ಮುಂಬೈ: ಮಹಿಳೆ ಉಟ್ಟಿರುವ ಬಟ್ಟೆಯ ಅಳತೆಯ ಮೇಲೆ ಗೌರವ ನೀಡುವ ಮನೋಭಾವವನ್ನು ಬಿಡಬೇಕು. ಆಕೆಗಿಚ್ಛಿಸುವ ಉಡುಗೆ ತೊಡಲು ಆಕೆಯನ್ನು ಬಿಡಬೇಕು ಎಂದು ಬಾಲಿವುಡ್ ನಟಿ ವಿದ್ಯಾಬಾಲನ್ ಹೇಳಿದ್ದಾರೆ.
ಮುಂಬೈನಲ್ಲಿ “ಯೂತ್ ಫಾರ್ ಯೂನಿಟಿ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ನಟಿ ವಿದ್ಯಾಬಾಲನ್ ಅವರು, ಸ್ತ್ರೀಯರು ತೊಟ್ಟಿರುವ ಉಡುಗೆಯ ಅಳತೆಯ ಮೇರೆಗೆ ಅವರನ್ನು ಗೌರವಿಸುವ ಮನೋಭಾವವನ್ನು ಬಿಡಬೇಕು. ಆಕೆಯ ಗೌರವಕ್ಕೂ ಆಕೆ ತೊಡುವ ಬಟ್ಟೆಗಳಿಗೂ ಯಾವುದೇ ಸಂಬಂಧವಿಲ್ಲ. ಹೀಗಾಗಿ ಮಹಿಳೆಯರು ಇಚ್ಛಿಸಿದ ಉಡುಗೆ ತೊಡಲು ಅವರು ಸ್ವತಂತ್ರರಾಗಿದ್ದಾರೆ ಎಂದು ಹೇಳಿದರು.
“ಸ್ತ್ರೀಯರು ಪುರುಷರ ಸಮನಾಗಿ ಬೆಳೆಯುತ್ತಿದ್ದಾರೆ. ನಮ್ಮ ಸಮಾಜದ ಆಲೋಚನಾ ಲಹರಿ ಬದಲಾಗಿದೆ. ಮಹಿಳೆಯರು ತಮ್ಮ ಕಾಲ ಮೇಲೆ ನಿಂತು ತಾವೂ ಕೂಡ ಪುರುಷರಿಗೆ ಸಮ ಎಂದು ತೋರಿಸುತ್ತಿದ್ದಾರೆ. ಗಂಡು-ಹೆಣ್ಣಿನ ನಡುವೆ ಯಾವುದೇ ಭೇದವಿಲ್ಲ. ಇಬ್ಬರೂ ಸಮಾನರೇ. ಇಡೀ ಜಗತ್ತು ಕೂಡ ಇದೀಗ ಮಹಿಳೆ ಮತ್ತು ಪುರುಷರಿಗೆ ಸಮಾನ ವೇದಿಕೆ ಕಲ್ಪಿಸಿದೆ ಎಂದು ವಿದ್ಯಾ ಅಭಿಪ್ರಾಯಪಟ್ಟರು.
ಇದೇ ವೇಳೆ ಮಹಿಳೆಯ ಮೇಲಿನ ಲೈಂಗಿಕ ದೌರ್ಜನ್ಯದ ಕುರಿತು ಮಾತನಾಡಿದ ವಿದ್ಯಾ, ಮಹಿಳೆಯರ ಮೇಲಿನ ದೌರ್ಜನ್ಯಗಳು ಎಲ್ಲೆಡೆ ಹೆಚ್ಚುತ್ತಿವೆ. ಕಾಲೇಜು ದಿನಗಳ ಬಳಿಕ ನನಗೆ ಇಂತಹ ಅನುಭವಗಳಾಗಿಲ್ಲ. ಆದರೆ ಮಾಧ್ಯಮಗಳಲ್ಲಿನ ವರದಿಗಳನ್ನು ನೋಡಿದರೆ ನಿಜಕ್ಕೂ ಆಘಾತವಾಗುತ್ತದೆ. ತೊಟ್ಟ ಉಡುಗೆಯಿಂದಲೇ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದೆ ಎಂಬ ವಾದದಲ್ಲಿ ಹುರುಳಿಲ್ಲ. ಆಲೋಚನಾ ಲಹರಿಯನ್ನು ಬದಲಿಸಬೇಕಿದೆ. ಮಹಿಳೆಯರು, ಯುವತಿಯರು ನಿಜಕ್ಕೂ ಧೈರ್ಯ ತಂದುಕೊಳ್ಳಬೇಕು. ತಮ್ಮ ವಿರುದ್ಧದ ಎಂತಹುದೇ ಕಿರುಕುಳವನ್ನು ಎದುರಿಸಿ ಮೆಟ್ಟಿ ನಿಲ್ಲಬೇಕು ಎಂದು ಹೇಳಿದರು.