ಕನ್ನಡ ವಾರ್ತೆಗಳು

ಸಹಜ ಸ್ಥಿತಿಗೆ ಮರಳಿದ ಮೂಡಬಿದ್ರೆ : ಆರೋಪಿಗಳ ಪತ್ತೆಗೆ ಇಂದು ಸಂಜೆ ಅಂತಿಮ ಗಡು

Pinterest LinkedIn Tumblr

Mooda_bidre_bundh

ಮೂಡುಬಿದಿರೆ: ಹೂವಿನ ವ್ಯಾಪಾರಿ ಹಾಗೂ ಬಜರಂಗದಳದ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಹತ್ಯೆ ಪ್ರಕರಣವನ್ನು ಖಂಡಿಸಿ ಮೂಡು ಬಿದಿರೆಯಲ್ಲಿ ಎರಡನೆ ದಿನವಾದ ಶನಿವಾರ ಕೂಡ ಬಂದ್ ನಡೆಸಲಾಗಿದ್ದು, 2 ದಿನಗಳ ಬಂದ್‍ನಿಂದ ಅಸ್ತವ್ಯಸ್ತವಾಗಿದ್ದ ಜನಜೀವನ ಇಂದು ಬೆಳಗ್ಗಿನಿಂದ ಸಹಜ ಸ್ಥಿತಿಗೆ ಮರಳಿದೆ.

ಪ್ರಶಾಂತ್ ಕೊಲೆಯ ಹಿನ್ನೆಲೆಯಲ್ಲಿ ಮೂಡುಬಿದಿರೆ ನಗರದಲ್ಲಿ ನಡೆದ ಗಲಭೆಯಿಂದಾಗಿ ಎರಡು ದಿನಗಳ ಕಾಲು ಜನಜೀವನ ಅಸ್ತವ್ಯಸ್ತವಾಗಿತ್ತು. ಪೇಟೆಗಳಲ್ಲಿನ ಅಂಗಡಿ-ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸಿದರು. ಅಲ್ಲದೆ, ಬೆಳಗ್ಗೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಶಾಲಾ, ಕಾಲೇಜುಗಳ ವಾಹನಗಳನ್ನು ನಿಲ್ಲಿಸಿದರು.

ಬಸ್ ಸಂಚಾರವನ್ನು ತಡೆದಿದ್ದರಿಂದ ವಿದ್ಯಾರ್ಥಿಗಳು, ಜನ ಸಾಮಾನ್ಯರು ತೊಂದರೆ ಅನುಭವಿಸಿದರು. ಕೆಲವು ಶಾಲಾ ಕಾಲೇಜುಗಳು ಇಂದೂ ಬಾಗಿಲು ತೆರೆದಿರಲಿಲ್ಲ. ಯುವಕರ ಗುಂಪು ಬೆಳಗ್ಗೆಯಿಂದಲೇ ಮೂಡುಬಿದಿರೆ ಪೇಟೆಯಲ್ಲಿ ಬಾಗಿಲು ತೆರೆದಿದ್ದ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸತೊಡಗಿದರು. ಇದರಿಂದಾಗಿ ಕೆಲವರು ಮನೆಯಿಂದ ಹೊರಬರಲೂ ಹೆದರು ವಂತಾಯಿತು. ರಸ್ತೆಯಲ್ಲಿ ಖಾಸಗಿ ವಾಹನಗಳ ಸಂಖ್ಯೆಯೂ ವಿರಳವಾಗಿತ್ತು.

