ನಟ ಚರಣ್ರಾಜ್ ಮತ್ತೆ ಕಾಣಿಸಿಕೊಂಡಿದ್ದಾರೆ. ಆಗಾಗ ಕನ್ನಡದಲ್ಲಿ ಕಾಣಿಸಿಕೊಳ್ಳುವ ಅವರು, ಈಗ “ನಿಗೂಢ ರಹಸ್ಯ ಎಂಬ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ವಿಷಯ ಇದಲ್ಲ, ಈಗ ಅವರನ್ನು ಯಾರೇ ನೋಡಿದರೂ, ಅವರಿಗೆ ಸಕ್ಕರೆ ಖಾಯಿಲೆ ಏನಾದರೂ ಇದೆಯಾ? ಎಂಬ ಅನುಮಾನ ಮೂಡುತ್ತಿದೆಯಂತೆ. ಈ ಮಾತನ್ನು ಸ್ವತಃ ಚರಣ್ರಾಜ್ ಅವರೇ ಹೇಳುತ್ತಾರೆ.
ಅಷ್ಟಕ್ಕೂ ಚರಣ್ರಾಜ್ ಹೀಗೆ ಹೇಳಿಕೊಳ್ಳೋಕೂ ಕಾರಣವಿದೆ. ಚರಣ್ರಾಜ್ ಇದ್ದಕ್ಕಿದ್ದಂತೆಯೇ ಸಣ್ಣಗಾಗಿದ್ದಾರೆ. 120 ಕೆ.ಜಿ ತೂಕವಿದ್ದ ಅವರು, ಸಡನ್ ಆಗಿ 30 ಕೆಜಿಗೂ ಹೆಚ್ಚು ತೂಕ ಇಳಿಸಿಕೊಂಡು ಪೇಷೆಂಟ್ ಥರಾ ಆಗಿಬಿಟ್ಟರಂತೆ. ಅವರನ್ನು ನೋಡಿದವರೆಲ್ಲರಿಗೂ ಒಂದು ರೀತಿ ಶಾಕ್ ಆಗಿದ್ದು ನಿಜವಂತೆ. ತಮ್ಮ ಸ್ಲಿಮ್ ಕುರಿತು ಚರಣ್ರಾಜ್ ಹೇಳಿದ್ದೇನು ಗೊತ್ತಾ? “ನನಗೆ ಯಾವ ಸಕ್ಕರೆ ಖಾಯಿಲೇನೂ ಇಲ್ಲ. ಯಾರೂ ಆ ಬಗ್ಗೆ ಅನುಮಾನ ಪಡಬೇಕಿಲ್ಲ. ನಾನು ತುಂಬಾ ಆರೋಗ್ಯವಾಗಿದ್ದೇನೆ. ನಾನು ಕಳೆದ ಹತ್ತು ವರ್ಷಗಳಿಂದಲೂ ಸಣ್ಣ ಆಗಬೇಕು ಅಂತ ಪ್ರಯತ್ನಿಸುತ್ತಲೇ ಇದ್ದೆ.
ಒಮ್ಮೆ ರಜನಿಕಾಂತ್ ಅವರ ಜತೆ ಕೆಲಸ ಮಾಡುವಾಗ ಅವರನ್ನೂ ಕೇಳಿದ್ದೆ. “ಸಾರ್, ನಾನು ಸಣ್ಣ ಆಗಬೇಕು, ಅದೂ ನಿಮ್ಮಷ್ಟು ಸಣ್ಣಗೆ ಹೇಗೆ ಹೇಳಿ ಸಾರ್’ ಅಂದಿದ್ದೆ. ಆಗ, ಅವರೊಮ್ಮೆ ನನ್ನ ನೋಡಿ ಸಣ್ಣದೊಂದು ಸ್ಮೈಲ್ ಕೊಟ್ಟಿದ್ದರಷ್ಟೇ. ಅವರ ಜತೆಯಲ್ಲಿ 12 ಚಿತ್ರಗಳಲ್ಲಿ ನಟಿಸಿದ್ದೇನೆ. ಅವರನ್ನು ನೋಡಿದಾಗಲೆಲ್ಲಾ ಸಣ್ಣ ಆಗಬೇಕು ಅಂತ ಪ್ರಯತ್ನಿಸುತ್ತಲೇ ಇದ್ದೆ. ಕೊನೆಗೆ, ಇತ್ತೀಚಗಷ್ಟೇ ನಾನು ಒಂದಷ್ಟು ವರ್ಕ್ಔಟ್ ಮಾಡಿದೆ, ನಾನ್ವೆಜ್ ಬಿಟ್ಟೆ. ಊಟದ ವಿಷಯದಲ್ಲಂತೂ ತುಂಬಾ ಕಂಟ್ರೋಲ್ ಮಾಡಿದೆ. ಅವೆಲ್ಲದರಿಂದ ನಾನು ಪೇಷೆಂಟ್ ಥರಾ ಆಗಿಬಿಟ್ಟೆ. ನೋಡಿದವರಿಗೆ ಸಕ್ಕರೆ ಖಾಯಿಲೆ ಇರೋದ್ರಿಂದ ಹಾಗೆ ಸಣ್ಣ ಆಗದ್ದಾರೇನೋ ಅನಿಸೋದು ಸಹಜವೇ.
