ಮನೋರಂಜನೆ

ಬರೊಬ್ಬರಿ 15 ದಾಖಲೆಗಳಿಗೆ ಸಾಕ್ಷಿಯಾದ ಭಾರತ-ಪಾಕ್ ಪಂದ್ಯ

Pinterest LinkedIn Tumblr

dc-Cover-go6ud7a02702s7l4jhdu4m5n50-20160227230509.Medi

ಮೀರ್ ಪುರ: ಭಾರತ ಮತ್ತು ಪಾಕಿಸ್ತಾನ ತಂಡಗಳು ಯಾವುದೇ ಸಂದರ್ಭದಲ್ಲಿ ಎದುರಾದರೂ ಒಂದಿಲ್ಲೊಂದು ದಾಖಲೆ ನಿರ್ಮಾಣವಾಗಿರುತ್ತದೆ. ಶನಿವಾರ ಮೀರ್ ಪುರದಲ್ಲಿ ನಡೆದ ಏಷ್ಯಾಕಪ್ ನ 4ನೇ ಲೀಗ್ ಪಂದ್ಯದಲ್ಲಿಯೂ ಇದು ಪುನಾರಾವರ್ತನೆಯಾಗಿದ್ದು, ಬರೊಬ್ಬರಿ 15 ಕ್ರಿಕೆಟ್ ದಾಖಲೆಗಳು ದಾಖಲಾಗಿವೆ.

ನಿನ್ನೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಪಾಕಿಸ್ತಾನವನ್ನು ಬ್ಯಾಟಿಂಗ್ ಆಹ್ವಾನಿಸಿ ಕೇವಲ 83 ರನ್ ಗಳಿಗೆ ಆಲ್ ಔಟ್ ಮಾಡಿತ್ತು. ಬಳಿಕ 5 ವಿಕೆಟ್ ಕಳೆದುಕೊಂಡು 85 ರನ್ ಗಳಿಸುವ ಮೂಲಕ ಭರ್ಜರಿ ಜಯ ಸಾಧಿಸಿತ್ತು. ಇದೀಗ ಈ ಪಂದ್ಯ ಹಲವು ಮಹತ್ವದ ದಾಖಲೆಗಳಿಗೆ ಕಾರಣವಾಗಿದೆ.

1.ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲಿಯೇ ಭಾರತದ ಆರಂಭಿಕರಿಬ್ಬರು ಶೂನ್ಯಕ್ಕೆ ಔಟಾಗಿರುವುದು ಇದೇ ಮೊದಲ ಬಾರಿ.

2.ನಿನ್ನೆಯ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಬ್ಯಾಟ್ಸಮನ್ ಗಳ ಮೇಲೆ ಸವಾರಿ ಮಾಡಿದ್ದ ಭಾರತೀಯ ಬೌಲರ್ ಗಳು ಕೇವಲ 10 ಓವರ್ ಗಳ ಅಂತರದಲ್ಲಿ ಪಾಕಿಸ್ತಾನದ 6 ವಿಕೆಟ್ ಗಳನ್ನು ಕಬಳಿಸಿದ್ದರು. ವಿಶ್ವ ಕ್ರಿಕೆಟ್ ನಲ್ಲಿ ಭಾರತ 3 ನೇ ಭಾರಿ ಈ ಸಾಧನೆ ಮಾಡಿದೆ.

3.ಮೀರ್ ಪುರ ಪಂದ್ಯದಲ್ಲಿ ರೋಹಿತ್ ಶರ್ಮಾ, ಅಜಿಂಕ್ಯಾ ರಹಾನೆ ಮತ್ತು ಹಾರ್ದಿಕ್ ಪಾಂಡ್ಯ ಶೂನ್ಯಕ್ಕೆ ಔಟಾಗಿದ್ದರು. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ ಭಾರತ ಮೂವರು ಬ್ಯಾಟ್ಸಮನ್ ಗಳು ಶೂನ್ಯಕ್ಕೆ ಔಟಾಗಿರುವುದು ಇದು ಮೂರನೇ ಬಾರಿ. ಈ ಹಿಂದೆ 2011ರಲ್ಲಿ ಇಂಗ್ಲೆಂಡ್ ವಿರುದ್ಧ ಮತ್ತು 2015ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತೀಯ ಮೂವರು ಬ್ಯಾಟ್ಸಮನ್ ಗಳು ಶೂನ್ಯಕ್ಕೆ ಔಟಾಗಿದ್ದರು.

