ಮನೋರಂಜನೆ

ಮೂರು ಸಿನಿಮಾ ಕೈಯಲ್ಲಿ, ಹುಮ್ಮಸ್ಸು ಮೈಯಲ್ಲಿ; ವೆಂಕಟ್ ಇಸ್ ಬಿಜಿ!

Pinterest LinkedIn Tumblr

Porki-Huccha-Venkat_(123)ಬ್ರಾಂದಿ, ವಿಸ್ಕಿ, ಬೀರು, ಜಿಮ್ಮು, ರಮ್ಮು… ಇವೆಲ್ಲದ್ದಕ್ಕಿಂತ ಕಿಕ್‌ ಕೊಡೋದು ಅಂದ್ರೆ ಪ್ರೀತಿ ಕಣೋ… ನಾನು  ಪೊರ್ಕಿನಾ, ರೌಡಿನಾ  ನೀನೇ ಹೇಳು ಮಗಾ…ಹೀಗೆ ಹಾಡಿ, ಕುಣಿದು ಕುಪ್ಪಳಿಸಿದ್ದನ್ನು ತೋರಿಸಿ ಹೇಳ್ಳೋಕೆ ಪತ್ರಕರ್ತರ ಎದುರು ಬಂದಿದ್ದರು ನಿರ್ದೇಶಕ ಕಮ್‌ ನಟ ವೆಂಕಟ್‌. ಅವರು ಹಾಡಿ, ಕುಣಿದಿದ್ದು ಅವರ ನಿರ್ದೇಶನ ಮತ್ತು ನಟನೆಯ “ಪೊರ್ಕಿ ಹುಚ್ಚ ವೆಂಕಟ್‌’ ಚಿತ್ರದಲ್ಲಿ. ಇತ್ತೀಚೆಗಷ್ಟೇ ಚಿತ್ರೀಕರಣ ಶುರುವಾಗಿತ್ತು. ಒಂದು ತಿಂಗಳಲ್ಲೇ ಚಿತ್ರದ ಆಡಿಯೋ ಬಿಡುಗಡೆಗೆ ಚಿತ್ರತಂಡದ ಸಮೇತ ಬಂದಿದ್ದರು ವೆಂಕಟ್‌. ಅಂದು ಚಿತ್ರದ ಹಾಡೊಂದನ್ನು ತೋರಿಸುವ ಜತೆಯಲ್ಲಿ ಚಿತ್ರದ ಬಗ್ಗೆ ಹೇಳುತ್ತಾ ಹೋದರು ವೆಂಕಟ್‌. ಅವರ ತಂದೆ ಲಕ್ಷ್ಮಣ್‌ಗೌಡ ಅಂದು ಧ್ವನಿಸುರುಳಿ ಬಿಡುಗಡೆ ಮಾಡಿದ್ದು ವಿಶೇಷ. ವೇದಿಕೆಯಲ್ಲಿ ಅವರ ಸಹೋದರರ ಹಾಜರಿ ಇತ್ತು. ತಮ್ಮ ಎಂದಿನ ಶೈಲಿಯಲ್ಲೇ ಮಾತಿಗಿಳಿದ ವೆಂಕಟ್‌, ಹೇಳಿದ್ದಿಷ್ಟು.

“ನಾನೀಗ ಬಿಜಿ. ಮೂರು ಸಿನಿಮಾ ಒಪ್ಪಿಕೊಂಡಿದ್ದೇನೆ. ಎಸ್‌.ನಾರಾಯಣ್‌ ಅವರ “ಡಿಕ್ಟೇಟರ್‌’ ಸೇರಿದಂತೆ, ಹೊಸಬರ ಎರಡು ಚಿತ್ರಗಳಲ್ಲಿ ಅತಿಥಿಯಾಗಿ ನಟಿಸುತ್ತಿದ್ದೇನೆ. ಹಾಗೇ, ಬೇರೆ ಚಿತ್ರದಲ್ಲಿ ಹಾಡೂ ಹಾಡುತ್ತಿದ್ದೇನೆ. ಇನ್ನುಳಿದಂತೆ ಫೇಸ್‌ಬುಕ್‌ ಮತ್ತು ಯೂಟ್ಯೂಬ್‌ನಲ್ಲಿ ನನ್ನ ಕೆಲ ಸಂದೇಶಗಳನ್ನು ಪೋಸ್ಟ್‌ ಮಾಡುವ ಕೆಲಸ ನಡೆಯುತ್ತಿದೆ. ಅದಕ್ಕೆ ಒಳ್ಳೆಯ ಪ್ರತಿಕ್ರಿಯೆ ಕೂಡ ಸಿಗುತ್ತಿದೆ. ಈಗ “ಪೊರ್ಕಿ ಹುಚ್ಚವೆಂಕಟ್‌’ ಚಿತ್ರಕ್ಕೆ ಒಂದು ಹಾಡಿನ ಚಿತ್ರೀಕರಣ ಮುಗಿದಿದೆ. ಒಂದೇ ಹಂತದಲ್ಲಿ ಚಿತ್ರೀಕರಿಸುವ ಐಡಿಯಾ ಇದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಡಿಸೆಂಬರ್‌ ಹೊತ್ತಿಗೆ ಚಿತ್ರ ರಿಲೀಸ್‌ ಮಾಡ್ತೀನಿ’ ಅಂದರು ವೆಂಕಟ್‌.

