ ಎಂಬ ಪ್ರಶ್ನೆಗಳನ್ನು ಸುಮನ್ ಮುಂದಿಡುತ್ತಾರೆ.
ನಿರ್ದೇಶಕ ಶಿವರುದ್ರಯ್ಯ ಅವರಿಗೂ ಇಂಥದ್ದೇ ಅನುಭವ ಆಗಿದೆ. ದೇವನೂರ ಮಹಾದೇವ ಅವರ ಕಾದಂಬರಿ ಆಧರಿತ ‘ಮಾರಿಕೊಂಡವರು’ ಚಿತ್ರದಲ್ಲಿ ಬರುವ ‘ಹೊಲೆಗೇರಿ’ ಪದವನ್ನು ಮ್ಯೂಟ್‌ ಮಾಡುವಂತೆ ಸೂಚಿಸಲಾಗಿತ್ತು. ಅದು ಜನಬಳಕೆಯಲ್ಲಿರುವ ಸಾಮಾನ್ಯ ಪದ. ಕೇರಿಗಳನ್ನು ಹಾಗೆಯೇ ಕರೆಯುವುದು ಎಂದು ಅವರಿಗೆ ಅರ್ಥೈಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅದು ಜಾತಿ ಸೂಚಕವಲ್ಲ ಎಂಬುದನ್ನು ಸೆನ್ಸಾರ್‌ ಮಂಡಳಿ ಒಪ್ಪಿಕೊಳ್ಳಲೇ ಇಲ್ಲ ಎನ್ನುತ್ತಾರೆ ಶಿವರುದ್ರಯ್ಯ.
‘ಸೆನ್ಸಾರ್ ಮಂಡಳಿಯ ಸದಸ್ಯರು ನಾಡಿನ ಜಾನಪದ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ತಿಳಿದುಕೊಂಡಿರಬೇಕು. ತೇಜಸ್ವಿ ಅವರಂತಹ ಲೇಖಕರ ಕೃತಿಯನ್ನು ತೀರ್ಮಾನಿಸುವಂತಹ ಸಾಂಸ್ಕೃತಿಕ ಜ್ಞಾನ ಅವರಲ್ಲಿದೆಯೇ? ಚಿತ್ರದಲ್ಲಿರುವುದು ಅಶ್ಲೀಲತೆಯಲ್ಲ. ಸಂಸ್ಕೃತಿಯಲ್ಲಿ ಒಳಗೊಂಡಿರುವುದು. ಟ್ಯುನಿಷಿಯಾದಂತಹ ಇಸ್ಲಾಮಿಕ್ ಕಟ್ಟುಪಾಡಿನ ದೇಶದ ಚಿತ್ರದಲ್ಲಿ ಮಹಿಳೆಯರು ಸಾರ್ವಜನಿಕವಾಗಿ ಸ್ನಾನ ಮಾಡುವ ದೃಶ್ಯಗಳಿಗೆ ಕತ್ತರಿ ಹಾಕದೆ ಬಿಡುತ್ತಾರೆ. ಅವರಲ್ಲಿ ಇರುವ ಸಿನಿಮಾ ಸಂಸ್ಕೃತಿಯ ತಿಳಿವಳಿಕೆ ನಮ್ಮಲ್ಲಿಲ್ಲ’ ಎನ್ನುತ್ತಾರೆ ‘ಕಿರಗೂರಿನ ಗಯ್ಯಾಳಿಗಳು’ವಿನಲ್ಲಿ ಚಿತ್ರಕಥೆ–ಸಂಭಾಷಣೆ ಬರೆದ ಅಗ್ನಿ ಶ್ರೀಧರ್‌.
ಜನಬೆಂಬಲದೊಂದಿಗೆ ಹೋರಾಟ
ಜನರ ಬೆಂಬಲದೊಂದಿಗೆ ‘ಸೆನ್ಸಾರ್‌ ಮಂಡಳಿ’ಯ ನಿರ್ಧಾರ ವಿರುದ್ಧ ನಾವು ಹೋರಾಡುತ್ತೇವೆ ಎನ್ನುತ್ತಾರೆ ಸುಮನ್ ಕಿತ್ತೂರು.
