ಮನೋರಂಜನೆ

ನಾನು ಇನ್ನು ಸಿಂಗಲ್ : ಮಿಸ್ಟರ್ ಐರಾವತ ಚಿತ್ರದ ನಾಯಕಿ ಊರ್ವಶಿ ರೌತೇಲ

Pinterest LinkedIn Tumblr

iraಮಿಸ್ಟರ್ ಐರಾವತ ಚಿತ್ರದಲ್ಲಿ ಅಭಿನಯಿಸಿ ತುಂಬಾ ಒಳ್ಳೆಯ ಅನುಭವ ಆಗಿದೆ. ಇದು ನನ್ನ ವೃತ್ತಿ ಬದುಕಿಗೆ ಅಮೂಲ್ಯ ಮಾರ್ಗದರ್ಶನ ನೀಡಿದೆ ಎಂದು ಆ ಚಿತ್ರದ ನಾಯಕಿ ಊರ್ವಶಿ ರೌತೇಲ ಹೇಳುತ್ತಾಳೆ.
ಊರ್ವಶಿಯು ನೈನಿತಾಲ್ ಎಂಬ ಸುಂದರ ಗಿರಿಧಾಮದ ಹುಡುಗಿ. ಐದಡಿ ಒಂಭತ್ತು ಅಂಗುಲ ಎತ್ತರ ಇರುವ ಈ ಬೆಡಗಿಗೆ ಇದೇ ತಿಂಗಳು ಇಪ್ಪತ್ತೊಂದು ವರ್ಷ ತುಂಬುತ್ತದೆ. ಈಕೆಗೆ ಎಂಜಿನಿಯರ್ ಆಗುವ ಗುರಿ ಇತ್ತು. ಐಐಟಿ ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದಳು. ಬಣ್ಣದ ಲೋಕವು ಕೈ ಬೀಸಿ ಕರೆದ ಕಾರಣ, ಎಂಜಿನಿಯರ್ ಆಗುವ ಗುರಿ ಈಡೇರಲಿಲ್ಲ. ಊರ್ವಶಿ ಶಾಲಾ ದಿನಗಳಿಂದಲೇ ಸೌಂದರ್ಯ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದಳು.

