ಮುಂಬಯಿ: ಬಾಲಿವುಡ್‌ಗೆ ಬಂದ ಸಂದರ್ಭದಲ್ಲಿ ಸಿನಿಮಾ ಉದ್ಯಮಿಯೊಬ್ಬರು ತನ್ನ ಮೇಲೆ ಲೈಂಗಿಕ ಶೋಷಣೆ ನಡೆಸಿದ್ದರು ಎಂಬ ವಿಷಯವನ್ನು ನಟಿ ಕಂಗನಾ ರಣಾವತ್ ಬಹಿರಂಗಪಡಿಸಿದ್ದಾರೆ.
ಪತ್ರಕರ್ತೆ ಬರ್ಖಾ ದತ್ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಕಂಗನಾ, ಚಿತ್ರರಂಗದ ಒಳ ಸುಳಿಗಳನ್ನು ಬಿಚ್ಚಿಟ್ಟಿದ್ದಾರೆ. ಆದರೆ, ಶೋಷಣೆ ಮಾಡಿದ ವ್ಯಕ್ತಿಯ ಹೆಸರನ್ನು ಅವರು ಬಹಿರಂಗಪಡಿಸಿಲ್ಲ. ಅದು ಬಹಳ ಕಷ್ಟದ ದಿನಗಳಾಗಿದ್ದವು. ಆಗ ನನಗೆ 17 ವರ್ಷ. ತಂದೆ ವಯಸ್ಸಿನ ವ್ಯಕ್ತಿಯೊಬ್ಬರು ನನ್ನ ಬೆನ್ನು ಬಿದ್ದಿದ್ದರು. ಒಂದು ದಿನ ನನ್ನ ತಲೆಗೆ ಬಲವಾಗಿ ಹೊಡೆದ ಪರಿಣಾಮವಾಗಿ ತಲೆಯೊಡೆದು ರಕ್ತ ಸುರಿಯ ತೊಡಗಿತು. ನಾನು ಕೂಡ ಆ ವ್ಯಕ್ತಿಯ ತಲೆಗೆ ಚಪ್ಪಲಿಯಿಂದ ಅಷ್ಟೇ ಬಲವಾಗಿ ಹೊಡೆದೆ. ಅವರ ತಲೆಯಿಂದಲೂ ರಕ್ತ ಬಂತು. ಅನಂತರ ಆ ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಿಸಿದೆ ಎಂದಿದ್ದಾರೆ.
ಇಂತಹ ಪರಿಸ್ಥಿತಿಯನ್ನು ಮೊದಲು ಎದುರಿಸಿರಲಿಲ್ಲ. ಇಲ್ಲಿ ಯಾರೂ ನಿಮಗೆ ಸಹಾಯ ಮಾಡುವುದಿಲ್ಲ. ಯಾರಾದರೂ ಪುಕ್ಕಟೆ ಊಟ ಕೊಡುತ್ತೇನೆ ಎಂದಾಗ ಅವರ ಜತೆಗೆ ಹೋದರೆ ಅವರ ಬಲೆಗೆ ಬಿದ್ದಿರೆಂದು ಅರ್ಥ ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ.
-ಉದಯವಾಣಿ