ಮನೋರಂಜನೆ

ಈ ರಾಕ್ಷಸಿ ಮೇಲೆ ಲವ್ ಆಗ್ಬೋದು ಹುಷಾರ್…!

Pinterest LinkedIn Tumblr

Rakshasi-(1)ಚಿತ್ರ : ರಾಕ್ಷಸಿ
ನಿರ್ಮಾಣ: ನವರಸನ್‌
ನಿರ್ದೇಶನ: ಅಶ್ರಫ್
ತಾರಾಗಣ: ನವರಸನ್‌, ಸಿಂಧೂ
ಲೋಕನಾಥ್‌, ಜಿಕೆ ರೆಡ್ಡಿ,
ಕೆಂಪೇಗೌಡ, ಕುರಿ ಪ್ರತಾಪ್‌ ಮತ್ತಿತರರು.

ಸತ್ತ ಮೇಲೆ ಮನುಷ್ಯ ಭೂತವಾಗಿ ಅಂಡಲೆಯುತ್ತಾನೆ, ತನ್ನ ಆತ್ಮಕ್ಕೆ ಸದ್ಗತಿ ಸಿಗಲಿ ಅಂತ ಕಾಯುತ್ತಾನೆ; ಆದರೆ ತನ್ನ ಪ್ರೀತಿಯನ್ನು ಪಡೆಯದೇ ಸತ್ತ ಹುಡುಗಿ, ಆತ್ಮಕ್ಕೆ ಸದ್ಗತಿ ಸಿಗದಿರಲಿ ಅಂತ ಪ್ರೇತಾತ್ಮವಾಗಿಯೇ ಅಲೆಯಲು ಬಯಸಬಹುದಾ?
-ಇಂಥ ವಿಚಿತ್ರ ಪ್ರಶ್ನೆ ಎತ್ತುವ ಸಿನಿಮಾ “ರಾಕ್ಷಸಿ’.

ತಮಿಳಿನಲ್ಲಿ ವಿಶಿಷ್ಟ ಕತೆಗಳನ್ನು ತೆರೆ ಮೇಲೆ ಸಿನಿಮಾ ಆಗಿಸುವ ನಿರ್ದೇಶಕ ಮಿಸ್ಕಿನ್‌. ಮಿಸ್ಕಿನ್‌ ಅವರದೇ ನಿರ್ದೇನದ “ಪಿಸಾಸು’ ಕನ್ನಡಕ್ಕೆ “ರಾಕ್ಷಸಿ’ ಆಗಿದೆ. ಹೆದರಿಸುತ್ತಾ, ಬೆದರಿಸುತ್ತಾ ಶುರುವಾಗುವ ಕತೆ, ಕ್ರಮೇಣ ಕುತೂಹಲವಾಗುತ್ತದೆ, ಹೋಗುತ್ತಾ ಹೋಗುತ್ತಾ ಒಂದು ತೀವ್ರ ಪ್ರೇಮಕತೆಯಾಗುತ್ತದೆ, ಕರುಣಾಜನಕ ಕತೆಯಾಗುತ್ತದೆ. ಸಿನಿಮಾ ಮುಗಿಯುವ ಹೊತ್ತಿಗೆ ಸಸ್ಪೆನ್ಸ್‌, ಥ್ರಿಲ್ಲರ್‌, ರೊಮ್ಯಾನ್ಸ್‌ಗಳ ಪ್ಯಾಕೇಜ್‌ ಆಗಿಬಿಡುತ್ತದೆ.

ತುಂಬ ಸಹಜ ಕತೆ. ಆತ ಹಂಸಲೇಖ ಅವರ ಮಂಡಳಿಯಲ್ಲಿ ವಯೋಲಿನ್‌ ಸಹ ವಾದಕ. ಆತನಿಗೆ ದೀನ ದಲಿತರ ಬಗ್ಗೆ, ಬೀದಿ ಮಕ್ಕಳ ಬಗ್ಗೆ ಅಪಾರ ಪ್ರೀತಿ. ಅವನಂಥ ಒಳ್ಳೆ ಮನಸ್ಸಿನ ಹುಡುಗ ತನಗೆ ಸಿಗಲಿ ಅಂತ ಹಂಬಲಿಸೋ ಹುಡುಗಿ ಅವಳು.

ಅಮ್ಮನಿಲ್ಲದೇ ಅಪ್ಪನ ಆರೈಕೆಯಲ್ಲಿ ಬೆಳೆದ ಮಗಳವಳು. ಹೀಗೆ ಒಂದು ಪ್ರೇಮ ಫ‌ಲಿಸಲಿದೆಯೆಂಬ ಆಶಯ ಇರುವ ಹೊತ್ತಿಗೆ
ವಿಧಿ ಹೊಸ ತಿರುವನ್ನು ಬರೆಯುತ್ತದೆ. ಒಂದು ಕಾರು ಗುದ್ದಿದ ಪರಿಣಾಮವಾಗಿ, ಹೀರೋ ಅವಳನ್ನು ಆಸ್ಪತ್ರೆಗೆ ಸೇರಿಸುವಷ್ಟರಲ್ಲೇ ಆಕೆ ತೀರಿಕೊಳ್ಳುತ್ತಾಳೆ. ದೇಹವೇ ಇಲ್ಲದೇ ಆತ್ಮದ ರೂಪದಲ್ಲಿ ಅವಳ ಪ್ರೇಮ ಅವನ
ಮನೆಯೊಳಗೆ ಫ‌ಲ ತೊಟ್ಟುಕೊಳ್ಳುತ್ತದೆ.