ಹದಿನೇಳನೆ ವಯಸ್ಸಿನಲ್ಲಿ ಮಿಸ್ ಯೂನಿವರ್ಸ್ ಇಂಡಿಯಾ ಆದಳು. ವಯಸ್ಸಿನ ವಿವಾದದಿಂದ ಪ್ರಶಸ್ತಿ ಹಿಂದಿರುಗಿಸಬೇಕಾಯಿತು. ಟೀನ್ ಸೂಪರ್ ಮಾಡೆಲ್, ಇಂಡಿಯನ್ ಪ್ರಿನ್ಸೆಸ್ , ಮಿಸ್ ಏಷ್ಯನ್ ಸೂಪರ್ ಮಾಡೆಲ್ ಪ್ರಶಸ್ತಿಗಳನ್ನು ಗೆದ್ದ ಊರ್ವಶಿ ‘ಸಿಂಗ್ ಸಾಬ್ ದ ಗ್ರೇಟ್’ ಚಿತ್ರದ ಮೂಲಕ ಬೆಳ್ಳಿತೆರೆಗೆ ಬಂದಳು.  ಯೋ ಯೋ ಹನಿಸಿಂಗ್‌ನ ಲವ್‌ಡೋಸ್ ಎಂಬ ಮ್ಯೂಸಿಕ್ ಆಲ್ಬಂನಲ್ಲಿ ಕಾಣಿಸಿಕೊಂಡಿರುವ ಇವಳು ಒಳ್ಳೆಯ ನೃತ್ಯಪಟು. ಭರತನಾಟ್ಯ, ಕಥಕ್ , ಜಾಜ್ , ಬ್ಯಾಲೆ, ಬೆಲ್ಲಿ ಡ್ಯಾನ್ಸ್ ನೃತ್ಯ ಪ್ರಾಕಾರಗಳನ್ನು ಕಲಿತಿದ್ದಾಳೆ. ಐರಾವತ ಚಿತ್ರದ ನಾಯಕಿ ಪಾತ್ರಕ್ಕೆ ಆಯ್ಕೆಯಾಗುವ ಕನಸೂ ಊರ್ವಶಿಗೆ ಇರಲಿಲ್ಲ. ಈ ಫಿಲಂಗೆ ಮೊದಲು ಆಯ್ಕೆಯಾಗಿದ್ದವಳು ಎರಿಕಾ ಫರ್ನಾಂತಡೆಸ್. ಕೃಶಕಾಯದವಳಾಗಿದ್ದ ಕಾರಣ, ಅವಳನ್ನು ಕೈ ಬಿಟ್ಟರು. ದರ್ಶನ್‌ರ ನಿಲುವಿಗೆ ಹೊಂದುವಂಥಹ ನಟಿಗಾಗಿ ಅನ್ವೇಷಣೆ ಪ್ರಾರಂಭವಾಯಿತು. ಭಾರತದ ಅತಿ ಸುಂದರಿಯರು ಯಾರು ಎಂದು ಗೂಗಲ್ ಸರ್ಚ್‌ನಲ್ಲಿ ಹುಡುಕಿದಾಗ ಊರ್ವಶಿ ಗೋಚರಿಸಿದಳು. ಐರಾವತದ ನಾಯಕಿಯಾದಳು. ಹೇಗಿದೆ ನಿಮ್ಮ ಪಾತ್ರ? ಸೊಗಸಾಗಿದೆ. ಜನರ  ಹೃದಯಕ್ಕೆ ಲಗ್ಗೆ ಹಾಕುವ ಎಲ್ಲ ಅಂಶಗಳೂ ಇವೆ. ನನ್ನದು ಪ್ರಮುಖವಾದ ಪಾತ್ರ. ಇಂಥಹ ಪಾತ್ರ ಸಿಕ್ಕಿದ್ದು ನನ್ನ ಅದೃಷ್ಟ . ಭಾಷೆಯ ಸಮಸ್ಯೆ ಆಯಿತೆ?

ಅಂಥದ್ದೇನೂ ಆಗಲಿಲ್ಲ . ನನ್ನ ಡೈಲಾಗ್‌ನ ಅರ್ಥವನ್ನು ಕೇಳಿ ತಿಳಿದುಕೊಂಡು ಆನಂತರ ಅಭಿನಯಿಸುತ್ತಿದ್ದೆ . ಐರಾವತ ದೊಡ್ಡ ಬಜೆಟ್‌ನ ಫಿಲಂನ ತುಂಬಾ ಶ್ರೀಮಂತವಾಗಿ ಮಾಡಿದ್ದಾರೆ. ಸೀನ್ಸ್ , ಸಾಂಗ್ಸ್ ಎಲ್ಲ ತುಂಬಾ ರಿಚ್ ಆಗಿದೆ. ನನಗೆ ಗ್ಲಾಮರಸ್ ಡ್ರೆಸ್‌ಗಳಿವೆ. ಈ ಫಿಲಂ ತುಂಬಾ ಖುಷಿ ಕೊಟ್ಟಿದೆ. ಸುದೀಪ್‌ನ ಭೇಟಿ ಮಾಡಬೇಕು ಅಂತ ಹೇಳಿದೀರಲ್ಲ? ಸುದೀಪ್ ಅವರು ಟ್ವಿಟರ್‌ನಲ್ಲಿ ‘ಐರಾವತ’ಕ್ಕೆ,  ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಅದಕ್ಕೆ ಪ್ರತಿಯಾಗಿ ಟ್ವಿಟರ್ ಮೂಲಕ ಅವರಿಗೆ ಧನ್ಯವಾದ ಸಲ್ಲಿಸಿ, ಹೋಪ್ ಟು ಸೀ ಯು ಅಂತ ಬರೆದಿದ್ದೆ. ಕನ್ನಡ  ಸಿನಿಮಾಗಳಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದರೆ? ಸಂತೋಷವಾಗಿ ಸ್ವೀಕರಿಸುತ್ತೇನೆ. ನಿಮ್ಮ ಸಿನಿಮಾ ಬದುಕಿನ ಬಗ್ಗೆ ಹೇಳ್ತೀರಾ?

