ಮನೋರಂಜನೆ

‘ಗಜಪಡೆ’ಯ ವಿಸ್ಮಯ ತನ್ಮಯ!

Pinterest LinkedIn Tumblr

crec05tanmayaಮೈಸೂರಿನ ಹುಡುಗಿ ತನ್ಮಯ ಪ್ರತಿವರ್ಷ ತನ್ನೂರಲ್ಲಿ ನಡೆಯುತ್ತಿದ್ದ ‘ರಜಾ ಮಜಾ’ ಬೇಸಿಗೆ ಶಿಬಿರ ಸೇರಿದ್ದರು. ಅಲ್ಲಿನ ಸೃಜನಶೀಲ ಚಟುವಟಿಕೆಗಳ ಮೂಲಕ ರಂಗಭೂಮಿ ಆಸಕ್ತಿ ಬೆಳೆಸಿಕೊಂಡ ತನ್ಮಯ ಕಾಲೇಜು ದಿನಗಳಲ್ಲಿ ಹೊರಳಿದ್ದು ಮಂಡ್ಯ ರಮೇಶ್ ಅವರ ‘ನಟನ’ ರಂಗಶಾಲೆಯತ್ತ. ‘ನಟನ’ ತನ್ನ ಬದುಕನ್ನೇ ಬದಲಾಯಿಸಿತು ಎಂಬುದು ತನ್ಮಯ ನಂಬುಗೆ. ಮುಂದೆ ಧಾರಾವಾಹಿ, ಸಿನಿಮಾ ಹೀಗೆ ಅವರ ಜಗತ್ತು ವಿಸ್ತಾರವಾಗುತ್ತ ಬಂತು. ಇಂದು (ಫೆ. 5) ತನ್ನ ಅಭಿನಯದ ‘ಗಜಪಡೆ’ ಚಿತ್ರ ತೆರೆ ಕಾಣುತ್ತಿರುವುದು ತನ್ಮಯಗೆ ಎಲ್ಲಿಲ್ಲದ ಹಿಗ್ಗು ತಂದಿದೆ.

ಒಂದನೇ ತರಗತಿಯಿಂದಲೇ ಭರತನಾಟ್ಯ ತರಬೇತಿ ಪಡೆದ ತನ್ಮಯಗೆ ಹೆತ್ತವರು ಬೆಂಬಲವಾಗಿ ನಿಂತಿದ್ದಾರೆ. ಮಗಳಿಗಾಗಿ ಅವರು ಮೈಸೂರಿನಿಂದ ಬೆಂಗಳೂರಿಗೆ ವಾಸ್ತವ್ಯವನ್ನೂ ಬದಲಾಯಿಸಿದರು. ಹೆತ್ತವರು ಬೆನ್ನಿಗೆ ನಿಂತಿದ್ದರಿಂದಲೇ ತನ್ಮಯ ಭರತನಾಟ್ಯ, ಕಾಲೇಜು, ‘ನಟನ’, ನಾಟಕ ಪ್ರದರ್ಶನ, ಧಾರಾವಾಹಿ, ಸಿನಿಮಾ ಎಲ್ಲವನ್ನು ನಿಭಾಯಿಸಿದ್ದು.

‘ನಟನ’ ಮತ್ತು ಜೀವನ
ಹಾಡು, ಜಾನಪದ ನೃತ್ಯ ಸೇರಿದಂತೆ ಇನ್ನೂ ಅನೇಕ ಕಲಾ ಪ್ರಕಾರಗಳನ್ನು ‘ನಟನ’ ಕಲಿಸಿತು. ಚಿಕ್ಕ ಚಿಕ್ಕ ಪಾತ್ರಗಳಿಂದ ಆರಂಭಿಸಿದ ತನ್ಮಯ ಮುಖ್ಯ ಪಾತ್ರಕ್ಕೂ ಬಡ್ತಿ ಪಡೆದರು. ನಿರೀಕ್ಷೆಗಿಂತಲೂ ಹೆಚ್ಚಿನದನ್ನೇ ‘ನಟನ’ ನೀಡಿತು. ‘ನಟನ’ದ ಅಂಗವಾಗಿದ್ದು ಅದೃಷ್ಟ ಎನ್ನುತ್ತಾರೆ ತನ್ಮಯ.

