ವಾಷಿಂಗ್ಟನ್: ವಾಟ್ಸಪ್ ಬಳಕೆದಾರರಿಗೆ ಇಲ್ಲೊಂದು ಸಿಹಿ ಸುದ್ದಿಯಿದ್ದು, ವಾಟ್ಸಪ್ ಗ್ರೂಪ್ ಗಳಲ್ಲಿನ ಸದಸ್ಯರ ಮಿತಿಯನ್ನು ಏರಿಕೆ ಮಾಡಲಾಗಿದೆ.
ಬಹಳ ದಿನಗಳಿಂದ ಕೇಳಿಬರುತ್ತಿದ್ದ ವಾಟ್ಸಪ್ ಗ್ರೂಪ್ ನ ಸದಸ್ಯರ ಮಿತಿಯನ್ನು ಏರಿಕೆ ಮಾಡಬೇಕು ಎಂಬ ಕೋರಿಕೆಗೆ ಕೊನೆಗೂ ವಾಟ್ಸಪ್ ಸಂಸ್ಥೆ ಮಣಿದಿದ್ದು, ಗ್ರೂಪ್ ಸದಸ್ಯರ ಸಂಖ್ಯಾ ಮಿತಿಯನ್ನು ಏರಿಕೆ ಮಾಡಿದೆ. ಈ ಹಿಂದೆ ಕೇವಲ 100ಕ್ಕೆ ಮಿತಿಯಾಗಿದ್ದ ವಾಟ್ಸಪ್ ಗ್ರೂಪ್ ನ ಸದಸ್ಯರ ಸಂಖ್ಯೆಯನ್ನು ಇದೀಗ 256ಕ್ಕೆ ಏರಿಕೆ ಮಾಡಿದೆ. ಇನ್ನೂ ಸಂತಸದ ಸುದ್ದಿ ಎಂದರೆ ಈ ಮಿತಿಯನ್ನು ಮತ್ತೆ ಕೆಲವೇ ದಿನಗಳಲ್ಲಿ 300ಕ್ಕೆ ಏರಿಸುವ ಬಗ್ಗೆಯೂ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ವಾಟ್ಪಪ್ ಬಳಕೆದಾರರ ಸಂಖ್ಯೆ 1 ಬಿಲಿಯನ್ ಗೆ ಏರಿಕೆಯಾಗಿದ್ದು, ಪ್ರತಿನಿತ್ಯ ಸರಾಸರಿ 42 ಬಿಲಿಯನ್ ಮೆಸೆಜ್ ಗಳು ಹರಿದಾಡುತ್ತಿವೆ ಎಂದು ಸಂಸ್ಥೆ ಹೇಳಿಕೊಂಡಿದೆ. ಈ ಹಿಂದೆ ಗ್ರೂಪ್ ನಲ್ಲಿ ಹೆಚ್ಚು ಸದಸ್ಯರನ್ನು ಸೇರಿಸುವ ಅವಕಾಶವಿಲ್ಲದೆ ಸಾಕಷ್ಟು ಗ್ರೂಪ್ ಅಡ್ಮಿನ್ ಗಳು ಒಂದಕ್ಕಿಂತ ಹೆಚ್ಚು ಗ್ರೂಪ್ ಗಳನ್ನು ಸೃಷ್ಟಿಸಿ ಅದರಲ್ಲಿ ಸದಸ್ಯರನ್ನು ಸೇರಿಸುತ್ತಿದ್ದರು. ಇದೀಗ ಇಂತಹ ಅನಾನುಕೂಲಗಳನ್ನು ದೂರ ಮಾಡುವ ಉದ್ದೇಶದಿಂದ ವಾಟ್ಸಪ್ ಸಂಸ್ಥೆ ಗ್ರೂಪ್ ಸದಸ್ಯರ ಸಂಖ್ಯೆಯನ್ನು 256ಕ್ಕೆ ಏರಿಕೆ ಮಾಡಿದೆ.
ಫೀ ರದ್ದತಿಗೆ ವಾಟ್ಸಪ್ ಚಿಂತನೆ
ಇತ್ತ ವಾಟ್ಸಪ್ ಸಂಸ್ಥೆಯನ್ನು ಖರೀದಿಸಿರುವ ಫೇಸ್ ಬುಕ್ ಸಂಸ್ಥೆ ವಾಟ್ಸಪ್ ಮೇಲಿನ ಶುಲ್ಕವನ್ನು ರದ್ದು ಮಾಡುವ ಕುರಿತು ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ವಾಟ್ಪಪ್ ಅಪ್ಲಿಕೇಷನ್ ಅನ್ನು ಮತ್ತಷ್ಟು ಜನಪ್ರಿಯ ಮಾಡುವ ಉದ್ದೇಶದಿಂದ ಫೇಸ್ ಬುಕ್ ಈ ಮಹತ್ವದ ಹೆಜ್ಜೆ ಇಟ್ಟಿದ್ದು, ಅಪ್ಲಿಕೇಷನ್ ನಲ್ಲಿ ವಾಣಿಜ್ಯೋದ್ಯಮಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿಯೂ ಸಂಸ್ಥೆ ಕಾರ್ಯತಂತ್ರ ರೂಪಿಸುತ್ತಿದೆ ಎಂದು ತಿಳಿದುಬಂದಿದೆ.