4.ಮೊದಲ ಓವರ್ ನಲ್ಲಿಯೇ ಭಾರತ ಆಶೀಶ್ ನೆಹ್ರಾ ಅವರು ಪಾಕಿಸ್ತಾನದ ಆರಂಭಿಕರನ್ನು ಔಟ್ ಮಾಡುವ ಮೂಲಕ ಪಾಕಿಸ್ತಾನದ ಪತನಕ್ಕೆ ಕಾರಣದರು. ಆಶೀಶ್ ನೆಹ್ರಾ ಅವರ ಪಾಲಿಗೆ ಇದೊಂದು ದಾಖಲೆಯಾಗಿದ್ದು, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ ಪವರ್ ಪ್ಲೇ ಓವರ್ ನಲ್ಲಿ 6ನೇ ಬಾರಿಗೆ ಅವರು ಕನಿಷ್ಠ 1 ವಿಕೆಟ್ ಗಳಿಸಿದ ಸಾಧನೆ ಮಾಡಿದ್ದಾರೆ.

5.ಇನ್ನು ಭಾರತೀಯ ಬೌಲರ್ ಗಳ ಪ್ರಭಾವಿ ದಾಳಿಗೆ ತತ್ತರಿಸಿಹೋದ ಪಾಕಿಸ್ತಾನ ನಿನ್ನೆ 83 ರನ್ ಗಳಿಗೆ ಆಲ್ ಔಟ್ ಆಗಿತ್ತು. ಆ ಮೂಲಕ 7 ಬಾರಿ ಪಾಕಿಸ್ತಾನ ತಂಡ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ 100ಕ್ಕಿಂತಲೂ ಕಡಿಮೆ ರನ್ ಗಳಿಸಿದಂತಾಗಿದೆ.

6.ಪಾಕಿಸ್ತಾನದ ವಿರುದ್ಧದ ಈ ಪಂದ್ಯದ ಭಾರತದ ಆರಂಭ ತನ್ನ ಟಿ20 ಮಾದರಿಯಲ್ಲಿಯೇ ಅತ್ಯಂತ ಕಳಪೆ ಆರಂಭವಾಗಿತ್ತು. ಪವರ್ ಪ್ಲೇ ಓವರ್ ಗಳಲ್ಲಿ ಭಾರತ ಪ್ರಮುಖ 3 ವಿಕೆಟ್ ಕಳೆದುಕೊಂಡು ಕೇವಲ 21 ರನ್ ಗಳಿಸಿತು. ಈ ಹಿಂದೆ 2010ರಲ್ಲಿ ನಡೆದಿದ್ದ ವಿಶ್ವಕಪ್ ಸರಣಿಯ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತ ಪವರ್ ಪ್ಲೇ ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 24 ರನ್ ಗಳಿಸಿತ್ತು. ಇದು ಭಾರತ ತಂಡದ ಈ ವರೆಗಿನ ಆರಂಭಿಕ ಕಳಪೆ ಪ್ರದರ್ಶನವಾಗಿತ್ತು. ಇಂದಿನ ಪಂದ್ಯ ಆ ದಾಖಲೆಯನ್ನು ಹಿಂದಿಕ್ಕಿದೆ.

7.ಭಾರತದ ಆರಂಭಿಕರಿಬ್ಬರೂ ನಿನ್ನೆಯ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಆ ಮೂಲಕ ಪಾಕಿಸ್ತಾನ 2ನೇ ಬಾರಿಗೆ ಭಾರತದ ಆರಂಭಿಕರಿಬ್ಬರನ್ನು ಶೂನ್ಯಕ್ಕೆ ಔಟ್ ಮಾಡಿದ ಸಾಧನೆ ಮಾಡಿತು.

