ಗಾಜಿಯಾಬಾದ್: ತಡರಾತ್ರಿ ವಾಹನಗಳ ಪರಿಶೀಲನೆಯ ವೇಳೆ ದುಷ್ಕರ್ವಿುಗಳು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ ನವದೆಹಲಿಗೆ ಹಿತ್ತಿರದ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ನಡೆದಿದೆ. ಪ್ರತಿದಾಳಿ ನಡೆಸಿದ ಪೊಲೀಸರು ಓರ್ವನನ್ನು ಬಂಧಿಸಿ, ಕಾರಿನಲ್ಲಿದ್ದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.
ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಚೆಕ್ಪೋಸ್ಟ್ಗಳಲ್ಲಿ ತಪಾಸಣೆ ಕಾರ್ಯ ಚುರುಕಾಗಿ ಸಾಗುತ್ತಿದ್ದು, ತಡರಾತ್ರಿ ದೆಹಲಿಗೆ ಹತ್ತಿರದಲ್ಲಿರುವ ಗಾಜಿಯಾಬಾದ್ನಲ್ಲೂ ನಡೆಸಲಾಗಿದೆ. ಈ ವೇಳೆ ಕಾರಿನಲ್ಲಿ ಶಸ್ತ್ರಾಸ್ತ್ರ ಸಾಗಿಸುತ್ತಿದ್ದ ಗುಂಪೊಂದು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದೆ. ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ಪ್ರತಿದಾಳಿ ನಡೆಸಿದರು. ಆಗ ಗುಂಪಿನಲ್ಲಿದ್ದ ಓರ್ವ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಇನ್ನು ಕೆಲವರು ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಂಧಿತನಿಂದ ಪಿಸ್ತೂಲ್ ವಶಪಡಿಸಿಕೊಂಡು ವಿಚಾರಣೆಗೊಳಪಡಿಸಲಾಗಿದೆ. ಕಾರಿನಲ್ಲಿದ್ದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ವ್ಯಕ್ತಿ ಅಂಕಿತ್ ಎಂದು ಹೇಳಲಾಗಿದ್ದು, ಉಳಿದವರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.