ಮನೋರಂಜನೆ

ವಿಶ್ವನಾಥ್‌ ಸುಳಿಯಲ್ಲಿ ಸಿಲುಕಿದ ಪ್ರಣಯ ರಾಜ

Pinterest LinkedIn Tumblr
  1. Suli-(6)ನೀವು ಅಭಿನಯಿಸುವುದಾದರೆ ಹೇಳಿ, ಮಾಡ್ತೀನಿ. ಇಲ್ಲ ಬೇಡ …’ ಎಂದರಂತೆ ಪಿ.ಎಚ್‌. ವಿಶ್ವನಾಥ್‌. ಅವರ ಮಾತು ಕೇಳಿ ಶ್ರೀನಾಥ್‌ ಅವರಿಗೆ ಖುಷಿಯಾಯಿತಂತೆ. “ಹೊಸದೊಂದು ಚಾಲೆಂಜ್‌ ಸಿಕ್ಕಿದೆ, ಒಪ್ಪಿಸಿಕೊಳ್ತೀನಿ, ಏನ್‌ ಬೇಕಾದ್ರೂ ಮಾಡು’ ಅಂದರಂತೆ. ಅಲ್ಲಿಂದ ಶುರುವಾಗಿದೆ “ಸುಳಿ’ ಸುತ್ತೋ ಕೆಲಸ. ಆ “ಸುಳಿ’ ಈಗ ಮುಗಿದಿರೋದಷ್ಟೇ ಅಲ್ಲ, ಬಿಡುಗಡೆಗೂ ರೆಡಿಯಾಗಿದೆ. ಎಲ್ಲಾ ಅಂದುಕೊಂಡಂತೆ ಆದರೆ, ಏಪ್ರಿಲ್‌ನಲ್ಲಿ ಬಿಡುಗಡೆಯೂ ಆಗಲಿದೆ. ಶ್ರೀನಾಥ್‌, “ಸುಳಿ’ ಚಿತ್ರದಲ್ಲಿ ನಟಿಸುತ್ತಿರುವುದಷ್ಟೇ ಅಲ್ಲ, ಅವರ ಪತ್ನಿ ಗೀತಾ ಶ್ರೀನಾಥ್‌ ಈ ಚಿತ್ರದ ನಿರ್ಮಾಪಕರಲ್ಲೊಬ್ಬರು. ಹಾಗಾಗಿ ಶ್ರೀನಾಥ್‌ಗೆ ಈ ಚಿತ್ರ ಬಹಳ ಹತ್ತಿರ.ಶ್ರೀನಾಥ್‌ ಅವರಿಗೆ ಈ ಚಿತ್ರ ಹತ್ತಿರವಾಗೋದಕ್ಕೆ ಕಾರಣ ಚಿತ್ರದ ಕಥೆ. ವಿಶ್ವನಾಥ್‌ ಅವರು ಕಥೆ ಕೇಳಿ ಎಂದು ಹೇಳಿದಾಗ, ಕಥೆ ಕೇಳಿದ ಶ್ರೀನಾಥ್‌ ಖುಷಿಯಾಗಿ, ತಯಾರಿ ಮಾಡಿಕೊಳ್ಳಿ ಎಂದು ಹೇಳಿ ಅಮೇರಿಕಾಗೆ ಹೊರಟು ಬಿಟ್ಟರಂತೆ. ವಾಪಸ್ಸು ಬರುವಷ್ಟರಲ್ಲಿ ವಿಶ್ವನಾಥ್‌ ಆ ಕಥೆಯನ್ನು ಇನ್ನಷ್ಟು ತಿದ್ದಿ, ತೀಡಿ ಮಾಡಿದ್ದಾರೆ. ಬಂದ ನಂತರ ವಿಶ್ವನಾಥ್‌ ಪೂರ್ತಿ ಚಿತ್ರಕಥೆ ವಿವರಿಸಿದರಂತೆ. ಅದು ಶ್ರೀನಾಥ್‌ ಅವರ ಹೃದಯ ತಟ್ಟಿತಂತೆ. “ನನ್ನ ಚಿತ್ರಜೀವನಲದಲ್ಲಿ “ಶುಭ ಮಂಗಳ’, “ಧರ್ಮಸೆರೆ’, “ಮಾನಸ ಸರೋವರ’ದಂತಹ ಅಪರೂಪದ ಚಿತ್ರಗಳು ಸಿಕ್ಕಿವೆ. ಅದೇ ತರಹ ಈ “ಸುಳಿ’ಯೂ ಒಂದು. ವಿಶ್ವನಾಥ್‌ ಬಹಳ ಚೆನ್ನಾಗಿ ಚಿತ್ರಕಥೆ ಬರೆದಿರೋದಷ್ಟೇ ಅಲ್ಲ, ಅದನ್ನು ತೆರೆಗೂ ತಂದಿದ್ದಾರೆ’ ಎಂದು ಖುಷಿಯಾದರು ಶ್ರೀನಾಥ್‌.