‘ಚಿತ್ರವನ್ನು ಪರಿಷ್ಕರಣಾ ಸಮಿತಿ ಮುಂದೆ ಕೊಂಡೊಯ್ಯಬೇಕಿತ್ತು ಎಂದು ಹಲವರು ಹೇಳುತ್ತಾರೆ. ಆದರೆ ಪ್ರತಿವಾರ ಐದು–ಆರು ಸಿನಿಮಾ ಬಿಡುಗಡೆಯಾಗುತ್ತಿರುವ ಸನ್ನಿವೇಶದಲ್ಲಿ, ಚಿತ್ರಮಂದಿರಗಳು ದೊರಕುವುದೇ ಕಷ್ಟ. ಹೀಗಾಗಿ ಎಲ್ಲಾ ಸಿದ್ಧತೆ ಮಾಡಿಕೊಂಡು ಬಿಡುಗಡೆ ದಿನಾಂಕ ಪ್ರಕಟಿಸಿದ್ದೆವು.
ಬಿಡುಗಡೆಗೆ ನಾಲ್ಕು ದಿನ ಇದೆ ಎನ್ನುವಾಗ ಪ್ರಮಾಣಪತ್ರ ನೀಡಿದರು. ಪರಿಷ್ಕರಣಾ ಸಮಿತಿ ಮುಂದೆ ಹೋದರೆ ಎರಡು ತಿಂಗಳು ಕಾಯಬೇಕಾಗುತ್ತದೆ. ಆ ಹೊತ್ತಿಗೆ ಜನರಲ್ಲಿ ಸಿನಿಮಾ ಕುರಿತ ಆಸಕ್ತಿ ಕಡಿಮೆಯಾಗುತ್ತದೆ. ಮಿಗಿಲಾಗಿ ನಿರ್ಮಾಪಕರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಬೇಕಾಗುತ್ತದೆ.
ಮೊದಲು ಚಿತ್ರ ಬಿಡುಗಡೆಯಾಗಲಿ ಎಂಬ ಧಾವಂತವಿತ್ತು. ಒಂದು ವೇಳೆ ಪ್ರಮಾಣ ಪತ್ರ ನೀಡಿದಾಗ ಅನ್ಯಾಯ ಆಗಿದೆ ಎಂದು ಪ್ರತಿಭಟಿಸಿದ್ದರೆ ಪ್ರಚಾರದ ಸ್ಟಂಟ್‌ ಎಂದು ತೀರ್ಮಾನಿಸುತ್ತಿದ್ದರು. ತೇಜಸ್ವಿ ಅವರ ಕಥೆಗೆ ಈ ರೀತಿಯ ಪ್ರಚಾರದ ಅಗತ್ಯವಿಲ್ಲ. ಈಗ ಜನರೆದುರೇ ಪುರಾವೆ ಇದೆ. ಆ ಬೆಂಬಲದೊಂದಿಗೆ ಹೋರಾಟ ಮುಂದುವರಿಸುತ್ತೇನೆ’ ಎಂದು ಹೋರಾಟದ ಸುಳಿವನ್ನು ಅವರು ನೀಡುತ್ತಾರೆ.
‘ಕಿರಗೂರಿನ ಗಯ್ಯಾಳಿಗಳು’ ಚಿತ್ರತಂಡ ಸೆನ್ಸಾರ್‌ ಪ್ರಕ್ರಿಯೆಗೆ ಸಂಬಂಧಿಸಿದಂತೆ ಒಂದು ಚರ್ಚೆಯನ್ನು ಹುಟ್ಟುಹಾಕಿದೆ. ಈ ಸಂವಾದ ಒಂದು ತಾರ್ಕಿಕ ಅಂತ್ಯ ಮುಟ್ಟುವುದು ಚಿತ್ರೋದ್ಯಮದ ಹಿತಾಸಕ್ತಿ ದೃಷ್ಟಿಯಿಂದ ಒಳ್ಳೆಯದು.
