ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಮಾಸ್ಟರ್ ಪೀಸ್’ ರಾಜ್ಯಾದ್ಯಂತ ಅದ್ದೂರಿ ಆರಂಭ ಕಂಡಿದೆ. ರಾಜ್ಯದ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಗುರುವಾರ ಬಿಡುಗಡೆ ಕಂಡಿರುವ ಮಾಸ್ಟರ್ ಪೀಸ್ ಚಿತ್ರವನ್ನು ವೀಕ್ಷಿಸಲಿಕ್ಕಾಗಿ ಜನ ಮುಗಿಬೀಳುತ್ತಿದ್ದಾರೆ. ಬಳ್ಳಾರಿ ಚಿತ್ರಮಂದಿರದಲ್ಲಿ ಬೆಳಗಿನ ಜಾವ 3 ಗಂಟೆಯಿಂದಲೇ ಪ್ರದರ್ಶನ ಆರಂಭಿಸಲಾಗಿದೆ.
ಬೆಂಗಳೂರು, ಮಂಡ್ಯ, ಮೈಸೂರು, ಬಳ್ಳಾರಿ ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ಚಿತ್ರಮಂದಿರಗಳು ಹೌಸ್ಫುಲ್ ಎಂದು ಹೇಳುತ್ತಿರುವುದು ಯಶ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಅಭಿಮಾನಿಗಳಿಂದ ಟಿಕೆಟ್ಗಾಗಿ ಸಾಕಷ್ಟು ಬೇಡಿಕೆ ಇದ್ದ ಹಿನ್ನೆಲೆಯಲ್ಲಿ ಚಿತ್ರಮಂದಿರಗಳು ಪೊಲೀಸ್ ಭದ್ರತೆ ಪಡೆದಿವೆೆ. ಚಿತ್ರ ವೀಕ್ಷಣೆಗಾಗಿ ಚಿತ್ರಮಂದಿರಗಳ ಹೊರ ಆವರಣದಲ್ಲೇ ಕುಳಿತು ಪ್ರತಿಭಟನೆಗಿಳಿದಿರುವ ದೃಶ್ಯ ಬೆಂಗಳೂರಿನ ಸಂತೋಷ್ ಚಿತ್ರಮಂದಿರ ಸೇರಿದಂತೆ ಇನ್ನೂ ಅನೇಕ ಕಡೆ ಕಂಡುಬಂದಿವೆ.
ಬಳ್ಳಾರಿಯಲ್ಲಿ ಬೆಳಗಿನಜಾವ ಶೋ…
ಬಳ್ಳಾರಿಯ ಚಿತ್ರ ಮಂದಿರವೊಂದರಲ್ಲಿ ಬೆಳಗಿನ ಜಾವ 3 ಗಂಟೆಯಿಂದಲೇ ಪ್ರದರ್ಶನ ಆರಂಭಿಸಲಾಗಿದೆ. ನಂತರದ ಪ್ರದರ್ಶನಗಳಿಗೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಅಭಿಮಾನಿಗಳು ಪ್ರತಿಭಟಿಸಿದ ಘಟನೆಯೂ ನಡೆದಿದೆ.
ಬೆಂಗ್ಳೂರಲ್ಲಿ ಟಿಕೆಟ್ಗಾಗಿ ಕಿತ್ತಾಟ
ಬೆಂಗಳೂರಿನ ಸಂತೋಷ್ ಚಿತ್ರಮಂದಿರ ಸೇರಿದಂತೆ ಇನ್ನೂ ಕೆಲವು ಚಿತ್ರಮಂದಿರಗಳಲ್ಲಿ ಮಾಸ್ಟರ್ ಪೀಸ್ ಚಿತ್ರ ನೋಡಲಿಕ್ಕಾಗಿ ಸಾವಿರಾರು ಮಂದಿ ಮುಂಜಾನೆಯಿಂದಲೇ ಟಿಕೆಟ್ಗಾಗಿ ಕಾದು ಕುಳಿತಿದ್ದಾರೆ. ಆದರೆ ಚಿತ್ರಮಂದಿರಗಳು ಹೌಸ್ಫುಲ್ ಆಗಿರುವ ಕಾರಣ ಟಿಕೆಟ್ ವಿತರಿಸಲಾಗುತ್ತಿಲ್ಲ. ಇದರಿಂದ ಅಭಿಮಾನಿಗಳು ಚಿತ್ರಮಂದಿರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಮಾತಿನ ಚಕಮಕಿಯೂ ನಡೆದಿರುವ ಘಟನೆ ನಡೆದಿದೆ.
ಯಶ್ ಅಭಿಮಾನಿಗಳಿಂದ ಗಲಾಟೆ
ತೆಲಗು ಚಿತ್ರ ಪ್ರದರ್ಶನ ನಿಲ್ಲಿಸಿ ‘ಮಾಸ್ಟರ್ ಪೀಸ್’ ಪ್ರದರ್ಶಿಸುವಂತೆ ಆಗ್ರಹಿಸಿ ಚಿತ್ರಮಂದಿರದ ಬಳಿ ಪ್ರತಿಭಟಿಸಿದ ಘಟನೆ ರಾಯಚೂರಿನಲ್ಲೂ ನಡೆದಿದೆ. ಇಲ್ಲಿನ ಎಸ್ಎನ್ಟಿ ಚಿತ್ರಮಂದಿರದಲ್ಲಿ ತೆಲಗು ಚಿತ್ರ ‘ಲೋಫರ್’ ಪ್ರದರ್ಶನಗೊಳ್ಳುತ್ತಿರುವುದನ್ನು ಗಮನಿಸಿದ ಯಶ್ ಅಭಿಮಾನಿಗಳು ಇದನ್ನು ಪ್ರತಿಭಟಿಸಿ ಮಾಸ್ಟರ್ ಪೀಸ್ ಪ್ರದರ್ಶಿಸುವಂತೆ ಆಗ್ರಹಿಸಿದರು. ಈ ವೇಳೆ ಚಿತ್ರಮಂದಿರದ ಮಾಲೀಕರೊಂದಿಗೆ ಮಾತಿನ ಚಕಮಕಿಯೂ ನಡೆಯಿತು.
ಒಟ್ಟಾರೆ ಚಿತ್ರಕ್ಕೆ ಅದ್ದೂರಿ ಆರಂಭವಂತೂ ದೊರೆತಿದ್ದು, ಚಿತ್ರ ರಸಿಕರ ಮನ ಗೆಲ್ಲುವ ವಿಶ್ವಾಸ ಮೂಡಿಸಿದೆ.