8.ನಿನ್ನೆಯ ಪಂದ್ಯದ ಗೆಲುವಿನೊಂದಿಗೆ ಪಾಕಿಸ್ತಾನ ಎದುರಿನ ತನ್ನ ದಾಖಲೆಯನ್ನು ಭಾರತ ಮತ್ತಷ್ಟು ಉತ್ತಮ ಪಡಿಸಿಕೊಂಡಿದೆ. ಉಭಯ ತಂಡಗಳು ಒಟ್ಟಾರೆ 6 ಭಾರಿ ಮುಖಾಮುಖಿಯಾಗಿದ್ದು, 4 ಬಾರಿ ಭಾರತ ಗೆದ್ದಿದ್ದರೆ ಒಂದು ಪಂದ್ಯವನ್ನು ಪಾಕಿಸ್ತಾನ ಗೆದ್ದಿದೆ. ಇನ್ನೊಂದು ಪಂದ್ಯ ಟೈ ಆಗಿತ್ತು. ವಿಶ್ವಕಪ್ ಟಿ20 ಸರಣಿಯಲ್ಲಿ ನಡೆದ ಆ ಪಂದ್ಯವನ್ನೂ ಕೂಡ ಭಾರತ ಬೌಲ್ ಔಟ್ ಮೂಲಕ ಗೆದ್ದುಕೊಂಡಿತ್ತು.

9.ಟಿ20 ಕ್ರಿಕೆಟ್ ನಲ್ಲಿ ಡಾಟ್ ಬಾಲ್ ಗಳನ್ನು ಗೋಲ್ಡೆನ್ ಬಾಲ್ ಎಂದೇ ಕರೆಯುತ್ತಾರೆ. ಏಕೆಂದರೆ ಈ ಮಾದರಿಯ ಕ್ರಿಕೆಟ್ ನಲ್ಲಿ ಒಂದೊಂದು ಎಸೆತವೂ ಬಹಳ ಮುಖ್ಯವಾಗಿರುತ್ತದೆ. ಅಂತಹುದರಲ್ಲಿ ನಿನ್ನೆಯ ಪಾಕಿಸ್ತಾನದ ಎದುರಿನ ಪಂದ್ಯದಲ್ಲಿ ಭಾರತದ ಜಸ್ ಪ್ರೀತ್ ಬುಮ್ರಾಹ್ ಅವರು ಬರೊಬ್ಬರಿ 18 ಡಾಟ್ ಬಾಲ್ ಗಳನ್ನು ಎಸೆದಿದ್ದರು. ಇದೊಂದು ದಾಖಲೆಯಾಗಿದ್ದು, ಬುಮ್ರಾಹ್ ಭಾರತದ ಪರ ಅತಿ ಹೆಚ್ಚು ಡಾಟ್ ಬಾಲ್ ಗಳನ್ನು ಎಸೆದ ಸಾಧನೆ ಮಾಡಿದರು.

10.ಪಾಕಿಸ್ತಾನ ತನ್ನ ಆರನೇ ವಿಕೆಟ್ ಜೊತೆಯಾಟದಲ್ಲಿ 42 ರನ್ ಗಳಿಸಿತು. ವಿಶ್ವದ ಯಾವುದೇ ತಂಡ ಭಾರತದ ವಿರುದ್ಧ 6ನೇ ವಿಕೆಟ್ ಜೊತೆಯಾಟದಲ್ಲಿ ಗಳಿಸಿದ ಅತ್ಯಂತ ಕನಿಷ್ಠ ಮೊತ್ತ ಇದಾಗಿತ್ತು.

11.ಭಾರತದ ಮಾರಕ ಬೌಲಿಂಗ್ ತತ್ತರಿಸಿದ ಪಾಕಿಸ್ತಾನ ಮೊದಲ 10 ಓವರ್ ನಲ್ಲಿ 42 ರನ್ ಗಳಿಸಿತ್ತು. ಇದು ಟಿ20 ಪಂದ್ಯದಲ್ಲಿ ಪಾಕಿಸ್ತಾನ ಗಳಿಸಿದ ಎರಡನೇ ಕನಿಷ್ಠ ಮೊತ್ತವಾಗಿದ್ದು, ಈ ಹಿಂದೆ ಇದೇ ಭಾರತ ತಂಡದ ವಿರುದ್ಧ 10 ಓವರ್ ನಲ್ಲಿ 3 ವಿಕೆಟ್ ನಷ್ಟಕ್ಕೆ 45 ರನ್ ಗಳಿಸಿತ್ತು.