    ಈ ಚಿತ್ರದಲ್ಲಿ ನಟಿಸುವಾಗ ನಿಜಕ್ಕೂ ಕಣ್ಣಲ್ಲಿ ನೀರು ಬಂತಂತೆ ಶ್ರೀನಾಥ್‌ ಅವರಿಗೆ. “ತಂದೆ-ಮಗಳ ಕಥೆ ಇದು. ಜೀವನದಲ್ಲಿ ಬರುವ ಸುಳಿಯಿಂದ ಅವರು ಪಾರಾಗ್ತಾರಾ ಅಥವಾ ಆ ಸುಳಿಗೆ ಸಿಲುಕುತ್ತಾರಾ ಎಂಬುದು ಕಥೆ. ಕೊನೆಕೊನೆಯಲ್ಲಿ ನಟಿಸೋಕೇ ಹೋಗಲಿಲ್ಲ. ಆಟೋಮ್ಯಾಟಿಕ್‌ ಆಗಿಯೇ ಕಣ್ಣಿನಲ್ಲಿ ನೀರು ಬಂತು. ಚಿತ್ರ ಬಹಳ ನೀಟ್‌ ಆಗಿ ಮೂಡಿ ಬಂದಿದೆ. ಈ “ಸುಳಿ’ಗೆ ಸಿಗಿಸಿ, ಮೇಲೆ ತೆಗೆಸಿದ್ದು ವಿಶ್ವನಾಥ್‌. ಚಿತ್ರೀಕರಣ ಪ್ರಾರಂಭವಾದ ಮೂರನೆಯ ದಿನದ ಹೊತ್ತಿಗೆ ಅವರಲ್ಲಿ ನನ್ನ ಗುರುಗಳ (ಪುಟ್ಟಣ್ಣ ಕಣಗಾಲ್‌) ಅವರನ್ನ ಕಂಡೆ. ನಿಮ್ಮನ್ನ ನಾನು ಬೇರೆ ತರಹ ತೋರಿಸಬೇಕು ಎಂದು ಚಿತ್ರದ ಆರಂಭದಲ್ಲಿ ಅವನು ಹೇಳಿದ ಮಾತನ್ನ ನಿಜ ಮಾಡಿದ್ದಾನೆ’ ಎಂದರು ಶ್ರೀನಾಥ್‌.

