ಮನೋರಂಜನೆ

ನಟಿ ಮೇಘನಾ ರಾಜ್‌ ಮದುವೆ ಪುರಾಣ ಕಟ್ಟು ಕತೆ

Pinterest LinkedIn Tumblr

Meghana-Raj-at-Bhujanga-Filಬೆಂಗಳೂರು: ಚಲನಚಿತ್ರ ನಟಿ ಮೇಘನಾ ರಾಜ್‌ ತಮ್ಮನ್ನು ವಿವಾಹವಾಗಿ ಬಳಿಕ ವಂಚನೆ ಮಾಡಿದ್ದಾರೆ ಎಂದು ಚೆನ್ನೈ ಮೂಲದ ಉದ್ಯಮಿ ಜನಾರ್ದನ್‌ ಮಾಡಿರುವ ಆರೋಪ ಹಸಿ ಸುಳ್ಳು ಎಂದು ಪೊಲೀಸರು ಸ್ಪಷ್ಟಪಡಿಸಿದ್ದು, ಈ ಕುರಿತ ವಿವಾದಕ್ಕೆ ಅಂತಿಮ ತೆರೆ ಎಳೆದಿದ್ದಾರೆ.

ನಟಿ ಮೇಘನಾ ತನ್ನನ್ನು ಮದುವೆಯಾಗಿದ್ದು, ಬಳಿಕ ವಂಚಿಸಿದ್ದಾರೆ ಎಂದು ಚೆನ್ನೈ ಮೂಲದ ರಿಯಲ್‌ ಎಸ್ಟೇಟ್‌ ಉದ್ಯಮಿ ಕಳೆದ ಡಿಸೆಂಬರ್‌ನಲ್ಲಿ ನಗರ ಪೊಲೀಸ್‌ ಆಯುಕ್ತರಿಗೆ ಇ-ಮೇಲ್‌ ಮೂಲಕ ದೂರು ನೀಡಿ, ಆಕೆಯ ವಿರುದ್ಧ ತನಿಖೆ ನಡೆಸುವಂತೆ ಕೋರಿದ್ದರು. ಅದರಂತೆ ಪ್ರಕರಣದ ಕುರಿತ ತನಿಖೆಯನ್ನು ಆಯುಕ್ತರು ಜೆ.ಪಿ.ನಗರ ಪೊಲೀಸರಿಗೆ ವಹಿಸಿದ್ದರು. ತನಿಖೆ ನಡೆಸಿದ ಪೊಲೀಸರು, ನಟಿ ಮೇಘನಾ ರಾಜ್‌ ಜತೆ ಜನಾರ್ದನ್‌ ಮದುವೆಯಾಗಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರ ಲಭ್ಯವಾಗದ ಕಾರಣ ಪ್ರಕರಣವನ್ನು ಕೊನೆಗೊಳಿಸಿದ್ದಾರೆ.

ಈ ಬಗ್ಗೆ ಉದಯವಾಣಿಜತೆ ಗುರುವಾರ ಮಾತನಾಡಿದ ದಕ್ಷಿಣ ವಿಭಾಗದ ಡಿಸಿಪಿ ಬಿ.ಎಸ್‌.ಲೋಕೇಶ್‌ ಕುಮಾರ್‌, ನಟಿ ಮೇಘನಾರಾಜ್‌ ಜತೆ ಮದುವೆಯಾಗಿರುವುದಕ್ಕೆ ದೂರುದಾರ ಜರ್ನಾದನ್‌ ಅವರಲ್ಲಿ ಯಾವುದೇ ದಾಖಲಾತಿಗಳಿಲ್ಲ ಎಂದು ಸ್ಪಷ್ಟಪಡಿಸಿದರು.

ಜನಾರ್ದನ್‌ ನೀಡಿದ್ದ ದೂರಿನ ಬಗ್ಗೆ ಸೂಕ್ತ ವಿಚಾರಣೆ ನಡೆಸಲಾಗಿದೆ. ಆತನಿಗೆ ಮೇಘನಾ ರಾಜ್‌ ಅವರ ಮೊಬೈಲ್‌ ಸಂಖ್ಯೆಯಾಗಲಿ, ಮನೆ ವಿಳಾಸವಾಗಲೀ ಯಾವುದೂ ಗೊತ್ತಿಲ್ಲ. ಜನಾರ್ದನ್‌ ಇ-ಮೇಲ್‌ ಮೂಲಕ ಆಯುಕ್ತರಿಗೆ ನೀಡಿದ್ದ ದೂರು ಆಧರಿಸಿ ವಿಚಾರಣೆ ನಡೆಸಲಾಯಿತು. ದೂರಿನ ಜತೆ ಯಾವುದೇ ದಾಖಲೆ ಸಲ್ಲಿಸದ ಕಾರಣ ಎಫ್ಐಆರ್‌ ದಾಖಲಿಸಿಕೊಳ್ಳದೆ ಮೊದಲು ದೂರಿನ ಸತ್ಯಾಸತ್ಯತೆ ತಿಳಿದುಕೊಳ್ಳುವ ಪ್ರಯತ್ನ ಮಾಡಲಾಯಿತು. ಆದರೆ, ಆತ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆ ಲಭ್ಯವಾಗಿಲ್ಲ ಎಂದು ಹೇಳಿದರು.