12.ನಿನ್ನೆ ಪಾಕಿಸ್ತಾನ ಗಳಿಸಿದ 83ರನ್ ಭಾರತದ ವಿರುದ್ಧ ಆ ತಂಡಗಳಿಸಿದ ಇದುವರೆಗಿನ ಕನಿಷ್ಷ ಮೊತ್ತವಾಗಿದೆ. ಈ ಹಿಂದೆ 2012ರಲ್ಲಿ ಕೊಲಂಬೋದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಭಾರತದ ವಿರುದ್ಧ ಗಳಿಸಿದ್ದ 128 ರನ್ ಗಳೇ ಇದುವರೆಗಿನ ಕನಿಷ್ಠ ಮೊತ್ತವಾಗಿ ದಾಖಲಾಗಿತ್ತು.

13. ಅಂತೆಯೇ ಪಾಕಿಸ್ತಾನ83 ರನ್ ಟಿ20 ಪಂದ್ಯದಲ್ಲಿ ಆ ತಂಡದ ಮೂರನೇ ಕನಿಷ್ಠ ಮೊತ್ತವಾಗಿ ದಾಖಲಾಗಿದ್ದು, ಇದಕ್ಕೂ ಮೊದಲು ಆಸ್ಟ್ರೇಲಿಯಾ ವಿರುದ್ಧ 74 ಮತ್ತು ವೆಸ್ಟ್ ಇಂಡೀಸ್ ವಿರುದ್ಧ 82 ರನ್ ಗಳಿಗೆ ಆಲ್ ಔಟ್ ಆಗಿತ್ತು.
14.ನಿನ್ನೆ 49 ರನ್ ಗಳಿಸಿ ಪಂದ್ಯಪುರುಷೋತ್ತಮ ಪ್ರಶಸ್ತಿಗೆ ಭಾಜನರಾದ ವಿರಾಟ್ ಕೊಹ್ಲಿ, ಪಾಕಿಸ್ತಾನ ತಂಡದೆದುರು ತಮ್ಮ ಸರಾಸರಿ ಮೊತ್ತವನ್ನು ಹಿಗ್ಗಿಸಿಕೊಂಡರು. ನಿನ್ನೆಯ 49 ರನ್ ಗಳ ಮೂಲಕ ತಮ್ಮ ಒಟ್ಟಾರೆ ಸರಾಸರಿಯನ್ನು 66.33ಕ್ಕೆ ಏರಿಸಿಕೊಂಡಿದ್ದಾರೆ. ಪಾಕಿಸ್ತಾನದ ವಿರುದ್ಧ ಕೊಹ್ಲಿ ಈ ವರೆಗೂ 199 ರನ್ ಗಳಿಸಿದ್ದಾರೆ.

15.ಇದೇ ಪಂದ್ಯದಲ್ಲಿ 49 ರನ್ ಗಳಿಸಿದ ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್ ಸರಾಸರಿಯನ್ನು 73.44 ಸರಾಸರಿಗೆ ಏರಿಸಿಕೊಳ್ಳುವ ಮೂಲಕ ಉತ್ತಮ ಪಡಿಸಿಕೊಂಡಿದ್ದಾರೆ. ಇದು ಸೆಕೆಂಡ್ ಬ್ಯಾಟಿಂಗ್ ವೇಳೆ ವಿಶ್ವದ ಯಾವುದೇ ಆಟಗಾರ ಗಳಿಸಿದ ಅತ್ಯಂತ ಗರಿಷ್ಠ ಸರಾಸರಿಯಾಗಿದೆ. ಫಸ್ಟ್ ಬ್ಯಾಟಿಂಗ್ ವೇಳೆ ಕೊಹ್ಲಿ ಬ್ಯಾಟಿಂಗ್ ಸರಾಸರಿ 35.88ರಷ್ಟಿದೆ. ಆಸ್ಟ್ರೇಲಿಯಾದ ಮೈಕೆಲ್ ಹಸ್ಸಿ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಸೆಕೆಂಡ್ ಬ್ಯಾಟಿಂಗ್ ವೇಳೆ ಅವರ ಸರಾಸರಿ 52.62ರಷ್ಟಿದೆ.

Write A Comment