ರಂಗ ಚಟುವಟಿಕೆ, ಧಾರಾವಾಹಿ, ಸಿನಿಮಾಗಳ ನಡುವೆ ಕಾಲೇಜು ತಪ್ಪಿಸುವಂತಿರಲಿಲ್ಲ. ಕಾಲೇಜಿನ ಅವಧಿಯಲ್ಲೇ ನಟನೆಗೂ ಸಮಯ ಕೊಡಬೇಕಿದ್ದ ಅವರು ಹಾಜರಾತಿ ಕಡಿಮೆಯಾಗಿದ್ದಕ್ಕೆ ದಂಡ ಕಟ್ಟಿದ್ದೂ ಇದೆ. ಹಾಗಿದ್ದೂ ‘ನಟನ’ದ ಜೊತೆ ಇನ್ನೂರಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ಭಾಗಿಯಾಗಿದ್ದಾರೆ. ‘ಚೋರ ಚರಣದಾಸ’, ‘ಅಗ್ನಿ ಮತ್ತು ಮಳೆ’, ‘ವಕ್ರ’, ‘ಸತ್ರು ಅಂದ್ರೆ ಸತ್ರಾ’ ಇವು ಮಾತಿನ ಮಧ್ಯೆ ತನ್ಮಯ ನೆನಪಿಸಿಕೊಳ್ಳುವ ಪ್ರಮುಖ ನಾಟಕಗಳು.

ಚಿಕ್ಕಂದಿನಲ್ಲಿ ಅಷ್ಟೇನೂ ಚೂಟಿ ಆಗಿರದ ತನ್ಮಯ ಹೈಸ್ಕೂಲು ಸೇರುವ ಹೊತ್ತಿಗೆ ನೃತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಗುರ್ತಿಸಿಕೊಂಡರು. ‘ನಟನ’ಕ್ಕೆ ಸೇರಿದ ಮೇಲೆ ಅವರ ಆತ್ಮವಿಶ್ವಾಸ ಇಮ್ಮಡಿಸಿತ್ತು. ಬದುಕನ್ನು ನೋಡುವ ಕೋನವೇ ಬದಲಾಗಿತ್ತು. ಎಲ್ಲರಿಗಿಂತ ಭಿನ್ನವಾದದ್ದೇನೋ ಮಾಡುತ್ತಿದ್ದೇನೆ ಎಂಬ ಯೋಚನೆಯೇ ಅವರಲ್ಲಿ ಧೈರ್ಯ ಮೂಡಿಸಿತ್ತು.

ಸಿನಿಮಾ ಯಾನ
ನಾಟಕದಲ್ಲಿ ತನ್ಮಯ ಅವರ ಅಭಿನಯ ನೋಡಿದ ಜಿ.ಆರ್. ಸತ್ಯಲಿಂಗರಾಜು ಅವರು ತಮ್ಮ ‘ಗೌರ್ಮೆಂಟ್ ಬ್ರಾಹ್ಮಣ’ ಚಿತ್ರದಲ್ಲಿ ನಟಿಸುವಂತೆ ಕೇಳಿದರು. ಆ ಚಿತ್ರದ ಸಂಕಲನದ ಸಂದರ್ಭದಲ್ಲಿ ತನ್ಮಯ ಅಭಿನಯವನ್ನು ಮೆಚ್ಚಿದ ಜಿ. ಮೂರ್ತಿಯವರು ‘ಸಿದ್ಧಗಂಗಾ’ ಸಿನಿಮಾದಲ್ಲಿ ಅವಕಾಶ ನೀಡಿದರು. ತನ್ಮಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ಮೊದಲ ಚಿತ್ರವಿದು. ನಂತರ ‘ಹಳ್ಳಿಯ ಮಕ್ಕಳು’, ‘ಶುಭ್ರ’ ಚಿತ್ರಗಳಲ್ಲೂ ಅಭಿನಯಿಸಿದರು. ತಮಿಳು ಚಿತ್ರ ‘ರು’ದಲ್ಲೂ ಬಣ್ಣಹಚ್ಚಿದ್ದು, ಅದು ಇನ್ನಷ್ಟೇ ತೆರೆ ಕಾಣಬೇಕಿದೆ.