ಚೆನ್ನೈ ನಗರದಲ್ಲಿ ನೆಲೆಸಿರುವ ಜರ್ನಾದನ್‌ ಅವರನ್ನು ವಿಚಾರಣೆಗೊಳಪಡಿಸಿ ಹೇಳಿಕೆ ಪಡೆಯಲಾಯಿತು. 2015ರಲ್ಲಿ ತಾನು ಮದುವೆಯಾಗಿದ್ದು, ಮೇಘನಾರಲ್ಲಿ ಮದುವೆಗೆ ಸಂಬಂಧಿಸಿದ ದಾಖಲೆಗಳಿವೆ ಎಂದಿದ್ದರು. ಆದರೆ, ಈ ಬಗ್ಗೆ ಪರಿಶೀಲಿಸಿದಾಗ ಮದುವೆಯನ್ನು ಸಾಕ್ಷೀಕರಿಸುವ ಕುರುಹುಗಳು ಲಭ್ಯವಾಗಿಲ್ಲ. ಹಾಗಾಗಿ ದೂರನ್ನು ಮುಕ್ತಾಯಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕನ್ನಡ ಚಿತ್ರರಂಗದ ಹಿರಿಯ ನಟ ಸುಂದರಾಜ್‌ ಹಾಗೂ ಪ್ರಮೀಳಾ ಜೋಷಾಯ್‌ ದಂಪತಿಯ ಪುತ್ರಿ ಮೇಘನಾ ರಾಜ್‌ ಅವರು ಯಶ್‌ ನಟನೆಯ ರಾಜಾ ಹುಲಿ, ಬಹುಪರಾಕ್‌ ಹಾಗೂ ಆಟಗಾರ ಸೇರಿದಂತೆ ಐದಾರು ಚಿತ್ರಗಳಲ್ಲಿ ನಟಿಸಿದ್ದಾರೆ. 2015ರ ಫೆ.26 ರಂದು ಮೇಘನಾ ರಾಜ್‌ ಜತೆ ತನಗೆ ಮದುವೆಯಾಗಿದೆ. ಬಳಿಕ ಆಕೆ ನನ್ನಿಂದ ದೂರವಾಗಿ ವಂಚನೆ ಮಾಡಿದ್ದಾರೆ ಎಂದು ಜನಾರ್ದನ್‌ ಆರೋಪಿಸಿದ್ದರು. ಅಲ್ಲದೆ, ವಂಚನೆ ಎಸಗಿರುವ ಮೇಘನಾ ರಾಜ್‌ ವಿರುದ್ಧ ತನಿಖೆ ನಡೆಸುವಂತೆ ಕೋರಿದ್ದರು.

ಮಾನಸಿಕ ಸಮಸ್ಯೆ:
ಮೇಘನಾ ರಾಜ್‌ ವಿರುದ್ಧ ಮದುವೆಯಾಗಿ ವಂಚನೆ ಆರೋಪ ಮಾಡಿರುವ ಜನಾರ್ದನ್‌ ಮಾನಸಿಕ ಸಮಸ್ಯೆ ಎದುರಿಸುತ್ತಿರುವ ಅನುಮಾನ ಮೂಡಿದೆ. ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಆತ ಈ ರೀತಿ ಅಸಂಬದ್ಧ ಆರೋಪ ಮಾಡುತ್ತಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಮೇಘನಾ ರಾಜ್‌ ವಿರುದ್ಧ ಮದುವೆಯಾಗಿ ವಂಚನೆ ಎಸಗಿದ ಆರೋಪ ವಿಚಾರಣೆ ಬಳಿಕ ಸುಳ್ಳು ಎಂಬುದು ಖಚಿತವಾಗಿದೆ. ದೂರುದಾರ ಜನಾರ್ದನ್‌ ಅವರಲ್ಲಿ ಈ ಆರೋಪದ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಹೀಗಾಗಿ ಪ್ರಕರಣದ ಬಗ್ಗೆ ಎಫ್ಐಆರ್‌ ದಾಖಲಿಸಿಕೊಳ್ಳದೆ ಅಂತಿಮ ತೆರೆ ಎಳೆಯಲಾಗಿದೆ.
-ಬಿ.ಎಸ್‌.ಲೋಕೇಶ್‌ ಕುಮಾರ್‌, ಡಿಸಿಪಿ, ದಕ್ಷಿಣ ವಿಭಾಗ
-ಉದಯವಾಣಿ

Write A Comment