ಇದೀಗ ಮೂಡಬಿದ್ರೆ ಸಹಜ ಸ್ಥಿತಿಯತ್ತ ಮರಳಿದ್ದು, ಬೆಳಗ್ಗಿನಿಂದಲೇ ಬಸ್ಸುಗಳ ಓಡಾಟ ಎಂದಿನಂತೆ ಆರಂಭಗೊಂಡಿದ್ದು, ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ತೆರೆದು ವ್ಯಾಪಾರ ಆರಂಭಿಸಿದರು. ನಾಗರಿಕರ ಓಡಾಟ ಸಾಮಾನ್ಯವಾಗಿ ಕಂಡುಬಂದಿದೆ. ಕೆಲವು ಕಡೆಗಳಲ್ಲಿ ದುಷ್ಕರ್ಮಿಗಳು ನಡೆಸಿದ ಹಾನಿಗಳಿಂದಾಗಿ ತೀವ್ರ ಸಂಕಷ್ಟಕ್ಕೊಳಗಾದ ಅಂಗಡಿ ಮಾಲಕರು ಇಂದು ತಮ್ಮ ವ್ಯಾಪಾರ ಆರಂಭಿಸದೇ ಇದ್ದು, ಉಳಿದ ಎಲ್ಲ ವರ್ತಕರು ಸಹಜವಾಗಿ ವ್ಯಾಪಾರ ವ್ಯವಹಾರಗಳಲ್ಲಿ ತೊಡಗಿಕೊಂಡಿದ್ದಾರೆ. ದಿನಸಿ, ಹಾಲು, ಪತ್ರಿಕೆ ಅಂಗಡಿಗಳು, ಹಾಗೂ ಔಷಧ ಅಂಗಡಿಗಳ ಮುಂದೆ ಜನರ ಖರೀದಿಯ ಭರಾಟೆ ಎಂದಿಗಿಂತ ಸ್ವಲ್ಪ ಹೆಚ್ಚೇ ಇದೆ.

ಮೂಡುಬಿದಿರೆಯ ಟೌನ್ ಜುಮಾ ಮಸೀದಿಗೆ ಒದಗಿಸಲಾದ ಪೊಲೀಸ್ ಭದ್ರತೆ ಇಂದು ಕೂಡಾ ಮುಂದುವರಿದಿದೆ. ಮೂಡುಬಿದಿರೆ ಲಾಡಿ ಮಸೀದಿ, ಗಂಟಾಲ್‍ಕಟ್ಟೆ ಮಸೀದಿ, ಕೋಟೆಬಾಗಿಲು ಮಸೀದಿಗಳಿಗೂ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಗಲಭೆ ಭುಗಿಲೆದ್ದ ಪ್ರಶಾಂತ್‍ನ ಹೂವಿನಂಗಡಿ ಹತ್ತಿರವೂ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.

ಐದು ಪ್ರತ್ಯೇಕ ದೂರು ದಾಖಲು

ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದು, ಹಲವರನ್ನು ವಿಚಾರಣೆಗೊಳಪಡಿಸಿದ್ದಾರೆ. ಈ ನಡುವೆ ಕೊನೆಯುಸಿರೆಳೆಯುವ ಮೊದಲು ಪ್ರಶಾಂತ ಹೆಸರಿಸಿದ್ದಾರೆ ಎನ್ನಲಾದ ನಾಲ್ಕು ಮಂದಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಹತ್ಯೆ ನಂತರದ ಬೆಳವಣಿಗೆಯಲ್ಲಿ ಒಟ್ಟು ಐದು ಪ್ರತ್ಯೇಕ ಕೇಸುಗಳು ದಾಖಲಾಗಿವೆ.

