ಮನೋರಂಜನೆ

ಏಕದಿನ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾಗೆ ಸೋಲು; ರೋಹಿತ್ ಶರ್ಮಾರ ಭರ್ಜರಿ ಶತಕ ವ್ಯರ್ಥ

Pinterest LinkedIn Tumblr

ind

ಕಾನ್ಪುರ: ಭಾರತ-ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಜಯ ಗಳಿಸಿದೆ. ಎಬಿಡಿವಿಲಿಯರ್ಸ್ ಅವರ ಅತ್ಯುತ್ತಮ ಶತಕ ದಕ್ಷಿಣ ಆಫ್ರಿಕಾ ಗೆಲುವಿಗೆ ಪ್ರಮುಖ ಕಾರಣವಾಗಿದೆ.

304 ರನ್ ಗಳ ಮೊತ್ತವನ್ನು ಬೆನ್ನತ್ತಿದ್ದ ಟೀಂ ಇಂಡಿಯಾ ಕೇವಲ 5 ರನ್ ಗಳಿಂದ ಸೋಲು ಕಂಡಿದೆ. ಭಾರತದ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾರ ಭರ್ಜರಿ ಶತಕ(150) ಟೀಂ ಇಂಡಿಯಾವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಗೆಲುವಿನ ಸನಿಹಕ್ಕೆ ಬಂದಿದ್ದ ಟೀಂ ಇಂಡಿಯಾ ಕೊನೆಯ ಹಂತದಲ್ಲಿ ಎಡವಿತು. ನಾಯಕ ಎಂಎಸ್ ಧೋನಿಯ ತಾಳ್ಮೆಯ ಆಟವಾಡಿದರು ಪ್ರಯೋಜನಕ್ಕೆ ಬರಲಿಲ್ಲ.

ಟೀಂ ಇಂಡಿಯಾ ಪರ 23 ರನ್ ಗಳಿಸಿದ್ದ ಶಿಖರ್ ಧವನ್ ಮಾರ್ಕೇಲ್ ಎಸೆತದಲ್ಲಿ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದರು. ನಂತರ ಬಂದ ಅಂಜಿಕ್ಯಾ ರಹಾನ್ ತಾಳ್ಮೆಯ ಆಟವಾದ 60 ಗಳಿಸಿ ಬೆಹಾರ್ಡಿಯನ್ ಗೆ ವಿಕೆಟ್ ಒಪ್ಪಿಸಿದರು. ಭರವಸೆಯ ಆಟಗಾರ ವಿರಾಟ್ ಕೊಹ್ಲಿ ಅನವಶ್ಯಕ ಹೊಡೆತಕ್ಕೆ ಕೈಹಾಕಿ 11 ರನ್ ಗಳಿಗೆ ಔಟಾದರು. ಬಂದ ದಾರಿಗೆ ಸುಂಕವಿಲ್ಲದಂತೆ ಕೊನೆಯ ಹಂತದಲ್ಲಿ 3 ರನ್ ಗಳಿಸಿ ಸುರೇಶ್ ರೈನಾ ಡುಮಿನಿಗೆ ಕ್ಯಾಚ್ ನೀಡಿ ಔಟಾದರು. ಧೋನಿ 31, ಸ್ಟುವರ್ಟ್ ಬಿನ್ನಿ 2 ಹಾಗೂ ಭುವನೇಶ್ವರ್ ಕುಮಾರ್ ಅಜೇಯ 1 ರನ್ ಗಳಿಸಿದ್ದಾರೆ.

ದಕ್ಷಿಣ ಆಫ್ರಿಕಾ ಪರ ರಬಡಾ, ಇಮ್ರಾನ್ ತಾಹಿರ್ 2, ಮಾರ್ಕೇಲ್, ಸ್ಟೇನ್ ಹಾಗೂ ಬೆಹಾರ್ಡಿಯನ್ 1 ವಿಕೆಟ್ ಪಡೆದಿದ್ದಾರೆ.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ಆರಂಭದಿಂದಲೂ ಉತ್ತಮವಾಗಿ ಬ್ಯಾಟಿಂಗ್ ಮಾಡಿತು. ಆರಂಭಿಕರಾದ ಡಿ ಕಾಕ್ ಮತ್ತು ಹಷೀಮ್ ಆಮ್ಲಾ ತಂಡಕ್ಕೆ 45 ರನ್ ಕಲೆಹಾಕುವ ಮೂಲಕ ಭದ್ರ ಬುನಾದಿ ಹಾಕಿಕೊಟ್ಟರು. ಬಳಿಕ ಬಂದ ಡುಪ್ಲೆಸಿಸ್ ಮತ್ತು ಎಬಿ ಡಿವಿಲಿಯರ್ಸ್ ಜೋಡಿ ಭಾರತದ ಬೌಲರ್ ಗಳನ್ನು ಮನಸೋ ಇಚ್ಛೆ ದಂಡಿಸಿದರು. ನೋಡ ನೋಡುತ್ತಿದ್ದಂತೆಯೇ ಡುಪ್ಲೆಸಿಸ್ ಅರ್ಧಶತಕ ದಾಖಲಿಸಿ ಔಟಾದರೆ ಬ್ಯಾಟಿಂಗ್ ಮುಂದುವರೆಸಿದ ಎಬಿಡಿವಿಲಿಯರ್ಸ್ ಅಮೋಘ ಶತಕ ದಾಖಲಿಸಿದರು. ಕೇವಲ 73 ಎಸೆತಗಳನ್ನು ಎದುರಿಸಿದ ಡಿವಿಲಿಯರ್ಸ್ ಬರೋಬ್ಬರಿ 104 ರನ್ ಸಿಡಿಸಿದರು. ಅವರಿಗೆ ಉತ್ತಮ ಸಾಥ್ ನೀಡಿದ ಬೆಹರಡೀನ್ 35 ರನ್ ಗಳಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.

ಆ ಮೂಲಕ ದಕ್ಷಿಣ ಆಫ್ರಿಕಾ ತಂಡ ಕೇವಲ 5 ವಿಕೆಟ್ ನಷ್ಟಕ್ಕೆ 303 ರನ್ ಗಳಿಸಿ, ಭಾರತಕ್ಕೆ ಗೆಲ್ಲಲು 304 ರನ್ ಗಳ ಗುರಿ ನೀಡಿದೆ. ಭಾರತದ ಪರ ಉಮೇಶ್ ಯಾದವ್ ಮತ್ತು ಅಮಿತ್ ಮಿಶ್ರಾ ತಲಾ 2 ವಿಕೆಟ್ ಕಬಳಿಸಿದರೆ, ಆರ್ ಅಶ್ವಿನ್ 1 ವಿಕೆಟ್ ಪಡೆದರು.

Write A Comment