ಹೈದರಾಬಾದ್: ರಾಷ್ಟ್ರಪ್ರಶಸ್ತಿ ಪುರಸ್ಕೃತ ಖ್ಯಾತ ಮಲಯಾಳಂ ನಟಿ ಕಲ್ಪನಾ ರಂಜನಿ(51 ವರ್ಷ) ಸೋಮವಾರ ಹೃದಯಾಘಾತದಿಂದ ನಿಧನರಾಗಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಸೋಮವಾರ ಬೆಳಗ್ಗೆ ಹೈದರಾಬಾದ್ ನ ಹೊಟೇಲ್ ನಲ್ಲಿ ತಂಗಿದ್ದ ನಟಿ ಕಲ್ಪನಾ ಮುಂಜಾನೆ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ವರದಿ ವಿವರಿಸಿದೆ. ಕಲ್ಪನಾ ಅವರು ತೆಲುಗು ಮತ್ತು ತಮಿಳು ಚಿತ್ರದ ಶೂಟಿಂಗ್ ಗಾಗಿ ಹೈದರಾಬಾದ್ ಗೆ ಆಗಮಿಸಿದ್ದರು. ಅಲ್ಲದೇ ಐಐಎಫ್ ಎ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ಬಂದಿರುವುದಾಗಿ ವರದಿ ಹೇಳಿದೆ.
ಕಲ್ಪನಾ ಅವರು ಸುಮಾರು 300ಕ್ಕೂ ಅಧಿಕ ಸಿನಿಮಾದಲ್ಲಿ ನಟಿಸಿದ್ದರು. ಇತ್ತೀಚೆಗಷ್ಟೇ ಮಲಯಾಳಂನಲ್ಲಿ ಬಿಡುಗಡೆಯಾಗಿರುವ ಚಾರ್ಲೆ ಸಿನಿಮಾ ಕೇರಳದಾದ್ಯಂತ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಕಲ್ಪನಾ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು.
ಮಲಯಾಳಂನ ಖ್ಯಾತ ನಟಿಯರಾದ ಊರ್ವಶಿ ಹಾಗೂ ಕಲಾರಂಜಿನಿ ಕಲ್ಪನಾ ಅವರ ಸಹೋದರಿಯರಾಗಿದ್ದಾರೆ. ಕಲ್ಪನಾ ಅವರು ಖ್ಯಾತ ನಿರ್ದೇಶಕ ಕೆ,ಬಾಲಚಂದರ್ ಅವರ ಚಿನ್ನವೀಡು ಸೇರಿದಂತೆ ಹಲವು ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿದ್ದರು.
-ಉದಯವಾಣಿ