ಆಳ್ವಾಸ್ ಆಸ್ಪತ್ರೆಯ ಬಳಿಯ ಫಾಸ್ಟ್‍ಫುಡ್ ಅಂಗಡಿಗೆ ಶುಕ್ರವಾರ ಸಂಜೆ 50 ಮಂದಿ ಅಪರಿಚಿತರು ನುಗ್ಗಿ ಗಾಜು ಒಡೆದು, ಸೊತ್ತುಗಳಿಗೆ ಹಾನಿಮಾಡಿದ್ದಾರೆ ಎಂದು ಮುಬೀನ್ ಎಂಬವರು ಮೂಡಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಆಳ್ವಾಸ್ ರಸ್ತೆಯ ವಿಶ್ವಾಸ್ ಬಾವಾ ಬಿಲ್ಡರ್ಸ್ ಕಚೇರಿಗೆ ಸುಮಾರು 25 ಮಂದಿ ನುಗ್ಗಿ ಪೀಠೋಪಕರಣ ಮತ್ತಿತರ ಸೊತ್ತುಗಳನ್ನು ನಾಶ ಮಾಡಿದ್ದಾರೆ ಎಂದು ಶೇಖ್ ಇಸ್ಮಾಯಿಲ್ ಎಂಬವರು ದೂರು ಸಲ್ಲಿಸಿದ್ದಾರೆ. ಅಪರಿಚಿತರು ಜೀವಬೆದರಿಕೆಯೊಡ್ಡಿದ್ದಾರೆ ಎಂದು ಮಹಮ್ಮದ್ ಅಶ್ರಫ್ ಎಂಬವರು ಠಾಣೆಗೆ ದೂರು ನೀಡಿದ್ದಾರೆ. ಇನ್ನು ಪೊಲೀಸ್ ವಾಹನಕ್ಕೆ ಕಲ್ಲು ತೂರಾಟ ನಡೆಸಿ ತಮ್ಮ ಕರ್ತವ್ಯ ನಿರ್ವಹಣೆಗೆ ಅಡ್ಡಿ ಮಾಡಿದ್ದಾರೆ ಎಂದು ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡಿದ್ದಾರೆ. ಕೊಲೆಗೀಡಾದ ಪ್ರಶಾಂತ ಅವರ ತಂದೆ ಆನಂದ ಪೂಜಾರಿ ಅವರು ಆರು ಮಂದಿಯನ್ನು ಆರೋಪಿಗಳೆಂದು ಹೆಸರಿಸಿ ಮೂಡಬಿದಿರೆ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ಪ್ರಕರಣ ಸಂಬಂಧಪಟ್ಟಂತೆ 100 ಮಂದಿ ಬಜರಂಗದಳ ಕಾರ್ಯಕರ್ತರ ಮೇಲೆ ದಾಖಲಿಸಲಾದ ದೂರಿನನ್ವಯ ಹಾಗೂ ಕೊಲೆಗೆ ಸಂಬಂಧಪಟ್ಟಂತೆ ಮೃತ ಪ್ರಶಾಂತ್‍ನ ತಂದೆ ನೀಡಿದ ಮಾಹಿತಿಯನ್ವಯ ದಾಖಲಾದ ಪ್ರಕರಣ ಸಂಬಂಧ ಯಾರನ್ನೂ ಇದುವರೆಗೆ ಬಂಧಿಸಲಾಗಿಲ್ಲ.

ಮೂಲಗಳ ಪ್ರಕಾರ ಗಂಟಾಲ್‍ಕಟ್ಟೆಗೆ ಮದುವೆಗೆಂದು ಹೊರ ಜಿಲ್ಲೆಯಿಂದ ಬಂದಿದ್ದ ಯುವಕನೋರ್ವನನ್ನೂ ಪೊಲೀಸರು ವಿಚಾರಣೆಗೆಂದು ಬಂಧಿಸಿದ್ದಾರೆನ್ನಲಾಗಿದೆ. ಆದರೆ ಪೊಲೀಸರು ಇದನ್ನು ಖಚಿತಪಡಿಸಿಲ್ಲ. ಉಳಿದಂತೆ ಇನ್ನೂ 9 ಮಂದಿಯನ್ನು ವಿಚಾರಣೆ ನೆಪದಲ್ಲಿ ಬಂಧಿಸಲಾಗಿದೆ ಎನ್ನಲಾಗುತ್ತಿದೆ.

ಪ್ರಕರಣದ ಆರೋಪಿಗಳ ಬಂಧನಕ್ಕೆ ಇಂದು ಸಂಜೆವರೆಗೆ ನೀಡಿದ ಗಡುವಿನೊಳಗೆ ಬಂಧಿಸದೇ ಇದ್ದಲ್ಲಿ ನಾಳೆ ಮತ್ತೆ ಒತ್ತಾಯದ ಮೇಲೆ ಬಂದ್ ಮಾಡಿಸುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಒಟ್ಟಿನಲ್ಲಿ ಮೂಡುಬಿದಿರೆಯಲ್ಲಿ ಕೊಲೆ ಮತ್ತು ಅದರ ನಂತರ ನಡೆದ ಬೆಳವಣಿಗೆಯಿಂದ ಬೇಸತ್ತಿದ್ದ ಸಾರ್ವಜನಿಕರು ಇಂದು ನಿಟ್ಟುಸಿರು ಬಿಟ್ಟಿದ್ದಾರೆ.