‘ಸಿಂಗ್ ಸಾಬ್ ದ ಗ್ರೇಟ್’ ಅನ್ನುವುದು ನನ್ನ ಮೊದಲ ಚಿತ್ರ. ನಾಯಕ ಸನ್ನಿದಿಯೋಲ್. ಇದಾದ ಮೇಲೆ ಯೋ ಯೋ ಹನಿಸಿಂಗ್‌ನ ‘ಲವ್‌ಡೋಸ್’ ಎಂಬ ಇಂಟರ್‌ನ್ಯಾಷನಲ್ ಮ್ಯೂಸಿಕ್ ಆಲ್ಬಂನಲ್ಲಿ ಡ್ಯಾನ್ಸ್ ಮಾಡಿದೆ. ಆಮೇಲೆ ‘ಐರಾವತ’ ಸಿಕ್ಕಿತು. ಇಂದ್ರಕುಮಾರ್ ನಿರ್ದೇಶನದ ‘ಗ್ರೇಟ್ ಗ್ರಾಂಡ್ ಮಸ್ತಿ’ ಅನ್ನೋ ಫಿಲಂನಲ್ಲಿ ಮಾಡ್ತಿದೀನಿ. ರಿತೇಶ್ ದೇಶ್‌ಮುಖ್, ವಿವೇಕ್ ಒಬೆರಾಯ್, ಅಫ್ತಾಬ್ ಈ ಫಿಲಂನಲ್ಲಿದ್ದಾರೆ. ಖೋ ಸ್ಲ ಕುಮಾರ್ ನಿರ್ದೇಶನದ ‘ಸನಮ್ ರೇ’ ಅನ್ನೋ ಸಿನಿಮಾದಲ್ಲೂ ಮಾಡಿದೀನಿ. ಐಟಂ ಸಾಂಗ್ಸ್‌ನೂ ಷುರು ಮಾಡಿದೀರಲ್ಲ?

ಭೂಷಣ್‌ಕುಮಾರ್ ಅವರ ನಿರ್ಮಾಣದ ಮೂರು ಸಿನಿಮಾಗಳಲ್ಲಿ ಅಭಿನಯಿಸುವುದಾಗಿ ಒಪ್ಪಂದ ಮಾಡಿಕೊಂಡಿದೀನಿ. ಅವರು ಭಾಗ್‌ಜಾನಿ ಎಂಬ ಸಿನಿಮಾ ಷುರು ಮಾಡಿದರು. ಒಂದು ಹಾಡಿನಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿತು. ಮತ್ತೊಂದು ಫಿಲಂ ಪ್ರಾರಂಭಿಸಿದ್ದಾರೆ. ನಾನು ಅದರಲ್ಲಿ ಇರಲೇಬೇಕು ಅಂತ ಸಿದ್ಧತೆ ಮಾಡಿಕೊಂಡಿದೀನಿ. ಮಾಂಜಿ ದ ಮೌಂಟನ್ ಮ್ಯಾನ್ ಅನ್ನೋ ಸಿನಿಮಾನ ತುಂಬಾನೇ ಹೊಗಳಿದೀರಲ್ಲ?
ಇಷ್ಟವಾಯಿತು. ಎರಡು ಒಳ್ಳೇ ಮಾತು ಹೇಳಿದೆ. ವ್ಯಕ್ತಿಯೊಬ್ಬ ಏಕಾಂಗಿಯಾಗಿ  ಇಪ್ಪತ್ತೆರಡು ವರ್ಷ ಶ್ರಮಿಸಿ ಬೆಟ್ಟವನ್ನು ಕೊರೆದು ರಸ್ತೆ ಮಾಡುತ್ತಾನೆ. ಇದು ಆ ಚಿತ್ರದ ಕಥಾವಸ್ತು . ಗುರಿ ಸಾಧನೆಗಾಗಿ ಪಡುವ ಪರಿಶ್ರಮ ಬಹಳ ಇಷ್ಟವಾಗುತ್ತದೆ. ಯುವ ಜನತೆಗೆ ದೊಡ್ಡ ಸ್ಫೂರ್ತಿ. ನಿಮ್ಮ ಬಾಳಸಂಗಾತಿ ಇದೇ ಥರ ಇರಬೇಕು ಅಂತ ಆಸೆ ಪಡ್ತೀರ?