    ಶ್ರೀನಾಥ್‌ ಅವರು ಅಮೇರಿಕಾದಲ್ಲಿದ್ದಾಗಲೇ, ವಿಶ್ವನಾಥ್‌ ಒಮ್ಮೆ ಫೋನ್‌ ಮಾಡಿ, ನೀವು ಗಡ್ಡ ಬಿಡಿ ಎಂದು ಹೇಳಿದ್ದರಂತೆ. ಅದೇಕೆ ಎಂದು ಆ ಕ್ಷಣಕ್ಕೆ ಶ್ರೀನಾಥ್‌ ಅವರಿಗೂ ಅರ್ಥವಾಗಿಲ್ಲ. ಕೊನೆಗೆ ವಾಪಸ್ಸು ಬರುವಷ್ಟರಲ್ಲಿ ಪಾತ್ರಕ್ಕೆ ಹೇಳಿ ಮಾಡಿಸಿದಂತಾಗಿದ್ದಾರೆ. “ಇದೊಂದು ಹಳ್ಳಿಗಾಡಲ್ಲಿ ನಡೆಯುವ ಕಥೆ. ನಮ್ಮಲ್ಲಿ ಈಗಲೂ ಅದೆಷ್ಟೋ ಹಳ್ಳಿಗಳಿಗೆ ಸಂಪರ್ಕವೇ ಇಲ್ಲ. ಅಂಥದ್ದೊಂದು ಹಳ್ಳಿಯ ಕಥೆ ಇದು. ಅಲ್ಲಿನ ಜನಜೀವನ ಹೇಗಿರುತ್ತೆ, ಆ ಜನರ ಮುಗ್ಧತೆ ಹೇಗಿರುತ್ತದೆ ಮತ್ತು ಅದನ್ನೆಲ್ಲಾ ಜನ ಹೇಗೆ ದುರಪಯೋಗ ಮಾಡಿಕೊಳ್ಳುತ್ತಾರೆ, ಈ ನಡುವೆ ತಂದೆ ಮತ್ತು ಮಗಳ ಪ್ರೀತಿ ಹಾಗೂ ಅವರ ತ್ಯಾಗ … ಇವೆಲ್ಲವನ್ನೂ ಈ ಚಿತ್ರದಲ್ಲಿ ಹೇಳುವ ಪ್ರಯತ್ನವನ್ನು ಮಾಡಿದ್ದೇನೆ’ ಎಂದರು ವಿಶ್ವನಾಥ್‌.

    ಈ ಚಿತ್ರದಲ್ಲಿ ತಂತ್ರಜ್ಞರು ಹಳಬರು ಎಂಬುದನ್ನು ಬಿಟ್ಟರೆ, ಕಲಾವಿದರ ಪೈಕಿ ಶ್ರೀನಾಥ್‌ ಹಳಬರು ಎನ್ನುವುದು ಬಿಟ್ಟರೆ, ಸಾಕಷ್ಟು ಹೊಸಬರು ಇದ್ದಾರಂತೆ. ಈ ಚಿತ್ರದಲ್ಲಿ ಪ್ರಗತಿ, ಅಶ್ವಿ‌ತಿ, ಅದ್ವಿತಿ, ರಾಹುಲ್‌, ಶುಭಶ್ರೀ, ಚೆನ್ನಕೇಶವ ಮುಂತಾದ ಹೊಸಬರು ನಟಿಸಿದರೆ, ತಂತ್ರಜ್ಞರ ಪೈಕಿ ಛಾಯಾಗ್ರಾಹಕ ಮಂಜುನಾಥ್‌, ಸಂಕಲನಕಾರ ಬಿ.ಎಸ್‌. ಕೆಂಪೆರಾಜು, ಬರಹಗಾರ ನಾ. ದಾಮೋದರ ಶೆಟ್ಟಿ ಮುಂತಾದ ಹಿರಿಯರು ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ ಎನ್ನುವುದು ವಿಶೇಷ. ಅವರ ಜೊತೆಗೆ ನಿರ್ಮಾಪಕರಾದ ಗೀತಾ ಶ್ರೀನಾಥ್‌ ಮತ್ತು ಸತ್ಯನಾರಾಯಣ್‌ ಸಹ ಇದ್ದರು. ಎಲ್ಲರೂ ಚಿತ್ರದ ಬಗ್ಗೆ ಖುಷಿಯಾಗಿ ಮಾತನಾಡಿದರು.
    -ಚೇತನ್‌ ನಾಡಿಗೇರ್‌

    -ಉದಯವಾಣಿ

Write A Comment