ಆರಂಭದಲ್ಲಿ ಮೈಸೂರಿನಿಂದಲೇ ನಟನೆಗೆ ಹಾಜರಾಗುತ್ತಿದ್ದ ತನ್ಮಯ, ಮೈಸೂರಲ್ಲೇ ಇಷ್ಟೊಂದು ಅವಕಾಶಗಳು ಬರುತ್ತಿರುವಾಗ ಬೆಂಗಳೂರಲ್ಲಿ ಇದ್ದರೆ ಇನ್ನೂ ಒಳ್ಳೆಯ ಅವಕಾಶಗಳು ಸಿಗಬಹುದೆಂಬ ನಿರೀಕ್ಷೆಯಲ್ಲಿ ಕುಟುಂಬ ಸಮೇತ ಬೆಂಗಳೂರಿಗೆ ಬಂದರು. ‘ಪಾರ್ವತಿ ಪರಮೇಶ್ವರ’, ‘ದೇವಿ’, ‘ಪಾಂಡುರಂಗ ವಿಟ್ಠಲ’, ‘ಪ್ರೀತಿ ಪ್ರೇಮ’ ಧಾರಾವಾಹಿಗಳಲ್ಲಿ ಚಿಕ್ಕಪುಟ್ಟ ಪಾತ್ರ ಮಾಡಿದ್ದ ಅವರಿಗೆ ‘ಸ್ವಾತಿ ಮುತ್ತು’ ಧಾರಾವಾಹಿಯ ಪ್ರಮುಖ ಪಾತ್ರದ ಅವಕಾಶವೂ ಸಿಕ್ಕಿತು.

ಶರಣ್ ಶಿಫಾರಸು!
ಶರಣ್ ಜೊತೆ ‘ರಾಜರಾಜೇಂದ್ರ’ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ್ದ ತನ್ಮಯಗೆ ಸೆಟ್‌ನಲ್ಲಿ ಶರಣ್ ಇರುತ್ತಿದ್ದ ರೀತಿ ಇಷ್ಟವಾಗಿತ್ತು. ಶರಣ್ ಹತ್ತಿರ, ‘ನಾಯಕಿಯಾಗಿ ಅಲ್ಲದಿದ್ದರೂ ನಿಮ್ಮ ಜೊತೆ ಒಂದಿಡೀ ಸಿನಿಮಾದಲ್ಲಿ ಇರುವಂಥ ಪಾತ್ರವನ್ನು ಕೊಡಿಸಿ. ಹಾಸ್ಯ ಪಾತ್ರವಾದರೂ ಪರವಾಗಿಲ್ಲ’ ಎಂದಿದ್ದರು. ಅದೇ ಸಂದರ್ಭದಲ್ಲಿ ‘ಗಜಪಡೆ’ಗಾಗಿ ನಾಯಕಿಯ ಹುಡುಕಾಟ ನಡೆದಿತ್ತು. ಶರಣ್ ‘ಗಜಪಡೆ’ ತಂಡಕ್ಕೆ ತನ್ಮಯ ಅವರನ್ನು ಶಿಫಾರಸು ಮಾಡಿದರು.

ತನ್ಮಯ+ಅಕ್ಷಯ್=ತಕ್ಷ್
ರಂಗಭೂಮಿಯಿಂದ ಬಂದ ತನ್ಮಯ ತನ್ನ ದಾರಿಯನ್ನು ಮರೆತಿಲ್ಲ. ರಂಗಭೂಮಿಯನ್ನು ಯಾವತ್ತೂ ಬಿಡುವುದಿಲ್ಲ ಎಂಬ ನಿಶ್ಚಯ ಅವರದ್ದು. ಹಾಗಾಗಿ ಅಕ್ಷಯ್ ಎಂಬುವವರ ಜೊತೆ ಸೇರಿ ಕಳೆದ ಆಗಸ್ಟ್‌ನಲ್ಲಿ ‘ತಕ್ಷ್ ಥಿಯೇಟ್ರಿಕ್ಸ್’ ಎಂಬ ಹೊಸ ರಂಗತಂಡ ಕಟ್ಟಿದ್ದಾರೆ. ಅಕ್ಷಯ್ ಬರೆದ ‘ಥ್ರೀ ರೋಸಸ್’ ನಾಟಕಕ್ಕೆ ಇಬ್ಬರೂ ಸೇರಿ ರಂಗರೂಪ ನೀಡಿ, ನಾಲ್ಕು ಪ್ರದರ್ಶನಗಳನ್ನೂ ಮಾಡಿದ್ದಾರೆ. ಸ್ವಂತ ರಚನೆಯ ನಾಟಕಗಳನ್ನಷ್ಟೇ ಅಭಿನಯಿಸಬೇಕು ಎಂಬ ಧ್ಯೇಯದ ‘ತಕ್ಷ್ ಥಿಯೇಟ್ರಿಕ್ಸ್’, ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ನಾಟಕ ಪ್ರದರ್ಶಿಸುವ ಉತ್ಸಾಹದಲ್ಲಿದೆ.

Write A Comment