ಹತ್ಯಾ ಪ್ರಕರಣದಿಂದ ಮಾರುಕಟ್ಟೆಯ ಮೇಲೆ ದುಷ್ಪರಿಣಾಮ

ಮೂಡುಬಿದಿರೆಯಲ್ಲಿ ಶುಕ್ರವಾರ ವಾರದ ಸಂತೆಯಾಗಿತ್ತು. ಯುವಕನ ಕೊಲೆಯಿಂದಾಗಿ ಮೂಡುಬಿದಿರೆ ದಿಢೀರ್ ಬಂದ್ ಆದ ಹಿನ್ನೆಲೆಯಲ್ಲಿ ದೂರದ ಊರುಗಳಿಂದ ಆಗ ಮಿಸಿದ ವ್ಯಾಪಾರಿಗಳು ತಾವು ತಂದಿದ್ದ ಹಣ್ಣು, ಹಂಪಲು, ಮೀನುಗಳನ್ನು ಮಾರಾಟ ಮಾಡಲು ಸಾಧ್ಯವಾಗದೆ ನಷ್ಟ ಅನುಭವಿಸಬೇಕಾಯಿತು ಎಂದು ಅಳಲು ತೋಡಿಕೊಂಡಿದ್ದಾರೆ. ಸಂತೆಗೆಂದು ತಂದಿದ್ದ ತರಕಾರಿಯ ಮೂಟೆಗಳು ಶನಿವಾರವೂ ಮಾರ್ಕೆಟ್‌ನಲ್ಲಿ ಕಂಡು ಬಂದಿದ್ದವು. ಆದರೆ ವ್ಯಾಪಾರ ಮಾಡಲಾಗದೆ ವ್ಯಾಪಾರಸ್ಥರು ಇನ್ನೂ ಹೆಚ್ಚಿನ ನಷ್ಟವನ್ನು ಅನುಭವಿಸಬೇಕಾಯಿತು.

ಪರದಾಡಿದ ಕ್ರೀಡಾಪಟುಗಳು :

ಮಂಗಳೂರು ವಿವಿ ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ರವಿವಾರ ಮೂಡು ಬಿದಿರೆಯಲ್ಲಿ ಕ್ರೀಡಾಕೂಟ ಆಯೋಜಿಸಲಾಗಿದ್ದು, ಅಖಿಲ ಭಾರತ ಅಂತರ್ ವಿವಿ ಕ್ರಾಸ್‌ಕಂಟ್ರಿ ಕ್ರೀಡಾಕೂಟಕ್ಕೆ ವಿವಿಧ ರಾಜ್ಯಗಳಿಂದ ಕ್ರೀಡಾಪಟುಗಳು ಆಗಮಿಸಿದ್ದರು. ಆದರೆ ಶನಿವಾರ ಬಸ್‌ಗಳು ಸಂಚಾರವನ್ನು ನಿಲ್ಲಿಸಿದ್ದರಿಂದ ಈ ಕ್ರೀಡಾಪಟುಗಳು ಕೆಲವು ತಾಸುಗಳ ಕಾಲ ಪರದಾಡಬೇಕಾಯಿತು. ಕೊನೆಗೆ ಆಳ್ವಾಸ್ ಸಂಸ್ಥೆಯವರು ತಮ್ಮದೇ ಬಸ್ಸನ್ನು ಮಂಗಳೂರು ರೈಲ್ವೆ ನಿಲ್ದಾಣಕ್ಕೆ ಕಳುಹಿಸಬೇಕಾಯಿತು. ಮಂಗಳೂರು ರೈಲ್ವೆ ನಿಲ್ದಾಣಕ್ಕೆ ಶುಕ್ರವಾರದಂದೇ ಆಗಮಿಸಿದ್ದ ಹೊರ ರಾಜ್ಯಗಳ ಕೆಲವು ಕ್ರೀಡಾಪಟುಗಳು ಕೂಡ ಮೂಡುಬಿದಿರೆಗೆ ಬಸ್ ಸಂಚಾರವಿಲ್ಲದೆ ಪರದಾಡಬೇಕಾಯಿತು.