ಹಾಗೇನಿಲ್ಲ . ಆತ ಸಿಂಪಲ್ ಅಂಡ್ ಲಾಯಲ್ ಆಗಿದ್ದರೆ ಸಾಕು. ಅವನು ಇಂಥದ್ದನ್ನೆಲ್ಲ ಮಾಡುವ ಅಗತ್ಯವಿಲ್ಲ. ನಿಮಗೆ ಬಾಯ್‌ಫ್ರೆಂಡ್ ಇದಾನಾ? ಇಲ್ಲ . ನಾನು ಸಿಂಗಲ್ . ಯಾರೊಂದಿಗೂ ಡೇಟಿಂಗ್ ಅದು ಇದು ಮಾಡುತ್ತಿಲ್ಲ . ಅಭಿನಯ, ನೃತ್ಯ, ಮಾಡೆಲಿಂಗ್ ಮುಂತಾದ ತನ್ನ ಕಾರ್ಯ ಚಟುವಟಿಕೆಗಳ ಕಿರುಪರಿಚಯ ಮಾಡಿಕೊಟ್ಟ ಊರ್ವಶಿಗೆ ವಿದ್ಯಾಭ್ಯಾಸ ಮುಂದುವರಿಸುವ ಆಲೋಚನೆಯೂ ಇದೆ. ಎಂಜಿನಿಯರಿಂಗ್ ಮಾಡುವುದು ಕಷ್ಟವಾದರೂ ಕೂಡ ಬೇರೊಂದು ವಿಭಾಗದಲ್ಲಿ ಶಿಕ್ಷಣ ಮುಂದುವರಿಸುತ್ತಾಳಂತೆ. ಊರ್ವಶಿಯನ್ನು ಚಿತ್ರ ತಯಾರಕರು ಈಗಿನ್ನೂ ಗುರುತಿಸಲು ಪ್ರಾರಂಭಿಸಿದ್ದಾರೆ. ‘ಐರಾವತ’ ಚಿತ್ರವು ತನಗೆ ಇಲ್ಲಿ ಹೆಚ್ಚಿನ ಜನಮನ್ನಣೆ ನೀಡುತ್ತದೆ ಅನ್ನುವುದು ಅವಳಿಗ ತಿಳಿದಿದೆ. ಹಾಗಾಗಿ ಕನ್ನಡದ ನಿರ್ಮಾಪಕರಿಂದ ಆಫರ್‌ಗಳು ಬರುವುದು ಸಹಜ. ಹಿಂದಿಯಲ್ಲಿ ಹೇಳಿಕೊಳ್ಳುವಂಥಹ ದೊಡ್ಡ ಸಿನಿಮಾ ಸಿಗುವವರೆಗೂ ಅವಳು ಇಲ್ಲಿ ಇರಬಹುದಲ್ಲ.

Write A Comment