ರಾಷ್ಟ್ರೀಯ

ಮಗಳ ಶೀಲ ರಕ್ಷಣೆಗೆ ಗಂಡನನ್ನೇ ಕೊಂದ ಪತ್ನಿ ಈಗ ಪದವೀಧರೆ..!

Pinterest LinkedIn Tumblr

usharani-s

ಚೆನ್ನೈ: ಕಾಮುಕ ಗಂಡನಿಂದ ತನ್ನ ಮಗಳ ಶೀಲ ರಕ್ಷಿಸಲು ಆತನನ್ನು ಕೊಂದು ಹಾಕಿ ಹೆಣ್ಣು ಕುಲಕ್ಕೇ ಮಾದರಿಯಾದ ತಮಿಳುನಾಡಿನ ಉಷಾರಾಣಿ ಇದೀಗ ಪದವೀಧರರಾಗಿದ್ದಾರೆ.

ಈಗ್ಗೆ ಮೂರು ವರ್ಷಗಳ ಹಿಂದೆ ಗಂಡನನ್ನೇ ಕೊಂದ ಹೆಣ್ಣು ಎಂದು ಕುಖ್ಯಾತಿಗೆ ಒಳಗಾಗಿದ್ದ ಚೆನ್ನೈ ಮೂಲದ ಉಷಾರಾಣಿ ಇದೀಗ ಒಳ್ಳೆಯ ಕಾರಣಕ್ಕಾಗಿ ಸುದ್ದಿಯಾಗಿದ್ದಾರೆ. 43 ವರ್ಷದ ಉಷಾರಾಣಿ ಮನೋವಿಜ್ಞಾನ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. ಚೆನ್ನೈನ ತಮಿಳುನಾಡು ಮುಕ್ತ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ರೋಸಯ್ಯ ಅವರು ಉಷಾರಾಣಿ ಅವರಿಗೆ ಪದವಿ ಪ್ರದಾನ ಮಾಡಿದರು.

ಮೂಲತಃ ಚೆನ್ನೈ ಮೂಲದವರಾಗಿರುವ ಉಷಾರಾಣಿ ಅವರು, ದ್ವಿತೀಯ ಪಿಯುಸಿ ಓದುತ್ತಿರುವಾಗ ಪರಿಚಿತ ಯುವಕನೊಬ್ಬನೊಂದಿಗೆ ಪ್ರೇಮಾಂಕುರವಾಗಿ ಪೋಷಕರ ವಿರೋಧದ ನಡುವೆಯೂ ಮದುವೆಯಾಗಿದ್ದರು. ಬಳಿಕ ಅವರಿಗೆ ಒಂದು ಹೆಣ್ಣು ಮಗು ಕೂಡ ಜನಿಸಿತ್ತು. ಕೆಲ ವರ್ಷಗಳ ಬಳಿಕ ಕುಡಿತಕ್ಕೆ ದಾಸನಾದ ಉಷಾರಾಣಿ ಅವರ ಪತಿ ಸ್ವಂತ ಮಗಳನ್ನೇ ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ. ಆರಂಭದಲ್ಲಿ ಸಹಿಸಿಕೊಂಡಿದ್ದ ಉಷಾರಾಣಿ ಆತನ ದೌರ್ಜನ್ಯ ಮಿತಿ ಮೀರುತ್ತಿದ್ದಂತೆಯೇ ಮಗಳ ಶೀಲ ರಕ್ಷಣೆಗಾಗಿ ಆತನನ್ನು ಬಡಿದು ಕೊಂದು ಹಾಕಿದರು. ಸತತ ವಿಚಾರಣೆ ಮತ್ತು ಮಾನವೀಯತೆ ದೃಷ್ಟಿಕೋನದಲ್ಲಿ ಪ್ರಕರಣ ಪರೀಕ್ಷಿಸಿದ ಜಿಲ್ಲಾ ಪೊಲೀಸ್ ಅಧಿಕಾರಿಗಳು, 3 ವರ್ಷಗಳ ಸೆರೆವಾಸದ ಬಳಿಕ ಉಷಾರಾಣಿ ಅವರನ್ನು ಬಂಧ ಮುಕ್ತಗೊಳಿಸಿದರು.

ಜೈಲಿನಿಂದ ಬಂದ ಬಳಿಕ ಜೀವನೋಪಾಯಕ್ಕಾಗಿ ಉದ್ಯೋಗ ಹುಡುಕಾಡುತ್ತಿದ್ದ ಉಷಾರಾಣಿ ಅವರಿಗೆ ಪದವಿ ಪಡೆಯದ ಹೊರತು ಒಳ್ಳೆಯ ಉದ್ಯೋಗ ದೊರೆಯುವುದಿಲ್ಲ ಎಂಬ ಸತ್ಯಅರಿವಾಗಿ ತಮಿಳುನಾಡು ಮುಕ್ತ ವಿಶ್ವವಿದ್ಯಾಲಯದಿಂದ ಮತ್ತೆ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿ ಇದೀಗ ಮನೋವಿಜ್ಞಾನ ಪದವಿಯಲ್ಲಿ ಪದವೀಧರರಾಗಿದ್ದಾರೆ.

Write A Comment