ಮೂಲದ ತೀವ್ರತೆಯನ್ನು ಉಳಿಸಿಕೊಂಡೇ ಹೋಗುವ ಕತೆಯನ್ನು ಅಶ್ರಫ್ ಕನ್ನಡಕ್ಕೆ ಕೊಟ್ಟಿದ್ದಾರೆ. ಪ್ರಾರಂಭದ ಕೆಲ ಭಾಗಗಳನ್ನು ಸೇರಿಸಿದ್ದಾರಾದರೂ ಅದು ಕತೆಗೆ ವಿಶೇಷ ಉಪಯೋಗವನ್ನೇನೂ ಮಾಡಿಲ್ಲ. ಉಳಿದಂತೆ ಮೂಲನಿಷ್ಠ ಕತೆ ಇದು. ಮೂಲದ ತೀವ್ರತೆಯನ್ನು ಚಿತ್ರದುದ್ದಕ್ಕೂ ಕಾಣಬಹುದು. ಕೆಮರಾ, ಹಿನ್ನೆಲೆ ಸಂಗೀತ, ಎಫೆಕ್ಟ್ಗಳಿಂದ ಕತೆ ನಿಮ್ಮನ್ನ ಕ್ಷಣಕ್ಷಣಕ್ಕೂ ಕಾಡುತ್ತದೆ ಮತ್ತು ಭಾವುಕವಾಗಿಸುತ್ತದೆ. ಆದರೆ ಚಿತ್ರದ ವೇಗ ಹೆಚ್ಚಿದ್ದರೆ, ಕೆಲ ಭಾಗಗಳನ್ನು ಮೊನಚಾಗಿಸಿದ್ದರೆ
ಒಟ್ಟಾರೆ ಅನುಭವ ಇನ್ನಷ್ಟು ತೀವ್ರವಾಗಬಹುದಿತ್ತು.

ಅಭಿನಯದ ವಿಷಯಕ್ಕೆ ಬಂದರೆ ನಿರ್ಮಾಪಕರೂ ಆಗಿರುವ ನವರಸನ್‌ ಪಾತ್ರವಾಗಲು ಪ್ರಯತ್ನಪಟ್ಟಿದ್ದಾರೆ. ಆದರೆ ಮೂಲದ ನಟನನ್ನು ಕೊಂಚ ಅನುಸರಿಸುವಂತೆ ಉದ್ದಕ್ಕೂ ಕಾಣುವುದೇ ಮೈನೆಸ್‌. ಸಿಂಧೂ ಲೋಕನಾಥ್‌ ಹೆಚ್ಚು ತೆರೆಯ ಮೇಲೆ ಜೀವಂತ ಇರದೇ ಹೋದರೂ ಇದ್ದಷ್ಟು ಕಾಲ ಇಷ್ಟವಾಗುತ್ತಾರೆ, ಆಮೇಲೆ ಆ ಕತೆಯ ಭಾಗವಾಗಿ ಕಾಡುತ್ತಾರೆ.

ಹುಡುಗಿಯ ತಂದೆ ಪಾತ್ರದಲ್ಲಿ ತಮಿಳಿನ ನಟ ವಿಶಾಲ್‌ ಅವರ ತಂದೆ ಜಿಕೆ ರೆಡ್ಡಿ ಪಕ್ವ ಅಭಿನಯ ನೀಡಿದ್ದಾರೆ.  ಏಕಮಾತ್ರಪುತ್ರಿಯನ್ನು ಕಳಕೊಂಡ ತಂದೆಯಾಗಿ ಹತಾಶೆ, ದುಃಖಗಳನ್ನು ಕಟ್ಟಿಕೊಟ್ಟಿದ್ದಾರೆ. ಉಳಿದಂತೆ ಸಣ್ಣಪುಟ್ಟ ಪಾತ್ರಗಳು ಸಹ ಕತೆಯ ಭಾಗವಾಗಿ ಪ್ರಾಮಾಣಿಕವಾಗಿ ದುಡಿದಿವೆ. ಮೊದಲು ಭಯ, ಕ್ರಮೇಣ ಆತಂಕ, ಕ್ರಮೇಣ ಕುತೂಹಲ, ನಿಧಾನಕ್ಕೆ ವಿಷಾದ, ಅಂತಿಮವಾಗಿ ಹತಾಶೆ-ಎಲ್ಲಾ ಅನುಭವಗಳನ್ನು ಕ್ರಮೇಣ ಪೇರಿಸಿಡುವ ಸಿನೆಮಾ-ರಾಕ್ಷಸಿ.
-ವಿಕಾಸ್ ನೇಗಿಲೋಣಿ
-ಉದಯವಾಣಿ

Write A Comment