ಲಾಹೋರ್: ಪಾಕಿಸ್ತಾನದಲ್ಲಿ ಭಾರತದ ಧ್ವಜ ಹಾರಿಸಿದ್ದು ಕಂಡರೆ ಏನು ಮಾಡುತ್ತಾರೆ ಗೊತ್ತಾ? ಇದಕ್ಕೊಂದು ಉದಾಹರಣೆ ಇಲ್ಲಿದೆ. ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಕಟ್ಟಾ ಅಭಿಮಾನಿಯೊಬ್ಬ ತನ್ನ ಮನೆಯ ಮೇಲೆ ಭಾರತದ ಧ್ವಜ ಹಾರಿಸಿ ಈಗ ಕಂಬಿ ಎಣಿಸುತ್ತಿದ್ದಾನೆ.
ಹೌದು ಇದು ಸತ್ಯ ಘಟನೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಒಕಾರ ಜಿಲ್ಲಾ ವ್ಯಾಪ್ತಿಯಲ್ಲಿ, ಲಾಹೋರ್ನಿಂದ ಅಂದಾಜು 200 ಕಿಲೋ ಮೀಟರ್ ದೂರದಲ್ಲಿ ಮಂಗಳವಾರ ಈ ಘಟನೆ ಸಂಭವಿಸಿದೆ. ವಿರಾಟ್ ಕೊಹ್ಲಿಯ ಆರಾಧಕನಾದ ಇಲ್ಲಿನ ಉಮರ್ ದ್ರಾಜ್ ಎನ್ನುವಾತ ಈ ಕಾರಣಕ್ಕಾಗಿ ಈಗ ಪೊಲೀಸ್ ಅತಿಥಿಯಾಗಿದ್ದಾನೆ. ವಿರಾಟ್ ಕೊಹ್ಲಿ ಮೇಲೆ ಸಾಕಷ್ಟು ಅಭಿಮಾನ ಇಟ್ಟುಕೊಂಡಿರುವ ಉಮರ್ ಮಂಗಳವಾರ ತನ್ನ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಿ ವಿರಾಟ್ ಕೊಹ್ಲಿಯನ್ನು ಬೆಂಬಲಿಸಿದ್ದಾನೆ. ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರು ಸಾರ್ವಜನಿಕ ಶಾಂತಿ ಪಾಲನೆ ಕಾಯ್ದೆಯಡಿಯಲ್ಲಿ ಆತನನ್ನು ಬಂಧಿಸಿ ಕೋರ್ಟ್ಗೆ ಹಾಜರು ಪಡಿಸಿದ್ದಾರೆ. ವಿಚಾರಣೆ ನಡೆಸಿದ ಕೋರ್ಟ್ ಹೆಚ್ಚಿನ ತನಿಖೆ ನೆಪದಲ್ಲಿ ಪೊಲೀಸ್ ಕಷ್ಟಡಿಗೆ ನೀಡಿದೆ. ಉಮರ್ ಬಂಧನವನ್ನು ಇಲ್ಲಿನ ಪೊಲೀಸ್ ಅಧಿಕಾರಿ ಮೊಹಮ್ಮದ್ ಜಮೀಲ್ ಖಚಿತ ಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಉಮರ್ ದ್ರಾಜ್, ನಾನು ವಿರಾಟ್ ಕೊಹ್ಲಿಯ ಅಪ್ಪಟ ಅಭಿಮಾನಿ. ಕೊಹ್ಲಿಗೋಸ್ಕರ ಭಾರತ ತಂಡವನ್ನು ಬೆಂಬಲಿಸುತ್ತೇನೆ. ಅದೇ ಕಾರಣಕ್ಕಾಗಿ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಿದ್ದೇನೆ. ಅದನ್ನು ಬಿಟ್ಟು ಇನ್ನಾವುದೇ ಅಪರಾಧ ಎಸಗಿಲ್ಲ, ಅಪರಾಧವೆಸಗುವ ಉದ್ದೇಶವೂ ನನ್ನಲ್ಲಿಲ್ಲ. ನಾನು ಬೇಹುಗಾರನೂ ಅಲ್ಲ, ಕೊಹ್ಲಿಯ ಅಭಿಮಾನಿ ಅಷ್ಟೆ ಎಂದು ಹೇಳಿಕೊಂಡಿದ್ದಾನೆ. ಉಮರ್ ಮನೆಯ ಗೋಡೆಯ ಮೇಲೆ ವಿರಾಟ್ ಕೊಹ್ಲಿ ಫೋಟೊ ಕೂಡ ಹಾಕಿಕೊಂಡಿದ್ದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.