ವಾಟ್ಸ್‌ಆ್ಯಪ್‌ : ತಪ್ಪು ಸಂದೇಶ

ಘಟನೆ ನಡೆದ ದಿನದಿಂದ ಕೆಲವು ದುಷ್ಕರ್ಮಿ ಗಳು ವಾಟ್ಸ್‌ಆ್ಯಪ್ ಮೂಲಕ ಕೋಮು ಉದ್ರೇಕಕಾರಿ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಸಾಮಾಜಿಕ ಜಾಲತಾಣಗಳ ಮೂಲಕ ಮೂಡುಬಿದಿರೆಯಲ್ಲಿ ಶಾಂತಿಯನ್ನು ಕದಡುವ ದುಷ್ಕೃತ್ಯ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

ಅಹಿತಕರ ಘಟನೆಗಳಿಗೆ ಪೊಲೀಸರೇ ಹೊಣೆ: ಆರೋಪ

ಮೂಡುಬಿದಿರೆಯಲ್ಲಿ ಕೊಲೆಯಾದ ಬಜರಂಗದಳದ ಸಕ್ರಿಯ ಕಾರ್ಯಕರ್ತ ಪ್ರಶಾಂತ್ ಪೂಜಾರಿ ನಮ್ಮ ಸಂಘಟನೆಯ ಕಾರ್ಯಕರ್ತ. ಆತನ ಹತ್ಯೆಯನ್ನು ಬಜರಂಗದಳ, ವಿಹಿಂಪ ಖಂಡಿಸುತ್ತದೆ ಎಂದು ಬಜರಂಗದಳ ತಾಲೂಕು ಸಂಚಾಲಕ ಸೋಮನಾಥ್ ಕೋಟ್ಯಾನ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ

ಪ್ರಶಾಂತ್ ಹತ್ಯೆ ನಡೆಸಿದ ಆರೋಪಿಗಳನ್ನು ರವಿವಾರ ಸಂಜೆಯೊಳಗೆ ಬಂಧಿಸದಿದ್ದರೆ ಪರಿಸ್ಥಿತಿ ಕೈಮೀರಿ ಹೋಗಲಿದೆ ಎಂದು ಎಚ್ಚರಿಕೆ ನೀಡಿದ ಅವರು, ಪ್ರಕರಣದಲ್ಲಿ ಇತ್ತೀಚಿಗೆ ಹಂಡೇಲುವಿನಲ್ಲಿ ನಡೆದ ಕೊಲೆಯತ್ನದ ಆರೋಪಿಗಳ ಕೈವಾಡವಿದೆ ಎಂದು ಆರೋಪಿಸಿದರು.

ಶುಕ್ರವಾರ ನಡೆದ ಕೆಲವು ಅಹಿತಕರ ಘಟನೆಗಳಿಗೆ ಪೊಲೀಸ್ ಇಲಾಖೆಯೇ ನೇರ ಹೊಣೆ ಎಂದು ಸೋಮನಾಥ ದೂರಿದರು.ವಿಹಿಂಪ ಕಾರ್ಯಾಧ್ಯಕ್ಷ ಶ್ಯಾಮ ಹೆಗ್ಡೆ, ಬಜರಂಗದಳದ ಸಹ ಸಂಚಾಲಕ ಭರತ್ ಶೆಟ್ಟಿ, ಸಹ ಕಾರ್ಯದರ್ಶಿ ವಸಂತ್ ಪೈ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಸಚಿವರೇ ಕಾರಣ: ಜಗದೀಶ ಅಧಿಕಾರಿ

ಪ್ರಶಾಂತ್ ಪೂಜಾರಿ ಹತ್ಯೆ ಘಟನೆಗೆ ಇಲ್ಲಿನ ಶಾಸಕ ಹಾಗೂ ಸಚಿವ ಅಭಯಚಂದ್ರರೇ ನೇರ ಹೊಣೆಯಾಗಿದ್ದಾರೆ. ಅಲ್ಲದೆ ರಾಜ್ಯ ಸರಕಾರ ಹಾಗೂ ಪೊಲೀಸ್ ಇಲಾಖೆಯ ವೈಫಲ್ಯವೂ ಇದಕ್ಕೆ ಕಾರಣ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಪಿ ಜಗದೀಶ ಅಧಿಕಾರಿ ಆರೋಪಿಸಿದ್ದಾರೆ.

