ಮನೋರಂಜನೆ

ವಾಸ್ತವದ ಸುಂದರಿ ಸಾನ್ವಿ ಶ್ರೀವಾಸ್ತವ

Pinterest LinkedIn Tumblr

sanviಆ ಪೀಚು ಹುಡುಗಿಯನ್ನು ನೋಡಿದವರು, ಆಕೆ ಒಂದು ಅಥವಾ ಎರಡು ಚಿತ್ರಗಳಲ್ಲಿ ನಟಿಸಬಹುದು ಎಂದು ಭವಿಷ್ಯ ನುಡಿದಿದ್ದರು. ಕಾರಣ, ಆಕೆಯ ಅಭಿನಯ ಅದೆಷ್ಟೇ ಚೆನ್ನಾಗಿದ್ದರೂ, ವಿಪರೀತ ಎನ್ನುವಷ್ಟು ಪೀಚು ಆಕೆ. ಈ ಜೀರೋ ಫಿಗರ್‌ ಎಲ್ಲಾ ಬಾಲಿವುಡ್‌ಗೆ ಸರಿ, ಇಲ್ಲಿ ಆಗಿಬರೋಲ್ಲ ಎಂದಿದ್ದರು. ಈಗ ನೋಡಿದರೆ ಆ ಜೀರೋ ಫಿಗರ್ರೆà ನಂಬರ್‌ ಒನ್‌ ಆಗಿ ಬಿಡೋದಾ?

ಸಾನ್ವಿ ನಂಬರ್‌ ಒನ್‌ ಹೌದೋ, ಇಲ್ಲವೋ ಗೊತ್ತಿಲ್ಲ. ಆದರೆ, ಕನ್ನಡ ಚಿತ್ರರಂಗದಲ್ಲಿ ಬಹಳ ಬೇಡಿಕೆಯ ನಟಿಯಂತೂ ಹೌದು. ಏಕೆಂದರೆ, ಆಕೆಯ ಹಿಂದೆ ಚಂದ್ರಲೇಖಾ ಮತ್ತು ಮಾಸ್ಟರ್‌ಪೀಸ್‌ ಎಂಬ ಎರಡು ಯಶಸ್ಸುಗಳಿವೆ. ಸಾನ್ವಿಯಿಂದ ಚಿತ್ರ ಗೆದ್ದಿತೋ, ಇಲ್ಲವೋ ಎನ್ನುವುದು ಬೇರೆ ಮಾತು. ಆದರೆ, ಗೆದ್ದ ಚಿತ್ರಗಳಲ್ಲಿ ಸಾನ್ವಿ ಇದ್ದರು ಎನ್ನುವುದು ಬಹಳ ಮುಖ್ಯ. ಹಾಗಾಗಿ ಸಾನ್ವಿಗೆ ಒಂದರಹಿಂದೊಂದು ಅವಕಾಶ ಸಿಗುತ್ತಲೇ ಇವೆ.

ಚಂದ್ರಲೇಖಾ ಬಿಡುಗಡೆಯಾಗಿದ್ದು ಒಂದೂವರೆ ವರ್ಷಗಳ ಹಿಂದೆ. ಚಿತ್ರ 50 ದಿನ ಓಡಿದರೂ, ಆಕೆಗೆ ಅಷ್ಟೇನೂ ಅವಕಾಶಗಳು ಸಿಗಲಿಲ್ಲ. ಆ ನಂತರ ಭಲೇ ಜೋಡಿ ಎಂಬ ಚಿತ್ರದಲ್ಲಿ ಸಾನ್ವಿ, ಸುಮಂತ್‌ ಶೈಲೇಂದ್ರಗೆ ನಾಯಕಿಯಾದರು. ಆದರೆ, ಆ ಚಿತ್ರ ಅದ್ಯಾಕೋ ವಿಪರೀತ ನಿಧಾನವಾಯ್ತು. ಈ ಮಧ್ಯದಲ್ಲಿ ಸಾನ್ವಿ, ಯಶ್‌ ಅಭಿನಯದ ಮಾಸ್ಟರ್‌ಪೀಸ್‌ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾದರು. ಆ ಚಿತ್ರ ಗೆದ್ದಿದ್ದೇ ತಡ, ಈಗ ಎರಡೂ¾ರು ಚಿತ್ರಗಳಲ್ಲಿ ಸಾನ್ವಿ ನಾಯಕಿಯಾಗಿ ಅಭಿನಯಿಸುತ್ತಾರೆ ಎಂಬ ವಿಷಯ ಕೇಳಿ ಬರುತ್ತಿದೆ. ಈ ಪೈಕಿ ಎರಡು ಚಿತ್ರಗಳಂತೂ ಪಕ್ಕಾ ಆಗಿದೆ.