* * *
ಪ್ರಜಾಸತ್ತಾತ್ಮಕ ವಾತಾವರಣ ಬೇಕು
ಚಿತ್ರವೊಂದಕ್ಕೆ ‘ಎ’ ಪ್ರಮಾಣಪತ್ರ ನೀಡುವುದಾದರೆ ಅದಕ್ಕೆ ಪೂರಕವಾಗಿ ಒಂದಷ್ಟು ಸ್ವಾತಂತ್ರ್ಯವನ್ನೂ ನೀಡಬೇಕು. ಯಾವುದಾದರೂ ಸಮುದಾಯ ಅಥವಾ ವ್ಯಕ್ತಿಯನ್ನು ಉದ್ದೇಶಿಸಿರದ ಅಂಶಗಳಿಗೆ ಕತ್ತರಿ ಹಾಕಿಸುವುದು ಸಮಂಜಸವಲ್ಲ. ಸೆನ್ಸಾರ್‌ ನಿಯಮಾವಳಿಗಳನ್ನು ಬೇಡ ಎನ್ನುವುದಿಲ್ಲ. ನಿಯಂತ್ರಣಗಳಿಲ್ಲದಿದ್ದರೆ ದುರುಪಯೋಗಪಡಿಸಿಕೊಳ್ಳಲು ಮುಂದಾಗುವವರೇ ಹೆಚ್ಚು. ಆದರೆ ಅದು ಪ್ರಜಾಸತ್ತಾತ್ಮಕ ಆಗಿರಬೇಕು. ಅದು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಒಂದೇ ರೀತಿಯದ್ದಾಗಿರಬೇಕು.
‘ಮೈತ್ರಿ’ ಚಿತ್ರದಲ್ಲಿ 22 ಕಟ್‌ಗಳನ್ನು ನೀಡಲಾಗಿತ್ತು. ಅದೇ ತಮಿಳಿನ ‘ಗೋಲಿಸೋಡಾ’ ಅತಿಯಾದ ಹಿಂಸೆಯುಳ್ಳ ಚಿತ್ರ. ಅದಕ್ಕೆ ನಿರ್ಬಂಧಗಳನ್ನು ಹಾಕಿರಲಿಲ್ಲ. ತಮಿಳುನಾಡು, ಆಂಧ್ರಪ್ರದೇಶಗಳಲ್ಲಿ ಅನ್ವಯವಾಗದ ನಿಯಮ ಇಲ್ಲಿ ಆಗುತ್ತದೆ. ಅಲ್ಲಿನ ಪ್ರೇಕ್ಷಕರೇ ಬೇರೆ, ಇಲ್ಲಿನ ಪ್ರೇಕ್ಷಕರೇ ಬೇರೆ ಎಂಬ ವಾದ ಮುಂದಿಡುತ್ತಾರೆ. ಅದರರ್ಥ ಕನ್ನಡ ಪ್ರೇಕ್ಷಕರು ದಡ್ಡರೆಂದೇ?
ಸಿನಿಮಾದಷ್ಟು ಪ್ರಜಾಸತ್ತಾತ್ಮಕವಾದ ಕ್ಷೇತ್ರ ಬೇರೆಯಿಲ್ಲ. ಸರ್ಕಾರದ ಭಾಗವಾದ ಮಂಡಳಿಯೂ ಅಷ್ಟೇ ಪ್ರಜಾಸತ್ತಾತ್ಮಕವಾಗಿ ವರ್ತಿಸಬೇಕು. ಆದರಿಲ್ಲಿ ಮಾತುಕತೆಗೆ ಅವಕಾಶವೇ ಇಲ್ಲ. ನಾವು ಈ ಸೂಚನ ನೀಡುತ್ತೇವೆ, ನಿಮ್ಮ ತಕರಾರುಗಳಿದ್ದರೆ ತಿಳಿಸಿ. ಮರುಪರಿಗಣಿಸುತ್ತೇವೆ ಎನ್ನುವ ಮುಕ್ತತೆ ಇರಬೇಕು. ನಾವು ಶ್ರೇಷ್ಠರು, ಪ್ರಶ್ನಿಸುವಂತಿಲ್ಲ ಎಂಬ ಧೋರಣೆ ಇರಬಾರದು. ಆದರೆ ‘ನಮ್ಮ ಹತ್ತಿರ ಮಾತನಾಡಬೇಡಿ. ಬೇಕಿದ್ದರೆ ರಿವೈಸಿಂಗ್ ಕಮಿಟಿಗೆ ಹೋಗಿ’ ಎನ್ನುವ ವ್ಯಕ್ತಿಗಳೇ ಇದ್ದಾರೆ.
