ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಕ್ರೇಜ್ ಇರುತ್ತದೆ. ಇರಬೇಕು ಕೂಡ; ಅದು ಮಾನವ ಸಹಜ ಗುಣ! ಹಾಗೆಯೇ, ನಟ ಶ್ರೀನಗರ ಕಿಟ್ಟಿ ಅವರಿಗೂ ಒಂದು ಕ್ರೇಜ್ ಇದೆ. ಅದು, ಬೈಕ್ ರೈಡ್! ಸದಾ ಸಿನಿಮಾ, ನಟನೆ ಅಂತೆಲ್ಲ ಬಿಜಿಯಾಗಿರುತ್ತಿದ್ದ ಕಿಟ್ಟಿ ಅವರು ಹೀಗೊಂದು ‘ಬೈಕ್ ಸವಾರಿ’ ಮಾಡಿ ಬಂದಿದ್ದಾರೆ. ಬರೋಬ್ಬರಿ 12 ದಿನಗಳ ಪ್ರವಾಸವದು. ಅವರು ಹೋಗಿ ಬಂದಿರುವುದು ಎಲ್ಲಿಗೆ ಗೊತ್ತಾ? ‘ಶ್ರೀನಗರ’ಕ್ಕೇ!!
ಕಿಟ್ಟಿ ಸೆ. 18ಕ್ಕೆ ಬೆಂಗಳೂರಿನಿಂದ ಹೊರಟು, ದೆಹಲಿ ತಲುಪಿ, ಅಲ್ಲಿಂದ ಮನಾಲಿಗೆ ತೆರಳಿ ವಾಸ್ತವ್ಯ ಹೂಡಿದ್ದಾರೆ. ಇಲ್ಲಿಂದಲೇ ಇವರ ಜಾಲಿ ಬೈಕ್ ರೈಡ್ ಶುರುವಾಗಿದ್ದು. ಮನಾಲಿ, ಕೇಲಾಂಗ್, ಸರ್ಚು, ಲೇಹ್, ಕಾರ್ದುಂಗ್ಲ ಪಾಸ್/ ನುಂಬ್ರ ವ್ಯಾಲಿ, ಪಾಂಗ್ ಗೊಂಗ್ ಲೇಕ್, ಕಾರ್ಗಿಲ್ ಮತ್ತು ಶ್ರೀನಗರ- ಅವರು ಸುತ್ತಿ ಬಂದಿರುವ ಊರುಗಳು. ಲೇಹ್ ನಗರದಲ್ಲಿ 4 ದಿವಸ ತಂಗಿದ್ದು ಬಿಟ್ಟರೆ, ಉಳಿದೆಲ್ಲ ಕಡೆ ಒಂದೊಂದು ರಾತ್ರಿ ವಾಸ್ತವ್ಯ. ಭಾರತ ಮತ್ತು ಪಾಕ್ ಗಡಿಯಲ್ಲಿ ಸೈನಿಕರು ಅನುಭವಿಸುವ ಕಷ್ಟನಷ್ಟ, ಅಲ್ಲಿನ ಜನರ ಜೀವನ ಶೈಲಿ ಹಾಗೂ ಕಡಿದಾದ ರಸ್ತೆಗಳಲ್ಲಿ 1,650ಕ್ಕೂ ಹೆಚ್ಚು ಕಿ.ಮೀ. ಬೈಕ್ ಓಡಿಸಿದ ರೀತಿ, ಸಮುದ್ರ ಮಟ್ಟಕ್ಕಿಂತ ಸಾವಿರಾರು ಅಡಿ ಎತ್ತರದ ಹಾದಿಯನ್ನು ಏರಿಳಿದ ಅನುಭವಗಳನ್ನು ಕಿಟ್ಟಿ ಒಂದೇ ಪದದಲ್ಲಿ ಬಣ್ಣಿಸುವುದು ಹೀಗೆ; ‘ಅದ್ಭುತ’!! ‘ಬೈಕ್ ರೈಡಿಂಗ್ ನನ್ನ ಕನಸು. ಆಗಾಗ ಇಲ್ಲೇ ಎಲ್ಲಾದರೂ ಹೋಗಿಬರುತ್ತಿರುತ್ತೇನೆ. ಬಿಡುವು ಸಿಕ್ಕಾಗಲೆಲ್ಲ ಮುತ್ತತ್ತಿ ಸುತ್ತಿ ಬರುವುದೂ ಉಂಟು. ಈಗ ಹೋಗಿದ್ದು ಮಾತ್ರ ಫೆಂಟಾಸ್ಟಿಕ್ ಎಕ್ಸ್ಪೀರಿಯನ್ಸ್’ ಎನ್ನುತ್ತಾರವರು. ಬೈಕ್ನಲ್ಲಿ ಲಾಂಗ್ ರೈಡ್ ಹೋಗಿದ್ದು ಅವರದೇ ‘ಸವಾರಿ’ ಚಿತ್ರವನ್ನು ನೆನಪಿಸಿದರೆ, ಕಾರ್ಗಿಲ್/ ಪಾಕ್ ಗಡಿ ಭೇಟಿ ‘ಮತ್ತೆ ಮುಂಗಾರು’ ಸಿನಿಮಾ ಸ್ಮರಿಸುವಂತೆ ಮಾಡಿದ್ದು ಸುಳ್ಳಲ್ಲವಂತೆ!
ಕಿಟ್ಟಿ ಸ್ನೇಹ ಬಳಗ ಬೆಂಗಳೂರಿನ ‘ಬೈಕೋಹಾಲಿಕ್ಸ್’ ಸಂಸ್ಥೆ ಮುಖೇನ ಪ್ರತಿ ವರ್ಷ ಹೀಗೊಂದು ‘ಲೇ ಲಡಕ್ ಬೈಕ್ ರೈಡಿಂಗ್ ಎಕ್ಸ್ಪಿಡೇಷನ್’ ಹೋಗುತ್ತದಂತೆ. ಈ ಸಲ ಅವರೊಂದಿಗೆ ಶ್ರೀನಗರ ಕಿಟ್ಟಿ ಹೋಗಿದ್ದು ವಿಶೇಷ. ಇಂದೂಧರ್, ಗಿರೀಶ್, ವಿಜಿ, ದೀಪಕ್, ಭರತ್, ಕಾರ್ತಿಕ್ ಮತ್ತು ಅರುಣ್ ಅವರೊಟ್ಟಿಗೆ ಕಿಟ್ಟಿ; ಈ ಸಲದ ಬೈಕ್ ಸಾಹಸ ಯಾತ್ರೆಯಲ್ಲಿ ಇದ್ದವರು.