ಪ್ರಮುಖವಾಗಿ ತೆಲುಗು ಚಿತ್ರವೊಂದರ ರೀಮೇಕ್‌ನಲ್ಲಿ ಸಾನ್ವಿ ನಾಯಕಿಯಾಗಿ ಅಭಿನಯಿಸುವುದಕ್ಕೆ “ಎಸ್‌’ ಎಂದಿದ್ದಾರಂತೆ. ಈ ಚಿತ್ರದ ಹೀರೋ ಯಾರು ಗೊತ್ತಾ? ಗಣೇಶ್‌. ಇನ್ನು ಚಿತ್ರ ನಿರ್ಮಿಸುತ್ತಿರುವುದು ರಾಕ್‌ಲೈನ್‌ ವೆಂಕಟೇಶ್‌. ಮಿಕ್ಕಂತೆ ಯಾವುದೂ ಪಕ್ಕಾ ಆಗಿಲ್ಲ. ಫೆಬ್ರವರಿಯಲ್ಲಿ ಚಿತ್ರ ಶುರುವಾಗುತ್ತದೆ ಎಂಬ ಮಾತಿದೆ. ಇದರ ಜೊತೆಗೆ ರವಿಚಂದ್ರನ್‌ ಅವರ ಪುತ್ರ ಮನೋರಂಜನ್‌ ನಾಯಕನಾಗಿ ಅಭಿನಯಿಸುತ್ತಿರುವ ಸಾಹೇಬ ಚಿತ್ರಕ್ಕೂ ಸಾನ್ವಿ ನಾಯಕಿಯಾಗಿ ಗೊತ್ತಾಗಿದ್ದಾರೆ. ಈಗಾಗಲೇ ಚಿತ್ರೀಕರಣ ಸದ್ದಿಲ್ಲದೆ ಪ್ರಾರಂಭವಾಗಿದೆ ಎಂಬ ಮಾಹಿತಿ ಇದೆ.

ಹಿಂದಿನ ಎರಡು ಚಿತ್ರಗಳ ಯಶಸ್ಸು ಮತ್ತು ಮುಂದಿನ ಎರಡು ಚಿತ್ರಗಳಿಂದಾಗಿ ಸಾನ್ವಿ ಬೇಡಿಕೆ ಜಾಸ್ತಿಯಾಗಿದೆ. ಆದರೆ, ಕೈಯಲ್ಲಿ ಎರಡು ಚಿತ್ರಗಳಿರುವುದರಿಂದ ಸದ್ಯಕ್ಕೆ ಸಾನ್ವಿ ಇನ್ನೊಂದು ಚಿತ್ರವನ್ನು ಒಪ್ಪುವುದು ಕಷ್ಟ. ಈ ಎರಡು ಚಿತ್ರಗಳು ಸಾನ್ವಿಗೆ ಇನ್ನೆಷ್ಟು ಚಿತ್ರಗಳು ಕೊಡಿಸುತ್ತವೋ ನೋಡಬೇಕು.
-ಉದಯವಾಣಿ

Write A Comment