ಮಂಗಳೂರು : ಇಂಟರ್‌ನ್ಯಾಷನಲ್ ಬಂಟ್ಸ್ ವೆಲ್‌ಫೇರ್ ಟ್ರಸ್ಟ್ (ರಿ.) ಅಶ್ರಯದಲ್ಲಿ ಇಂಟರ್‌ನ್ಯಾಷನಲ್ ಬಂಟ್ಸ್ ವೆಲ್‌ಫೇರ್ ಟ್ರಸ್ಟ್‌ನ ಚೇರ್‌ಮನ್ ಶ್ರೀ ಎ. ಸದಾನಂದ ಶೆಟ್ಟಿಯವರ ನೇತ್ರತ್ವದಲ್ಲಿ ಮಂಗಳೂರಿನ ಪುರಭವನದಲ್ಲಿ ಹಮ್ಮಿಕೊಳ್ಳಲಾದ ಎರಡು ದಿನಗಳ ರಾಷ್ಟ್ರೀಯ ಬಂಟ ಮಹಾಸಮ್ಮೇಳನ – 2016 ರ ಎರಡನೇ ದಿನವಾದ ರವಿವಾರ ಬೆಳಿಗ್ಗೆ ಮಹಿಳಾ ಸಮಾವೇಶ ಜರಗಿತು.
ರಾಜ್ಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗದ ಅಧ್ಯಕ್ಷೆ ಡಾ| ಕೃಪಾ ಅಮರ್ ಆಳ್ವ ಮಹಿಳಾ ಸಮಾವೇಶವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಸಕ್ತ ಕರ್ನಾಟಕದಲ್ಲಿ ಹುಟ್ಟುವ ಗಂಡು ಮತ್ತು ಹೆಣ್ಣುಮಕ್ಕಳ ನಡು ವಿನ ಅನುಪಾತದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಮಾಜ ದಲ್ಲಿ ಲಿಂಗ ಸಮಾನತೆಗೆ ಬಗ್ಗೆ ಜಾಗೃತಿ ಮೂಡಿ ಸಬೇಕಾದ ಅಗತ್ಯವಿದೆ ಎಂದು ಹೇಳಿದರು. ದೇಶದ ಒಟ್ಟು ಲಿಂಗಾನುಪಾತದ ಅಂಕಿಅಂಶಗಳನ್ನು ಪರಿಗಣಿಸಿದರೆ ಕರ್ನಾಟಕದಲ್ಲಿ ಜನಿ ಸುವ ಹೆಣ್ಣು ಮಕ್ಕಳ ಸಂಖ್ಯೆಯಲ್ಲಿ ಕುಂಠಿತ ಗೊಳ್ಳುತ್ತಿ ರುವುದು ಕಳವಳಕಾರಿ ಸಂಗತಿಯಾಗಿದೆ ಎಂದವರು ಹೇಳಿದರು.
ಬಂಟ ಸಮುದಾಯ ಮಾತೃ ಪ್ರಧಾನವಾದ ಕೌಟುಂಬಿಕ ಹಿನ್ನೆಲೆಯನ್ನು ಹೊಂದಿರುವ ಸಮಾಜವಾಗಿದೆ. ಶಿಕ್ಷಣದ ಬಗ್ಗೆ ಸಾಕಷ್ಟು ಜಾಗೃತಿ ಹೊಂದಿ ದ್ದರೂ ಈ ಸಮಾಜದ ಒಳಗೆ ಇನ್ನೂ ಉಳಿದಿರುವ ಮಹಿಳಾ ಸಶಕ್ತತೆ, ವರದಕ್ಷಿಣಿ, ಹೆಣ್ಣು ಮಕ್ಕಳ ಸಂಖ್ಯೆಯಲ್ಲಿ ಕುಸಿತ ಮೊದಲಾದ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಬೇ ಕಾಗಿದೆ. ಕುಟುಂಬ ನಡುವೆ ಪರಸ್ಪರ ಪ್ರೀತಿ ವಿಶ್ವಾಸ ಮೂಡಿಸಿ ಸಾಮಾಜಿಕ ಸಾಮರಸ್ಯವನ್ನು ಗಟ್ಟಿಗೊಳಿಸಲು ಶ್ರಮಿಸಬೇಕಾಗಿದೆ ಎಂದು ಡಾ.ಕೃಪಾ ಆಳ್ವ ತಿಳಿಸಿದರು.