ಆದರೆ, ನನಗೆ ಯಾವ ಸಕ್ಕರೆ ಖಾಯಿಲೆಯೂ ಇಲ್ಲ. ಅತಿಯಾದ ವರ್ಕ್ಔಟ್ನಿಂದ ಹಾಗೆ ಆಗಿದ್ದೇನಷ್ಟೇ. ಈಗ ಸ್ಲಿಮ್ ಆಗಿರೋದ್ರಿಂದ ತುಂಬಾ ಆ್ಯಕ್ಟಿವ್ ಆಗಿದ್ದೇನೆ. ಒಂದಷ್ಟು ಲವಲವಿಕೆಯಿಂದಲೇ ಕೆಲಸ ಮಾಡುತ್ತಿದ್ದೇನೆ ಎಂದು ತಮ್ಮ ಸಣ್ಣಗಾದ ಗುಟ್ಟಿನ ವಿಷಯ ರಟ್ಟು ಮಾಡುತ್ತಾರೆ ಚರಣ್ರಾಜ್.
ಮಗ ಹೀರೋ ಬನ್ಗಯಾ
ಚರಣ್ರಾಜ್ ಅವರ ಪುತ್ರ ತೇಜ್ರಾಜ್ ಅವರು ಕೂಡ ಈಗ ಹೀರೋ ಆಗಿದ್ದಾರಂತೆ. ತಮಿಳಿನ ಚಿತ್ರವೊಂದರಲ್ಲಿ ನಟಿಸುವ ಮೂಲಕ ಮಗ ಕೂಡ ಬಣ್ಣದ ಲೋಕಕ್ಕೆ ಬಂದಿಧಿದ್ದಾಧಿನಂತೆ. ಈಗಾಗಲೇ ಆ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಆ ಚಿತ್ರವನ್ನು “ಗೋಲಿಸೋಡ’ ಚಿತ್ರಕ್ಕೆ ಅಸೋಸಿಯೇಟ್ ಆಗಿದ್ದ ಕೆ.ಭಾಗ್ಯರಾಜ್ ಎಂಬುವರು ನಿರ್ದೇಶಿಸುತ್ತಿದ್ದಾರೆ. ಎಲ್ಲರೂ ಮಗನನ್ನು ಕನ್ನಡಕ್ಕೆ ಪರಿಚಯಿಸು ಅಂತ ಹೇಳುತ್ತಿದ್ದಾರೆ. ಖಂಡಿತವಾಗಲೂ ಅವನನ್ನು ಕನ್ನಡಕ್ಕೆ ತರುತ್ತೇನೆ. ತಮಿಳಿನ ಮೊದಲ ಚಿತ್ರ ಮುಗಿದ ಬಳಿಕ, ಕನ್ನಡ ಚಿತ್ರ ಮಾಡುತ್ತಾನೆ. ಇದುವರೆಗೆ ನನ್ನನ್ನು ಹೇಗೆ ಬೆಳೆಸಿ, ಹರಿಸಿದ್ದೀರೋ, ನನ್ನ ಮಗನನ್ನೂ ಬೆಳೆಸಿ, ಹರಸಬೇಕು’ ಎನ್ನುತ್ತಾರೆ ಚರಣ್ರಾಜ್.
-ಉದಯವಾಣಿ