ಅವರು ಮೂಡುಬಿದಿರೆ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ನಡೆಸಿದ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿ, ಮೂಡುಬಿದಿರೆಯಲ್ಲಿ ನಡೆದ ಕೊಲೆ ಕೃತ್ಯವನ್ನು ನಾಗರಿಕ ಸಮಾಜ ಹಾಗೂ ಬಿಜೆಪಿ-ಸಂಘಪರಿವಾರ ತೀವ್ರವಾಗಿ ಖಂಡಿಸುತ್ತದೆ ಎಂದರು. ಕೊಲೆಯಾದ ಪ್ರಶಾಂತ್ ಕುಟುಂಬಕ್ಕೆ ಸರಕಾರ 25 ಲಕ್ಷ ರೂ. ಪರಿಹಾರ ನೀಡಲಿ ಎಂದು ಆಗ್ರಹಿಸಿದರು. ರವಿವಾರ ಸಂಜೆವರೆಗೆ ಪೊಲೀಸ್ ಇಲಾಖೆಗೆ ಅಪರಾಧಿಗಳ ಬಂಧನಕ್ಕೆ ಗಡುವು ನೀಡಿದ ಅಧಿಕಾರಿ, ರವಿವಾರ ಸಂಜೆಯೊಳಗೆ ಬಂಧನವಾಗದಿದ್ದಲ್ಲಿ ಪರಿಸ್ಥಿತಿ ಇನ್ನೂ ಚಿಂತಾಜಕನವಾಗಲಿದೆ ಎಂದರು.

ಬಿಜೆಪಿ ಕ್ಷೇತ್ರಾಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ, ಪುರಸಭಾ ಸದಸ್ಯರಾದ ನಾಗರಾಜ ಪೂಜಾರಿ, ಬಾಹುಬಲಿ ಪ್ರಸಾದ್, ಲಕ್ಷ್ಮಣ್ ಪೂಜಾರಿ, ಬೆಳುವಾಯಿ ಪಂಚಾಯತ್ ಅಧ್ಯಕ್ಷ ಭಾಸ್ಕರ ಆಚಾರ್ಯ, ಪಡುಮಾರ್ನಾಡು ಗ್ರಾಪಂ ಅಧ್ಯಕ್ಷ ಶ್ರೀನಾಥ್ ಸುವರ್ಣ, ಬಿಜೆಪಿ ಮುಖಂಡ ಕೆ.ಕೃಷ್ಣರಾಜ ಹೆಗ್ಡೆ ಮತ್ತಿತರರು ಈ ಸಂದರ್ಭದಲ್ಲಿದ್ದರು.

ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿಗಳ ಭೇಟಿ

ಮೂಡುಬಿದಿರೆ: ಬಜರಂಗದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಕೊಲೆಗೀಡಾದ ಸ್ಥಳಕ್ಕೆ ದ.ಕ. ಜಿಲ್ಲಾಧಿಕಾರಿ ಎ.ಬಿ ಇಬ್ರಾಹೀಂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮೂಡುಬಿದಿರೆ ಪ್ರವಾಸಿ ಮಂದಿರದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.

ಸಚಿವ ಅಭಯಚಂದ್ರ ಜೈನ್ ಸಭೆಯಲ್ಲಿ ಮಾತನಾಡಿ, ಘಟನೆಯ ಹಿನ್ನೆಲೆಯಲ್ಲಿ ಆರೋಪಿಗಳನ್ನು ಶೀಘ್ರ ಬಂಧಿಸಬೇಕು. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಬೇಕು. ಸುಳ್ಳು ವದಂತಿಗಳಿಗೆ ಮೂಡುಬಿದಿರೆಯ ಜನತೆ ಕಿವಿಗೊಡದೆ ಶಾಂತಿ ಸೌಹಾರ್ದತೆಯನ್ನು ಕಾಪಾಡಬೇಕೆಂದು ಕರೆ ನೀಡಿದರು.