ಶಾಸಕಿ ಶಕುಂತಲ ಶೆಟ್ಟಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶ್ರೀದೇವಿ ಕಾಲೇಜಿನ ಕಾರ್ಯದರ್ಶಿ ಶ್ರೀಮತಿ ಮೈನಾ ಶೆಟ್ಟಿ, ಡಾ.ಪ್ರತಿಭಾ ರೈ, ಕಾಂತಿಲತಾ ಶೆಟ್ಟಿ, ಸೌಮ್ಯಾ ಆಳ್ವ, ಪದ್ಮಜಾ ಶೆಟ್ಟಿ, ಬಬಿತಾ ಶೆಟ್ಟಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಹಿಳಾ ಯಕ್ಷ ವೈಭವ :
ಸಭಾ ಕಾರ್ಯಕ್ರಮದ ಬಳಿಕ ಸಿದ್ಧಿವಿನಾಯಕ ಯಕ್ಷ ನಾಟ್ಯ ಕಲಾಕೇಂದ್ರ ಸುರತ್ಕಲ್ ಇವರಿಂದ ರಕ್ಷಿತ್ ಶೆಟ್ಟಿ ಪಡ್ರೆ ಇವರ ನಿರ್ದೇಶನದಲ್ಲಿ ಮಹಿಳಾ ಯಕ್ಷ ವೈಭವ ಯಕ್ಷನಾಟ್ಯ ರಾಧಾ ವಿಲಾಸ ಜರುಗಿತು. ಸತೀಶ್ ಶೆಟ್ಟಿ ಪಟ್ಲ ಮತ್ತು ಬಳಗ ಹಿಮ್ಮೇಳನದಲ್ಲಿ ಸಹಕರಿಸಿದರು.
ಟ್ರಸ್ಟ್‌ನ ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಸ್ವಾಗತಿಸಿದರು. ಟ್ರಸ್ಟ್‌ನ ಮಹಿಳಾ ವಿಭಾಗದ ಪದಾಧಿಕಾರಿಗಳು ಹಾಗೂ ರಾಜ್ಯದ ವಿವಿಧ ಮಹಿಳಾ ಘಟಕಗಳ ಅಧ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಜ್ಯದ ವಿವಿದೆಡೆಗಳಿಂದ ಬಂದ ಬಂಟ ಸಂಘಗಳ ಮಹಿಳಾ ಪ್ರತಿನಿಧಿಗಳು ಸಮಾವೇಶದಲ್ಲಿ ಪಾಲ್ಗೊಂಡರು.
ವಿವಿಧ ಗೋಷ್ಠಿಗಳು :
ಬಳಿಕ ನಡೆದ ವಿವಿಧ ಗೋಷ್ಠಿಗಳಲ್ಲಿ ಮಂಗಳೂರು, ವಿ.ವಿಯ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ| ಬಿ. ಶಿವರಾಮ ಶೆಟ್ಟಿಯವರು ಕೃಷಿ ಬದುಕು ಮತ್ತು ವಾಣಿಜ್ಯೋದ್ಯಮ, ಡಾ| ಗಣನಾಥ ಶೆಟ್ಟಿ ಎಕ್ಕಾರು ಕನ್ನಡ ಪ್ರಾಧ್ಯಾಪಕರು, ಉಡುಪಿ ಕಲೆ, ಕ್ರೀಡೆ-ಪಾರಂಪರಿಕ ಹವ್ಯಾಸಗಳು, ಡಾ| ಸಾಯಿಗೀತ ಹೆಗ್ಡೆ ಪ್ರಾಧ್ಯಾಪಕರು, ನಿಟ್ಟೆ ವಿ.ವಿ. ಮಾತೃಮೂಲ ಸಂಸ್ಕ್ರತಿ ಮತ್ತು ಮಹಿಳೆ ಬಗ್ಗೆ ಪ್ರಬಂಧ ಮಂಡಿಸಿದರು.
ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮ :
ಮಧ್ಯಾಹ್ನ ಮುಂಬೈ ಬಂಟರಿಂದ ತೆಲಿಕೆದ ಕುಸಲ್ ಕಾರ್ಯಕ್ರಮ ಜರುಗಿತು. ಅಪರಾಹ್ನ ಕಾವ್ಯ-ಗಾನ-ಕುಂಚ-ನೃತ್ಯ ಕಾವ್ಯ ಚಿತ್ತಾರ ಕಾರ್ಯಕ್ರಮ ಹಾಗೂ ಕು| ತೃಷಾ ಶೆಟ್ಟಿ ಬಳಗದಿಂದ ನೃತ್ಯ ಕಾರ್ಯಕ್ರಮ ನಡೆಯಿತು..
ಮಧ್ಯಾಹ್ನ 3ರಿಂದ ದೇವದಾಸ್ ಕಾಪಿಕಾಡ್ ಬಳಗದವರಿಂದ ನಡೆದ “ತೆಲಿಕೆ ಉರ್ಕರ್ನಗ” ನಗುವಿನ ಕಾರ್ಯಕ್ರಮ ನೆರೆದ ಸಭಿಕರನ್ನು ನಗೆಗಡಲಲ್ಲಿ ತೇಲಿಸಿತು.
ಸಂಜೆ 4ರಿಂದ ಆಳ್ವಾಸ್ ಕಲಾ ತಂಡದಿಂದ ನಡೆದ “ಆಳ್ವಾಸ್ ಕಲಾವೈಭವ” ಎಂಬ ವಿನೂತನ ಮತ್ತು ವೈಶಿಷ್ಟ್ಯಮಯ ನೃತ್ಯ ಕಾರ್ಯಕ್ರಮ ಪ್ರೇಕ್ಷಕರ ಮನ ಸೆಳೆಯಿತು.