ನವದೆಹಲಿ: ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲ್ಭಾಗದಲ್ಲಿ ದೊಡ್ಡ ಬಲೂನ್ ಹಾರಾಡುತ್ತಿದೆ ಎಂದು ವ್ಯಕ್ತಿಯೊಬ್ಬರು ವಿಮಾನ ನಿಲ್ದಾಣಕ್ಕೆ ಪೋನ್ ಮಾಡಿದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೊಷಿಸಲಾಗಿದೆ.
ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆ (ಡಿಐಎಎಲ್)ಯ ಕಾಲ್ ಸೆಂಟರ್ಗೆ ವ್ಯಕ್ತಿಯೊಬ್ಬರು ಕರೆ ಮಾಡಿ ದೊಡ್ಡ ಬಲೂನು ವಿಮಾನ ನಿಲ್ದಾಣದ ಮೇಲ್ಭಾಗದಲ್ಲಿ ಓಡಾಡುತ್ತಿದೆ ಎಂದು ತಿಳಿಸಿದರು. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೊಷಿಸಲಾಗಿದೆ. ಪೊಲೀಸರಿಗೆ ಬಲೂನು ಕಂಡಿಲ್ಲ, ಕರೆ ಮಾಡಿದ ವ್ಯಕ್ತಿಗಾಗಿ ಶೋಧ ನಡೆಸಲಾಗುತ್ತಿದೆ. ಜತೆಗೆ ಎಲ್ಲಾ ಭದ್ರತಾ ಸಂಸ್ಥೆಗಳಿಗೆ ವಿಷಯವನ್ನು ತಲುಪಿಸಲಾಗಿದೆ ಎಂದು ಐಜಿಐ ಏರ್ಪೋರ್ಟ್ನ ಡಿಸಿಪಿ ಡಿ.ಕೆ.ಗುಪ್ತ ತಿಳಿಸಿದ್ದಾರೆ.
ಬುಧವಾರ ಮಧ್ಯಾಹ್ನ ಕಾಠ್ಮಂಡುವಿಗೆ ಹೊರಟಿದ್ದ 2 ವಿಮಾನಗಳಲ್ಲಿ ಬಾಂಬ್ ಇದೆ ಎಂದು ಬೆದರಿಕೆ ಕರೆ ಬಂದಿತ್ತು. ಆ ನಂತರ ವಿಮಾನಗಳ ತಪಾಸಣೆ ನಡೆಸಲಾಯಿತು. ಜತೆಗೆ ಮಂಗಳವಾರ ರಾಜಸ್ಥಾನದ ಜೈಸೆಲ್ಮೇರ್ ಬಳಿ ಬಲೂನನ್ನು ವಾಯುಪಡೆ ವಿಮಾನಗಳು ಹೊಡೆದುರುಳಿಸಿದ್ದವು.