ಅಂತರಾಷ್ಟ್ರೀಯ

ಮಾದಕ ದ್ರವ್ಯ ಸೇವಿಸಿ ಸಿಕ್ಕಿಬಿದ್ದ ರಷ್ಯಾದ ಖ್ಯಾತ ಟೆನ್ನಿಸ್ ತಾರೆ ಶರಪೋವಾ ! ಟೆನ್ನಿಸ್ ನಿಂದ ತಾತ್ಕಾಲಿಕ ಅಮಾನತು

Pinterest LinkedIn Tumblr

Maria-Sharapova

ಮೆಲ್ಬೋರ್ನ್: ವಿಶ್ವದ ಮಾಜಿ ನಂಬರ್ 1 ಮಹಿಳಾ ಟೆನ್ನಿಸ್ ಆಟಗಾರ್ತಿ ರಷ್ಯಾದ ಮರಿಯಾ ಶರಪೋವಾ ಆ್ಯಂಟಿ ಡೋಪಿಂಗ್ ಟೆಸ್ಟ್ ನಲ್ಲಿ ವಿಫಲರಾಗಿರುವುದಾಗಿ ತಿಳಿಸಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ರಷ್ಯಾದ ಆಟಗಾರ್ತಿ ಇಂದು ಮಾದಕ ದ್ರವ್ಯ ಪರೀಕ್ಷೆಗೆ ಒಳಗಾದರು. ಈ ವೇಳೆ ಅವರ ದೇಹದಲ್ಲಿ ನಿಷೇಧಿತ ಮೆಲ್ಡೋನಿಯಂ ಎಂಬ ದ್ರವ್ಯದ ಅಂಶವಿರುವುದು ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಪ್ರಸ್ತುತ ಶರಪೋವಾ ಅವರನ್ನು ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿಯಿಂದ ತಾತ್ಕಾಲಿಕ ಅಮಾನತು ಮಾಡಲಾಗಿದ್ದು, ಇದೇ ಮಾರ್ಚ್ 12ರಂದು ವಿಶ್ವ ಟೆನ್ನಿಸ್ ಸಂಸ್ಥೆ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ತಿಳಿದುಬಂದಿದೆ.

ವಿವಿಧ ಆರೋಗ್ಯ ಸಮಸ್ಯೆಗಳಿಂದಾಗಿ ಬಳಲುತ್ತಿದ್ದ 28 ವರ್ಷದ ಶರಪೋವಾ 2006ರಿಂದಲೂ ಈ ಔಷಧಿಯನ್ನು ಸೇವಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಈ ಬಾರಿ ಡೋಪಿಂಗ್ ಟೆಸ್ಟ್ ನಲ್ಲಿ ತಾವು ವಿಫಲರಾಗಿದ್ದು, ಇದರ ಸಂಪೂರ್ಣ ಹೊಣೆಯನ್ನು ತಾವೇ ಹೊರುವುದಾಗಿ ಶರಪೋವಾ ಹೇಳಿದ್ದಾರೆ.

“ಕಳೆದ 10 ವರ್ಷಗಳಿಂದಲೂ ನಾನು ನನ್ನ ಆರೋಗ್ಯ ಸಮಸ್ಯೆ ನಿಮಿತ್ತ ಮಿಲ್ಡ್ರೊನೇಟ್ ಎಂಬ ಔಷಧಿಯನ್ನು ಸೇವಿಸುತ್ತಿದ್ದೆ. ನಮ್ಮ ಕುಟುಂಬದ ವೈದ್ಯರೇ ಇದನ್ನು ಸಲಹೆ ಮಾಡಿದ್ದರು. ಆದರೆ ಅಂತಾರಾಷ್ಟ್ರೀಯ ಟೆನ್ನಿಸ್ ಸಂಸ್ಥೆ ಇತ್ತೀಚೆಗೆ ತಮಗೆ ಬರೆದ ಪತ್ರದಲ್ಲಿ ಪರೀಕ್ಷೆ ವೇಳೆ ಮೆಲ್ಡೋನಿಯಂ ಎಂಬ ದ್ರವ್ಯದ ಅಂಶ ಪತ್ತೆಯಾಗಿದೆ ಎಂದು ಅವರು ಹೇಳಿದ್ದಾರೆ.

ಒಟ್ಟಾರೆ ಮಹಿಳಾ ಟೆನ್ನಿಸ್ ಲೋಕದ ಖ್ಯಾತ ತಾರೆ ರಷ್ಯಾದ ಮರಿಯಾ ಶರಪೋವಾ ಹೆಸರು ಮಾದಕ ದ್ರವ್ಯ ಪ್ರಕರಣದಲ್ಲಿ ಕೇಳಿಬರುತ್ತಿರುವುದು ಅವರ ಅಭಿಮಾನಿಗಳಲ್ಲಿ ಭಾರಿ ನಿರಾಸೆ ಮೂಡಿಸಿದೆ.

Write A Comment