–ಗಿರಿರಾಜ್‌, ನಿರ್ದೇಶಕ
‌* * *
ತಾರತಮ್ಯ ಸರಿಯಲ್ಲ
ಸಿನಿಮಾಗಳಲ್ಲಿ ಪ್ರಾದೇಶಿಕತೆಯ ಸೊಗಡಿಗೆ ಕತ್ತರಿ ಹಾಕುವುದು ಸರಿಯಲ್ಲ. ಹಿಂದಿ ಮತ್ತು ಇತರೆ ಭಾಷೆಗಳಲ್ಲಿ ಮೂಲ ಕೃತಿಗೆ ಗೌರವ ನೀಡುತ್ತಾರೆ. ನೇಟಿವಿಟಿ ಇಲ್ಲದಿದ್ದರೆ ಅದರ ಸೊಗಡೇ ಹೊರಟುಹೋಗುತ್ತದೆ. ನಮ್ಮಲ್ಲಿ ‘ತಿಥಿ’ ಚಿತ್ರದಲ್ಲಿಯೇ ಈ ರೀತಿ ವಿನಾಯಿತಿ ನೀಡಿದ್ದಾರೆ. ಒಬ್ಬರಿಗೊಂದು ನ್ಯಾಯ, ಇನ್ನೊಬ್ಬರಿಗೆ ಮತ್ತೊಂದು ನ್ಯಾಯ ನೀಡುವ ತಾರತಮ್ಯ ತಪ್ಪು. ಸಾರ್ವಜನಿಕವಾಗಿ ಮುಕ್ತಗೊಂಡು ಓದುಗರಿಗೆ ದೊರೆತ ಸಾಹಿತ್ಯ, ಸಿನಿಮಾ ರೂಪದಲ್ಲಿ ತೆರೆ ಮೇಲೆ ಬಂದಾಗ ತೊಂದರೆ ಏನು?
–ಶಿವರುದ್ರಯ್ಯ, ನಿರ್ದೇಶಕ
* * *
ಅವರ ಸಮಸ್ಯೆ!
‘ಕಿರಗೂರಿನ ಗಯ್ಯಾಳಿಗಳು’ ಚಿತ್ರಕ್ಕೆ ಸಂಬಂಧಿಸಿದಂತೆ ಯಾವುದೇ ವಿವಾದವಿಲ್ಲ. ನಾವು ನೀಡಿರುವ ಸೂಚನೆಗಳನ್ನು ಅವರು ಪಾಲಿಸಿದ್ದಾರೆ, ಚಿತ್ರ ಬಿಡುಗಡೆಯಾಗಿದೆ. ಸಿನಿಮಾ ಬಿಡುಗಡೆಯ ದಿನ ಮೊದಲೇ ಘೋಷಿಸಿದ್ದು ಅವರ ಸಮಸ್ಯೆ. ಅದಕ್ಕೆ ನಾನು ಹೊಣೆಯಲ್ಲ. ಕಡಿಮೆ ಕಟ್‌ಗಳು ಬೇಕೆಂದರೆ ‘ಎ’ ಪ್ರಮಾಣಪತ್ರ ನೀಡುತ್ತೇವೆ. ಇಲ್ಲದಿದ್ದರೆ ‘ಯು/ಎ’ ನೀಡುವ ದೃಷ್ಟಿಯಿಂದ ವೀಕ್ಷಿಸುತ್ತೇವೆ. ಅದಕ್ಕೆ ಹೆಚ್ಚು ಕಟ್‌ ನೀಡಬೇಕಾಗುತ್ತದೆ ಎಂದು ಹೇಳಿದ್ದೆವು. ಅವರು ‘ಎ’ ಪ್ರಮಾಣಪತ್ರವಿದ್ದರೆ ಚಿತ್ರದ ಗಳಿಕೆಗೆ ಹಿನ್ನಡೆಯಾಗುತ್ತದೆ ಮತ್ತು ಪ್ರಸಾರದ ಹಕ್ಕು ದೊರಕುವುದಿಲ್ಲ. ಹೀಗಾಗಿ ‘ಯು/ಎ’ ಬೇಕು ಎಂದು ಸ್ಪಷ್ಟವಾಗಿ ಹೇಳಿದ್ದರು. ಅವರ ಕೋರಿಕೆಯಂತೆ ಹೆಚ್ಚು ಕಟ್‌ ನೀಡಿ ‘ಯು/ಎ’ ನೀಡಿದ್ದೆವು. ಅವರಿಗೆ ಇದರಿಂದ ಸಂತೋಷವಾಗದಿದ್ದರೆ ಪರಿಷ್ಕರಣಾ ಸಮಿತಿಗೆ ಹೋಗಬಹುದು.
–ನತಾಶಾ ಡಿಸೋಜಾ, ಪ್ರಾದೇಶಿಕ ಸೆನ್ಸಾರ್‌ ಅಧಿಕಾರಿ

Write A Comment