ಜಿಲ್ಲಾ ಪೊಲೀಸ್ ಆಯುಕ್ತ ಮುರುಗನ್, ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಶಾಂತರಾಜು, ಅಪರಾಧ ವಿಬಾಗದ ಡಿಸಿಪಿ ಸಂಜೀವ ಪಾಟೀಲ, ಮೂಡುಬಿದಿರೆ ತಹಶೀಲ್ದಾರ್ ಮುಹಮ್ಮದ್ ಇಸಾಕ್, ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಅನಂತ ಪದ್ಮನಾಭ ಸಹಿತ ಇಲಾಖೆಯ ವಿವಿಧ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಆರೋಪಿಗಳ ಬಂಧನಕ್ಕೆ ಅ.15 ಗಡುವು : ನಳಿನ್

ಮಂಗಳೂರು: ಮೂಡುಬಿದಿರೆಯಲ್ಲಿ ಬಜರಂಗದಳದ ಕಾರ್ಯಕರ್ತ ಪ್ರಶಾಂತ್ ಎಂಬವರನ್ನು ಹತ್ಯೆಗೈದ ಆರೋಪಿಗಳನ್ನು ಅ.15ರೊಳಗೆ ಬಂಧಿಸಬೇಕು. ಇಲ್ಲವಾದಲ್ಲಿ ದ.ಕ. ಜಿಲ್ಲೆ ಬಂದ್ ನಡೆಸಿ ಹೋರಾಟ ತೀವ್ರಗೊಳಿಸುವುದಾಗಿ ಲೋಕಸಭಾ ಸದಸ್ಯ ನಳಿನ್ ಕುಮಾರ್ ಎಚ್ಚರಿಸಿದ್ದಾರೆ.

ಶನಿವಾರ ಎತ್ತಿನಹೊಳೆ ಪಾದಯಾತ್ರೆ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಶಾಂತ್ ಹತ್ಯೆಯ ಮೂಲಕ ಜಿಲ್ಲೆಯಲ್ಲಿ ಕೋಮುದ್ವೇಷ ಬಿತ್ತುವ ಕೆಲಸವನ್ನು ಉಗ್ರವಾದಿ ಸಂಘಟನೆಗಳು ಮಾಡುತ್ತಿವೆ ಎಂದರು. ರಾಜ್ಯದಲ್ಲಿ ಗೃಹ ಇಲಾಖೆಯ ವೈಲ್ಯವೇ ಇಂತಹ ಘಟನೆಗಳು ಮರುಕಳಿಸಲು ಕಾರಣ. ಕೆಲವೇ ದಿನಗಳ ಅಂತರದಲ್ಲಿ ಮಂಗಳೂರಿನಲ್ಲಿ ಇಂತಹ ಮೂರು ಘಟನೆಗಳು ನಡೆದಿವೆ.. ಆದರೆ ಸರಕಾರ, ಗೃಹ ಇಲಾಖೆ ಕಣ್ಣುಮುಚ್ಚಿ ಕುಳಿತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ನಳಿನ್ ಕುಮಾರ್, ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಆರೋಪಿಗಳನ್ನು ಬಂಧಿಸುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡಬೇಕು ಎಂದರು.

ನಾಲ್ಕು ಸಚಿವರಿರುವ ದ.ಕದಲ್ಲ್ಲಿ ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿದ್ದರೂ ಯಾವುದೇ ಸಚಿವರು ಗಮನಹರಿಸುತ್ತಿಲ್ಲ. ಬದಲಾಗಿ ಇಂತಹ ಘಟನೆಗಳಲ್ಲೂ ರಾಜಕೀಯ ಮಾಡಲು ಹೊರಟಿದ್ದಾರೆ.

ನೈತಿಕ ಪೊಲೀಸ್‌ಗಿರಿಯ ಮಾತಾಡುವ ಮಂದಿ ಇಂತಹ ಘಟನೆಗಳು ನಡೆದಾಗ ತುಟಿಪಿಟಿಕ್ಕೆನ್ನುತ್ತಿಲ್ಲ ಎಂದು ವಿಧಾನ ಪರಿಷತ್‌ಸದಸ್ಯ ಗಣೇಶ್ ಕಾರ್ಣಿಕ್ ದೂರಿದರು. ಪ್ರಕರಣವನ್ನು ಬಯಲಿಗೆಳೆದು ಸಂತ್ರಸ್ತರಿಗೆ ನ್ಯಾಯದೊರಕಿಸುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Write A Comment