“ನನ್ನಮ್ಮ ನಂಗೆ ಯಾವಾಗ್ಲೂ “ಪೊರ್ಕಿ’ ಅಂತಿದ್ರು. ಅದೇ ಹೆಸರನ್ನಿಟ್ಟುಕೊಂಡು ಚಿತ್ರ ಮಾಡಿದ್ದೀನಿ. ಈ ಚಿತ್ರ ಅನೌನ್ಸ್‌ ಮಾಡಿದಾಗ, ಬೇರೆಯವರು ಬಂದು ನಿರ್ಮಾಣಕ್ಕೆ ಸಾಥ್‌ ಕೊಡ್ತೀನಿ ಅಂದ್ರು. ಆದರೆ, ನಾನೇ ಬೇಡ, ಎಷ್ಟೇ ರಿಸ್ಕ್ ಆದರೂ ಸರಿ, ನಾನೇ ಮಾಡ್ತೀನಿ ಅಂತ ಚಿತ್ರ ಮಾಡುತ್ತಿದ್ದೇನೆ. ಇಲ್ಲಿ ಜೀವನ ಬಗ್ಗೆ ಹೇಳಿದ್ದೇನೆ. ಪ್ರೀತಿ ಕುರಿತಾದ ಸಂದೇಶವಿದೆ. ಈಗಿನ ಯೂತ್ಸ್ ಬಗ್ಗೆಯೂ ಪ್ರಸ್ತಾಪವಿದೆ. ಚಿತ್ರದಲ್ಲಿ 6 ಹಾಡುಗಳಿದ್ದು, “ಕಾವೇರಿ ನಿನ್ನ ಮಡಿಲಲ್ಲಿ’ ಎಂಬ ಹಾಡನ್ನು ನಾನು ಹಾಡಿದ್ದೇನೆ. ಉಳಿದ ಹಾಡನ್ನು ರಾಜೇಶ್‌ಕೃಷ್ಣ, ಅನುರಾಧ ಭಟ್‌ ಹಾಡಿದ್ದಾರೆ’ ಅಂತ ವಿವರ ಕೊಟ್ಟರು ವೆಂಕಟ್‌.

ಸಂಗೀತ ನಿರ್ದೇಶಕ ಸತೀಶ್‌ಬಾಬು, ವೆಂಕಟ್‌ ಗುಣಗಾನ ಮಾಡಿದರು. “ಈ ಸಿನಿಮಾ ಶುರು ಮಾಡೋಕೆ ಹೊರಟಾಗ ವೆಂಕಟ್‌ ಬಳಿ ಹಣ ಇರಲಿಲ್ಲ. ಒಮ್ಮೆ ಫೋನ್‌ ಮಾಡಿ “ಹಾಡು ರೆಕಾರ್ಡ್‌ ಮಾಡೋಣ ಅಂದುಕೊಂಡಿದ್ದೇನೆ. ಆದರೆ, ಹಣ ಇಲ್ಲ’ ಅಂದ್ರು. ಆಗ ನೀವು ಬನ್ನಿ ಕೆಲಸ ಮಾಡೋಣ ಅಂತ ಕರೆದು ಹಾಡು ರೆಕಾರ್ಡ್‌ ಶುರು ಮಾಡಿದೆ. ಈಗ ಆಡಿಯೋ ಹೊರಬಂದಿದೆ. ಚಿತ್ರ ಚೆನ್ನಾಗಿ ಮೂಡಿಬರುತ್ತೆ ಎಂಬ ನಂಬಿಕೆ ಇದೆ’ ಅಂದರು ಸತೀಶ್‌ ಬಾಬು.

ವೆಂಕಟ್‌ ಸಹೋದರ ಬಾಬು, ಕ್ಯಾಮೆರಾಮೆನ್‌ ಚೌಹಾಣ್‌, ಮ್ಯಾನೇಜರ್‌ ಈಶ್ವರ್‌ ಈ ವೇಳೆ ವೆಂಕಟ್‌ ಕೆಲಸ ಕೊಂಡಾಡಿದರು. ಅವರೊಳಗಿನ ಒಳ್ಳೆಯ ಮನಸ್ಸಿನ ಬಗ್ಗೆ ಹೇಳಿಕೊಂಡರು. ಕೊನೆಗೆ ವೆಂಕಟ್‌ ತಂದೆ ಲಕ್ಷ್ಮಣ್‌ಗೌಡ ಆಡಿಯೋ ರಿಲೀಸ್‌ ಮಾಡುತ್ತಿದ್ದಂತೆ ಪತ್ರಿಕಾಗೋಷ್ಠಿಗೂ ತೆರೆಬಿತ್ತು.
-ವಿಜಯ್‌ ಭರಮಸಾಗರ
-ಉದಯವಾಣಿ

Write A Comment